ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಹೆಜ್ಜೆ ಇಟ್ಟ ದಿಟ್ಟೆ ಲಕ್ಷ್ಮೀ ಶಾಸ್ತ್ರಿ

Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ  ಚಿಕ್ಕ ಹಳ್ಳಿ ಎಲ್ದೂರಿನವರಾದ ಲಕ್ಷ್ಮೀ ಅವರು ವಿದ್ಯುತ್‌ ಉಪಕರಣ, ‘ಇಸ್ರೊ’ ಕ್ಷಿಪಣೆ ಉಡಾವಣೆಯ ಉಪಕರಣ ಮತ್ತು  ಹಗುರ ಯುದ್ಧ ವಿಮಾನ  ತಯಾರಿಕೆಯಲ್ಲಿಯೂ   ಬಳಸುವ  ಸಲಕರಣೆಗಳ ತಯಾರಿಕೆ ಉದ್ದಿಮೆಯಲ್ಲಿ  ತೊಡಗಿಕೊಂಡು ಗಮನ ಸೆಳೆಯುತ್ತಿದ್ದಾರೆ.
 
ಬೆಂಗಳೂರಿನ ವಿಮೆನ್ಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪಡೆದ ಅವರು ಓದು ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲೇ ಸಂಸ್ಥೆಯೊಂದರಲ್ಲಿ ‘ಟ್ರೈನಿ’ಯಾಗಿ ಕೆಲಸಕ್ಕೆ ಸೇರಿದ್ದರು. 6 ವರ್ಷಗಳಲ್ಲೇ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಅಧಿಕಾರಿಯಾದರು.
 
ಆನಂತರ ಅವರು ಚೀನಾದ  ಷೇನ್ಜೆನ್‌ನಲ್ಲಿ  200 ಜನರು ಒಳಗೊಂಡಿದ್ದ ವಿನ್ಯಾಸ ತಂಡದ ಮುಖ್ಯಸ್ಥರಾಗಿ  5 ವರ್ಷಗಳ ಕಾಲ ಕೆಲಸಮಾಡಿದರು. ಆನಂತರ, ಬೆಂಗಳೂರಿಗೆ ಮರಳಿ ಉದ್ಯಮಿ ರಮೇಶ ಶಾಸ್ತ್ರಿ ಅವರನ್ನು ಮದುವೆಯಾದರು, ಪತಿಯೊಡನೆ ಸೇರಿ 1999ರಲ್ಲಿ ‘ಮ್ಯಾಗ್ನಾ ಟೆಕ್’ ಪಾಲುದಾರಿಕೆ ಸಂಸ್ಥೆ ಸ್ಥಾಪಿಸಿದರು. ಮೊದಲು ಸಂಸ್ಥೆಯಲ್ಲಿ ಕೇವಲ ಎರಡು-ಮೂರು ತರಹದ ಟ್ರಾನ್ಸ್‌ಫಾರ್ಮರುಗಳನ್ನು ಮಾತ್ರ ತಯಾರಿಸಲಾಗುತ್ತಿತ್ತು. 
 
ನಂತರ ವಿದ್ಯುತ್ ಉಪಕರಣಗಳಾದ ಚೋಕ್ಸ್ / ಇಂಡಕ್ಟರ್, ರಿಯಾಕ್ಟರ್  ಸೊಲೊನೈಡ್, ಇನ್‌ಸ್ಟ್ರುಮೆಂಟ್ ಟ್ರಾನ್ಸ್‌ಫಾರ್ಮರ್,  ಪ್ರೈಮರಿ ಇಂಜಕ್ಷನ್ ಕಿಟ್‌ಗಳನ್ನು ತಯಾರಿಸತೊಡಗಿದರು.  2006ರಿಂದ ಸಂಸ್ಥೆಯ ಉತ್ಪನ್ನಗಳು ಜರ್ಮನಿಗೂ ರಫ್ತಾಗುತ್ತಿರುವುದು ಇವರ ಉತ್ಪನ್ನಗಳ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.  ಜರ್ಮನಿಯೊಂದರಲ್ಲೇ ಈಗ  10ಕ್ಕಿಂತ ಹೆಚ್ಚು ಗ್ರಾಹಕರಿದ್ದಾರೆ.
 
ಉತ್ಪನ್ನಗಳಿಗೆ ಇಂಗ್ಲೆಂಡ್, ಸ್ಪೇನ್, ಇಟಲಿ, ನೆದರ್ಲೆಂಡ್, ಡೆನ್ಮಾರ್ಕ್, ಯುಎಸ್ಎ, ಹಾಂಕಾಂಗ್, ಸಿಂಗಪುರ, ಅರಬ್‌ ಅಮೀರರ ಒಕ್ಕೂಟದಲ್ಲಿಯೂ ಮಾರುಕಟ್ಟೆ ವಿಸ್ತರಿಸಿದೆ. ತಯಾರಿಕೆಯ ಶೇಕಡ 40 ಭಾಗ ಈ ದೇಶಗಳಿಗೆ ರಫ್ತಾಗುತ್ತಿದೆ.  
 
ಮ್ಯಾಗ್ನಾಟೆಕ್ ಸಂಸ್ಥೆಯ ಉತ್ಪನ್ನಗಳು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳದ ಎಲ್ಲಾ ವಿದ್ಯುತ್ ಮಂಡಳಿಗಳಿಗೆ ಪೂರೈಕೆಯಾಗುತ್ತಿವೆ. ಬಿಇಎಲ್, ಬಿಎಚ್ಇಎಲ್, ಸೀಮೆನ್ಸ್ ಎಬಿಬಿ,  ಟೈಟಾನ್.. ಹೀಗೆ ಸಂಸ್ಥೆಯ ಗ್ರಾಹಕರ ಪಟ್ಟಿ ಸಾಕಷ್ಟು ಉದ್ದವಾಗಿದೆ. ‘ಇಸ್ರೊ’ ಕ್ಷಿಪಣೆ ಉಡಾವಣೆಯ ಉಪಕರಣ,  ಹಗುರ ಯುದ್ಧ ವಿಮಾನ  ತಯಾರಿಕೆಯಲ್ಲಿಯೂ   ಮ್ಯಾಗ್ನಾಟೆಕ್ ಸಂಸ್ಥೆಯ ಉತ್ಪನ್ನಗಳನ್ನು ಉಪಯೋಗಿಸಲಾಗಿದೆ. 
 
ರಾಜಾಜಿನಗರದ ಚಿಕ್ಕ ಗ್ಯಾರೇಜಿನಲ್ಲಿ ಸುಮಾರು 5-6 ಜನರೊಂದಿಗೆ ಶುರುಮಾಡಿದ ಸಂಸ್ಥೆಯಲ್ಲೀಗ 45 ಜನ ಕೆಲಸಗಾರರು ಇದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಇದ್ದಾರೆ. ಐಎಸ್ಓ 9001-2008 ದೃಢೀಕರಣ ಪತ್ರವನ್ನೂ ಸಂಸ್ಥೆ ಹೊಂದಿದೆ. ಸಂಸ್ಠೆಯ ವಾರ್ಷಿಕ ವಹಿವಾಟು ₹ 6 ಕೋಟಿಗಳಷ್ಟಿದ್ದು, ₹ 25 ಕೋಟಿಗೆ ಹೆಚ್ಚಿಸುವ ಗುರಿ ನಿಗದಿ ಮಾಡಲಾಗಿದೆ. ಮ್ಯಾಗ್ನಾ ಟೆಕ್ ಸಂಸ್ಥೆಯು ದೇಶ, ವಿದೇಶಗಳ ಉದ್ದಿಮೆ ಮೇಳದಲ್ಲಿ ಭಾಗವಹಿಸಿದ ಹೆಗ್ಗಳಿಕೆಯನ್ನೂ ಹೊಂದಿದೆ.
 
ಲಕ್ಷ್ಮೀ ಅವರು ತಮ್ಮ ಸಂಸ್ಥೆಯಲ್ಲಿನ ಬಿಡುವಿಲ್ಲದ ಕೆಲಸದ ಮಧ್ಯೆ ಕರ್ನಾಟಕ ಮಹಿಳಾ ಉದ್ಯಮಿಗಳ ಒಕ್ಕೂಟದ (ಅವೇಕ್) ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ‘ಅವೇಕ್‌’ನ ಸಂಶೋಧನೆ, ಸಂಪನ್ಮೂಲ ಮಾಹಿತಿ ಕೇಂದ್ರದ ಮುಖ್ಯಸ್ಥೆಯಾಗಿದ್ದಾರೆ. ಸ್ವ ಉದ್ಯೋಗ ಆರಂಭಿಸಲು ಮುಂದಾಗುವ ಮತ್ತು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
 
ಅಲ್ಲದೇ ‘ಅವೇಕ್‌’ನ ಐಎಸ್ಒ ಪ್ರಮಾಣಪತ್ರದ  ಮತ್ತು ಅಂತರ್ಜಾಲ ತಾಣ ನಿರ್ವಹಣೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅತಿ ಸಣ್ಣ ಮತ್ತ ಸಣ್ಣ ಉದ್ದಿಮೆಗಳಲ್ಲಿ ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಜರ್ಮನಿಯ  ಕಾರ್ಯಕ್ರಮದಲ್ಲೂ ಭಾಗವಾಗಿ ಸ್ವಯಂ ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ‘ಸ್ವಯಂ ಉದ್ಯೋಗವು  ವ್ಯಾಪಕವಾಗಿ ಬೆಳೆಯಬೇಕೆಂದರೆ ಸರಕುಗಳ ತಯಾರಿಕೆಯಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿರಬೇಕು’ ಎಂದು ಲಕ್ಷ್ಮೀ ಅವರು ಹೇಳುತ್ತಾರೆ.
 
‘ಬ್ಯಾಂಕ್‌ಗಳಿಂದ ಸಾಲ ಸಿಗುವುದು ಸುಲಭವಲ್ಲ.  ಸಾಲಕ್ಕೆ ಕೊಡಬೇಕಾದ ಆಧಾರವು ಸಂಸ್ಥೆಯ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸುತ್ತದೆ. ಇನ್ನು ಪರಿಣತ ಕಾರ್ಮಿಕರು   ಸಿಗದಿರುವುದು, ಸಿಕ್ಕರೂ ಪದೇ ಪದೇ ಉದ್ಯೋಗ ಬದಲಿಸುವವರೇ ಹೆಚ್ಚಾಗಿರುತ್ತಾರೆ. ಮಾರುಕಟ್ಟೆಯಲ್ಲೂ ಅರೋಗ್ಯಕರ ಸ್ಪರ್ಧೆ ಇಲ್ಲದೆ ಹಲವು ಕಡೆಗಳಲ್ಲಿನ ಭ್ರಷ್ಟಾಚಾರವು ವಹಿವಾಟು ವಿಸ್ತರಣೆಗೆ  ಅಡ್ಡಿ ಒಡ್ಡುತ್ತದೆ.
 
ಸ್ಥಳೀಯ ಮಾರುಕಟ್ಟೆಯಲ್ಲಿ ಸಿದ್ಧ ವಸ್ತುವಿನ ಮೇಲೆ ಶೇಕಡ 26-27 ರಷ್ಟು ತೆರಿಗೆ  ಕೊಡಬೇಕಾದ ಪರಿಸ್ಥಿತಿ ಇದೆ. ಈ ಎಲ್ಲವೂ ಸಣ್ಣ ಕೈಗಾರಿಕೆಗಳು ಎದುರಿಸುವ ದೊಡ್ಡ ತೊಂದರೆಗಳು’ ಎಂದು ಅವರು ತಾವು ಎದುರಿಸುತ್ತಿರುವ ಪ್ರತಿಕೂಲತೆಗಳ ಪಟ್ಟಿ ಮಾಡುತ್ತಾರೆ.
 
ಉದ್ಯಮಕ್ಕೆ ಬೇಕಾಗುವ ಕಚ್ಚಾ ಸರಕು ಜರ್ಮನಿ, ಅಮೆರಿಕ, ಜಪಾನ್, ತೈವಾನ್, ಚೈನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿಯೇ ಸಿಗುವ ಹಲವು ಕಚ್ಚಾವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ. ಬೇಕಾದಷ್ಟು ಪ್ರಮಾಣದಲ್ಲಿಯೂ  ಸಿಗುವುದಿಲ್ಲ. ಸಿಕ್ಕರೂ ಹೆಚ್ಚು ಬೆಲೆ ತೆರಬೇಕಾಗುತ್ತದೆ.  ಹೀಗಾಗಿ ಆಮದನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಆಮದು ತೆರಿಗೆಯೂ ಗರಿಷ್ಠ ಮಟ್ಟದಲ್ಲಿ ಇದೆ. ಹೀಗಾಗಿ ಸಿದ್ಧ ಸರಕುಗಳ ಬೆಲೆ ದುಬಾರಿಯಾಗಿ ಮಾರುಕಟ್ಟೆಯಲ್ಲಿ ಸ್ಪರ್ಧಿಸುವುದು ಸವಾಲಾಗಿ ಪರಿಣಮಿಸಿದೆ ’ ಎಂದು ಅವರು ತಮ್ಮ ಉದ್ಯಮದ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ.
 
ಲಕ್ಷ್ಮೀ ಶಾಸ್ತ್ರಿ ಅವರಿಗೆ ಕರ್ನಾಟಕ ಸಣ್ಣ ಉದ್ಯೋಗಿಗಳ ಒಕ್ಕೂಟವು ಆವಿಷ್ಕಾರ ಮತ್ತು ಸೃಜನಶೀಲತೆಯಲ್ಲಿ ಅತ್ಯುತ್ತಮ ಪ್ರದರ್ಶನ’ ಎಂಬ ಪ್ರಶಸ್ತಿ  ನೀಡಿ ಗೌರವಿಸಿದೆ. ‘ಅವೇಕ್‌’ನಿಂದ ‘ಲೈಫ್ ಮೇಕರ್’ ಪ್ರಶಸ್ತಿ ದೊರೆತಿದೆ. ಉದ್ದಿಮೆಗೆ ಸಂಬಂಧಿಸಿದ ಹಲವಾರು ಸಂಘ ಸಂಸ್ಥೆಗಳ ಸದಸ್ಯೆಯಾಗಿಯೂ ಲಕ್ಷ್ಮೀ ಶಾಸ್ತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮದ ಸಲಕರಣೆಗಳನ್ನು ಪೂರೈಸುವ ಗುರಿಯನ್ನೂ ಸಂಸ್ಥೆ ಹಾಕಿಕೊಂಡಿದೆ. ಹಾರೋಹಳ್ಳಿಯಲ್ಲಿ ರಾಜ್ಯ ಸರ್ಕಾರ ಆರಂಭಿಸಲಿರುವ ‘ವಿಮೆನ್ಸ್ ಪಾರ್ಕ್‌ನಲ್ಲಿ ಸ್ಥಳ ಖರೀದಿಸಿ, ವಹಿವಾಟನ್ನು ಇನ್ನಷ್ಟು ವಿಸ್ತರಿಸುವ ಮಹದಾಸೆ ನನಗೆ ಇದೆ’ ಎಂದು ಹೇಳುತ್ತಾರೆ.
 
‘ಸ್ವ ಉದ್ಯೋಗ ಆರಂಭಿಸಲು ಸಾಲ ಸುಲಭವಾಗಿ ಸಿಗುವಂತಿರಬೇಕು. ನಿಯಮಗಳು ಸಡಿಲವಾಗಿರಬೇಕು, ತೆರಿಗೆಗಳು ಕಡಿಮೆಯಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ನಮ್ಮ ಉತ್ಪನ್ನಗಳು ಸ್ಪರ್ಧಾತ್ಮಕವಾಗಿರುತ್ತವೆ. ಹೊಸತನದ ಚಿಂತನೆ ಇರುವ ಉದ್ಯಮಗಳಿಗೆ ಸರ್ಕಾರ ಸಹಾಯ ಧನ ಕೊಟ್ಟು ಪ್ರೋತ್ಸಾಹಿಸಬೇಕು’ ಎಂದು ಹೇಳುತ್ತಾರೆ.
 
ಉದ್ಯಮದಲ್ಲಿ ಎಲ್ಲ ತರಹದ ಸಹಾಯ ನೀಡಿ ಬೆನ್ನೆಲುಬಿನಂತಿರುವ ಪತಿ ರಮೇಶ್ ಶಾಸ್ತ್ರಿ, ಮಗ ಅನಿರುದ್ಧ ಮತ್ತು ನಿಷ್ಟಾವಂತ ಕೆಲಸಗಾರರನ್ನು  ಸ್ಮರಿಸಲು ಅವರು ಮರೆಯುವುದಿಲ್ಲ. ಮಹಿಳೆಯರು ಸರ್ಕಾರಿ ನೌಕರಿಯ ಬೆನ್ನು ಹತ್ತುವ ಬದಲು ಸ್ವ ಉದ್ಯೋಗ ಆರಂಭಿಸುವ ನಿಟ್ಟಿನಲ್ಲಿ  ಆಲೋಚಿಸಿ ದೃಢ ಮನಸ್ಸಿನಿಂದ ಕಾರ್ಯಪ್ರವೃತ್ತರಾಗಬೇಕು ಎನ್ನುವ ಕಿವಿ ಮಾತನ್ನೂ ಅವರು ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT