ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧ್ಯವಾಗದ ಬೆಂಕಿರೇಖೆ ನಿರ್ಮಾಣ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚು: ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಸರತ್ತು
Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ADVERTISEMENT

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೆಡಿಯಾಲ ವಿಭಾಗದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚಿಗೆ ಬೆಂಕಿರೇಖೆ (ಫೈರ್‌ಲೈನ್‌) ನಿರ್ಮಾಣದಲ್ಲಿನ ವೈಫಲ್ಯವೇ ಮೂಲ ಕಾರಣ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿಗೆ ಸೇರಿದ ಕಲ್ಕೆರೆ, ಮೊಳೆಯೂರು ಅರಣ್ಯ ವಲಯದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ಎನ್‌. ಬೇಗೂರು ಮತ್ತು ಗುಂಡ್ರೆ ವಲಯಕ್ಕೂ ವ್ಯಾಪಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

ಕಾಳ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಿಸುವುದು ಸಾಂಪ್ರದಾಯಿಕ ವಿಧಾನ. ಅರಣ್ಯ ಇಲಾಖೆಯ ಸಿಬ್ಬಂದಿ ಬೇಸಿಗೆಗೂ ಮೊದಲು ಅರಣ್ಯದಲ್ಲಿರುವ ಬೆಂಕಿದಾರಿಗಳನ್ನು ಸುಟ್ಟು ಬೆಂಕಿರೇಖೆ ನಿರ್ಮಿಸುತ್ತಾರೆ.

ಅರಣ್ಯದೊಳಗೆ ಪ್ರವಾಸಿಗರ ವಾಹನಗಳು ಸಂಚರಿಸುವ ಗೇಮ್‌ ರಸ್ತೆ (ವೀವ್‌ಲೈನ್‌) ಮತ್ತು ಕಾಡಿನೊಳಗೆ ಹಾದುಹೋಗಿರುವ ಹೆದ್ದಾರಿ, ಮುಖ್ಯರಸ್ತೆಬದಿಯಲ್ಲಿ ಬೆಂಕಿರೇಖೆ ನಿರ್ಮಿಸಲಾಗುತ್ತದೆ. ಇಂಥಹ ರಸ್ತೆಗಳ ಎರಡೂ ಬದಿಯಲ್ಲಿ ಅವಶ್ಯಕತೆಗೆ ತಕ್ಕಂತೆ 50 ಅಡಿವರೆಗೂ ಬೆಂಕಿರೇಖೆ ನಿರ್ಮಾಣ ಮಾಡಲಾಗುತ್ತದೆ. ಮರದ ಎಲೆಗಳು, ಲಂಟಾನಾ ಸೇರಿದಂತೆ ಗಿಡಗಂಟೆಗಳನ್ನು ಸುಟ್ಟು ಬೆಂಕಿರೇಖೆ ನಿರ್ಮಿಸಲಾ
ಗುತ್ತದೆ. ಇದು ಬೆಂಕಿ ತಡೆಗೆ ಸಹಕಾರಿಯಾಗಲಿದೆ.

ಜತೆಗೆ, ಅರಣ್ಯ ಪ್ರದೇಶವನ್ನು ಗಸ್ತು ಪ್ರದೇಶಗಳಾಗಿ (ಬೀಟ್‌) ವಿಭಾಗಿಸಿ ಬೆಂಕಿರೇಖೆ ನಿರ್ಮಾಣ ಮಾಡಲಾಗುತ್ತದೆ. ಪ್ರತಿಯೊಂದು ಗಸ್ತು ಪ್ರದೇಶದಲ್ಲಿ 5ರಿಂದ 6 ಬೆಂಕಿರೇಖೆ (ಒಂದು ಬೆಂಕಿರೇಖೆ ಅಗಲ ಕನಿಷ್ಠ 20 ಅಡಿ) ನಿರ್ಮಿಸಲಾಗುತ್ತದೆ. ಇವುಗಳ ನಡುವೆ 100ರಿಂದ 200 ಎಕರೆಯಷ್ಟು ಅಂತರವಿರುತ್ತದೆ. ಕಾಳ್ಗಿಚ್ಚು ಸಂಭವಿಸಿದರೆ ಎರಡು ಬೆಂಕಿರೇಖೆಗಳ ನಡುವೆ ಇರುವ ಅರಣ್ಯವಷ್ಟೇ ಭಸ್ಮವಾಗುತ್ತದೆ. ಬೆಂಕಿಯು ಇಡೀ ಕಾಡಿಗೆ ವ್ಯಾಪಿಸುವುದಿಲ್ಲ. ಬೆಂಕಿ ನಿಯಂತ್ರಣಕ್ಕಾಗಿ ಮುಂಜಾಗ್ರತೆವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಬೆಂಕಿರೇಖೆ ನೆರವಾಗಲಿದೆ.

ದಶಕದಿಂದಲೂ ರಾಜ್ಯದ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಗಳ ಗಸ್ತು ಪ್ರದೇಶದಲ್ಲಿ ಬೆಂಕಿರೇಖೆ ನಿರ್ಮಿಸಿ ಕಾಳ್ಗಿಚ್ಚು ತಡೆಯಲಾಗುತ್ತಿತ್ತು. ಜತೆಗೆ, ವೀವ್‌ಲೈನ್‌ ನಿರ್ಮಿಸಿ ಪ್ರವಾಸಿಗರಿಗೆ ವನ್ಯಜೀವಿಗಳು ಕಾಣುವಂತೆ ಅನುಕೂಲ ಕಲ್ಪಿಸಲಾಗುತ್ತಿತ್ತು. ಇನ್ನೊಂದೆಡೆ ವೀವ್‌ಲೈನ್ ಪ್ರದೇಶದಲ್ಲಿ ಹಸಿರು ಬೆಳೆದು ಪ್ರಾಣಿಗಳಿಗೆ ಆಹಾರ ದೊರೆಯುತ್ತಿತ್ತು. ಬೇಸಿಗೆ ವೇಳೆ ಈ ವೀವ್‌ಲೈನ್‌ನಲ್ಲಿ ಬೆಂಕಿರೇಖೆ ನಿರ್ಮಿಸಲಾಗುತ್ತಿತ್ತು.

‘ಗಸ್ತು ಪ್ರದೇಶದಲ್ಲಿನ ಬೆಂಕಿರೇಖೆ ಮತ್ತು ವೀವ್‌ಲೈನ್‌ ಸ್ಥಳಗಳು ಬೇಟೆಗಾರರಿಗೆ ಅನುಕೂಲವಾಗಲಿವೆ. ಇವುಗಳನ್ನು ನಿರ್ಮಾಣ ಮಾಡಬಾರದೆಂದು 8 ವರ್ಷದ ಹಿಂದೆ ಅರಣ್ಯ ಇಲಾಖೆ ಹೊರಡಿಸಿದ ಆದೇಶವೇ ಈಗ ಕಾಡಿನ ನಾಶಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವನ್ಯಜೀವಿ ತಜ್ಞರು.

‘ದಶಕದ ಹಿಂದೆ ಕಾಳ್ಗಿಚ್ಚು ತಡೆಯಲು ಬಂಡೀಪುರದಲ್ಲಿ ಬೆಂಕಿರೇಖೆ ಮತ್ತು ವೀವ್‌ಲೈನ್‌ ನಿರ್ಮಿಸಲಾಗುತ್ತಿತ್ತು. ಆದೇಶದ ಪರಿಣಾಮ ಈಗ ಗಸ್ತು ಪ್ರದೇಶದಲ್ಲಿ ಬೆಂಕಿರೇಖೆ ಮತ್ತು ವೀವ್‌ಲೈನ್‌ಗಳು ನಿರ್ವಹಣೆ ಇಲ್ಲದೆ ಮುಚ್ಚಿಹೋಗಿವೆ. ಹಾಗಾಗಿ, ಕಾಳ್ಗಿಚ್ಚು ಕಾಣಿಸಿಕೊಂಡರೆ ನಿಯಂತ್ರಿಸಲು ಕಷ್ಟಕರವಾಗಿದೆ’ ಎಂಬುದು ಅವರ ವಿವರಣೆ.

‘ಬೆಂಕಿಯನ್ನು ಮರದ ಹಸಿರು ಸೊಪ್ಪಿನಿಂದ ಬಡಿದು ನಂದಿಸಲಾಗುತ್ತದೆ. ಈ ಬಾರಿ ಮಳೆ ಇಲ್ಲದೆ ಕಾಡಿನಲ್ಲಿ ಹಸಿರು ಸೊಪ್ಪು ಕೂಡ ಸಿಗುತ್ತಿಲ್ಲ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ನಿಷ್ಕ್ರಿಯವಾಗಿರುವ ಬೆಂಕಿ ಪಹರೆ ಗೋಪುರ

ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬೆಂಕಿ ಪಹರೆ ಗೋಪುರಗಳು ನಿಷ್ಕ್ರಿಯಗೊಂಡಿರುವ ಪರಿಣಾಮ ಕಾಳ್ಗಿಚ್ಚು ನಿಯಂತ್ರಣಕ್ಕೆ ಸವಾಲಾಗಿದೆ.
ನಿರ್ದಿಷ್ಟ ಸ್ಥಳಗಳಲ್ಲಿ ಬೆಂಕಿ ಪಹರೆ ಗೋಪುರ ನಿರ್ಮಿಸಲಾಗುತ್ತದೆ. ಈ ಗೋಪುರದಲ್ಲಿ ಪಾಳಿ ಅನುಸಾರ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಾರೆ. ಆ ವ್ಯಾಪ್ತಿಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣವೇ ವೈರ್‌ಲೆಸ್‌ ಮೂಲಕ ಸುದ್ದಿ ಮುಟ್ಟಿಸುತ್ತಾರೆ. ಬೆಂಕಿ ನಂದಿಸಲು ನೇಮಕಗೊಂಡಿರುವ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಿಯಂತ್ರಿಸಲು ಶ್ರಮಿಸುತ್ತಾರೆ.

‘ಇತ್ತೀಚಿನ ವರ್ಷಗಳಲ್ಲಿ ಬಂಡೀಪುರ ವ್ಯಾಪ್ತಿಯ ಬೆಂಕಿ ಪಹರೆ ಗೋಪುರಗಳು ನಿಷ್ಕ್ರಿಯಗೊಂಡಿರುವುದರಿಂದ ಕಾಳ್ಗಿಚ್ಚು ತಡೆಗೆ ಹಿನ್ನಡೆಯಾಗಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವನ್ಯಜೀವಿ ತಜ್ಞರು.

‘ದಶಕದ ಹಿಂದೆ ಇಲಾಖೆಗೆ ವಾಹನಗಳ ಕೊರತೆ ಇತ್ತು. ಈಗ ಇದರ ಕೊರತೆಯೇ ಇಲ್ಲ. ವೈರ್‌ಲೆಸ್ ಬದಲು ಮೊಬೈಲ್‌ ನೆಟ್‌ವರ್ಕಿಂಗ್‌ ಸೌಲಭ್ಯ ಇದೆ. ಈ ಎಲ್ಲ ಸೌಲಭ್ಯ ಬಳಸಿಕೊಂಡರೆ ತ್ವರಿತವಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಬಹುದು. ಆದರೆ, ಅಧಿಕಾರಿಗಳಲ್ಲಿ ಅರ್ಪಣಾ ಮನೋಭಾವದ ಕೊರತೆ ಕಾಣುತ್ತಿದೆ’ ಎನ್ನುತ್ತಾರೆ ಅವರು.

ಸೋಲಿಗರು ಸಿದ್ಧಹಸ್ತರು:  ಕಾಡಿಗೆ ಬಿದ್ದ ಬೆಂಕಿ ನಂದಿಸುವುದು ಒಂದು ಕಲೆ. ಇದರಲ್ಲಿ ನುರಿತ ಗಿರಿಜನರು ಇದ್ದಾರೆ. ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಇರುವ ಸೋಲಿಗ ಗಿರಿಜನರು ಕಾಳ್ಗಿಚ್ಚು ನಂದಿಸುವಲ್ಲಿ ಸಿದ್ಧಹಸ್ತರು.

ಕಾಳ್ಗಿಚ್ಚು ತಡೆಯಲು ಬೇಸಿಗೆ ಮುಗಿಯುವವರೆಗೂ ತಾತ್ಕಾಲಿಕವಾಗಿ ಬೆಂಕಿ ನಿಯಂತ್ರಿಸುವಲ್ಲಿ ನೈಪುಣ್ಯ ಪಡೆದಿರುವ ಗಿರಿಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಪ್ರತಿ ಅರಣ್ಯ ವಲಯದಲ್ಲೂ 20ಕ್ಕೂ ಹೆಚ್ಚು ನುರಿತ ಸೋಲಿಗರನ್ನು ನೇಮಿಸಿಕೊಳ್ಳಲಾಗಿದೆ.

ಅರಣ್ಯದ ಬಗ್ಗೆ ಸೋಲಿಗರಿಗೆ ಆಳವಾದ ಜ್ಞಾನವಿದೆ. ಕಾಳ್ಗಿಚ್ಚು ಕಾಣಿಸಿಕೊಂಡ ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ತೆರಳುವ ಈ ಗಿರಿಜನರು ಬೆಂಕಿ ನಂದಿಸಲು ಚಾಕಚಕ್ಯತೆ ತೋರುತ್ತಾರೆ.

ಬೆಂಕಿಯ ವಿರುದ್ಧ ದಿಕ್ಕಿನ 30ರಿಂದ 40 ಅಡಿ ದೂರದಲ್ಲಿ ಬೆಂಕಿ ಹಾಕಿ (ಕೌಂಟರ್‌ ಫಯರ್) ಮರದ ಎಲೆಗಳು, ಗಿಡಗಂಟೆಗಳು, ಲಂಟಾನಾವನ್ನು ಸುಡುತ್ತಾರೆ. ಬೆಂಕಿ ನಿಯಂತ್ರಣಕ್ಕೆ ಬಂದ ತಕ್ಷಣವೇ ನೇರಳೆ ಸೊಪ್ಪಿನಿಂದ ಹೊಗೆಯಾಡುವ ಬೆಂಕಿಯ ಕೆಂಡಗಳನ್ನು ಬಡಿದು ನಂದಿಸುತ್ತಾರೆ. ಹಾಗಾಗಿ, ಬೆಂಕಿಯು ಕಾಡಿನ ಉಳಿದ ಪ್ರದೇಶಕ್ಕೆ ವ್ಯಾಪಿಸುವುದಿಲ್ಲ.

‘ಬಂಡೀಪುರದ ವ್ಯಾಪ್ತಿಯೂ ಬೆಂಕಿ ನಿಯಂತ್ರಿಸುವಲ್ಲಿ ಪರಿಣತಿ ಪಡೆದಿರುವ ಗಿರಿಜನರನ್ನು ಬಳಸಿಕೊಳ್ಳುವುದು ಉತ್ತಮ. ಇದರಿಂದ ಮುಂದಿನ ದಿನಗಳಲ್ಲಿ ಸಂಭವಿಸುವ ಬೆಂಕಿ ಅನಾಹುತ ತಡೆಗೆ ಸಹಕಾರಿಯಾಗಲಿದೆ’ ಎನ್ನುವುದು ವನ್ಯಜೀವಿ ತಜ್ಞರ ಅಭಿಪ್ರಾಯ.

ಅಂಕಿ–ಅಂಶ

2,387 ಕಿ.ಮೀ
ಬಂಡೀಪುರದಲ್ಲಿ ಈ ವರ್ಷ ನಿರ್ಮಿಸಿರುವ ಬೆಂಕಿರೇಖೆ

₹1.13 ಕೋಟಿ
ಬೆಂಕಿರೇಖೆ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT