ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಆತ್ಮವಿಶ್ವಾಸಕ್ಕೆ ನಾವೇ ಕಾರಣ

Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕೆ ಯಶಸ್ವಿನಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಶಿಕ್ಷಣ ಪಡೆದ ಆಕೆ ಉದ್ಯೋಗಕ್ಕಾಗಿ ಪಟ್ಟಣಕ್ಕೆ ಬರುತ್ತಾಳೆ. ಹೆಸರಿನಂತೆ ಪಾಠ–ಪಠ್ಯೇತರ ವಿಷಯಗಳಲ್ಲಿ ಯಶಸ್ಸು ಸಾಧಿಸುತ್ತಿದ್ದ ಆಕೆ ಸೋತ್ತಿದ್ದು  ಪಟ್ಟಣವೆಂಬ ಮಾಯಾಲೋಕಕ್ಕೆ. ಪಟ್ಟಣದ ಬೆಡಗು–ಬಿನ್ನಾಣಕ್ಕೆ ಆಕೆ ಹೊಂದಿಕೊಳ್ಳದಾದಳು.
 
ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಆಕೆಗೆ ಪಟ್ಟಣದ ಜೀವನ ಹಾಗೂ ಪಟ್ಟಣದ ಜನರ ಮನಃಸ್ಥಿತಿ ಒಗ್ಗಲಿಲ್ಲ. ಆಫೀಸಿನಲ್ಲೂ ಆಕೆಯ ನಡೆ–ನುಡಿ ಇತರರಿಗಿಂತ ತೀರಾ ಭಿನ್ನವಾಗಿತ್ತು. ಇದರಿಂದ ಆಕೆ ಎಲ್ಲರ ಮಾತಿಗೂ ವಸ್ತುವಾದಳು. ದಿನೇ ದಿನೇ ಅವಳಲ್ಲಿ ಆತ್ಮವಿಶ್ವಾಸ ಕುಂದುತ್ತಾ ಹೋಯಿತು. ತನಗೆ ಇದರಿಂದ ಮುಕ್ತಿ ಇಲ್ಲವೇ? ಪಟ್ಟಣದಲ್ಲಿ ತಾನು ಬದುಕಲು ಸಾಧ್ಯವೇ  ಇಲ್ಲವೇ? – ಎಂದು ಯೋಚಿಸಿ ಯೋಚಿಸಿ ಆಕೆ ಮಾನಸಿಕ ಆಘಾತಕ್ಕೆ ಒಳಗಾದಳು. 
 
ಇಂತಹ ಅದೆಷ್ಟೋ ಘಟನೆಗಳು ಇಂದು ನಮ್ಮ ನಡುವೆ ನಡೆಯುತ್ತಿರುತ್ತವೆ.  ಹುಟ್ಟಿ ಬೆಳೆದ ಪರಿಸರದ ಕಾರಣವೋ ಅಥವಾ ಮತ್ಯಾವುದೋ ಕಾರಣದಿಂದ ಹಲವರಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಅಂತಹವರು ಪ್ರತಿಯೊಂದಕ್ಕೂ ಬೇರೆಯವರನ್ನು ಅವಲಂಬಿಸುತ್ತಾರೆ. ಕೆಲವೊಮ್ಮೆ ಅವಲಂಬನೆ ಎನ್ನುವುದೇ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.  
 
ಆತ್ಮವಿಶ್ವಾಸ ಎನ್ನುವುದು ಪೇಟೆಗೆ ಹೋಗಿ ಹಣ ಕೊಟ್ಟು ಕೊಂಡುಕೊಳ್ಳುವ ವಸ್ತುವಲ್ಲ; ಅದನ್ನು ನಾವೇ ನಮ್ಮಲ್ಲಿ ಬೆಳೆಸಿಕೊಳ್ಳಬೇಕೇ ಹೊರತು ಬೇರೆಯವರು ನಮ್ಮಲ್ಲಿ ತುಂಬಲು ಸಾಧ್ಯವಿಲ್ಲ. ಸಕರಾತ್ಮಕ ಯೋಚನೆಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆತ್ಮವಿಶ್ವಾಸ ಹೆಚ್ಚಲು ಈ ಕೆಳಗಿನ ಅಂಶಗಳು ನಿಮಗೆ ಸಹಾಯವಾಗಬಹುದು. 
 
ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ: ಸಹೋದ್ಯೋಗಿ ಅಥವಾ ಸ್ನೇಹಿತರೊಂದಿಗೆ ನಿಮ್ಮ ಕೆಲಸವನ್ನು ಹೋಲಿಕೆ ಮಾಡಿ ನೋಡುತ್ತೀರಾ? ಹಾಗಾದರೆ ಮೊದಲು ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಅವರು ಐದು  ದಿನಗಳಲ್ಲಿ ಮಾಡುವ ಕೆಲಸ ನಿಮಗೆ ಐದು  ತಿಂಗಳಷ್ಟು ಬೇಕಾಗಬಹುದು. ಅದರಿಂದ ನಿಮ್ಮ ಮೇಲೆ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಅವರ ಸಾಮರ್ಥ್ಯ ಹೊಂದಿಕೆಯಾಗಬೇಕೆಂದೇನು ಇಲ್ಲ. 
 
‘ಟೆಡ್ಡಿ ರೋಸ್‌ವೆಲ್ಟ್’ ಎಂಬ ಅಮೆರಿಕದ ಲೇಖಕ  ‘ಹೋಲಿಕೆ ಎನ್ನುವುದು ಸಂತೋಷದ ಕಳ್ಳತನ’ ಎಂದು ಬಣ್ಣಿಸುತ್ತಾರೆ. ಅವರ ಪ್ರಕಾರ, ನಮ್ಮನ್ನು ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳವುದರಿಂದ ನಮಗೆ ನಮ್ಮ ಬಗ್ಗೆ ಅಹಂಕಾರವೋ ಅಥವಾ ಕೀಳರಿಮೆಯೋ ಉಂಟಾಗುತ್ತದೆ. ಈ ಎರಡೂ ಒಳ್ಳೆಯದಲ್ಲ. 
ಆದರೆ ಒಂದು ಮಾತ್ರ ನೆನಪಿಡಿ. ನಾವೆಲ್ಲರೂ ಬೇರೆ ಬೇರೆ ವಿಧದಲ್ಲಿ ಭಿನ್ನರು. ದೇವರು ಎಲ್ಲರಿಗೂ ಒಂದೊಂದು ರೀತಿಯ ವ್ಯಕ್ತಿತ್ವವನ್ನು ನೀಡುತ್ತಾರೆ.
 
ಎಲ್ಲರೂ ಎಲ್ಲಾ ವಿಷಯದಲ್ಲೂ  ಜಾಣರಾಗಿರಬೇಕೆಂದೇನೂ ಇಲ್ಲ. ದೇವರು ನಮಗೆ ನೀಡಿದ ಬುದ್ಧಿವಂತಿಕೆಯನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟಿದ್ದು. ದೇವರು ನಮಗೆ ನೀಡಿದ ಅವಕಾಶವನ್ನು ಸಾರ್ಥಕ್ಯಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. 
 
ಮುಖದಲ್ಲಿ ನಗುವಿರಲಿ: ಸೋಲಿನಲ್ಲೂ ನಮ್ಮನ್ನು ಗೆಲ್ಲಿಸುವ ಶಕ್ತಿ ಇರುವುದು ನಗುವಿಗೆ ಮಾತ್ರ. ಮುಖದಲ್ಲಿ ನಗುವಿದ್ದರೆ ಪ್ರಪಂಚವೇ ನಮ್ಮತ್ತ ನೋಡುತ್ತದೆ. ನಿಮ್ಮ ವ್ಯಕ್ತಿತ್ವದ ಬಗ್ಗೆ ಯಾರಾದರೂ ಧನಾತ್ಮಕವಾಗಿ ಪ್ರತಿಕ್ರಿಯಿಸಿದರೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಯಾರೂ ನಮ್ಮ ದುರ್ಗುಣಗಳನ್ನು ಮೆಚ್ಚುವುದಿಲ್ಲ; ಪ್ರೋತ್ಸಾಹಿಸುವುದೂ ಇಲ್ಲ. ನಮ್ಮಲ್ಲಿನ ಒಳ್ಳೆಯತವನ್ನು ಇನ್ನೊಬ್ಬರು ಗುರುತಿಸಿ ಪ್ರೋತ್ಸಾಹಿಸಿದರೆ ಸಹಜವಾಗಿಯೇ ಆತ್ಮವಿಶ್ವಾಸ  ಹೆಚ್ಚುತ್ತದೆ.  ಆದುದರಿಂದ ನಾವು ಒಳ್ಳೆಯತನವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು. 
 
ಅಕ್ಕಪಕ್ಕದವರೊಂದಿಗೆ ಸಹಕಾರ ಮನೋಭಾವದಿಂದ ವರ್ತಿಸಿ: ಬಾಗಿಲ ಬಳಿ ನಿಮ್ಮ ಹಿಂದೆ ಸಹೋದ್ಯೋಗಿ ಯಾರಾದರೂ ಬರುತ್ತಿದ್ದರೆ ಅವರಿಗಾಗಿ ಬಾಗಿಲು ತೆರೆಯಿರಿ. ನಿಮ್ಮ ಸಹೋದ್ಯೋಗಿ ಕೆಲಸದಲ್ಲಿ ಬ್ಯುಸಿ ಇದ್ದರೆ ಅವರಿಗೆ ಕಾಫಿ ಅಥವಾ ಟೀ ತಂದುಕೊಡಿ. ಬಸ್ಸ್ ಅಥವಾ ಟ್ರೈನ್‌ನಲ್ಲಿ ಪ್ರಯಾಣ ಮಾಡುವಾಗ ಹಿರಿಯರಿಗೆ ಸೀಟು ಬಿಟ್ಟುಕೊಡಿ. ನಿಮ್ಮ ಸಮಯದಲ್ಲಿ ಸ್ವಲ್ಪ ಹೊತ್ತನ್ನು ಸಾಮಾಜಿಕ ಕೆಲಸಗಳಿಗಾಗಿ ಮೀಸಲಿಡಿ. ಈ ರೀತಿ ಮಾಡುವುದರಿಂದ ನಿಮ್ಮ  ಆತ್ಮವಿಶ್ವಾಸ  ಹೆಚ್ಚುತ್ತದೆ. ಸಮಾಜದ ಋಣವನ್ನು ತೀರಿಸಲು ನಿಮಗೆ ಇದೊಂದು ಅವಕಾಶ. ನಿಮಗೆ ಸಮಾಜದ ಪ್ರಶಂಸೆಯೂ ಸಿಗುತ್ತದೆ. 
 
ಹೊಸ ವಿಷಯಗಳನ್ನು ಕಲಿಯಿರಿ: ಸಂಗೀತ, ನೃತ್ಯದಂಥ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ. ಅವನ್ನು ಆಸ್ವಾದಿಸುವುದನ್ನು ಕಲಿಯಿರಿ. ಸಾಧ್ಯವಾದರೆ ಯಾವುದಾದರೊಂದು ಕಲೆಯನ್ನು ಕಲಿಯಲು ಪ್ರಯತ್ನಿಸಿ. ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ಇವೆ. ಆದುದರಿಂದ ಜಗತ್ತಿನ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಿ. ಪ್ರತಿಕ್ಷಣವೂ ಯಾವುದಾದರೊಂದು ಹೊಸ ವಿಷಯವನ್ನು ಕಲಿಯಬೇಕೆಂಬ ಮನೋಭಾವವನ್ನು ಅಳವಡಿಸಿಕೊಳ್ಳಿ.
 
ಇಂದು ‘ಛೆ! ಇಷ್ಟು ಚಿಕ್ಕ ವಿಷಯ ನನಗಿದು ಗೊತ್ತೆ ಇಲ್ಲವಲ್ಲ, ಇದರಿಂದ ನನಗೆ ಅನುಮಾನವಾಯಿತಲ್ಲ’ ಎನ್ನಿಸಿ ಆತ್ಮವಿಶ್ವಾಸ ಕುಂದುವುದೂ ಇದೆ. ಅಂತಹ ಚಿಕ್ಕ ಪುಟ್ಟ ವಿಷಯಗಳನ್ನು ಕಲಿಯಲು ನಿಮ್ಮ ಸಮಯವನ್ನು ಮೀಸಲಿಡಿ. ‘ಅದು ಚಿಕ್ಕ ವಿಷಯ, ನನಗೆ ಏಕೆ ಅದು’ ಎಂದು ಅಸಡ್ಡೆ ತೋರಿಸಬೇಡಿ. ಯಾವುದೇ ಒಂದು ವಿಷಯವನ್ನು ತಿಳಿಯಬೇಕು ಎನ್ನಿಸಿದಾಗ ತಡಮಾಡದೆ ತಿಳಿದುಕೊಳ್ಳಿ. ನಾಳೆ ಎಂಬುದು ಹಾಳು ಎಂಬುದು ಜ್ಞಾಪಕದಲ್ಲಿರಲಿ.
 
ಆತಂಕ ಬೇಡ: ಆತಂಕ ಹಾಗೂ ಒತ್ತಡ ಕೇವಲ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ನಮ್ಮ ಆತ್ಮವಿಶ್ವಾಸದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ನಿಮಗೆ ಮಾನಸಿಕ ಅಥವಾ ದೈಹಿಕವಾಗಿ ಯಾವುದೇ ಒತ್ತಡ ಇರಬಹುದು. ಇದರಿಂದ ಸಾಧ್ಯವಾದಷ್ಟು ಹೊರ ಬರಲು ಪ್ರಯ್ನತಿಸಿ. ನೀವು ಮಾನಸಿಕವಾಗಿ ಸದೃಢರಾಗಿ, ಶಾಂತಚಿತ್ತರಾಗಿದಷ್ಟು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
 
ಯೋಗ, ಧ್ಯಾನಗಳು  ಮನಸ್ಸನ್ನು ಶಾಂತವಾಗಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಒಳ್ಳೆಯ ಆಹಾರಸೇವನೆಯ ಅಭ್ಯಾಸವನ್ನು ರೂಢಿಸಿಕೊಳ್ಳಿ. ಮನಸ್ಸು ಆತಂಕಕ್ಕೆ ಒಳಗಾದಾಗ ಮೊದಲು ಅದನ್ನು ಸಹಜಸ್ಥಿತಿಗೆ ತನ್ನಿ. ಆತ್ಮೀಯರೊಂದಿಗ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮುಂದಾಗಿ. 
 
ಸಂಭ್ರಮಿಸಿ: ನೀವು ಜೀವನದಲ್ಲಿ ಮಾಡಿದ ಪ್ರತಿ ಕೆಲಸವೂ ನಿಮ್ಮ ಪಾಲಿಗೆ ವಿಶೇಷವಾಗಿರುತ್ತದೆ. ನೀವಿರಿಸಿದ ಮೊದಲ ಹೆಜ್ಜೆ, ನೀವು ತೆಗೆದುಕೊಂಡ ಮೊದಲ ಬೈಸಿಕಲ್‌, ನೀವು ಪಡೆದ ಡ್ರೈವಿಂಗ್‌ ಲೈಸನ್ಸ್‌, ನೀವು ಮೊದಲ ಬಾರಿ ಆಟವಾಡಿದ್ದು, ನಿಮ್ಮ ಮೊದಲ ಸಂಬಳ – ಹೀಗೆ ಇವೆಲ್ಲವೂ ನಿಮ್ಮ ಜೀವನದ ವಿಶೇಷಗಳೇ. ಇಂಥ ಕ್ಷಣಗಳನ್ನು ಸಂಭ್ರಮಿಸಿ. ಜೀವನ ಎಂದರೆ ಅದೊಂದು ಸಂಭ್ರಮದ ಪ್ರಯಾಣ. ಈ ಸಂಭ್ರಮಕ್ಕೆ ನೀವೇ ಕಾರಣ ಎನ್ನವುದನ್ನು ಮರೆಯದಿರಿ. 
 
ನಿಮ್ಮ ಬಗ್ಗೆ  ನಿಮಗೇ ಬೇಸರವಾದಾಗ ಆ ಬೇಸರದ ಕಾರಣಗಳನ್ನು ಪಟ್ಟಿಮಾಡಿ. ನಂತರ ಆ ಪಟ್ಟಿಯನ್ನು ನೋಡಿ ಬೇಸರದ ಮೂಲವನ್ನು ಕಂಡುಕೊಳ್ಳಿ. ಬೇಸರಕ್ಕೆ ನೀವೇ ಕಾರಣರು ಎನ್ನಿಸಿದರೆ ನಿಮ್ಮಿಂದಾದ ತಪ್ಪು ಏನು ಎಂಬುದನ್ನು ಹುಡುಕಿ; ಆ ತಪ್ಪು ಮುಂದೆ ಆಗದಂತೆ ಎಚ್ಚರ ವಹಿಸಿ. 
 
ಭಯವನ್ನು ಎದುರಿಸಿ: ನಾವು ಇಡುವ ಪ್ರತಿ ಹೆಜ್ಜೆಯ ಬಗ್ಗೆಯೂ ಎಚ್ಚರಿಕೆ ಬೇಕು. ಆದರೆ ಪ್ರತಿಯೊಂದಕ್ಕೂ ಭಯ ಪಡುವುದನ್ನು ಬಿಡಿ. ಭಯ ಎದುರಾದಾಗ ಅದಕ್ಕೆ ಕಾರಣ ಏನೆಂದು ಹುಡುಕಿ. ಭಯವನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ. ಹೀಗೆಂದು ಪ್ರತಿ ಕೆಲಸವನ್ನೂ ಯೋಚಿಸದೆ ಮಾಡಲು ಹೋಗಬೇಡಿ. ‘ಈ ಕೆಲಸವನ್ನು ಮಾಡುವುದರಿಂದ ಮುಂದೆ ಏನಾಗುವುದು’ ಎಂದು ವಿಶ್ಲೇಷಿಸಿ ಬಳಿಕ ಅದರಲ್ಲಿ ತೊಡಗಿ. ಆತ್ಮವಿಶ್ವಾಸವನ್ನು ಕುಗ್ಗಿಸುವ ಭಯವೂ ಸಲ್ಲದು; ಹಾಗೆಯೇ ದುಡುಕುತನವೂ ಸಲ್ಲದು.
 
ಹೊಸತನ್ನು ರಚಿಸಿ: ಪ್ರತಿಯೊಬ್ಬರು ಕೂಡ ಪ್ರತಿಭಾವಂತರೇ. ಪ್ರತಿಭೆ ಎನ್ನುವುದು ಹುಟ್ಟಿನಿಂದಲೇ ನಮ್ಮ ಜೊತೆಯಲ್ಲಿರುತ್ತದೆ. ಆದರೆ ಕಾಲಕ್ರಮೇಣ ಪ್ರತಿಭೆ ನಮ್ಮಿಂದ ದೂರವಾಗುತ್ತ ಹೋಗುತ್ತದೆ. ಇದಕ್ಕೆ ಕಾರಣ ನಮ್ಮ ಶಕ್ತಿಯನ್ನು ನಾವೇ ಗುರುತಿಸದಿರುವುದು. ನಮ್ಮ ಶಕ್ತಿ ಏನು, ದೌರ್ಬಲ್ಯ ಏನು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿರಬೇಕು. ಪ್ರತಿ ದಿನವನ್ನೂ ಹೊಸತಾಗಿ ಕಾಣುವುದು ನಮ್ಮಲ್ಲಿರುವ ಪ್ರತಿಭೆಯನ್ನು ಕ್ರಿಯಾಶೀಲವಾಗಿಸುತ್ತದೆ.
 
ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಪ್ರತಿಭೆ ಪ್ರಕಟವಾಗಲು ನೆರವಾಗುತ್ತದೆ. ಸಾಹಿತ್ಯ, ಸಂಗೀತದಂಥ ಹವ್ಯಾಸಗಳಲ್ಲಿ ಮನಸ್ಸು ತೊಡಗಬೇಕು. ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಸಹೋದ್ಯೋಗಿಗಳೊಂದಿಗೆ ಅರ್ಥವತ್ತಾದ ಸಂಭಾಷಣೆಯಲ್ಲಿ ತೊಡಗಿ.  ಇದರಿಂದ ಮನಸ್ಸು ಉಲ್ಲಾಸದಿಂದ ಇರುತ್ತದೆ; ನಮ್ಮ ಕಲಿಕೆಯೂ ಹೆಚ್ಚುತ್ತದೆ. ಸಮಯದ ಸದುಪಯೋಗವೂ ಆಗುತ್ತದೆ. 
 
ನಿಮ್ಮ ಕಲ್ಪನೆಗೆ ರೂಪು ನೀಡಿ: ಕಲ್ಪನೆ ಎನ್ನುವುದು ಒಂದು ಉತ್ತಮ ಸ್ವಭಾವ. ಈ ಸ್ವಭಾವವನ್ನು ಧನಾತ್ಮಕವಾಗಿ ಉಪಯೋಗಿಸಿಕೊಳ್ಳಿ. ಇದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
 
ಹಳೆಯದನ್ನು ಮರೆಯಲು ಪ್ರಯತ್ನಿಸಿ: ಪ್ರತಿಯೊಬ್ಬರ ಬದುಕಿನ ಭೂತಕಾಲದಲ್ಲಿ ನೋವು–ಸೋಲುಗಳಿರುವುದು ಸಹಜ. ಆದರೆ ಅದು ವರ್ತಮಾನಕ್ಕೆ ಮಾರಕವಾಗಬಾರದು. ಅಂತಹ ಹಳೆಯ ನೆನಪುಗಳನ್ನು ಮರೆತಾಗಲೇ ನಮ್ಮಲ್ಲಿ ಹೊಸ ಯೋಚನೆಗಳು ಹುಟ್ಟಲು ಸಾಧ್ಯ. ಪ್ರತಿ ಹೊಸ ಯೋಜನೆಯನ್ನು ರೂಪಿಸುವಾಗಲೂ ‘ನಾನು ಸಾಧಿಸಿಯೇ ತೀರುತ್ತೇನೆ’ ಎಂಬ ಛಲ ಹಾಗೂ ಆತ್ಮವಿಶ್ವಾಸ ಮನಸ್ಸಿನಲ್ಲಿ ಮೂಡಬೇಕು. 
 
ನಿಮ್ಮನ್ನು ನೀವು ಪ್ರೀತಿಸಿ: ನಾವು ಬೇರೆಯವರನ್ನು ಪ್ರೀತಿಸುವ ಮೊದಲು ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ನಮ್ಮ ಶಕ್ತಿ–ಸಾಮರ್ಥ್ಯಗಳ ಬಗ್ಗೆ ನಂಬಿಕೆ ಇರಬೇಕು. ಇದರ ಜೊತೆಯಲ್ಲಿಯೇ ನಮ್ಮ ದೋಷ–ದೌರ್ಬಲ್ಯಗಳ ಬಗ್ಗೆಯೂ ಅರಿವಿರಬೇಕು. ಮೊದಲಿಗೆ ನಮ್ಮನ್ನು ನಾವು ಹುರುದುಂಬಿಸಿಕೊಳ್ಳಬೇಕು. ಆ ಮೇಲೆ ಉಳಿದವರು ನಮ್ಮ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವುದು. ನಮ್ಮನ್ನು ನಾವು ಪ್ರೀತಿಸುವುದು ಎಂದರೆ ಸ್ವಾರ್ಥದಿಂದ ನಡೆದುಕೊಳ್ಳುವುದಲ್ಲ; ನಮ್ಮ ಮೇಲೆ ನಾವು ನಂಬಿಕೆ ಇಡುವುದು ಇದರ ಮೂಲತತ್ತ್ವ.
 
ಸಾಮಾಜಿಕ ಕೌಶಲ ಹೆಚ್ಚಿಸಿಕೊಳ್ಳಿ: ಜೀವನದಲ್ಲಿ ಸಂಬಂಧ ಎನ್ನುವುದು ಮುಖ್ಯ ಭಾಗ. ಪ್ರತಿ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಬಂಧುವರ್ಗ, ಸ್ನೇಹಿತರು, ಸಹೋದ್ಯೋಗಿಗಳು – ಈ ಎಲ್ಲ ಸಂಬಂಧಗಳು ಮುಖ್ಯ. ಸಾಮಾಜಿಕ ಕೌಶಲವನ್ನು ಹೆಚ್ಚಿಸಿಕೊಳ್ಳುವುದು ಕೂಡ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದರ ಒಂದು ಭಾಗವೇ. ಜನರೊಂದಿಗೆ ಬೆರೆಯುವುದನ್ನು ಕಲಿಯಬೇಕು. ಇದೂ ಕೂಡ ಆತ್ಮವಿಶ್ವಾಸವನ್ನು ಹೆಚ್ಚಿಸಬಲ್ಲದು.
 
ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
- ನಿಮ್ಮ ತಪ್ಪುಗಳನ್ನು ಬೇರೆಯವರು ಗುರುತಿಸಿ ಹೇಳುವ ಮೊದಲು ನೀವೇ ಅವನ್ನು ಕಂಡುಕೊಳ್ಳಿ.
- ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಸ್ಫೂರ್ತಿದಾಯಕ ಮಾತುಗಳನ್ನು ತಂದುಕೊಳ್ಳಿ. ಇದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ; ಆತ್ಮವಿಶ್ವಾಸವೂ ಹೆಚ್ಚುತ್ತದೆ. ನಿದ್ರೆಯೂ ಚೆನ್ನಾಗಿ ಬರುತ್ತದೆ.
- ಪ್ರತಿ ಕೆಲಸವನ್ನು ಮಾಡುವ ಮೊದಲು ಯೋಜನೆಯನ್ನು ರೂಪಿಸಿಕೊಳ್ಳಿ. ಆ ಯೋಜನೆಯ ಅನುಸಾರ ಕೆಲಸ ಮಾಡಿ. ಆಗ ಯಶಸ್ಸು  ನಿಮ್ಮದಾಗುತ್ತದೆ. 
- ಮಾನಸಿಕ ಸ್ಥೈರ್ಯಕ್ಕೆ  ಧ್ಯಾನ ಒಂದು ಉತ್ತಮ ಔಷಧವಾಗಬಲ್ಲದು. ದಿನವೂ ಸ್ವಲ್ಪ ಹೊತ್ತು  ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ.
- ಯಾವುದೇ ಕೆಲಸವನ್ನು ಮೊದಲ ಬಾರಿ ಮಾಡುವಾಗ ತಪ್ಪುಗಳಾಗುವುದು ಸಹಜ. ಹೀಗೆ ತಪ್ಪುಗಳದಾಗ ‘ನನ್ನಿಂದ ಈ ಕೆಲಸ ಸಾಧ್ಯವಿಲ್ಲ’ ಎಂದು ಕೈ ಚೆಲ್ಲಿ ಕೂರಬೇಡಿ. ‘ಮುಂದಿನ ಬಾರಿ ಆ ಕೆಲಸ ನನ್ನಿಂದ ಸಾಧ್ಯ’ ಎಂಬ ಆತ್ಮವಿಶ್ವಾಸದಿಂದಿರಿ.
- ನಿಮ್ಮ ಸುತ್ತಲಿನ ಪರಿಸರದಲ್ಲಿ ನಿಮ್ಮದೇ ಆದ ಒಂದು ಅವಕಾಶ ನಿಮಗಾಗಿ ಕಾಯುತ್ತಿರುತ್ತದೆ. ಅಂತಹ ಅವಕಾಶವನ್ನು ಗುರುತಿಸಿ ಉಪಯೋಗಿಸಿಕೊಳ್ಳುವಷ್ಟು ನಾವು ಧೈರ್ಯವಂತರಾಗಿರಬೇಕು.
- ನಿಮ್ಮ ಭೂತಕಾಲದಲ್ಲಿ ನಡೆದುಹೋದ ಕೆಟ್ಟ ಘಟನೆಗಳು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಆದರೆ ಅಂತಹ ಕೆಟ್ಟ ಘಟನೆಗಳು ನಿಮ್ಮಲ್ಲಿ ಮತ್ತೆ ಮರುಕಳಿಸಬೇಕೆಂದೇನು ಇಲ್ಲ. ಹಾಗಾಗೀ ಭವಿಷ್ಯದ ದಿನಗಳ ಕುರಿತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.
- ನಿಮ್ಮ ಮನಸ್ಸು ಎಂದಿಗೂ ನಿಮ್ಮ ನೆಚ್ಚಿನ ಸ್ನೇಹಿತ. ಇತರರು ಹೇಳುವ ನೂರು ಮಾತುಗಳನ್ನು ಕೇಳುವುದಕ್ಕಿಂತ ನಿಮ್ಮ ಮನಸ್ಸು ಹೇಳುವ ಒಂದು ಮಾತನ್ನು ಕೇಳಿ. 
- ನಿಮ್ಮ ಸುತ್ತಲಿನ ವಾತಾವರಣ ಎಂದಿಗೂ ಧನಾತ್ಮಕವಾಗಿರಲಿ. 
- ಸೋಲುಗಳನ್ನು ಎಂದಿಗೂ ದ್ವೇಷಿಸಬೇಡಿ. ಪ್ರತಿ ಸೋಲು ಕೂಡ ನಿಮ್ಮ ಗೆಲುವಿಗೆ ಪಾಠವಾಗಿರುತ್ತದೆ. ನಿಮ್ಮ ಸೋಲನ್ನು ನೀವೇ ವಿರ್ಮಶಿಸಿಕೊಳ್ಳಬೇಕೇ ವಿನಾ ಅದರಿಂದ ಕುಗ್ಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT