ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆಂಟ್‌ ದರ ನಿಯಂತ್ರಣ ಸ್ವಾಗತಾರ್ಹ ನಿರ್ಧಾರ

Last Updated 22 ಫೆಬ್ರುವರಿ 2017, 20:29 IST
ಅಕ್ಷರ ಗಾತ್ರ

ಹೃದಯರೋಗಿಗಳ ಆಂಜಿಯೊಪ್ಲಾಸ್ಟಿ ಚಿಕಿತ್ಸೆಯಲ್ಲಿ ಬಳಸುವ ಕೊರೊನರಿ ಸ್ಟೆಂಟ್‌ಗಳಿಗೆ ಇಷ್ಟು ದಿನ ಆಸ್ಪತ್ರೆಯವರು, ಮಾರಾಟಗಾರರು ಹೇಳಿದ್ದೇ ಬೆಲೆಯಾಗಿತ್ತು. ಸುಮಾರು ₹ 25 ಸಾವಿರದಿಂದ ಹಿಡಿದು ₹ 1.98 ಲಕ್ಷದವರೆಗೂ ಮಾರಾಟ ಮಾಡಲಾಗುತ್ತಿತ್ತು. ಬಡವರಷ್ಟೇ ಅಲ್ಲ ಮಧ್ಯಮ, ಮೇಲು ಮಧ್ಯಮ ವರ್ಗದವರಿಗೂ ಇದು ದುಬಾರಿ ಎನಿಸುವಂತಾಗಿತ್ತು.

ಅಸಹಾಯಕತೆ, ಅನಿವಾರ್ಯದಿಂದ ರೋಗಿಗಳು ವಿಧಿಯಿಲ್ಲದೆ ಈ ದುಬಾರಿ ದರ ತೆರುತ್ತಿದ್ದರು. ಇವುಗಳನ್ನೂ ಜನಸಾಮಾನ್ಯರಿಗೆ ಬೇಕಾದ ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಬೇಕು ಎಂಬ  ಬೇಡಿಕೆ ಆಗಾಗ ಬರುತ್ತಲೇ ಇತ್ತು. ಹೀಗಾಗಿ ಕೇಂದ್ರ ಸರ್ಕಾರ ಈಗ ಸ್ಟೆಂಟ್‌ಗಳನ್ನು ‘ಬೆಲೆ ನಿಯಂತ್ರಣ’ದ  ವ್ಯಾಪ್ತಿಗೆ ತಂದಿದೆ.

ಬೇರ್‌ ಮೆಟಲ್‌ ಸ್ಟೆಂಟ್‌ನ ಗರಿಷ್ಠ ಮಾರಾಟ ದರವನ್ನು ₹ 7,623ಕ್ಕೆ ಮತ್ತು  ಔಷಧ ಪಸರಿಸುವ ಸಾಮರ್ಥ್ಯದ ಡ್ರಗ್‌ ಎಲ್ಯೂಟಿಂಗ್‌ ಸ್ಟೆಂಟ್‌ ಗರಿಷ್ಠ ಮಾರಾಟ ದರವನ್ನು ₹ 31,080ಕ್ಕೆ  ಮಿತಿಗೊಳಿಸಿದೆ. ಅಂದರೆ ಹಳೆಯ ದರಕ್ಕೆ ಹೋಲಿಸಿದರೆ ಇದು ಸರಾಸರಿ ಶೇ 85ರಷ್ಟು ಇಳಿಕೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿ ಬರುವ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರದ (ಎನ್‌ಪಿಪಿಎ)  ಹೇಳಿಕೆಯಂತೆ, ಹೊಸ ದರಗಳು ಈ ತಿಂಗಳ 14ರಿಂದಲೇ ಜಾರಿಗೆ ಬಂದಿವೆ.

ನಿಗದಿಪಡಿಸಲಾದ ದರಗಳಲ್ಲಿ ಸ್ಥಳೀಯ ತೆರಿಗೆಗಳು, ಮಾರಾಟಗಾರರಿಗೆ ಶೇ 8ರಷ್ಟು ಲಾಭಾಂಶ ಕೂಡ ಸೇರಿದೆ ಎಂದು ಪ್ರಾಧಿಕಾರ ಸ್ಪಷ್ಟನೆಯನ್ನೂ ಕೊಟ್ಟಿದೆ. ನಿಗದಿಗಿಂತ ಹೆಚ್ಚು ದರ ವಸೂಲು ಮಾಡಿದರೆ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹಾಕುವುದಾಗಿ ಸರ್ಕಾರ ಎಚ್ಚರಿಸಿದೆ. ಹೆಚ್ಚುವರಿಯಾಗಿ ವಸೂಲಿ ಮಾಡಿದ ಮೊತ್ತವನ್ನು ಶೇ 13ರ ಬಡ್ಡಿ ಸೇರಿಸಿ ಬಳಕೆದಾರರಿಗೆ ಮರುಪಾವತಿ ಮಾಡಬೇಕಾಗುತ್ತದೆ.

ನ್ಯಾಯವಾಗಿ ನೋಡಿದರೆ, ದರ ನಿಗದಿಯಿಂದ  ತಮಗೆ ನಷ್ಟವಾಗಿದೆ ಎಂದು ತಯಾರಕರಾಗಲಿ, ವಿತರಕರಾಗಲಿ  ಗೊಣಗುವಂತಿಲ್ಲ. ಏಕೆಂದರೆ ಅವರ ಲಾಭಾಂಶವನ್ನೂ ರಕ್ಷಿಸಲಾಗಿದೆ. ಇಷ್ಟಾದರೂ ಏಕಾಏಕಿ ಕೃತಕ ಅಭಾವ ಸೃಷ್ಟಿಯಾಗಿದೆ. ಇದು ತಯಾರಕರು ಮತ್ತು ವಿತರಕರ ಲಾಬಿಯ ಸಂಚು ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಏಕೆಂದರೆ ಹೊಸ ದರದಲ್ಲಿ ಪೂರೈಸಲು ತಮಗೆ ಸಾಧ್ಯವಿಲ್ಲ ಎಂದು ಅನೇಕ ಕಡೆ ವಿತರಕರು ತಕರಾರು ತೆಗೆಯುತ್ತಿದ್ದಾರೆ. 

ಹೆಚ್ಚಿನ ದರ ಕೊಟ್ಟು ಸಂಗ್ರಹಿಸಿದ್ದ ಸ್ಟೆಂಟ್‌ಗಳನ್ನು ಈಗ ಕಡಿಮೆ ದರಕ್ಕೆ ಮಾರುವುದರಿಂದ ತುಂಬ ನಷ್ಟವಾಗುತ್ತದೆ ಎನ್ನುವುದು ಅವರ ಅಳಲು. ಈ ಕಗ್ಗಂಟು ಪರಿಹಾರಕ್ಕೆ ಸರ್ಕಾರ ಸರ್ವಸಮ್ಮತ ಮಾರ್ಗ ಹುಡುಕಬೇಕು. ಆದರೆ ಪ್ರಾಧಿಕಾರವೇ ಹೇಳುವಂತೆ, ಸ್ಟೆಂಟ್‌ಗಳ ಮಾರಾಟದಲ್ಲಿ ಲಾಭಾಂಶದ ಪ್ರಮಾಣ ಅಪಾರವಾಗಿದೆ.

ರಾಷ್ಟ್ರೀಯ ಆರೋಗ್ಯ ಪದ್ಧತಿಗಳ ಸಂಪನ್ಮೂಲ ಕೇಂದ್ರದ (ಎನ್‌ಎಚ್‌ಎಸ್‌ಆರ್‌ಸಿ) ವರದಿಯ ಪ್ರಕಾರ, ದೇಶದಲ್ಲಿ ಶೇ 60ರಷ್ಟು ಸ್ಟೆಂಟ್‌ಗಳ ಪೂರೈಕೆ ಒಂಬತ್ತು ಪ್ರಮುಖ ಕಂಪೆನಿಗಳ ನಿಯಂತ್ರಣದಲ್ಲಿದೆ. ಇವು ವಿದೇಶದಿಂದ ಆಮದು ಮಾಡಿಕೊಂಡ  ಬೆಲೆಗೆ ಹೋಲಿಸಿದರೆ ವಿತರಕರಿಗೆ ಶೇ 68 ರಿಂದ ಶೇ 140ರಷ್ಟು ಹೆಚ್ಚು ಬೆಲೆಗೆ ಮಾರುತ್ತಿವೆ.

ಈ ವಿತರಕರು ಖರೀದಿಸುವ ದರಕ್ಕಿಂತ ಚಿಲ್ಲರೆ ಮಾರಾಟದ ದರ ಶೇ 70 ರಿಂದ ಶೇ 400ರಷ್ಟು ಅಧಿಕ. ಅಂದರೆ ವಿವಿಧ ಮಾದರಿಗಳನ್ನು ಅನುಸರಿಸಿ ಆಮದು ದರ ಮತ್ತು ಗರಿಷ್ಠ ಮಾರಾಟ ದರಗಳಲ್ಲಿ ಶೇ 294 ರಿಂದ ಶೇ 740ರಷ್ಟು ವ್ಯತ್ಯಾಸವಿದೆ. ಅಸಹಾಯಕ ರೋಗಿಗಳು ಮತ್ತು ಅವರ ಕುಟುಂಬದವರು ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎನ್ನಲು ಈ ಅಂಕಿಅಂಶಗಳೇ ಸಾಕು.

2015ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ್ದ ಮಾಹಿತಿಯ ಪ್ರಕಾರ, ದೇಶದಲ್ಲಿ ಸುಮಾರು 6.19 ಕೋಟಿ ಜನ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. 2016ರಲ್ಲಿ 4 ಲಕ್ಷ ಜನ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ವರ್ಷ ಈ ಸಂಖ್ಯೆ 5 ಲಕ್ಷ ತಲುಪುವ ಸಾಧ್ಯತೆಯಿದೆ. ಅಲ್ಲದೆ ಹೃದಯ ಶಸ್ತ್ರಕ್ರಿಯೆ ಬಹಳ ದುಬಾರಿ. ನಂತರ ಕೂಡ ಬದುಕಿನುದ್ದಕ್ಕೂ ಔಷಧಗಳ ಮೇಲೆ ಅವಲಂಬನೆ ಅನಿವಾರ್ಯ.

ಈ ಕಾರಣದಿಂದಾಗಿಯೇ ಜನಸಾಮಾನ್ಯರಿಗೆ ಅಗತ್ಯವಾದ ಔಷಧಗಳ ಪಟ್ಟಿಯಲ್ಲಿ ಸ್ಟೆಂಟ್‌ಗಳನ್ನು ಸೇರಿಸಿ ಬೆಲೆ ನಿಯಂತ್ರಣಕ್ಕೆ ಒಳಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಅದು ರೋಗಿಗಳ ಮೇಲಿನ ಹೊರೆಯನ್ನು ಗಣನೀಯವಾಗಿ ತಗ್ಗಿಸುತ್ತದೆ.

ಆರೋಗ್ಯ ಸೇವೆ ಎನ್ನುವುದು ಇತರ ಸೇವೆ ಅಥವಾ ವ್ಯಾಪಾರದಂತೆ ಅಲ್ಲ. ಹೀಗಾಗಿ ದರ ಹೆಚ್ಚಳವಾದಾಗ ಹಿಗ್ಗುವ, ದರ ಇಳಿದಾಗ ಕೃತಕ ಅಭಾವ ಸೃಷ್ಟಿಸುವ ವ್ಯಾಪಾರಿ ಮನೋಭಾವದಿಂದ ಸ್ಟೆಂಟ್‌ ತಯಾರಕರು, ವಿತರಕರು, ಆಸ್ಪತ್ರೆಗಳು ಹೊರಬರಬೇಕು. 

ತಾವು ಮಾಡುತ್ತಿರುವುದು ಮಾನವೀಯ ಸೇವೆ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಲಾಭ ಇಲ್ಲದೆ ವ್ಯವಹಾರ, ಸೇವೆ ಮಾಡುವುದು ಯಾರಿಗಾದರೂ ಕಷ್ಟ. ಆದರೆ ಲಾಭಕ್ಕೂ ಒಂದು ಮಿತಿ ಇರಬೇಕಲ್ಲ. ಅದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT