ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ಗೆ ಚೆಕ್‌ ಮೂಲಕ ಹಣ ನೀಡಿದ್ದ ಬಿಎಸ್‌ವೈ

ಕಪ್ಪಕಾಣಿಕೆ ನೀಡಿರುವ ದಾಖಲೆಗಳು ನನ್ನ ಬಳಿ ಇವೆ: ಎಚ್‌.ಡಿ.ಕುಮಾರಸ್ವಾಮಿ
Last Updated 21 ಫೆಬ್ರುವರಿ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಜೆಪಿಯ ಹೈಕಮಾಂಡ್‌ಗೆ ಚೆಕ್‌ಗಳ ಮೂಲಕ ಹಣ ನೀಡಿರುವ ಮಾಹಿತಿ ನನ್ನ ಬಳಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದು ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದ ನಾಯಕರು ಹೈಕಮಾಂಡ್‌ಗೆ ಕಪ್ಪಕಾಣಿಕೆ ನೀಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿ ಜೆಡಿಎಸ್‌ ಬೆಂಗಳೂರು ನಗರ ಘಟಕದ ವತಿಯಿಂದ ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು  ಯಾರ್‍ಯಾರ ಬ್ಯಾಂಕ್‌ ಖಾತೆಗಳಿಗೆ ಎಷ್ಟು ಹಣ ನೀಡಿದ್ದಾರೆ ಎಂಬುದರ ಮಾಹಿತಿ ಇದೆ. ಸೂಕ್ತ ಸಮಯ ಬಂದಾಗ ಅದನ್ನು ಸಾರ್ವಜನಿಕರ ಮುಂದೆ ಇಡುತ್ತೇನೆ’ ಎಂದರು.

‘ರಾಜ್ಯದಲ್ಲಿ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಜಲಾಶಯಗಳಲ್ಲಿ ನೀರು ಬತ್ತಿ ಹೋಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿ ರಾಜ್ಯದ ಜನರಿಗೆ ಪುಕ್ಕಟೆ ಮನರಂಜನೆ ನೀಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಒಂದೇ ನಾಣ್ಯದ ಎರಡು ಮುಖಗಳು: ‘ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಮಾಹಿತಿಯನ್ನು ಜನರ ಮುಂದೆ ಇಡುವ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದರ ನಾಯಕರು ಒಂದೇ ದೋಣಿ ಯಲ್ಲಿ ತೇಲುತ್ತಿದ್ದಾರೆ’ ಎಂದು ದೂರಿದರು.

ವಿದ್ಯುತ್‌ ದರ ಏರಿಕೆಗೆ ವಿರೋಧ: ‘ಪ್ರತಿ ಯುನಿಟ್‌ ವಿದ್ಯುತ್‌ ದರವನ್ನು ಒಂದು ರೂಪಾಯಿ ನಲವತ್ತು ಪೈಸೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಇಂಧನ ಸಚಿವರು ಹೇಳಿಕೆ ನೀಡಿದ್ದಾರೆ. ಬರಗಾಲ, ಕುಡಿಯುವ ನೀರು, ದನಕರುಗಳಿಗೆ ಮೇವಿನ ಸಮಸ್ಯೆ ಇದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವಿದ್ಯುತ್‌ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಕಿಡಿಕಾರಿದರು.

‘ಮೆಟ್ರೊ ರೈಲಿಗೆ ಸಹಿ ಹಾಕಿದವ ನಾನು’: ‘ಮೆಟ್ರೊ ರೈಲು ಯೋಜನೆಗೆ ಸಹಿ ಹಾಕಿದವನು ನಾನು. ಪ್ರಧಾನ ಮಂತ್ರಿಯನ್ನು ಕರೆಯಿಸಿ ಭೂಮಿ ಪೂಜೆ ಮಾಡಿಸಿದವನು ನಾನು. ಆದರೆ, ಸಿದ್ದರಾಮಯ್ಯ ಅವರು ಮೆಟ್ರೊ ರೈಲಿನ ಜತೆಗೆ ತಮ್ಮ ಚಿತ್ರ ಹಾಕಿಸಿಕೊಂಡಿದ್ದಾರೆ. ಮೆಟ್ರೊ ರೈಲಿಗೆ ಇವರ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಓಲಾ, ಉಬರ್‌ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ?  ಓಲಾ, ಉಬರ್ ಕಂಪೆನಿಗಳು ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಂಡಿವೆ. ಆದರೆ, ಬ್ಯಾಂಕ್‌ಗಳಿಂದ ಸಾಲ ಮಾಡಿ ಕಾರುಗಳನ್ನು ಖರೀದಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಪಾಲರಿಗೆ ಮನವಿ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ಗೆ ₹1 ಸಾವಿರ ಕೋಟಿ ಕಪ್ಪಕಾಣಿಕೆ ಕೊಟ್ಟಿರುವ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್‌ ಅವರ ಸಂಭಾಷಣೆಯ ಸಿ.ಡಿ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂಬ ಮನವಿ ಪತ್ರವನ್ನು ಜೆಡಿಎಸ್‌ ನಾಯಕರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ನೀಡಿದರು.

‘ಡೈನಾಮಿಕ್‌ ಬಿರುದು ಇದೇನಾ?’
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ವಿವಿಧ ಬ್ಯಾಂಕ್‌ಗಳಿಂದ ಪಡೆದ ಸಾಲದ ಭದ್ರತೆಗಾಗಿ 425ಕ್ಕೂ ಹೆಚ್ಚು ನಿವೇಶನಗಳನ್ನು ಅಡಮಾನ ಇಟ್ಟಿದೆ. ಈ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಬಂದಿದೆ. ಬೆಂಗಳೂರಿಗೆ ಡೈನಾಮಿಕ್‌ ನಗರ ಎಂಬ ಬಿರುದು ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೊಂಡು ಬೀಗುತ್ತಿದ್ದಾರೆ. ಬಿಡಿಎ ನಿವೇಶನಗಳನ್ನು ಅಡಮಾನ ಇಟ್ಟಿರುವುದಕ್ಕೆ ಈ ಬಿರುದು ಬಂದಿರಬಹುದು’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT