ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

889 ಎಂಜಿನಿಯರ್‌ಗಳ ನೇರ ನೇಮಕಾತಿ

ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ತುರ್ತು ಕ್ರಮ
Last Updated 21 ಫೆಬ್ರುವರಿ 2017, 19:32 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರ್‌ಗಳ ಕೊರತೆಯಿಂದ ರಾಜ್ಯದ ವಿವಿಧ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದು, ಅದಕ್ಕೆ ವೇಗ ಕೊಡುವ ಉದ್ದೇಶದಿಂದ 889 ಎಂಜಿನಿಯರ್‌ಗಳನ್ನು ತಕ್ಷಣ ನೇಮಕ ಮಾಡಿಕೊಳ್ಳಲು ಜಲ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.

ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 600 ಸಹಾಯಕ ಎಂಜಿನಿಯರ್‌ಗಳ (ಎಇ) ಮತ್ತು 289 ಕಿರಿಯ ಎಂಜಿನಿಯರ್‌ಗಳ (ಜೆಇ) ನೇಮಕಾತಿ ಪ್ರಕ್ರಿಯೆಗೆ ಮುಂದಾಗಿರುವ ಇಲಾಖೆ, ಈ ಕುರಿತು ಸಚಿವ ಸಂಪುಟದ ಒಪ್ಪಿಗೆ ಪಡೆಯಲು ಪ್ರಸ್ತಾವ ಸಲ್ಲಿಸಿದೆ. ಹೊಸ ನೇಮಕಾತಿಯಲ್ಲಿ ಎಇ 100 ಮತ್ತು ಜೆಇ 89 ಹುದ್ದೆಗಳನ್ನು ಹೈದರಾಬಾದ್‌– ಕರ್ನಾಟಕ ಪ್ರದೇಶಕ್ಕೆ ಮೀಸಲಿಡಲಾಗಿದೆ.

ಸಹಾಯಕ ಎಂಜಿನಿಯರ್‌ಗಳ ಹುದ್ದೆ ಕ್ಲಾಸ್‌– 2 ಹಂತದ ಹುದ್ದೆಗಳಾಗಿದ್ದು, ಚಾಲ್ತಿಯಲ್ಲಿರುವ ನೇಮಕಾತಿ ನಿಯಮ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಬೇಕು.

ಆದರೆ, ಈ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಒಂದು ಬಾರಿಗೆ ನೇರ (ಸಂದರ್ಶನ ಇಲ್ಲದೆ) ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ. ನಿಯಮ ಬದಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂಪುಟ ಸಭೆಯ ಮಂಜೂರಾತಿ ಅಗತ್ಯವಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಲಾಖೆಗೆ ಒಟ್ಟು 2,735 ಸಹಾಯಕ ಎಂಜಿನಿಯರ್‌ ಮತ್ತು 1,736 ಕಿರಿಯ ಎಂಜಿನಿಯರ್‌ ಹುದ್ದೆಗಳು ಮಂಜೂರಾಗಿದ್ದು, ಕ್ರಮವಾಗಿ 1631 ಮತ್ತು 995 ಹುದ್ದೆಗಳು ಭರ್ತಿಯಾಗಿವೆ. ಆದರೆ, ಈ ಎಂಜಿನಿಯರ್‌ಗಳ ಪೈಕಿ ಹಲವರು ಇತರ ಕೆಲವು ಇಲಾಖೆಗಳಿಂದ ಎರವಲು ಸೇವೆಯಲ್ಲಿ ಬಂದಿದ್ದಾರೆ. ಹೀಗೆ ಬಂದವರು ಮಾತೃಸಂಸ್ಥೆಗೆ ಮರಳಿದರೆ 1,200ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಆಗಲಿವೆ ಎಂದೂ ಮೂಲಗಳು ತಿಳಿಸಿವೆ.

ಇಲಾಖೆಗೆ 2009ರಲ್ಲಿ 752 ಎಇ ಮತ್ತು 645 ಜೆಇಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. 2013ರಲ್ಲಿ ಮತ್ತೆ 200 ಎಇ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿಶೇಷ ನೇಮಕಾತಿಯಡಿ 2015ರಲ್ಲಿ 549 ಎಂಜಿನಿಯರ್‌ಗಳನ್ನು (376 ಎಇ ಮತ್ತು 173 ಜೆಇ) ನೇಮಿಸಿಕೊಳ್ಳಲಾಗಿತ್ತು ಎಂದೂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT