ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡ ಶಾಲೆಗಳಲ್ಲಿ ಕನ್ನಡ ಡಿಂಡಿಮ

Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಕನ್ನಡ ಭಾಷಾ ಪ್ರೀತಿ’ಯನ್ನು  ಬಾಯಿ ಮಾತಿನಲ್ಲಷ್ಟೇ ತೋರದೆ, ಕೆಲಸದ ಮೂಲಕ ಸಾಧಿಸಬೇಕೆಂಬ ಪ್ರಯತ್ನದಲ್ಲಿ ಇರುವವರು ವೀರಕಪುತ್ರ ಶ್ರೀನಿವಾಸ.  ಕನ್ನಡ ಶಾಲೆಗಳ ಅಭಿವೃದ್ಧಿಗೆಂದು ಅವರು ಗಡಿಯಂಚಿನ ಶಾಲೆಗಳ  ‘ದತ್ತು ಅಭಿಯಾನ’ ನಡೆಸಿದ್ದಾರೆ. 
 
ಈ ಅಭಿಯಾನದ ಮೂಲಕ ಶಾಲೆಗಳ ಮೂಲಸೌಕರ್ಯಗಳು, ಕಂಪ್ಯೂಟರ್ ಶಿಕ್ಷಣ, ಒಟ್ಟಾರೆ ಶೈಕ್ಷಣಿಕ ಬೆಳವಣಿಗೆಯ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸುತ್ತಿದ್ದಾರೆ...  
 
ಕನ್ನಡ ಶಾಲೆಗಳಿಗೆ ಉಳಿಗಾಲವಿಲ್ಲ’; ‘ಇಂಗ್ಲಿಷ್ ಶಾಲೆಗಳ ಪಾರಮ್ಯದಲ್ಲಿ ಕನ್ನಡ ಶಾಲೆಗಳು ತನ್ನ ನೆಲದಲ್ಲೇ ಅಂತಃಸತ್ವ ಕಳೆದುಕೊಳ್ಳುತ್ತಿವೆ’, ‘ಕನ್ನಡಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ’...

ದಿನನಿತ್ಯದ ಇಂಥ ಅಬ್ಬರದ ಕೂಗುಗಳ ನಡುವೆ ಸದ್ದಿಲ್ಲದೇ ಕನ್ನಡ ಶಾಲೆಗಳ ಏಳಿಗೆಗೆ ಪ್ರಯತ್ನಿಸುತ್ತಿರುವವರಲ್ಲಿ ವೀರಕಪುತ್ರ ಶ್ರೀನಿವಾಸ ಅವರೂ ಒಬ್ಬರು. ಗಡಿಜಿಲ್ಲೆ ಕೋಲಾರ ಸೀಮೆಯ ವೀರಕಪುತ್ರ ಎನ್ನುವ ಕುಗ್ರಾಮದಲ್ಲಿ ಹುಟ್ಟಿದ ಶ್ರೀನಿವಾಸ ಅವರು ಓದಿದ್ದೂ ಸರ್ಕಾರಿ ಕನ್ನಡ ಶಾಲೆಯಲ್ಲೇ. ಬೆಂಗಳೂರಿನಲ್ಲಿ ಸಣ್ಣ ಉದ್ಯಮದಲ್ಲಿ ತೊಡಗಿಕೊಂಡವರು ಅವರು.

ಆದರೆ ಕೋಲಾರ ಗಡಿಭಾಗದ ಕನ್ನಡ ಶಾಲೆಗಳು, ಅವುಗಳ ದುಸ್ಥಿತಿ ಬಗ್ಗೆ ಇದ್ದ ತಮ್ಮದೇ ಅನುಭವಗಳು ಅವರನ್ನು ಮುಂದಿನ ಪೀಳಿಗೆ ಕುರಿತು ಯೋಚಿಸುವಂತೆ ಪ್ರೇರೇಪಿಸಿದ್ದು. ಜೊತೆಗೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕನ್ನಡ ಶಾಲೆಗಳ ಸಂಖ್ಯೆ ಇವರಲ್ಲಿ ಒಳಗೊಳಗೇ ಆತಂಕವನ್ನೂ ಉಂಟುಮಾಡಿತ್ತು.
 
ಕನ್ನಡ ಶಾಲೆ ಉಳಿದರೆ ಮಾತ್ರ ಕನ್ನಡ ಉಳಿದೀತು ಎನ್ನುವ ನಿಲುವಿನೊಂದಿಗೆ ಶಾಲೆಗಳನ್ನು ದತ್ತು ಸ್ವೀಕರಿಸುವ ಪರಿಕಲ್ಪನೆ ಅವರಲ್ಲಿ ಚಿಗುರೊಡೆಯಿತು. ಇದೇ ನಿಟ್ಟಿನಲ್ಲಿ ‘ಸರ್ಕಾರಿ ಕನ್ನಡ ಶಾಲೆಗಳ ದತ್ತು ಸ್ವೀಕಾರ ಅಭಿಯಾನ’ ಆರಂಭಿಸುವ ಆಲೋಚನೆ ಮಾಡಿದರು. ತಮ್ಮ ದುಡಿಮೆಯ ಹಣವನ್ನು ಇದಕ್ಕೆ ಮೀಸಲಿಟ್ಟರು.

ಫೇಸ್‌ಬುಕ್ ಯಾನ
ಈ ಆಂದೋಲನಕ್ಕೆ ಅವರು ವೇದಿಕೆಯಾಗಿ ಬಳಸಿಕೊಂಡಿದ್ದು ಫೇಸ್‌ಬುಕ್ ಜಾಲತಾಣವನ್ನು. ‘ನಿಮ್ಮಿಂದ ಒಂದು ಸಹಾಯ ಆಗಬೇಕಿದೆ... ನಾವು ಕನ್ನಡ ಶಾಲೆಗಳ ದತ್ತು ಅಭಿಯಾನ ಆರಂಭಿಸಿದ್ದು ನಿಮಗೆ ಗೊತ್ತಿದೆ. ಈ ಅಭಿಯಾನ ಆರಂಭವಾದ ಮೇಲೆ ಅನೇಕ ಕಡೆಗಳಿಂದ ನಮಗೆ ದುಸ್ಥಿತಿಯಲ್ಲಿರುವ ಶಾಲೆಗಳ ಬಗ್ಗೆ ಪತ್ರಗಳು ಬರುತ್ತಿವೆ. ನಮ್ಮ ಶಾಲೆಯನ್ನೇ ಈ ತಿಂಗಳು ಆಯ್ಕೆ ಮಾಡಿಕೊಳ್ಳಿ ಎಂಬ ಒತ್ತಾಯವೂ ಕೇಳಿಬರುತ್ತಿದೆ.
 
ಆದರೆ, ನಿಮಗೆ ಗೊತ್ತಿರಬಹುದು– ಇದು ನನ್ನ ದುಡಿಮೆ ಹಣದಿಂದ ನಿರ್ವಹಿಸುತ್ತಿರುವ ಅಭಿಯಾನ. ನನ್ನ ಮಿತಿಯಲ್ಲಿ ತಿಂಗಳಿಗೆ ಒಂದು ಶಾಲೆಗಿಂತ ಹೆಚ್ಚು ಶಾಲೆ ದತ್ತು ಪಡೆಯುವುದು ಅಸಾಧ್ಯ. ಆದರೆ, ನೀವು ಕೈಜೋಡಿಸಿದರೆ ಇನ್ನೊಂದಷ್ಟು ಶಾಲೆಗಳಿಗೆ ಕಾಯಕಲ್ಪ ಒದಗಿಸಬಹುದು ಎನ್ನುವುದು ನನ್ನ ಸ್ವಾರ್ಥ. ಕನ್ನಡ ಕಟ್ಟುವ ಕೆಲಸಕ್ಕೆ ಜೊತೆಯಾಗಿ, ನೀವು ಕೊಡಿಸುವ ವಸ್ತುಗಳನ್ನು ನಿಮ್ಮ ಹೆಸರಿನಲ್ಲಿಯೇ ಶಾಲಾ ಮಕ್ಕಳಿಗೆ ವಿತರಿಸುತ್ತೇವೆ’ ಎಂದು ತಮ್ಮ ಆಂದೋಲನಕ್ಕೆ ಮುನ್ನುಡಿ ಬರೆದಿದ್ದಾರೆ.

ಕೊನೆಯಿಂದ ಆರಂಭ
ಅಭಿಯಾನದ ಆರಂಭಕ್ಕೂ ಮೊದಲು, ರಾಜ್ಯದ ಕನ್ನಡಶಾಲೆಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿರುವ ಅವರು, ಬೀದರ್ ಜಿಲ್ಲೆಯ ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಕ್ಷೇತ್ರ ಅಧ್ಯಯನ ನಡೆಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸತತವಾಗಿ ದಾಖಲಾತಿ ಕುಸಿಯುತ್ತಿರುವ ಶಾಲೆಗಳ ಸಮೀಕ್ಷೆ ನಡೆಸಿದ್ದಾರೆ.
 
ಈ ಅಧ್ಯಯನ–ಅನುಭವದ ನಂತರ, ಬೀದರ್ ಸಮೀಪದ ಬಾಪೂರ ಗ್ರಾಮದ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮೊದಲು ದತ್ತು ಸ್ವೀಕರಿಸಿದರು. ಈ ಅಭಿಯಾನದ ಅಡಿಯಲ್ಲಿ ಶಾಲೆಗೊಂದು ಕಂಪ್ಯೂಟರ್, ಪ್ರೊಜೆಕ್ಟರ್, ಪ್ರದರ್ಶನ ಪರದೆ, ನೀರು ಶುದ್ಧೀಕರಣ ಯಂತ್ರ ನೀಡಿದ್ದಾರೆ.
 
ಶಾಲೆಯ ಸುತ್ತಮುತ್ತ ಸಸಿಗಳನ್ನು ನೆಟ್ಟು, ಶಾಲಾ ಕಟ್ಟಡಕ್ಕೆ ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿಸಿದ್ದಾರೆ. ಕಂಪ್ಯೂಟರ್ ಬೋಧನೆಗಾಗಿ ಒಬ್ಬ ಶಿಕ್ಷಕರನ್ನು ನೇಮಿಸಿ, ಅವರಿಗೆ ಪ್ರತಿ ತಿಂಗಳು ₹4 ಸಾವಿರ ಗೌರವಧನ ನೀಡುವ ವ್ಯವಸ್ಥೆ ಮಾಡಿದ್ದಾರೆ.   

ಅಭಿಯಾನದ ಸಹಾಯದಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಸಂಚರಿಸಿ, ಅಲ್ಲಿನ ಬಿದಾರಣೆ ಎನ್ನುವ ಗ್ರಾಮದ ಸರ್ಕಾರಿ ಶಾಲೆ ದತ್ತು ಪಡೆದು, ಆ ಶಾಲೆಗೂ ಅಗತ್ಯವಿರುವ ಪೀಠೋಪಕರಣ, ಕಂಪ್ಯೂಟರ್ ಒದಗಿಸಿದ್ದಾರೆ. ಅಲ್ಲದೆ, ಕಟ್ಟಡ ದುರಸ್ತಿ ಮಾಡಿಸುವ ಮೂಲಕ ಮಕ್ಕಳ ಕಲಿಕೆಗೆ ಹೊಸ ವಾತಾವರಣ ಸೃಷ್ಟಿಸಿದ್ದಾರೆ. 

ಶಾಲಾ ಮುಖ್ಯ ಶಿಕ್ಷಕರ ಅನುಮತಿ ಮೇರೆಗೆ ದತ್ತು ಸ್ವೀಕಾರ ಮಾಡಿಕೊಂಡಿರುವ ಎರಡು ಶಾಲೆಗಳಲ್ಲಿ ವಾರದ ಮೂರು ದಿನದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮೂಲಕ ಕಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಬೋಧನೆ ಮಧ್ಯೆ ಬಿಡುವಿನ ಸಮಯದಲ್ಲಿ ಕನ್ನಡ ಕವಿಗಳ ಪದ್ಯಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸುವ ಪ್ರಯತ್ನ ಅವರದ್ದು.
 
ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳು ಇಲ್ಲದೆ ಕಲಿಕೆಯ ವಾತಾವರಣ ಸೃಷ್ಟಿಯಾಗುತ್ತಿಲ್ಲ. ಈ ಕಾರಣಕ್ಕೆ ಖಾಸಗಿ ಶಾಲೆಗಳತ್ತ ಒಲವು ಹೆಚ್ಚಾಗುತ್ತಿದೆ. ಇದೇ ಅಂಶವನ್ನಿಟ್ಟುಕೊಂಡು, ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸುವ ಇರಾದೆಯೊಂದಿಗೆ ಅಭಿಯಾನ ಆರಂಭಿಸಿರುವುದಾಗಿ ಹೇಳುತ್ತಾರೆ ಶ್ರೀನಿವಾಸ.

ಹಳೆಯ ಕಂಪ್ಯೂಟರ್, ಪ್ರೊಜೆಕ್ಟರ್, ಲ್ಯಾಪ್‌ಟಾಪ್, ಮಕ್ಕಳಿಗೆ ಅನುಕೂಲವಾಗುವ ಕಲಿಕಾ ಸಿ.ಡಿ. ಅಥವಾ ಮಕ್ಕಳಿಗೆ ಬ್ಯಾಗ್, ಬಟ್ಟೆಗಳು, ಶಾಲಾ ಕಟ್ಟಡಕ್ಕೆ ಬಣ್ಣ ಬಳಿಸುವುದು, ವಾಟರ್ ಫಿಲ್ಟರ್ – ಹೀಗೆ ಅಗತ್ಯವಾದ ಸಾಮಗ್ರಿಗಳನ್ನೂ ಅಭಿಯಾನದ ಭಾಗವಾಗಿ ವಿತರಿಸಿದ್ದಾರೆ.

ಇಂಗ್ಲಿಷ್ ಶಾಲೆಗಳ ಪಾರಮ್ಯ: ಖಾಸಗಿ ಆಂಗ್ಲ ಶಾಲೆಗಳು ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲೂ ತಲೆ ಎತ್ತಿವೆ. ಅಂತಹ ಅನೇಕ ಶಾಲೆಗಳು ಆರಂಭದಲ್ಲಿ ಕಡಿಮೆ ಶುಲ್ಕ ಪಡೆದು, ನಂತರದ ವರ್ಷಗಳಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತವೆ. ಕಲಿಕೆ, ಮಕ್ಕಳ ಶಿಸ್ತಿಗೆ ಒತ್ತು ನೀಡುತ್ತಿರುವುದರಿಂದ ಖಾಸಗಿ ಆಂಗ್ಲ ಶಾಲೆಗಳತ್ತ ಪೋಷಕರು ಹೆಜ್ಜೆ ಹಾಕುತ್ತಿದ್ದಾರೆ.
 
ಇನ್ನೂ ಕೆಲವೆಡೆ ವಸತಿ ಸಹಿತ ಟ್ಯೂಷನ್ ಶಾಲೆಗಳು ತಲೆ ಎತ್ತಿದ್ದು, ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ ಮಕ್ಕಳೇ ಅಲ್ಲಿ ದಾಖಲಾಗುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳ ಅಳಿವಿಗೆ ಕಾರಣವಾಗಬಹುದು. ಆದರೆ, ಸರ್ಕಾರ ಮಾತ್ರ ಕನ್ನಡ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಗಮನ ನೀಡುತ್ತಿಲ್ಲ.

ಇಷ್ಟಾದರೂ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಕನ್ನಡ ಶಾಲೆಗಳ ಅವನತಿಗೆ ಕಾರಣ ಎಂಬ ಸಾಮಾನ್ಯ ಆರೋಪಕ್ಕೆ ಅವರು ಕೂಡ ಧ್ವನಿಗೂಡಿಸುತ್ತಾರೆ.

ಕಾನ್ವೆಂಟ್ ಬಿಟ್ಟು ಹೊರಬನ್ನಿ
‘ರಾಜಧಾನಿಯಲ್ಲಿ ಕನ್ನಡಕ್ಕೆ ಬಂದೊದಗಿರುವ ದುಸ್ಥಿತಿ ನಾಡಿನ ಇತರ ಭಾಗಗಳಿಗೆ ಹರಡಬಾರದೆಂಬ ಕಾರಣಕ್ಕೆ ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೂ ಸಿಗಲಿ, ಪೋಷಕರು ಕಾನ್ವೆಂಟ್‌ಗಳನ್ನು ಬಿಟ್ಟು, ಸರ್ಕಾರಿ ಶಾಲೆಗಳ ಕಡೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂಬ ಕಾಳಜಿಯಿಂದ ಈ ಅಭಿಯಾನ ಆರಂಭಿಸಿದ್ದೇನೆ’ ಎನ್ನುತ್ತಾರೆ ಶ್ರೀನಿವಾಸ.

‘ಮಕ್ಕಳ ಕಲಿಕೆಗೆ ನೇಮಿಸಿರುವ ನುರಿತ ಕಂಪ್ಯೂಟರ್ ಬೋಧಕರು ಶಾಲಾ ಶಿಕ್ಷಕರ ಕೌಶಲವೃದ್ಧಿಗೂ ತರಬೇತಿ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸುಣ್ಣ ಬಣ್ಣ ಬಳಿದು, ಮರಗಿಡ ಬೆಳೆಸಿದರೆ ಸಾಲದು; ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಸರ್ಕಾರ ನೇಮಿಸುವ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿಯೇ ಆಯ್ಕೆಯಾಗಿ ಬಂದಿರುತ್ತಾರೆ.
 
ಕೆಲಸದ ಒತ್ತಡದ ನಡುವೆ ಕೌಶಲವೃದ್ಧಿಗೆ ಅವರು ಅಷ್ಟಾಗಿ ಗಮನ ನೀಡುವುದಿಲ್ಲ. ಆ ಕಾರಣಕ್ಕೆ ಅವರಿಗೂ ಸೂಕ್ತ ತರಬೇತಿ ನೀಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆ ಎಂದರೆ ಮೂಗುಮುರಿಯವ ಪೋಷಕರಿಗೆ ಇದು ಉತ್ತರ’ ಎನ್ನುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಇದೆ; ಆದರೆ, ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಕಡತದಲ್ಲಿಯೇ ಉಳಿದಿವೆ. ಅನುಷ್ಠಾನಗೊಂಡರೂ ನಿಗದಿತ ಗುರಿ ಸಾಧನೆಯಲ್ಲಿ ವಿಫಲತೆ ಕಂಡ ಪರಿಣಾಮ, ಗ್ರಾಮ ಮಟ್ಟದಲ್ಲೂ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಪಾರಮ್ಯ ಮೆರೆಯಲು ಸಾಧ್ಯವಾಗಿದೆ ಎನ್ನುವ ಬೇಸರ ಅವರದು.

ಕೈ ಜೋಡಿಸಿ: ಈ ಅಭಿಯಾನದಲ್ಲಿ ನೂರು ಶಾಲೆಗಳನ್ನು ಒಳಗೊಳ್ಳುವ ನಿಟ್ಟಿನಲ್ಲಿ ಶ್ರೀನಿವಾಸ ಅವರು ಪ್ರಯತ್ನ ಮುಂದುವರೆಸಿದ್ದಾರೆ. ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ ಗಿರಿಜನ ಮಕ್ಕಳು ಕಲಿಯುತ್ತಿರುವ ಶಾಲೆ ದತ್ತು ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ. ಒಂದು ಶಾಲೆ ಅಭಿವೃದ್ಧಿಗೆ ಕನಿಷ್ಠ ₹1.5 ಲಕ್ಷ ವೆಚ್ಚವಾಗುತ್ತದೆ. ಉದಾರ ಮನಸ್ಸಿನವರು ಅಭಿಯಾನದೊಂದಿಗೆ ಕೈಜೋಡಿಸಿದರೆ ಕೆಲಸ ಇನ್ನಷ್ಟು ಸುಲಭ ಎನ್ನುತ್ತಾರೆ.

ಸುಪ್ರೀಂಕೋರ್ಟ್‌ ಆದೇಶದಂತೆ ಕನ್ನಡ ಭಾಷಾ ಮಾಧ್ಯಮದಲ್ಲಿ ನೀಡುತ್ತಿರುವ ಶಿಕ್ಷಣವನ್ನು ಅನೇಕ ಖಾಸಗಿ ಹಾಗೂ ಅನುದಾನರಹಿತ ಶಾಲೆಗಳು ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತಿಸಿಕೊಳ್ಳುತ್ತಿವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದರಿಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಈಗಾಗಲೇ 2,500 ಸರ್ಕಾರಿ ಶಾಲೆಗಳು ಮುಚ್ಚಿದ್ದು, 2020ರ ವೇಳೆಗೆ ಶೇ 20ರಷ್ಟು ಪ್ರಾಥಮಿಕ ಶಾಲೆ ಹಾಗೂ ಶೇ 30ರಷ್ಟು ಪ್ರೌಢಶಾಲೆಗಳು ಮಾತ್ರ ಉಳಿದಿರುತ್ತವೆ ಎಂದು ಸರ್ಕಾರದ ಅಂಕಿ ಅಂಶಗಳನ್ನು ಮುಂದಿಡುತ್ತಾರೆ.

ಸಮುದಾಯದ ತೊಡಕು: ‘ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಸುಧಾರಿಸಲು ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ.ಪಾಲಕರ ಪಾಲ್ಗೊಳ್ಳುವಿಕೆಯೂ ಹೇಳಿಕೊಳ್ಳುವಂತಿಲ್ಲ. ಮಕ್ಕಳನ್ನು ಶಾಲೆಯಿಂದ ಬಿಡಿಸಿ ದುಡಿಯಲು ಕಳಿಸುವ ಪೋಷಕರ ಸಂಖ್ಯೆಯೇ ಇಲ್ಲಿ ಹೆಚ್ಚು.
 
ಶಾಲೆಯಿಂದ ಹೊರಗುಳಿದ ಮಕ್ಕಳಿದ್ದು, ಅವರನ್ನು ಮರಳಿ ಶಾಲೆಗೆ ಸೇರಿಸುವ ಪ್ರಯತ್ನಕ್ಕೂ ಪ್ರತಿಫಲ ದೊರೆಯುತ್ತಿಲ್ಲ. ‘ನಮ್ಮೂರ ಶಾಲೆ’ ಎಂಬ ಭಾವನೆಯನ್ನೇ ಹೊಂದಿರದ ಕೆಲವು ಗ್ರಾಮಗಳಲ್ಲಿ ಶಾಲಾ ಆವರಣವೇ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ.

‘ಊರ ಜನರಿಗೆ ಶಾಲೆಗಳ ಅಭಿವೃದ್ಧಿ ಬೇಕಿಲ್ಲ; ಇನ್ನು, ಶಾಲೆಯ ಎಸ್ ಡಿಎಂಸಿ ಸದಸ್ಯರ ನಡುವಿನ ಜಾತಿ ತಿಕ್ಕಾಟಕ್ಕೆ ಶಿಕ್ಷಣದ ಯೋಜನೆಗಳು ನನೆಗುದಿಗೆ ಬಿದ್ದಿವೆ. ಪರಸ್ಪರ ಆರೋಪ – ಪ್ರತ್ಯಾರೋಪದಲ್ಲಿ ಇಡೀ ಶೈಕ್ಷಣಿಕ ವಾತಾವರಣ ಕಲುಷಿತಗೊಂಡಿದೆ. ನಮ್ಮ ಅಭಿಯಾನ ಎನ್‌ಜಿಒಯೊಂದರ ಯೋಜನೆ ಇರಬಹುದು ಎಂದೆಣಿಸಿ ಕೆಲವರು ಹಣ ಪೀಕುವ ಹುನ್ನಾರವನ್ನೂ ನಡೆಸಿದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಷಡ್ಯಂತ್ರದಿಂದಲೇ ಶಿಕ್ಷಣ ಇಲಾಖೆ ಯೋಜನೆಗಳು ಹಳ್ಳ ಹಿಡಿಯುತ್ತಿವೆ’ ಎಂದು  ಅಭಿಯಾನದ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಮಾತನಾಡುತ್ತಾರೆ ಶ್ರೀನಿವಾಸ .

ಶ್ರೀನಿವಾಸ ಅವರ ಡಾ.ವಿಷ್ಣು ಸೇನಾ ಸಮಿತಿ ಬಳಗದ ಮಂಜು ಮಾಣಿಕ್ಯ, ವಿಷ್ಣು ಪ್ರಕಾಶ್, ಕೆ. ವಿನಯ್, ಯದುನಂದನಗೌಡ, ಆನಂದರಾಜ್, ಮಲ್ಲಿಕಾರ್ಜುನ, ಬಲರಾಮ್, ಡಾ.ಸಂತೋಷ್ ಹಾನಗಲ್, ಮುಂತಾದವರು ಕೈಜೋಡಿಸಿದ್ದಾರೆ; ಈ ಮೂಲಕ ಕನ್ನಡ ಶಾಲೆಗಳ ಉಳಿವಿನ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀನಿವಾಸ ಅವರ ಸಂಪರ್ಕ: 9844252172.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT