ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಫಿ ವಿಡಿಯೊ ಮಾಡಿಟ್ಟು ವ್ಯಾಪಾರಿ ಆತ್ಮಹತ್ಯೆ

ಕೆಂಗೇರಿ ಸಮೀಪದ ಮಾರುತಿನಗರದಲ್ಲಿ ಘಟನೆ
Last Updated 22 ಫೆಬ್ರುವರಿ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಲಗಾರರ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್‌ ಮಾಡಿ, ಬಟ್ಟೆ ವ್ಯಾಪಾರಿ ರಾಣೋಜಿ ರಾವ್ (42) ಎಂಬುವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಂಗೇರಿ ಸಮೀಪದ ಮಾರುತಿನಗರದಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಅಂಗಡಿಗೆ ಹೋಗಿದ್ದ ತಾಯಿ ಲಕ್ಷ್ಮಿದೇವಿ, ಮನೆಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾಣೋಜಿ ಅವರು ಆತ್ಮಹತ್ಯೆಗೂ ಮುನ್ನ ಮಾಡಿರುವ ಸೆಲ್ಫಿ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗೌರಿಬಿದನೂರಿನ ರಾಣೋಜಿ, 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. 2015ರಲ್ಲಿ ಪತ್ನಿ ವಿಚ್ಛೇದನ ಪಡೆದಿದ್ದರಿಂದ, ತಾಯಿ ಹಾಗೂ ಇಬ್ಬರು ಮಕ್ಕಳ ಜತೆ ಮಾರುತಿನಗರದಲ್ಲಿ ನೆಲೆಸಿದ್ದರು. ರಾಣೋಜಿ ಅವರು ವ್ಯವಹಾರದಲ್ಲಿ ನಷ್ಟ ಉಂಟಾದ ಕಾರಣ ಕೆಲ ದಿನಗಳಿಂದ ಬಟ್ಟೆ ವ್ಯಾಪಾರ ಸ್ಥಗಿತಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಮೃತರು, ಪರಿಚಿತ ವಕೀಲರಾದ  ಮಹೇಶ್ ಹಾಗೂ ವಾಣಿ ಎಂಬುವರಿಂದ ಕೆಲ ತಿಂಗಳುಗಳ ಹಿಂದೆ ₹ 4.5 ಲಕ್ಷ ಸಾಲ ಪಡೆದಿದ್ದರು. ಅಸಲು, ಬಡ್ಡಿ ಸೇರಿ ಇನ್ನೂ ₹ 2.8 ಲಕ್ಷ ಹಿಂದಿರುಗಿಸಬೇಕಿತ್ತು. ಆದರೆ, ಸಾಲಗಾರರು ಇನ್ನೂ ₹ 20 ಲಕ್ಷ ಕೊಡಬೇಕೆಂದು ಪೀಡಿಸುತ್ತಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ವಕೀಲರನ್ನು ವಿಚಾರಣೆ ನಡೆಸಬೇಕಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಂಗಡಿಗೆ ಕಳುಹಿಸಿದರು:  ಸೋಮವಾರ  ಇಬ್ಬರು ಮಕ್ಕಳೂ ಶಾಲೆಗೆ ತೆರಳಿದ್ದರು. 11.30ರ ಸುಮಾರಿಗೆ ಮನೆ ಹತ್ತಿರದ ದೇವಸ್ಥಾನಕ್ಕೆ ಹೋಗಿರುವ ರಾಣೋಜಿ, ಅಲ್ಲೇ ಮೊಬೈಲ್‌ನಿಂದ ಸೆಲ್ಫಿ ವಿಡಿಯೊ ಮಾಡಿ ತಮ್ಮ ಅಳಲು ಹೇಳಿಕೊಂಡಿದ್ದಾರೆ. ನಂತರ ಮನೆಗೆ ಹೋಗಿ, ತಾಯಿಯನ್ನು ಮನೆ ಹತ್ತಿರದ ಅಂಗಡಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ: ‘ವಿಜಯನಗರ ನಿವಾಸಿಗಳಾದ ಮಹೇಶ್ ಹಾಗೂ ವಾಣಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಠಾಣೆಗೆ ಬಂದು ಶರಣಾಗುವಂತೆ ಅವರಿಗೆ ಕರೆ ಮಾಡಿ ತಿಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ವಿಡಿಯೊದಲ್ಲಿ ಅಳಲು
‘ವಾಣಿ ಹಾಗೂ ಮಹೇಶ್ ಎಂಬುವರಿಂದ ₹ 4.5 ಲಕ್ಷ ಸಾಲ ಪಡೆದಿದ್ದೆ. ಈವರೆಗೆ ಅಸಲಿಗಿಂತ ಬಡ್ಡಿಯನ್ನೇ ಹೆಚ್ಚು ಪಾವತಿಸಿದ್ದೇನೆ. ಶೀಘ್ರದಲ್ಲೇ ಉಳಿದ ಸಾಲವನ್ನೂ ಮರಳಿಸುವುದಾಗಿ ಹೇಳಿದ್ದೆ. ಆದರೂ, ನಿತ್ಯ ಅವರು ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು.’

‘ನಿವೇಶನ ಮಾರಾಟ ಮಾಡಿಯಾದರೂ ಸಾಲ ತೀರಿಸಬೇಕೆಂದು ನಿರ್ಧರಿಸಿದ್ದೆ. ಆದರೆ, ಹಳೇ ನೋಟುಗಳು ರದ್ದಾದ ಕಾರಣ ನಿವೇಶನ ಮಾರುವುದೂ ತಡವಾಯಿತು. ಅವರ ಕಿರುಕುಳದಿಂದಲೇ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಮಕ್ಕಳು ಹಾಗೂ ಸೋದರರಿಗೆ ಅವರಿಂದ  ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ರಾಣೋಜಿ ಅವರು ಒಂದೂವರೆ ನಿಮಿಷದ ಸೆಲ್ಫಿ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT