ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಳಿ ‘ಹೆಬ್ಬುಲಿ’

ನಾವು ನೋಡಿದ ಸಿನಿಮಾ
Last Updated 23 ಫೆಬ್ರುವರಿ 2017, 11:02 IST
ಅಕ್ಷರ ಗಾತ್ರ

ಚಿತ್ರ: ಹೆಬ್ಬುಲಿ
ನಿರ್ಮಾಣ: ರಘುನಾಥ್, ಉಮಾಪತಿ ಶ್ರೀನಿವಾಸ್
ನಿರ್ದೇಶನ: ಎಸ್‌. ಕೃಷ್ಣ
ತಾರಾಗಣ: ಸುದೀಪ್, ಅಮಲಾ ಪಾಲ್, ರವಿಚಂದ್ರನ್, ರವಿಶಂಕರ್

ಕ್ಯಾಮೆರಾ ಚಳಕದಿಂದ ರಂಜನೆಯ ಪಾಕ ಎರೆಯುವ ಜಾಣ್ಮೆ ಎಸ್. ಕೃಷ್ಣ ಅವರಿಗೆ ಗೊತ್ತಾಗಿ ದಶಕವೇ ಕಳೆದಿದೆ. ‘ಮುಂಗಾರು ಮಳೆ’ಯ ತಣ್ಣಗಿನ ಕಥನದ ಬಿಸಿ ಯಶಸ್ಸಿನಲ್ಲಿ ಅವರ ಪಾಲೂ ಇದೆ. ಹಾಲಿವುಡ್ ಚಿತ್ರಗಳ ಕೆಲವು ಶಾಟ್‌ಗಳನ್ನು ಎರವಲು ಪಡೆದುಕೊಂಡು ‘ಗಜಕೇಸರಿ’ ಚಿತ್ರ ನಿರ್ದೇಶಿಸಿದ ಅವರ ಆತ್ಮವಿಶ್ವಾಸಕ್ಕೀಗ ಸುದೀಪ್ ಇಂಧನವಾಗಿ ಒದಗಿಬಂದಿದ್ದಾರೆ.  ನಿರ್ದೇಶಕರಾಗಿ ಅವರಿಗೆ ರಂಜನೆಯ ಇನ್ನೊಂದು ನಿಕಷ ‘ಹೆಬ್ಬುಲಿ’.

ನಾಯಕನ ಸಾಮರ್ಥ್ಯವರ್ಧನೆಗೆ ಪೂರಕವಾದ ವೃತ್ತಿಯನ್ನೋ ಮಾನಸಿಕ ಸಮಸ್ಯೆಯನ್ನೋ ಸೃಷ್ಟಿಸಿ, ಅದರಲ್ಲೇ ಒಳಿತು–ಕೆಡುಕಿನ ಆಟವಾಡಿಸುವ ಜಾಯಮಾನದ ನಿರ್ದೇಶಕ ಎ.ಆರ್. ಮುರುಗದಾಸ್. ಅವರ ‘ತುಪಾಕಿ’ ತಮಿಳು ಚಿತ್ರದ ನಾಯಕ ಯೋಧ. ರಜೆಯಲ್ಲಿ ಅವನು ಭಯೋತ್ಪಾದಕರ ದೊಡ್ಡ ಜಾಲವನ್ನೇ ಮಟ್ಟಹಾಕುತ್ತಾನೆ. ‘ಹೆಬ್ಬುಲಿ’ಯಲ್ಲಿ ಸುದೀಪ್ ಕೂಡ ಯೋಧ; ಅಣ್ಣನನ್ನು ಕೊಂದವರ ಸಂಹಾರ ಮಾಡುವ ಯೋಧ. ಸೇಡಿನ ಹೂರಣದ ಕಥೆ ತಾಂತ್ರಿಕ ಕುಶಲತೆಯಿಂದ ರಂಜನೀಯವಾಗಿದೆ.

ಚಿತ್ರದ ಪ್ರಾರಂಭದಲ್ಲಿ ನಿರ್ದಿಷ್ಟ ದಾಳಿಯ ಸನ್ನಿವೇಶವಿದೆ. ನಾಯಕನಿಗೆ ಅಗತ್ಯ ಪ್ರಭಾವಳಿ ದೊರಕಿಸಿಕೊಡುವ ಉಮೇದಿಗೆ ಅದು ಪೂರಕ. ಇರಲೇಬೇಕು ಎನ್ನುವ ಕಾರಣಕ್ಕೆ ನಾಯಕಿ ಇದ್ದಾಳೆ. ಪೋಷಕ ಪಾತ್ರಧಾರಿ ಚಿಕ್ಕಣ್ಣ ಇರುವುದರಿಂದ ಹಾಸ್ಯದೃಶ್ಯಗಳೂ ಇವೆ. ಅವು ನಗಿಸಲು ಕಷ್ಟಪಟ್ಟಿರುವುದು ಮಸಾಲೆ ಚಿತ್ರ ರೂಪಿಸುವ ಸಂಕಷ್ಟಕ್ಕೆ ಉದಾಹರಣೆ.

ಮೊದಲರ್ಧ ಸಂಯಮದಿಂದ ಗಮನ ಸೆಳೆಯುತ್ತದೆ. ಯಾವುದೂ ಚಕಚಕನೆ ಆಗುವುದಿಲ್ಲವೇನೋ ಎಂದು ಭಾಸವಾಗುವಂತೆ ಮಾಡುವ ಕ್ಯಾಮೆರಾ ತಂತ್ರ ಅದು. ನಿಜಕ್ಕೂ ಪ್ರಸಂಗಗಳು ಅಂದುಕೊಂಡದ್ದಕ್ಕಿಂತ ವೇಗವಾಗಿಯೇ ನಡೆಯುವುದು ಸಂಕಲನಕಾರ ದೀಪು ಎಸ್. ಕುಮಾರ್ ಶ್ರಮದ ಫಲ.

ತರ್ಕದ ಹಂಗಿಲ್ಲದೆ ನೋಡಬೇಕಾದ ಚಿತ್ರವಿದು. ಇಲ್ಲವಾದರೆ ಕಾಣುವುದು ಬರೀ ಹುಳುಕು. ಪಾತ್ರಗಳ ಆಂಗಿಕ ಅಭಿನಯವನ್ನು ಸೀಮಿತಗೊಳಿಸಿ, ಕ್ಯಾಮೆರಾ ಚಲನೆಯೇ ಪ್ರಾಧಾನ್ಯ ಪಡೆದುಕೊಂಡಿರುವುದು ನಿರ್ದೇಶಕರ ಧೋರಣೆಗೆ ಹಿಡಿದ ಕನ್ನಡಿ. ಗತಿ–ಸ್ಥಿತಿಯ ಹಂಗಿಗೆ ಸಿನಿಮಾಟೋಗ್ರಾಫರ್ (ಎ. ಕರುಣಾಕರ್) ಒಳಪಟ್ಟಾಗ ಹೀಗಾಗುತ್ತದೆ.

ಸುದೀಪ್ ಗೆಟಪ್ ಚಿತ್ರದ ಗಮನಾರ್ಹ ಅಂಶ. ಅವರ ಭಿನ್ನ ಕೇಶವಿನ್ಯಾಸ ಹಾಗೂ ಅವರದೇ ಆದ ಆಂಗಿಕ ಅಭಿನಯಕ್ಕೆ ಶಿಳ್ಳೆಗಳು ಬೀಳುತ್ತವೆ. ಅವರ ಹೊಡೆದಾಟಗಳು ಅಭಿಮಾನಿಗಳಿಗಾಗಿಯೇ ಇರುವುದು. ನಯನಾಭಿನಯದಲ್ಲಿಯೂ ಅವರನ್ನು ಮೆಚ್ಚಿಕೊಳ್ಳಬಹುದು. ನಾಯಕಿ ಅಮಲಾ ಪಾಲ್ ಕಣ್ಣಲ್ಲೇ ಅಭಿನಯಿಸಬಲ್ಲರು. ಅದನ್ನು ಹೆಚ್ಚು ಬಳಸಿಕೊಳ್ಳುವಂಥ ಪಾತ್ರ ಈ ಚಿತ್ರದಲ್ಲಿ ಸಿಕ್ಕಿಲ್ಲ. ಖಳನಾಯಕರಾದ ರವಿಶಂಕರ್ ಹಾಗೂ ರವಿ ಕಿಶನ್ ಪ್ರತಿಭೆಗಳೂ ನಾಯಕನ ಪ್ರಭಾವಳಿಯಲ್ಲಿ ಕಳೆದುಹೋಗುತ್ತವೆ. ಸುದೀಪ್ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ತಮ್ಮ ಹಳೆಯ ಇಮೇಜನ್ನೆಲ್ಲಾ ಬಿಟ್ಟಿರುವುದನ್ನು ಮೆಚ್ಚಬಹುದು.

‘ಎಣ್ಣೆ ಬೇಕು ಅಣ್ಣ...’ ಹಾಡು ‘ಕಾದಲನ್’ ತಮಿಳು ಚಿತ್ರದಲ್ಲಿ ಪ್ರಭುದೇವ ಹಾಗೂ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹೆಜ್ಜೆ ಹಾಕಿದ್ದ ಗೀತೆಯ ಗುಂಗನ್ನು ನೆನಪಿಸುತ್ತದೆ. ಎ.ಆರ್. ರೆಹಮಾನ್ ಅವರನ್ನು ತಮ್ಮ ಗುರು ಎಂದೇ ಅರ್ಜುನ್ ಜನ್ಯ ಭಾವಿಸಿರುವುದರಿಂದ ಇದನ್ನು ಗುರು ಗೌರವ ಎಂದುಕೊಳ್ಳಬಹುದು. ಹಿನ್ನೆಲೆ ಸಂಗೀತ ನಾಯಕನ ವೈಭವಕ್ಕೆ ಪೂರಕ.

ಕಡಿಮೆ ಅವಧಿಯಲ್ಲಿ ನಡೆಯುವ ಘಟನಾವಳಿಗಳ ಕಥೆಯನ್ನು ಚಿತ್ರವಾಗಿಸುವ ಯಶಸ್ವಿ ಸೂತ್ರ ತಮಿಳು ಹಾಗೂ ತೆಲುಗಿನಲ್ಲಿ ಗಿಟ್ಟಿದೆ. ಅದನ್ನು ಕನ್ನಡಕ್ಕೂ ಕಡತಂದಿರುವ ನಿರ್ದೇಶಕ ಕೃಷ್ಣ, ವರ್ಚಸ್ವಿ ನಟರನ್ನು ತೆರೆಮೇಲೆ ಹೇಗೆ ತೋರಿಸಬಹುದು ಎನ್ನುವುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಪ್ರಭಾವಳಿ ಒಪ್ಪುವವರಿಗೆ ‘ಹೆಬ್ಬುಲಿ’ ಹಿಡಿಸಲು ಒಂದಿಷ್ಟಾದರೂ ಕಾರಣಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT