ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದಲ್ಲಿ ಕಾಮಗಾರಿಗಳ ಮಾಹಿತಿ ಹಾಕಿದ ಬಿಬಿಎಂಪಿ

Last Updated 21 ಫೆಬ್ರುವರಿ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರೋತ್ಥಾನ ಯೋಜನೆಯಡಿ ದಕ್ಷಿಣ ವಲಯದ ಕಾಮಗಾರಿಗಳು ಪ್ರಾರಂಭವಾಗುವ ಮುನ್ನವೇ ಆ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ನಗರೋತ್ಥಾನ ಯೋಜನೆಯಡಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹7,300 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ.  ಇದರಲ್ಲಿ ₹176 ಕೋಟಿ ಹಣವನ್ನು ಬಿಬಿಎಂಪಿಯ ದಕ್ಷಿಣ ವಲಯಕ್ಕೆ ನೀಡಲಾಗಿದೆ. ವಲಯದ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿ ನಡೆಸಲು ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ.

ಕಾಮಗಾರಿ ಆರಂಭಕ್ಕೂ ಮುನ್ನವೇ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಕಾಮಗಾರಿಯ ಸ್ವರೂಪ, ಸ್ಥಳ ಮತ್ತು ಆ ಜಾಗದ ನಕ್ಷೆ, ಚಿತ್ರಗಳನ್ನು  ಜನರು ಜಾಲತಾಣದಲ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಪ್ರದೇಶದಲ್ಲಿ ನಡೆಯುವ ಕಾಮಗಾರಿಗಳ ಮಾಹಿತಿ ಪಡೆಯಲು ಜನ ಬಿಬಿಎಂಪಿ ಕಚೇರಿಗೆ ಅಲೆಯುವ ಪ್ರಮೇಯ ತಪ್ಪಿದೆ.

ಕಾಮಗಾರಿಗಳ ಮಾಹಿತಿ ಪಡೆಯ ಬಯಸುವವರು ಬಿಬಿಎಂಪಿ ಜಾಲತಾಣ ದಲ್ಲಿನ ‘ಇತರ ಮಾಹಿತಿ’ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ತದನಂತರ ‘ನಗರೋತ್ಥಾನ ಯೋಜನೆಗಳು’ ಎಂಬ ಹೊಸ ಪುಟ ತೆರೆದುಕೊಳ್ಳುತ್ತದೆ. ಅದ ರಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿರುವ ಕಾಮಗಾರಿಗಳ ಮಾಹಿತಿಯ ಪಟ್ಟಿ ಲಭ್ಯವಾಗುತ್ತದೆ. ಈ ಪಟ್ಟಿಯಲ್ಲಿ ಜನರು ತಮಗೆ ಬೇಕಾದ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಮಾಹಿತಿಯನ್ನು ಪಡೆಯಬಹುದು.

ಪಾಲಿಕೆಯಲ್ಲಿ ಒಟ್ಟು ಎಂಟು ವಲಯಗಳಿವೆ. ಸದ್ಯಕ್ಕೆ ದಕ್ಷಿಣ ವಲಯದ ಮಾಹಿತಿ ಮಾತ್ರ ಜಾಲತಾಣದಲ್ಲಿ ಲಭ್ಯವಿದೆ. ಈ ವಲಯವು ಆರು ವಿಧಾನಸಭಾ ಕ್ಷೇತ್ರಗಳಾದ ಜಯನಗರ, ಬಿಟಿಎಂ ಬಡಾವಣೆ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ ಮತ್ತು ವಿಜಯನಗರವನ್ನು ಒಳಗೊಂಡಿದೆ. ಇದರಲ್ಲಿ 44 ವಾರ್ಡ್‌ಗಳು ಇವೆ.  

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್,‘ಆಡಳಿತದಲ್ಲಿ ಪಾರದರ್ಶಕತೆ ತರುವುದು ನಮ್ಮ ಮೊದಲ ಆದ್ಯತೆ. ಆರಂಭದಲ್ಲಿ ದಕ್ಷಿಣ ವಲಯದ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಲಯಗಳ ಮಾಹಿತಿಯನ್ನು ಜಾಲತಾಣದಲ್ಲಿ ನೀಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಎಸ್.ಪ್ರಭಾಕರ್ ಮಾತನಾಡಿ, ‘ಜನರೇ ಕಾಮಗಾರಿಯ ಮೇಲ್ವಿಚಾರಣೆ ನಡೆಸಲು ಅನುಕೂಲವಾಗಲು ವಿವರವನ್ನು ಜಾಲತಾಣದಲ್ಲಿ ಬಹಿರಂಗಗೊಳಿಸಿದ್ದೇವೆ. ಇಲ್ಲಿ ಕಾಮಗಾರಿ ನಡೆಯುವ ಸ್ಥಳದ ಚಿತ್ರಗಳನ್ನು ಜನರು ನೋಡಬಹುದು’ ಎಂದು ಹೇಳಿದರು.

ಪ್ರಭಾಕರ್ ಅವರು ಆಯುಕ್ತರ ತಾಂತ್ರಿಕ ಜಾಗೃತಿ ಕೋಶದ (ಟಿವಿಸಿಸಿ) ಮುಖ್ಯಸ್ಥರಾಗಿದ್ದಾಗ ₹ 1,539 ಕೋಟಿ  ನಕಲಿ ಬಿಲ್‌ಗಳ ಹಗರಣವನ್ನು ಬಯಲಿಗೆಳೆದಿದ್ದರು.

‘ಇದೊಂದು ಅತ್ಯುತ್ತಮ ಕೆಲಸವಾಗಿದೆ. ಇತರ ವಲಯಗಳ ಮಾಹಿತಿಯನ್ನು ಇದೇ ರೀತಿ ಬಹಿರಂಗಗೊಳಿಸಬೇಕು’ ಎಂದು ಸಿಟಿಜನ್ ಆ್ಯಕ್ಷನ್ ಫೋರಂ ಸಂಘಟನೆಯ ಸದಸ್ಯ ಸಿ.ಎನ್.ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT