ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಸಬಲತೆಗೆ ಕನಿಷ್ಠ ಆದಾಯ ನೆರವು

Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಪುಕ್ಕಟೆ ಅಥವಾ ಅತಿ ಕಡಿಮೆ ಬೆಲೆಗೆ ಅಕ್ಕಿ, ಗೋಧಿ, ರಾಗಿ, ಖಾದ್ಯ ತೈಲದಂತಹ ಅವಶ್ಯಕ ಆಹಾರ ವಸ್ತುಗಳನ್ನು ವಿತರಿಸುವ ಯೋಜನೆಗಳನ್ನು  ರಾಜ್ಯ ಸರಕಾರಗಳು ಜಾರಿಗೆ ತಂದಿವೆ.
 
ಅಂಗವಿಕಲರ ಪಿಂಚಣಿ, ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಣಿ, ಹೆರಿಗೆ ಭತ್ಯೆ ಹೀಗೆ ಹಲವು ಸಾಮಾಜಿಕ ಭದ್ರತೆಯ ಯೋಜನೆಗಳೂ ಜಾರಿಯಲ್ಲಿವೆ. ಇವೆಲ್ಲ ಸೌಲಭ್ಯಗಳನ್ನು ಮೀರಿ ದೇಶದ ಪ್ರತಿಯೊಬ್ಬ ಪ್ರಜೆಗೆ, ಅದರಲ್ಲೂ ವಿಶೇಷವಾಗಿ ಬಡವರಿಗೆ  ಪ್ರತಿ ತಿಂಗಳೂ ನಿಶ್ಚಿತ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ಠೇವಣಿ ಮಾಡುವ ಮೂಲಕ ಅವರಿಗೆ ಕನಿಷ್ಠ ಆದಾಯದ  ಖಾತರಿ (ಯುಬಿಐ) ನೀಡುವ ಪರಿಕಲ್ಪನೆ ಬಗ್ಗೆ   ಆರ್ಥಿಕ ಸಮೀಕ್ಷೆಯಲ್ಲಿ  ಇದೇ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ. 
 
ಬಡವರ ಬ್ಯಾಂಕ್ ಖಾತೆಗೆ ಮೂಲ ಆದಾಯದ ರೂಪದಲ್ಲಿ ಠೇವಣಿ ಮಾಡಿದರೆ ಸಾಮಾಜಿಕ ಭದ್ರತೆಯ ಆಶಯದಲ್ಲಿ ಬಹುದೊಡ್ಡ ಹೆಜ್ಚೆ ಆಗಬಹುದು ಎಂಬ ಚಿಂತನೆ ಆರಂಭವಾಗಿದೆ. ಇದನ್ನು ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಪ್ರಜೆಗಳು ದುಡಿಯಲಿ ಅಥವಾ ದುಡಿಯದಿರಲಿ  ಪ್ರತಿ ತಿಂಗಳೂ ಅವರ  ವೆಚ್ಚಕ್ಕೆ ಬೇಕಾಗುವಷ್ಟು ಒಂದಿಷ್ಟು ಖಾತರಿ ಹಣವು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಬೇಕು.
 
ಈ ಹಣವನ್ನು ಫಲಾನುಭವಿಗಳು ತಮ್ಮ ಇಷ್ಟದಂತೆ  ಖರ್ಚು ಮಾಡುವುದಕ್ಕೆ ಪೂರ್ಣ ಸ್ವಾತಂತ್ರ್ಯ ಇರಬೇಕು. ಇದನ್ನು ಎಲ್ಲರಿಗೂ  ಮೂಲ ಆದಾಯ ಅಥವಾ ಕನಿಷ್ಠ ಆದಾಯ  (universal basic income) ಎಂದು ಕರೆಯಲಾಗುತ್ತಿದೆ. ಬಡವರಿಗೆ ಹೆಚ್ಚಾಗಿ ಈ ಯೋಜನೆ ಅನ್ವಯಿಸಬಹುದಾಗಿದೆ.
ಉಚಿತವಾಗಿ ಇಲ್ಲವೆ ಅತ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯ ಒದಗಿಸಿದರೆ ಜನರು ಆಲಸಿಗಳಾಗುತ್ತಾರೆ.  ದುಡಿಯುವುದಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.  
 
ಸಂಸದರು, ಶಾಸಕರು ಕೂಡ ಇಂಥ ವಿಚಾರವನ್ನು ಖಾಸಗಿಯಾಗಿ ವ್ಯಕ್ತಪಡಿಸುತ್ತಿರುವುದು ಅಚ್ಚರಿಯ ಸಂಗತಿ.   ಓಟು ಪಡೆಯುವುದಕ್ಕೆ ಸರಕಾರ ಇಂತಹ ಯೋಜನೆ ಜಾರಿಗೊಳಿಸುತ್ತವೆ ಎಂದೂ ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಪಡಿತರ ಧಾನ್ಯಗಳು ಕಳ್ಳ ವ್ಯಾಪಾರಿಗಳ ಪಾಲಾಗುತ್ತವೆ ಎಂದು ಅಪಾದಿಸುತ್ತಾರೆ. 
 
ಪಡಿತರ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ  ಈ  ಯೋಜನೆ ಜಾರಿಗೆ ತರಬಾರದು ಎಂದು ಹೇಳುವುದು ಬಾಲಿಶತನವಾಗುತ್ತದೆ. ಅಕ್ರಮಗಳನ್ನು ತಡೆಯುವುದಕ್ಕೆ ಕಾನೂನುಗಳಿವೆ.  ಆಹಾರ ಧಾನ್ಯ ಪಡಿತರದಲ್ಲಿ ಸಿಗುವಂತೆ ಜನರಿಗೆ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಕನಿಷ್ಠ ಖಾತರಿ ಹಣ ನೆರವಾಗಬಲ್ಲದು. ಬಿ.ಪಿ, ಮಧುಮೇಹ ಅಥವಾ ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧ ಕೊಳ್ಳಲು, ಮಕ್ಕಳ ಶಾಲಾ ಶುಲ್ಕ ಕಟ್ಟಲು, ಅಡುಗೆ ಅನಿಲ ಸಂಪರ್ಕ ಪಡೆದುಕೊಳ್ಳಲು ಹೀಗೆ ನಿತ್ಯದ ಅವಶ್ಯಕತೆಗೆ ಕನಿಷ್ಠ ಆದಾಯ ಯೋಜನೆ ಉಪಯೋಗಕ್ಕೆ ಬರುತ್ತದೆ.
 
ಈ ಪರಿಕಲ್ಪನೆ ಹೊಸದೇನಲ್ಲ. ದೇಶ - ವಿದೇಶಗಳಲ್ಲಿ ಮೂಲ ಆದಾಯದ ಪ್ರಯೋಗಗಳು ನಡೆದಿವೆ. ಭಾರತದಲ್ಲಿ ಯುನಿಸೆಫ್ ಸಹಯೋಗದಲ್ಲಿ 2011 ರಲ್ಲಿ ಮಧ್ಯಪ್ರದೇಶದಲ್ಲಿ ಇಂತಹ ಪ್ರಯೋಗ ಮಾಡಲಾಯಿತು. ಒಟ್ಟು 20 ಹಳ್ಳಿಗಳ 6460 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಒಂದು ವರ್ಷದ ಅವಧಿಗೆ ಈ ಯೋಜನೆ ಜಾರಿಯಲ್ಲಿತ್ತು. ಇದರ ಪರಿಣಾಮ  ಉತ್ತೇಜಕರವಾಗಿತ್ತು. ಅವರ ಜೀವನ ಮಟ್ಟ ಸುಧಾರಿಸಿದ್ದಲ್ಲದೆ, ಗ್ರಾಮಸ್ಥರ ಆಹಾರ ಮತ್ತು ಆರೋಗ್ಯ ಕಾಳಜಿ ಅಧಿಕವಾಯಿತು.
 
ಶೇಕಡಾ 68  ಕುಟುಂಬಗಳ ಮಕ್ಕಳ ಶಾಲಾ ಶಿಕ್ಷಣ ನಿರಾತಂಕವಾಗಿ ಮುಂದುವರೆಯಿತು. ವೈಯಕ್ತಿಕ ಗಳಿಕೆ ಮೂರು ಪಟ್ಟು ಹೆಚ್ಚಾಯಿತು. ಹೊಸ ಹೊಸ ಉದ್ಯೋಗ ವ್ಯಾಪಾರಗಳನ್ನು ಅವರು ಆರಂಭಿಸಿದರು. ಇನ್ನೂ ಒಂದು ವಿಶೇಷ ಸಂಗತಿಯೆಂದರೆ ಯೋಜನೆಯ ಕೊನೆ ಕೊನೆಗೆ ಅವರು ಬ್ಯಾಂಕ್, ಎಲ್.ಐ.ಸಿ. ಉಳಿತಾಯ ಯೋಜನೆಗಳ ಸದಸ್ಯರಾಗ ತೊಡಗಿದರು. 
 
ಬೆಲ್ಜಿಯಂ ಚಿಂತಕ ಥಾಮಸ್ ಮೂರ್ ತಮ್ಮ ಪ್ರಸಿದ್ಧ ‘ಉಟೋಪಿಯಾ’ ಕೃತಿಯಲ್ಲಿ   ಈ ಬಗ್ಗೆ ದೀರ್ಘ ಚರ್ಚೆ ಮಾಡಿದ್ದಾರೆ.   ಚಿಂತಕರಾದ ಲೋಹಿಯಾ, ಮಧು ಲಿಮಯೆ, ನೋಬೆಲ್ ಪ್ರಶಸ್ತಿ ಪುರಷ್ಕೃತ ಅಮರ್ತ್ಯ ಸೇನ್‌  ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.  ಇತರ ದೇಶಗಳಲ್ಲಿಯೂ ಕನಿಷ್ಠ ಮೂಲ ಆದಾಯದ   ಪ್ರಯೋಗಗಳು ನಡೆಯುತ್ತಲೇ ಇವೆ. ನೆದರ್‌ಲೆಂಡ್ಸ್‌ನ ಉಟ್ರೇಟ್   ನಗರದಲ್ಲಿ  ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ನಾಗರಿಕನಿಗೆ ಪ್ರತಿ ತಿಂಗಳೂ 15 ಪೌಂಡ್ ನೀಡುವ ಯೋಜನೆ ಇದಾಗಿದೆ. 
 
ಸ್ವಿಟ್ಜರ್ಲೆಂಡ್‌ನ  ಜನರು ಇದೆಲ್ಲದಕ್ಕೂ ಭಿನ್ನವಾಗಿ ನಡೆದುಕೊಂಡಿದ್ದಾರೆ. ಕಳೆದ ವರ್ಷ ನಡೆದಿದ್ದ ಜನಾಭಿಪ್ರಾಯ ಸಂಗ್ರಹದಲ್ಲಿ ಶೇ  77ರಷ್ಟು ಜನರು  ಇದರ ವಿರುದ್ಧ ಮತ ಚಾಲಯಿಸಿದ್ದಾರೆ. ಇದರಿಂದಾಗಿ  ಈ ಯೋಜನೆ ತಿರಸ್ಕಾರಗೊಂಡಿದೆ. ಆದರೆ, ಅಲ್ಲಿಯ ವಿಶ್ವ ವಿದ್ಯಾಲಯಗಳು ನಡೆಸಿದ ಸಮೀಕ್ಷೆಗಳು ಯೋಜನೆಯ  ಫಲಶ್ರುತಿಯ ಮೇಲೆ ಬೆಳಕು ಚೆಲ್ಲಿವೆ.   
 
ಯೋಜನೆ ಜಾರಿಯಲ್ಲಿದ್ದಾಗ ಫಲಾನುಭವಿಗಳ ಜೀವನ ಮಟ್ಟ ಗಣನೀಯವಾಗಿ ಸುಧಾರಿಸಿತ್ತು. ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆಯಾಗಿತ್ತು. ಮಕ್ಕಳು ಯುವಕರು ಸರಿಯಾಗಿ ಶಾಲೆ ಕಾಲೇಜುಗಳಿಗೆ ಹೋಗ ತೊಡಗಿದರು. ಬಾಲಕರು ಓದು ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ತುಂಬ ಹೆಚ್ಚಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ. ಕನಿಷ್ಠ ಮೂಲ ಆದಾಯ ಪರಿಕಲ್ಪನೆಯು ದೇಶದಲ್ಲಿ  ಸಾಕಾರಗೊಂಡರೆ ಬಡತನ ನಿವಾರಣೆಯಾಗಲಿದೆ. ಉದ್ದಿಮೆ, ಕೈಗಾರಿಕೆ, ಉತ್ಪಾದನಾ ವಲಯಗಳಲ್ಲಿ ಹೊಸ ಉತ್ಸಾಹ ಮೂಡಬಹುದು.  
 
ಪ್ರತಿಯೊಬ್ಬ ಪ್ರಜೆಗೆ ಪ್ರತಿ ತಿಂಗಳೂ ಎಷ್ಟು ಹಣವನ್ನು ಮೂಲ ಆದಾಯದ ರೂಪದಲ್ಲಿ ಸಂದಾಯ ಮಾಡಬೇಕು ಎಂಬುದನ್ನು ತಜ್ಞರು ನಿರ್ಧರಿಸಬೇಕು. ಇದು ಈಗ ಕೊಡುವ ವೃದ್ಧಾಪ್ಯ ಪಿಂಚಣಿ, ಅಂಗವಿಕಲ ಪಿಂಚಣಿಗಿಂತ ಹೆಚ್ಚಿಗೆ ಇರಬೇಕಾಗಿದೆ. ಬೆಲೆ ಏರಿಕೆ ಮತ್ತು ನಿತ್ಯದ ಅವಶ್ಯಕತೆಗಳನ್ನು ಗಮನಿಸಿದರೆ ಪ್ರತಿಯೊಬ್ಬನಿಗೆ ಪ್ರತಿ ತಿಂಗಳು ಕನಿಷ್ಠ ₹ 3000 ದೊರೆಯಬೇಕು.  ಈ  ಪರಿಕಲ್ಪನೆ ಸಾಕಾರಗೊಂಡರೆ ಬಡತನ ಖಂಡಿತವಾಗಿಯೂ ದೂರವಾಗುತ್ತದೆ.
 
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕನಿಷ್ಠ ಆದಾಯ ವಿಧಾನ ಒಂದು ದೊಡ್ಡ ವರದಾನವಾಗಲಿದೆ. ಆರ್ಥಿಕ ಸಂಕಷ್ಟದಿಂದ ನಡೆಯುವ ಆತ್ಮ ಹತ್ಯೆಗಳು ನಿಲ್ಲಲಿವೆ.  ಜನರ ಜೀವನ ಮಟ್ಟ ಹೆಚ್ಚಳಗೊಳ್ಳಲಿದೆ. ಇದೊಂದು ದೂರಗಾಮಿ ಪರಿಣಾಮ ಬೀರುವ  ಕ್ರಮವಾಗಲಿದೆ. ದೇಶದ ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ. ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರವು  ಮಾರ್ಗೋಪಾಯಗಳನ್ನು ಹುಡುಕಬೇಕು. ಇದರಿಂದ  ಈ ಹೊಸ ಚಿಂತನೆಯು  ನಾಗರಿಕರ ಬದುಕಿನಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ.
ನಿರೂಪಣೆ: ಮಲ್ಲಿಕಾರ್ಜುನ ಹೆಗ್ಗಳಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT