ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಕ್ಕೂ ಉತ್ತರಿಸುವ ‘ಉತ್ತರಾಯಣ’

Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಓದುಗರನ್ನು ಕುಣಿಸಬಲ್ಲ, ತಣಿಸಬಲ್ಲ, ಮಣಿಸಬಲ್ಲ, ದಣಿಸಬಲ್ಲ ಕವಿ ದ.ರಾ. ಬೇಂದ್ರೆ. ಅವರು ಕಾವ್ಯದ ಗಾರುಡಿಗ. ಈ ‘ಗಾರುಡಿಗತನ’ದ ಎಲ್ಲ ಪಟ್ಟುಗಳೂ ಇರುವ ‘ಉತ್ತರಾಯಣ’ (1960) ಧಾರವಾಡದ ‘ಸಮಾಜ ಪುಸ್ತಕಾಲಯ’ದ ಪ್ರಕಟಣೆ.
 
ಒಂದೂ ಕಾಲು ರೂಪಾಯಿ ಬೆಲೆಯ, 38 ಕವಿತೆಗಳ ಈ ಸಂಕಲನ ಎರಡು ದೀರ್ಘ ಕವಿತೆಗಳನ್ನೂ ಒಳಗೊಂಡಿದೆ. ಶೀರ್ಷಿಕೆಯ ಹಾಡು ‘ಉತ್ತರಾಯಣ’ ಮಹಾಭಾರತದ ಭೀಷ್ಮ ಇಹದಿಂದ ಪರಕ್ಕೆ ಸಲ್ಲುವ ಸಂದರ್ಭದ ಗೀತೆ.
 
ದ್ವಾಪರದ ಕೊನೆಯನ್ನೂ ಕಲಿಯುಗದ ನಾಂದಿಯನ್ನೂ ಸೂಚಿಸುವ ಈ ಹಾಡು ಕೃಷ್ಣಭಕ್ತಿಯನ್ನೂ ಭೀಷ್ಮನ ವ್ಯಕ್ತಿತ್ವದ ಉನ್ನತಿಯನ್ನೂ ಕಟ್ಟಿಕೊಡುವಂತಿದೆ. ‘ನರನ ಪ್ರಕೃತಿ, ನರನ ವಿಕೃತಿ ವೈರವನೆ ಬೆಳೆಸಿವೆ / ಕಳೆದುಕೊಂಡು ಬುದ್ಧಿಯನ್ನು ಜ್ಞಾನವನ್ನು ಗಳಿಸಿವೆ / ದ್ವಾಪರದಾ ಅಸ್ತಮಾನ ಕಲಿಯುಗವನೆ ತೆರೆದಿದೆ / ಅದರ ನೀಲ ಭಾಲದಲ್ಲಿ ಕೃತಕೃತ್ಯತೆ ಬರೆದಿದೆ’ ಎನ್ನುವ ಕೃಷ್ಣನ ಮಾತು ಕವಿಯ ದರ್ಶನದಂತಿದೆ.
 
‘ನಮ್ಮ ಕೊನೆಯ ಶರಣು’ (ಹುತಾತ್ಮ ಗೀತ) ಮತ್ತೊಂದು ದೀರ್ಘ ಕವಿತೆ. ಲಾವಣಿ ರೂಪದಲ್ಲಿ ಇರುವ ಇದು ಫಿಲಿಪ್ಪೀನ್ಸ್‌ನ ಡಾ. ಜೋಸ್‌ ರಿಝ್ಝೊಲ (1861–1896) ಎನ್ನುವ ಸ್ವಾತಂತ್ರ್ಯಯೋಧನ ಕವಿತೆಯ ಅನುವಾದ. ತಾನು ಗಲ್ಲಿಗೇರುವ ಮುನ್ನಾದಿನ ಜೋಸ್‌ ಬರೆದ ‘ಮೇ ಲಾಸ್ಟ್‌ ಫೇರ್‌ವೆಲ್‌’ ಕವಿತೆಯನ್ನು ಬೇಂದ್ರೆ ಕನ್ನಡಕ್ಕೆ ತಂದಿರುವ ಪರಿ ಅಪೂರ್ವವಾಗಿದೆ; ಅದು ಈ ನೆಲದ ಯಾವುದೇ ಹುತಾತ್ಮನ ಕೊನೆಯ ಹಾಡೂ ಆಗುವಂತಿದೆ. 
 
ಬೇಂದ್ರೆಯವರ ಛಾಪಿನ ಜೊತೆಗೆ ‘ಉತ್ತರಾಯಣ’ ಬೇರೊಂದು ಕಾರಣಕ್ಕೂ ವಿಶೇಷ ಎನ್ನಿಸುತ್ತದೆ. ಅದು, ಇಲ್ಲಿನ ಕೆಲವು ಕವಿತೆಗಳನ್ನು ನವ್ಯ ಕವಿತೆಗೆ ಬೇಂದ್ರೆಯವರ ಪ್ರತಿಕ್ರಿಯೆಯ ರೂಪದಲ್ಲಿ ಇರುವುದು. ‘ಪಂಟು’ ಎನ್ನುವ ಕವಿತೆಯಲ್ಲಿ ‘ಅಲ್ಲಿಂಕು ಇಲ್ಲಿಂಕು / ನಡುವಿಲ್ಲ ‘ಲಿಂಕು’ / ಬರಿ ಮಸಿಯ ಗೊಣ್ಣೆ, / ಪಿತ್ತ ಕೆರಳಿದ ಹಾಗೆ / ಮೂಕ–ಸನ್ನೆ’ ಎನ್ನುವ ಕವಿ ಮುಂದುವರೆದು, ‘...
 
ಗುದ್ದಲಿಯ ಹಾಕಿ / ಎಳೆ ಪಿಕಾಸಿ / ಪಾತಾಳ ಅಗೆದಾಗ / ವೇತಾಳ ಬರಬಹುದು / ನಾಗರಿಕತೆಯ ಹಲವು ರುಂಡ ಮುಂಡ’ ಎನ್ನುತ್ತಾ, ‘ಹೆಣಗಳನೆ ಗುರುಮಾಡಿ ಶಿಷ್ಯಬಂಟ / ಬಿಸಿಲುಗುದುರೆಯನೇರಿ / ಹಾಳು ಪಾಳಿಗೆ ಹೊಂಟ / ಹೊಡೆದ ಪಂಟ’ ಎನ್ನುವ ನಿಲುವಿಗೆ ಕವಿ ತಲುಪುತ್ತಾರೆ. ‘ಏನರ್ಥ’ ಎನ್ನುವ ಕವಿತೆಯಲ್ಲಿ – ‘ಹೀಗಂದರೇನರ್ಥ – ಶಬ್ದ ವ್ಯರ್ಥ! ಅಷ್ಟೆ ಅರ್ಥ! / ಅರ್ಥಶಾಸ್ತ್ರದ ಕುಟಿಲ ನೀತಿಯೊಮ್ಮೆ / ಮಾನವೀಯತೆ ಬರಡುಪ್ರೀತಿ – ಎಮ್ಮೆ : / ಕೋಣವೂ ಕರು ಹಾಕಿತೇ? ನವ್ಯ–ನ್ಯೂಜು!’. ಈ ಕವಿತೆಗಳಲ್ಲಿ ನವ್ಯದ ಕವಿ–ಕಾವ್ಯ ಪರಂಪರೆಯೇ ಅಡಗಿರುವಂತಿದೆ. ಇಂಥ ವಿಶಿಷ್ಟ ಕೃತಿ ‘ಉತ್ತರಾಯಣ’ವನ್ನು goo.gl/uax1sb ಕೊಂಡಿ ಬಳಸಿ ಓದಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT