ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಗುಲಾಬಿಯು ನಿನಗಾಗಿ

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2017
Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಹೇಮಂತ್ ಪಿ.ಎಸ್, ತುಮಕೂರು
ಸಖಿ, ಮುತ್ತಿನ ಮೂಗುತಿ ಧರಿಸಿರುವ ನಿನ್ನ ಮೂಗಿನ ತುದಿಯಲ್ಲಿ ನತ್ತಿನ ಬದಲು ಕೋಪವನ್ನೇ ಧರಿಸಿರುವ ನಿನಗೆ ನನ್ನ ಸಾವಿರ ಒಲವಿನ ಹಾರೈಕೆಗಳು.
ಮುಂಜಾನೆ ಹಿತ್ತಲಲ್ಲಿ ಗುಲಾಬಿ ಹೂವಿನ ಮಕರಂದ ಹೀರುತ್ತಿದ್ದ ಚಿಟ್ಟೆಯ ಚೆಲುವು ನೋಡಿ ನಿನ್ನ ನೆನಪಾಯಿತು.
 
ನನ್ನನ್ನು ಕಂಪಿಸಿದ ನಿನ್ನ ಕಮಲದ ಕಂಗಳನ್ನು ಸನ್ಮಾನಿಸಬೇಕಿದೆ. ನನ್ನ ನಿದ್ರೆ ಕದ್ದ ಕಾಡಿಗೆ ಹಚ್ಚಿದ ನಿನ್ನ ನಯನಗಳನ್ನೊಮ್ಮೆ ದೀರ್ಘವಾಗಿ ಸಂಧಿಸಬೇಕಿದೆ. ಪದೇ ಪದೇ ನಿನ್ನ ದೃಷ್ಟಿಗೆ ಅಡ್ಡವಾಗುತ್ತಿರುವ ಆ ಸೋಜಿಗದ ಮುಂಗುರುಳಿಗಿಷ್ಟು ಸಲಾಂ ಹೇಳಬೇಕಿದೆ. 
 
ಮುತ್ತು ಜೋಡಿಸಿ ಕಟ್ಟಿದ ನಿನ್ನ ಕಿವಿಯ ವಾರೆ ಜುಮುಕಿಗಳನ್ನು ಅಲ್ಲಾಡಿಸಬೇಕಿದೆ. ನಿನ್ನ ಉದ್ದವಾದ ನಾಗರ ಜಡೆಗೆ ಮೈಸೂರಿನ ಮಲ್ಲಿಗೆ ಹೂ ಮುಡಿಸಬೇಕಿದೆ. ಕೈ ಬಳೆ ಕಾಲ್ಗೆಜ್ಜೆ ನಾದಕ್ಕೆ ತಾಳತಪ್ಪಿ ನರ್ತಿಸಬೇಕಿದೆ. ನವಿಲು ನಗೆಯ ನಿನ್ನ ಮಧುರ ಧ್ವನಿಯನ್ನೊಮ್ಮೆ ಆಲಿಸಬೇಕಿದೆ.
 
ಸೊಂಟಕ್ಕೆ ಸುತ್ತಿದ ಡಾಬು, ಗಿಳಿ ಹಸಿರು ಲಂಗ ದಾವಣಿ, ದಾಸವಾಳದ ಕೆಂಪು ರವಿಕೆ ತೊಟ್ಟ ಚಿಗರೆ ನಡಿಗೆಯನ್ನೊಮ್ಮೆ ಹಿಂಬಾಲಿಸಬೇಕಿದೆ. ನಾನು ಪಾರ್ಥನಂತೆ. ಎಂದಿಗೂ ಸೋಲುವುದಿಲ್ಲ. ಆದರೆ ನಿನ್ನ ಕಣ್ಣ ಬಾಣದಿಂದ ಸೋತುಹೋಗಿರುವೆನು.
 
ನಾನು ನಿನಗೆ ಹೀಗೊಂದು ಪತ್ರ ಬರೆಯಲು ಕಾರಣ, ತಂಪಿರುವ ಇಡೀ ಹಿಮಾಲಯವನ್ನು ಕ್ಷಣಾರ್ಧದಲ್ಲಿ ಕರಗಿಸುವಷ್ಟು ಕಾವಿರುವ ಭಯಾನಕ ವಿರಹ. ಇನ್ನೇನು ತನ್ನ ಬಡಿತವನ್ನು ನಿಲ್ಲಿಸಿ ನನ್ನನ್ನೂ ಇಲ್ಲವಾಗಿಸುವ ಹುನ್ನಾರದಲ್ಲಿರುವ ನಿಸ್ತೇಜ ಹೃದಯ.
 
ನನ್ನ ನಿನ್ನ ನಡುವಿನ ಈ ಪರಿಯ ದೂರವನ್ನು ಸಹಿಸಲಾಗದೆ ಗಡಬಡಿಸುತ್ತಿರುವ ಎದೆಯಲ್ಲಿ ಹೇಳತೀರದ ನೋವು. ಹತಾಶಗೊಂಡು ಸೊರಗಿ ಸುಣ್ಣವಾದ ಮನಸ್ಸು ಮತ್ತು ನನಗೆ ನಾನು ಬೇಡವಾಗಿರುವಷ್ಟು ಖರಾಬು ಬೇಜಾರಿನಲ್ಲಿರುವ ನಾನು. 
 
ಏನು ಮಾಡ್ಲಿ ಹೇಳು ಪ್ರಿಯೆ, ನೀನು ನನ್ನನ್ನು ಕೊಂದಿಯೆಂದರೆ, ನನ್ನದು ಸಾಕ್ಷ್ಯವಿಲ್ಲದ ಸಾವು. ಈ ಮಟ್ಟಿಗಿನ ದುಃಖ ಕೊಡಬಹುದೇ ನೀನು? ನೀನು ಬಿಟ್ಟು ಹೋದಾಗಿನಿಂದ ಒಂದೇ ಸಮನೆ ರಚ್ಚೆ ಹಿಡಿದು ಬಿಕ್ಕಳಿಸುತ್ತಿದೆ ನನ್ನ ಪ್ರೇಮಗಾನ. ನಿನ್ನ ತುಟಿಯಂಚಿನ ಆ ಕಿರುನಗೆಯಷ್ಟೆ ನನ್ನೊಳಗೀಗ ಪ್ರಚಲಿತ ವಿದ್ಯಮಾನ. ಈಗ ಮತ್ತೊಂದು ಸಲ ಬಂದು ಹೋಗಲೇಬೇಕಾದ ಅವಶ್ಯಕತೆ ಇದೆ ನೀನು.
 
ನನ್ನ ಹೊಸ ಬೈಕು ಕೂಡ ನನ್ನ ಹಳೆಯ ಹರ್ಕ್ಯುಲೆಸ್ ಸೈಕಲ್‌ನಲ್ಲಿ ನಿನ್ನ ಕೂರಿಸಿಕೊಂಡು ಕಾಲೇಜಿಗೆ ಹೋದ ಮಜಾ ಕೊಡುತ್ತಿಲ್ಲ. ಬಯಾಲಜಿ ಲ್ಯಾಬಿನಲ್ಲಿ ನಿನ್ನ ಕಿರುಬೆರಳ ಸೋಕಬೇಕೆನಿಸಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಇಬ್ಬರು ಸೇರಿ ಹುಣಸೆ ಹಣ್ಣಿನ ಒಗರು ಸವಿಯಬೇಕಿದೆ. ನಮ್ಮೂರ ಕೆರೆ ದಂಡೆಯಲ್ಲಿ ನಿಂತು ಹುಣ್ಣಿಮೆಯ ಪೂರ್ಣ ಚಂದಿರನನ್ನು ನೋಡಬೇಕಿದೆ. ಕಡಲ ತೀರದ ಮರಳ ರಾಶಿಯ ಮೇಲೆ ನಮ್ಮಿಬ್ಬರ ಹೆಸರು ಗೀಚಬೇಕಿದೆ. 
 
ಚುಂಚನಗಿರಿ ಬೆಟ್ಟ ಹತ್ತಿ ಉಸ್ಸಪ್ಪ... ಅನ್ನುವ ನಿನ್ನ ದಣಿವಿನ ಎದೆಯುಸಿರಿನೊಂದಿಗೆ ಬಾಕಿ ಉಳಿದ ಮಾತುಗಳನ್ನಾಡಬೇಕಿದೆ. ನಿನಗೆಂದೇ ಬರೆದಿಟ್ಟ ಕವಿತೆಯ ಸಾಲುಗಳನ್ನು ನಿನ್ನೆದುರು ಹೇಳಬೇಕಿದೆ.
 
ನನಗೋಸ್ಕರ ಅಲ್ಲದಿದ್ದರೂ ನೀನೇ ಬರಬೇಕೆಂದು ಅರಳದೇ ಹಟವಿಡಿದು ಕೂತ ಹೂಗಳನ್ನು ರಮಿಸಲಿಕ್ಕಾದರೂ ಒಮ್ಮೆ ಬಾ... ನಿನ್ನೊಟ್ಟಿಗೆ ಕರೆದೊಯ್ದ ಈ ಕೆಟ್ಟ ಚಳಿಗಾಲದಲ್ಲಿ ಬೆಚ್ಚಗಿನ ಭಾವಗಳನ್ನೊಮ್ಮೆ ಹಿಂತಿರುಗಿಸಲಿಕ್ಕಾದರೂ ಬಂದು ಹೋಗು.
 
ನನ್ನೊಂದಿಗೆ ಅಳುತ್ತಿರುವ ಚಂದಿರನನ್ನು ಸಂತೈಸಲು, ಆಕಾಶ ಕಳೆದುಕೊಂಡ ತಾರೆಗಳನ್ನು ಹುಡುಕಿಕೊಡಲು ಕಳಾಹೀನ ಸಂಜೆಗೆ ರಂಗು ತುಂಬಲಿಕ್ಕಾದರೂ ಒಮ್ಮೆ ಬರಬೇಕಿದೆ ನೀನು.
 
ಗೆಳತಿ, ತುಂಬಾ ದಿನಗಳಾದವು ನಿನ್ನ ನೋಡಿ. ಭೇಟಿಯಾಗಿ ನಿನ್ನ ಮುಂದೆ ಮಂಡಿಯೂರಿ ಕುಳಿತು ಎದೆಯೊಳಗಿನ ಅಷ್ಟೂ ಪ್ರೀತಿಯನ್ನು ಪ್ರೇಮ ನಿವೇದನೆಯನ್ನು ನಿನಗೆ ಹೇಳಬೇಕು. ನಿನ್ನನ್ನು ನನ್ನ ಕಣ್ಣುಗಳ ನಜರಿನಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಅಂತಹ ಸಾಧ್ಯತೆಯೂ ತೀರ ಕಡಿಮೆಯೇ. ಹೇಗಾದರೂ ಸರಿಯೇ. ನಿನಗೆ ಶರಣಾಗತನಾಗಬೇಕಿದೆ ಬರ್ತೀಯಾ ಪ್ಲೀಸ್...?
 
ಇಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ನೀನು ಬಿಟ್ಟು ಹೋದಾಗಿನಿಂದ ನಿನ್ನ ಗುಂಗಿನಲ್ಲೇ ತಿರುಗಾಡುತ್ತಿರುವ ನನಗೆ ದಾರೀಲಿ ಹೋಗೋ ಹುಡುಗಿಯರಷ್ಟೇ ಅಲ್ಲ, ಬಟ್ಟೆ ಅಂಗಡಿ ಮುಂದೆ ಇಟ್ಟಿರುವ ಗೊಂಬೆಗಳು ನಿನ್ನ ಥರಾನೇ ಕಾಣುತ್ತಿವೆ. ಹುಚ್ಚು ಉನ್ಮಾದದಲ್ಲಿ ಎರಡ್ಮೂರು ಅನಾಹುತಗಳೂ ನಡೆದಿವೆ.
 
ಆದರೆ ಸಖಿ, ನನ್ನ ಹೃದಯದ ಕಪಾಟಿನಲ್ಲಿ ಏನೋ ತಳಮಳ ಆಗ್ತಿದೆ ಅನ್ನೋದು ಗೊತ್ತಾಗಿದೆ. ಏನಾಗ್ತಿದೆ ಅನ್ನೋದು ಮಾತ್ರ ಗೊತ್ತಾಗ್ತಿಲ್ಲ. ನೀನೇ ಬಂದು ರಿಪೇರಿ ಮಾಡಬೇಕಿದೆ ನನ್ನ ರಾಜಕುಮಾರಿ. ಇಲ್ಲಿ ಗೆಳೆಯರೆಲ್ಲ ‘ಏನೋ ಭಗ್ನ ಪಂಜರದ ಮೂಕಪಕ್ಷಿ’ ಅಂತ ಹೇಳಿ ರೇಜಿಗೆ ಹುಟ್ಟಿಸ್ತಿದ್ದಾರೆ. ಅವರಿಗೆ ಉತ್ತರ ಕೊಡಲಾಗುತ್ತಿಲ್ಲ ಹುಡುಗಿ. ಹೀಗೆ ಧ್ಯಾನಿಸುತ್ತಲೇ ಕೆಲವು ವರ್ಷ ಕಳೆದುಹೋಯಿತು. ಅದೆಲ್ಲ ಏನೇ ಇರಲಿ, ನನ್ನ ಹೃದಯದಲ್ಲಿ ಅಡಗಿರುವ ಪ್ರೇಮ ನಿವೇದನೆಯನ್ನು ನಿನಗೆ ತಿಳಿಸಲು ನಾಳೆ ಬದರಿಕಾಶ್ರಮದ ಕೃಷ್ಣ ಮಂದಿರದ ಬಳಿ ಕೆಂಪು ಗುಲಾಬಿಯೊಂದಿಗೆ ಕೂತು ಕಾಯ್ತಿರ್ತೀನಿ. ಬರ್ತೀಯಲ್ಲಾ...?
ಲವ್ ಯೂ...
 
 
ನೆಟ್ಟನ ಮೂಗ, ಬಟ್ಟಲಗಣ್ಣ, ದಿಟ್ಟಿಸಿ ನೋಡಾಕಿ...
 
ನಂಬಿಕಿ ಅನ್ನು ಒಂದ ಹಗ್ಗದ ಎಳಿ ಇದ್ರ
ಸಾಕ ಗೆಳತಿ, ಜೀವದ ಕಟ್ಟಕಡಿ ಉಸರ
ಇರುತನಾ, ನಿನ್ನ ಪ್ರೀತಿ ಜೊತೆ ಜೋತಾಡಾಕ
ನನ್ನ ಕೈಗೆ ಕಸು ಉಳಸ್ಗೊಂಡಿರ್ತನ...

ಈ ಜಗದಾಗ ಬಾಳಮಂದಿ ಪ್ರೀತಿ ಮಾಡ್ತಾರ. ಆ ಪ್ರೀತಿ ಕಡಿತನ ಹಚ್ಚ ಹಸರಾಗಿ ಉಳಿಬೇಕಂದ್ರ, ಅಲ್ಲಿ ನಂಬಿಕಿ, ಗೆಳೆತನ ಇರಬೇಕ. ಗೆಳೆತನ ಅನ್ನು ಎಣ್ಣೆ ಇದ್ರನ ಪ್ರೀತಿಯ ದೀಪ ಬೆಳಗತೈತಿ. ದೋಸ್ತಿ ಇಲ್ಲದಿರು ಪ್ರೀತಿ ಅಂದ್ರ, ತಾಯಿಲ್ಲದ ಮನಿ ಇದ್ದಂಗ.

ಪ್ರೀತಿಗೆ ಒಡತಿ ಆಗಿ, ನಂಬಿಕಿಗೆ ಹೆಸರಾಗಿ, ಸ್ನೇಹಕ್ಕ ಸವಕಾರ್ತಿಯಾಗಿ, ಮನಸಿಗೆ ಮಹಾರಾಣಿಯಾಗಿ ಬಂದ ನಿಂತಿರು ನಿನ್ನ ಮರತ ಹೆಂಗಿರಲಿ ಹೇಳು. ಹಳಿ ನೆನಪ ತಗದ ಈ ಪತ್ರಾ ಬರ್ಯಾಕತ್ತನ. ತಪ್ಪದ ಒಮ್ಮ್ಯಾರ ಓದ ಗೆಳತಿ...

ಬಿ.ಎ ಅನ್ನುದ ನನ್ನ ಪಾಲಿಗೆ ಬರೆ ಅಡ್ಯಾಡುವ ಅಂದಂಗಾಗಿ ಜಾತ್ರಿ, ದಿಬ್ಬಣ ಹಿಂತಾದ್ರಾಗ ಅರ್ಧಾ ಡಿಗ್ರಿ ಸಾಲಿ ಪಡಸಾಲ್ಯಾಗಿತ್ತ. ಸಾಲೊಳ್ಳಿ ಜಾತ್ರ್ಯಾಗ ಉಡಾಫಿಗತೆ ಅಡ್ಯಾಡುವಾಗ, ಇದೆ ಈಗ ಅಳ್ಳಿದ ಗುಲಾಬಿ ಹೂವಿನಂಗಿರು ನಿನ್ನೋಡಿ, ಹಗಲಿನ ತಿಳಿ ಬೆಳದಿಂಗಳ ಸವಿದಂಗಾತ. ಚಿಟಗುಬ್ಬಿಯಂಗ ಒಂದ್ಸಲ ನನ್ನ ಕಡೆ ನೋಡಿ ಪಟ್ನ ಮಂದಿ ಗದ್ದಲದಾಗ ಮಾಯ ಆಗಿದಿ. ಅಲ್ಲಿ ಮಿಂಚಿ ಹ್ವಾದಾಕಿ, ಹೊಳ್ಳಿ ದರ್ಸನಾ ಕೊಟ್ಟದ್ದಂದ್ರ ಬೆಂಬಳಗಿ ಕಾಲೇಜ್‌ದಾಗ. ಆವತ್ತ ಒಮ್ಮಿಗೆ ನಿನ್ನ ನೋಡಿದ ಕೂಡ್ಲೆ, ಸ್ವತಃ ನಮ್ಮಪ್ಪಾವಿನ, ‘ಇವತ್ತೊಂದಿನ ಸಾಲಿಬಿಟ್ಟ ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನೋಡಲೆ’ ಅಂದಷ್ಟ ಖುಷಿ ಆತ.

ಹುಡಗಿ ಆವತ್ತ ನೀ ನನ್ಕಡೆ ನೋಡದ ನೋಟ, ಇನ್ನೂ ನನ್ನ ಕಣ್ಣಾಗ ಕಟ್ಟಿದಂಗೈತಿ. ನನ್ನೋಡಿ ಮುಖದ ಮ್ಯಾಲ ಕೈ ಮುಟ್ಟಿ ಬಳ್ಳಸಂದಿ ಒಳಗಿಂದ ಆ ನಿನ್ನ ಇಟಿಟ ಬಟ್ಟಲಗಣ್ಣಿಲೆ ಪಿಳಿ ಪಿಳಿ ನನ್ನ ಮಾರಿ ನೋಡಿ, ಅಯ್ಯೋ ದೇವರ! ಇವಂದು ಇದ ಕಾಲೇಜಾ, ಅನ್ಕೋತ ಹ್ವಾದಿ. ಅಲ್ಲಿ ದಿನಕ್ಕ ಹತ್ಸಲ ದರ್ಸನಾಕ್ಕಿತ್ತನಿಂದ. ಎದರಿಗೆ ಬಂದಾಗೊಮ್ಮಿ ದಿಟ್ಟಿಸಿ ನೋಡಕೋತ ಹೊಕ್ಕಿದ್ದಿ. ಮಾತಿಲ್ಲ, ಕತಿಯಿಲ್ಲ. ನಿನ್ನ ಆ ನೋಟಕ್ಕನ ‘ನೆಟ್ಟನ ಮೂಗ, ಬಟ್ಟಲಗಣ್ಣ, ದಿಟ್ಟಿಸಿ ನೋಡಾಕಿ’ ಅನ್ನು ಹಾಡು ಹುಟ್ಟಿತ್ತ.

ಗೋಧಿ ಬಣ್ಣ, ಸಾಧಾರಣ ಮೈಕಟ್ಟಿನ ಸಿಂಪಲ್ ಸುಂದ್ರಿ ನೀ ಆಗಿದ್ರೂ ಗುಣದಾಗ ಪಕ್ಕಾ ‘ಅಪರಂಜಿ’ ಅನ್ನುದ ಗೊತ್ತಾಗಿ, ನೀವ ಮನಸಿಗೆ ಪೂರಾ ಪಸಂದಾಗಿರಿ, ಹೂ ಅಂದ್ರ ಪಟ್ನ ಮನ್ಯಾಗ ಹೇಳಿ, ಸಟ್ನ ಮದವಿ ಆಗುನೇನ್ರಿ ಅಂತ ಹೇಳಬೇಕ ಅನ್ಕೊನ್ನಿ. ಆದರ ಅಷ್ಟ ನೀರ ಇರಲಿಲ್ಲ ನನಗ. ನೀವ ಹುಡಗ್ಯಾರ ಅಂತೂ, ಇಷ್ಟಾ ಆಗಿದ್ರೂ ಲಗುಬಂದ ಹೇಳಂಗಿಲ್ಲ. ಹಳಿ ರೇಡಿಯೊಗತೆ ರೊಂಯ್... ಅನ್ನುವಂತವ ದಿವಸಕ್ಕ ನಾಕ ಧಾರಾವಾಹಿ ನೋಡ್ತಿರಿ. 6 ದಿನದಾಗ ಹೇಳು ಪ್ರೀತಿ, ಎಳದಾಡಿ 6 ತಿಂಗ್ಳಿಗೆ ತಂದ ಹಚ್ಚತಿರಿ.
 
ಹೂವ, ಹೆಣ್ಣ, ನಗು ಈ ಮೂರು ಕೂಡಿ ಇದ್ರನ ಚಂದ. ಒಂದ ಇಲ್ದ ಮತ್ತೊಂದಕ್ಕ ಕಳಾ ಇಲ್ಲ ನೋಡ. ಈ ಮಾತ ಖರೆ ಮಾಡಾಕ್ ಏನೋ, ನೀ ಅಂತೂ ಅಗದಿ ಸಂಪ್ರದಾಯದಿಂದ ಹಣಿಮ್ಯಾಲ ಕುಂಕಮಾ, ಕೈಯಾಗ ಹಸರ ಬಳಿ, ಚಂದನ ಕಾಲ್ಗೆಜ್ಜೆ, ತಲಿಗಿ ಹೂ ಇಟಗೊಂಡ, ಶ್ರೀಗಂಧದ ಪರಿಮಳ ಬರುವಂಗ ಬಸ್ ಹತ್ತಿ ಬರತಿದ್ದಿ. ಮುಂಜೆಲೆ ಬೀಸುಗಾಳಿಗೆ ಆ ನಿನ್ನ ಸೊಂಪಾದ ಕೂದಲ ಸಮುದ್ರದ ಅಲೆಗತೆ ತೇಲಿಬಂದ ನನ್ನ ಮನಸಿನ ದಡಕ್ಕ ಬಡದಂಗಾಕ್ಕಿತ್ತ. 
 
ಅಪರೂಪಕ್ಕೊಮ್ಮಿ ನಿನ್ನ ಕೈ ಬಳಿ ಸಪ್ಪಳ ಕೇಳಿದಾಗ, ಹಾಳಾದ ಈ ಬಸ್ಸು ಮೊಬೈಲ್‌ಗತೆ ಸೈಲೆಂಟ್ ಮೋಡನ್ಯಾಗ ಆದರೂ ಹೋಗಬಾರದೇನ ಅನಸ್ತಿತ್ತ. ಬೆಳ್ಳಿ ಚುಕ್ಕಿಯಂಗ ಹೊಳಿಯು ಆ ಮೂಗನತ್ತ ನೋಡಿ ನೋಡಿನ ಪ್ರೀತಿ ನಿಶೆ ನೆತ್ತಿಗೇರಿತ್ತ. ಹಾಲಿನ ಕೆನಿ, ಅರಿಸಿನ ಹಚ್ಚಿ ಮುಖಾ ತೊಳಿಯು ಪಕ್ಕಾ ಜವಾರಿ ಹುಡಗಿಯ ಹಣಿಮ್ಯಾಲಿನ ಆ ಸಿಂಧೂರ ತಿಲಕ, ನಿನ್ನ ಸೌಂದರ್ಯಕ್ಕ ಕಳಸಾ ಇಟ್ಟಂಗಿತ್ತ. ನ್ಯಾಕ್ ಕಮೀಟಿಯವರ ನಮ್ಮ ಕಾಲೇಜಕ್ ಬಿ ಗ್ರೇಡ್ ಕೊಟ್ಟಿದ್ರೂ, ನಾ ನಿನಗ ಎ ಪ್ಲಸ್ ಕೊಟ್ಟಿದ್ನಿ. ಅಂತಾ ತಾಜಾ ಚೆಲುವನಿಂದ ಆಗಿತ್ತ.

ಜಗತ್‌ಸುಂದ್ರಿ ಪಟ್ಟಾ ಗೆಲ್ಲಾಕ್
ನೀ ಏನ್ ಹೋಗುದ ಬ್ಯಾಡ ಗೆಳತಿ
ಬರೆ ನಿನ್ನ ನೆಳ್ಳ ಕಳಿಸಿದ್ರ ಸಾಕ್...

ಈ ಪರಿ ಹುಚ್ಚ ಹಿಡಿದ ಮನಸಿಗೆ ‘ನಾ ವೆಡ್ಸ್ ನೀ ಅಂತ’ ಲಗ್ನಪತ್ರಾ ಪ್ರಿಂಟ್ ಮಾಡ್ಸಬೇಕ ಅನ್ನು ಧೈರ್ಯ ಬಂತ. ನಿಮ್ಮ ಮ್ಯಾಲ ಮನಗಂಡ ಪ್ರೀತಿ ಐತಿರಿ. ಜೀಂವ ಬಿಟ್ಟಿರಾಕ ವಲ್ಲ್ಯಾ ಅಂತೈತಿ. ನನ್ನ ಲಗ್ನಾ ಆಕ್ಕಿರೇನ ಅಂತ ಕೇಳೆಬಿಟ್ನಿ. ಯಾವ ಜಲಮದ ಪುಣ್ಯಾನೊ ಏನೊ ನೀವು ಸತೆ ಹೂಂ ಅಂತೇಳಿ ಹಸರ ಟಾವೆಲ್ ಹಾರಿಸಿ, ಗ್ರೀನ್ ಸಿಗ್ನಲ್ ಕೊಟ್ಟಬಿಟ್ರಿ...

ಕಾಲೇಜ್‌ಕ್ ಬರುವಾಗ ನನ್ನ ಸಮಂದ ದಿನಾ ಬುತ್ತಿ ಕಟಗೊಂಡ ಬರತಿದ್ದಿ. ಕಾಳಜಿ ತೋರಸಾಕ ಅಂತೂ ನಮ್ಮ ಬೆಳಗಾಂವಿ ಕುಂದಾ ಧಾರವಾಡ ಪೇಡೆಗತೆ ಭಾರ್ರಿ ಸಿಂವಿ ಇದ್ದಿ. ಮಂದಿ ಬಾಳ ಇದ್ದಾಗ, ಬಂದೀಟು ಮಾತಾಡಲ್ದ ಕಣ್ಣಸಣ್ಣಿಲೆನ ಸಿಗ್ನಲ್ ಕೊಡು ಆ ನಿನ್ನ ಬಾದಾಮಿ ಕಣ್ಣ ನೋಡಿದಾಗ, ಯಾವಾಗರ ಒಮ್ಮೊಮ್ಮೆ ನಿನಗ ಪ್ರೀತಿ ಹೆಚ್ಚಾಗಿ ‘ಏ ಮಾಮಾ’ ಅಂತ ಕರದಾಗ, ಮನಗಂಡ ತಂಡ್ಯಾಗ ತಣ್ಣೀರ ಜಳಕಾ ಮಾಡಿದಂಗ ಮನಸ ಜಿಗದಾಡತಿತ್ತ.

ಮೂರ್ ವರ್ಷ ಬಕಪಕ್ಷಿಗತೆ ಕಾದ ಮ್ಯಾಲ ಕಡಿಕೂ ನಿಮ್ಮಪ್ಪಾ ನಿನ್ನ ನನಗ ಕೊಡಾಕ ಹೂಂ ಅಂದಾ. ಇನ್ನೇನ ಸ್ವರ್ಗಕ್ಕ ಒಂದ ಮಾರ್ ಉಳಿತಿ ಅನ್ನೂತನ ಸಣ್ಣ ಜಗಳಕ್ಕ ಶಟಗೊಂಡ ಮಾತಬಿಟ್ಟ ಕುಂತಿ. ನಮ್ಮವ್ವ ಶ್ಯಾನ್ಯಾಕ್ಕಿ ಹಂಗ ಮಾಡಬ್ಯಾಡ. ಈ ಪತ್ರಾ ಓದಿದ ಕೂಡ್ಲೆ ಪಟ್ನ ಪೋನ್ ಮಾಡ. ಮುಂದ ಹುಟ್ಟು ಮಕ್ಕಳಿಗೆ ಏನ ಹೆಸರ ಇಡುದು ಅಂತ ಚರ್ಚೆ ಮಾಡುನು.

‘ಸತಿ ಸಂಸಾರದ ಜ್ಯೋತಿ’ ಅಂತಾರ. ನೀ ಮಾತ ಬಿಟ್ಟಾಗಿಂದ ನನ್ನ ಮನಸಿಗೆ ಕತ್ತಲ ಆಗೈತಿ. ಅದಕ್ಕ ನೀ ಭಾಗ್ಯಜ್ಯೋತಿ ಕರೆಂಟ್ ಆಗಿ ಬಂದ ಬಲಬ್ ಹಚ್ಚಿ ನನ್ನ ಜೀವನಾದ ಬೆಳಕ ಕೊಡ. ನೀ ಬಂದ ಬರತಿ, ಬೆಳಕ ತರತಿ ಅಂತ ನಿನ್ನ ದಾರಿ ಕಾಯಾಕತ್ತನ ಗೆಳತಿ. ಆದಷ್ಟ ಲಗು ಬಾ...

ನಿನಗ ತಾಳಿ ಕಟ್ಟಾಂವ
ದಿಲ್ ಕಾ ರಾಜಾ
ರಾಜು ಭೀಮಶೆಪ್ಪ ವರಗನವರ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT