ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲು ವಿಚಾರದಲ್ಲಿ ಸ್ವಹಿತ ಸಾಧನೆಯ ಕುತಂತ್ರ ಅಕ್ಷಮ್ಯ

Last Updated 23 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾಗಾಲ್ಯಾಂಡ್‌ನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನೀಡುವುದಕ್ಕೆ ಬುಡಕಟ್ಟು ಗುಂಪುಗಳ ಪ್ರತಿರೋಧ ಹಿಂಸೆಗೆ ತಿರುಗಿ ಕಡೆಗೆ ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್. ಜೆಲಿಯಾಂಗ್ ರಾಜೀನಾಮೆಗೆ ಕಾರಣವಾಯಿತು. ಹೊಸ ಮುಖ್ಯಮಂತ್ರಿ ಶುರ್ಹೊಜಿಲಿ ಲೀಝಿತ್ಸು ಬುಧವಾರ ಅಧಿಕಾರದ ಗದ್ದುಗೆಗೇರಿದ್ದಾರೆ. 

ಸಾಮಾಜಿಕ ಆಂದೋಲನವಾಗಬೇಕಿದ್ದ ಮಹಿಳಾ ಮೀಸಲು ವಿಚಾರದ ವಿವಾದದಲ್ಲಿ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳೂ ಸೇರಿಕೊಂಡವು. ಕೊನೆಗೆ ಇದು, ಮುಖ್ಯಮಂತ್ರಿ ಗದ್ದುಗೆಗೇ ಮುಳುವಾಗುವಂತಹ ತಿರುವು ಪಡೆದುಕೊಂಡಿತು. ಈ ರಾಜಕೀಯ ಪ್ರಕ್ರಿಯೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ವಿಚಾರ ಹಿಂದೆ ಸರಿದಿದ್ದು ದುರದೃಷ್ಟಕರ.

ಶೇ 33ರಷ್ಟು ಮೀಸಲು ನೀಡಲು ಜೆಲಿಯಾಂಗ್ ಅವರು ನಡೆಸಿದ ಯತ್ನ ಪ್ರಗತಿಪರ ಕ್ರಮವಾಗಿತ್ತು. ಸಂವಿಧಾನದ ಆದರ್ಶ ಹಾಗೂ ನಿಯಮಗಳಿಗೆ ಇದು ಅನುಗುಣವಾಗಿತ್ತು. ಆದರೆ  371 (ಎ) ವಿಧಿಯನ್ನು ನಾಗಾ ಬುಡಕಟ್ಟು ಗುಂಪುಗಳು ಎತ್ತಿ ಹಿಡಿಯುತ್ತಿವೆ.

‘ಈ ಪ್ರಕಾರ, ಸಂವಿಧಾನದಲ್ಲಿ ಏನೇ ಇರಲಿ, ನಾಗಾಗಳ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳಿಗೆ ಸಂಸತ್‌ನ ಕಾಯಿದೆಗಳು ಅನ್ವಯವಾಗುವುದಿಲ್ಲ. ಮಹಿಳೆಯರಿಗೆ ಮೀಸಲು ನೀಡುವುದು ನಾಗಾ ಸಂಪ್ರದಾಯಗಳಿಗೆ ವಿರೋಧವಾಗಿದೆ’ ಎಂಬುದು ಬುಡಕಟ್ಟು ಗುಂಪುಗಳ ವಾದ.

ಮಹಿಳಾ ಮೀಸಲು ವಿರುದ್ಧ ದಿಮಾಪುರದಲ್ಲಿ ನಾಗಾ ಗುಂಪುಗಳು ನಡೆಸಿದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಸಾವನ್ನಪ್ಪಿದ ಘಟನೆಯೂ ನಡೆದು ಹೋಯಿತು. ಕಡೆಗೆ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಮೀಸಲು ಕಲ್ಪಿಸುವ ಮಹಿಳಾ ಪರ ಮಸೂದೆ ಅನೂರ್ಜಿತವಾಗಿದೆ ಎಂದು ಮುಖ್ಯಮಂತ್ರಿಯಾಗಿದ್ದ ಜೆಲಿಯಾಂಗ್ ಅವರೇ ಹೇಳಬೇಕಾಗಿ ಬಂದದ್ದು ವಿಷಾದನೀಯ.

ಬುಡಕಟ್ಟು ಗುಂಪುಗಳಿಂದ ಮಾತ್ರವಲ್ಲ,  ಆಡಳಿತ  ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್‌) ಪ್ರತಿಸ್ಪರ್ಧಿಗಳಿಂದಲೂ ಜೆಲಿಯಾಂಗ್ ಅವರ ರಾಜೀನಾಮೆಗೆ ಒತ್ತಡ ಸೃಷ್ಟಿಯಾಗುವಂತಹ ನಾಟಕೀಯ ಬೆಳವಣಿಗೆಗಳು ನಡೆದವು. ಕಳೆದ ವರ್ಷ ಪಕ್ಷ ವಿರೋಧಿ ಚಟುವಟಿಕೆಗಳಿಂದ ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸತ್‌ ಸದಸ್ಯ ನೈಫಿಯು ರಿಯೊ ಅವರು ಅಧಿಕಾರಕ್ಕೆ ಹಿಂತಿರುಗಬೇಕೆಂಬುದು ಕೆಲವು ಶಾಸಕರ ಅಭಿಪ್ರಾಯವಾಗಿತ್ತು. ಇದು ಪಕ್ಷದೊಳಗಿನ ಒಡಕಿಗೆ ಕಾರಣವಾಗಬಹುದೆಂಬ ಅಳುಕನ್ನೂ ಸೃಷ್ಟಿಸಿತ್ತು.

ಇಂತಹ ಸಂದರ್ಭದಲ್ಲಿ ಶಾಸಕರನ್ನು ತಮ್ಮಲ್ಲೇ ಉಳಿಸಿಕೊಳ್ಳುವುದಕ್ಕಾಗಿ ರೆಸಾರ್ಟ್ ರಾಜಕಾರಣ ನಡೆಸುವುದು ಮಾಮೂಲಾಗುತ್ತಿದೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಯೊಂದಿಗೆ ಇಂತಹ ನಾಟಕಕ್ಕೆ ತೆರೆ ಬಿದ್ದಿದ್ದನ್ನು ಸ್ಮರಿಸಿಕೊಳ್ಳಬಹುದು. ನಾಗಾಲ್ಯಾಂಡ್‌ನಲ್ಲೂ ಇಂತಹದೇ ನಾಟಕೀಯ ಬೆಳವಣಿಗೆಗಳು ನಡೆದದ್ದು ವಿಪರ್ಯಾಸ.

ನಾಗಾ ಪೀಪಲ್ಸ್ ಫ್ರಂಟ್ ಶಾಸಕರನ್ನು ಒಟ್ಟಾಗಿ ಇರಿಸಿಕೊಳ್ಳಲು ಅವರನ್ನು ನೆರೆ ರಾಜ್ಯದ ಕಾಜಿರಂಗ ರೆಸಾರ್ಟ್‌ಗೆ ಒಯ್ಯಲಾಗಿತ್ತು. ಕಡೆಗೆ ಪಕ್ಷ ಒಡೆಯಬಹುದೆಂಬ ಭೀತಿಯಿಂದ ಜೆಲಿಯಾಂಗ್ ಅವರೇ ರಾಜೀನಾಮೆ ನೀಡಿದರು. ನಂತರ ಪಕ್ಷದ ಹಿರಿಯ ನಾಯಕ 81 ವರ್ಷದ ಶುರ್ಹೊಜಿಲಿ ಲೀಝಿತ್ಸು ಅವರನ್ನು ನಾಗಾಲ್ಯಾಂಡ್‌ನ 11ನೇ ಮುಖ್ಯಮಂತ್ರಿಯಾಗಿ ನಾಮಕರಣ ಮಾಡಲಾಯಿತು.

ಪಕ್ಷದೊಳಗಿನ ಇಂತಹ ವಿಚ್ಛಿದ್ರಕಾರಿ ಚಟುವಟಿಕೆಗಳಿಂದ ಸೃಷ್ಟಿಯಾಗುವ ರಾಜಕೀಯ ಅಸ್ಥಿರತೆ ನಾಗಾಲ್ಯಾಂಡ್‌ಗೆ ಹೊಸದೇನೂ ಅಲ್ಲ. 2015ರಲ್ಲೂ ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಪದಚ್ಯುತಿಗೊಳಿಸುವ ಯತ್ನದಿಂದ ಜೆಲಿಯಾಂಗ್ ಅವರು ಪಾರಾಗಿದ್ದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ರಾಜಕಾರಣ ಕುಸಿಯುತ್ತಿರುವುದಕ್ಕೆ ಇಂತಹ ಬೆಳವಣಿಗೆಗಳು ನಿದರ್ಶನಗಳಾಗುತ್ತಿರುವುದು ವಿಷಾದನೀಯ.

ಲೀಝಿತ್ಸು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುಂಚೆ ಬುಡಕಟ್ಟು ಗುಂಪುಗಳೂ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿವೆ. ಆದರೆ ಲೀಝಿತ್ಸು ನಾಯಕತ್ವದಲ್ಲಿ ಎನ್‌ಪಿಎಫ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅದರದೇ ಹೊಣೆ ಇದೆ. ಅದು ತನ್ನ ಅಧಿಕಾರವನ್ನು ಪ್ರತಿಪಾದಿಸಬೇಕಾಗಿದೆ.

2015ರಲ್ಲಿ ಕೇಂದ್ರ ಸರ್ಕಾರ ಹಾಗೂ ಬಂಡುಕೋರ ಗುಂಪುಗಳು ಒಪ್ಪಂದ ಮಾಡಿಕೊಂಡಿದ್ದರೂ ಇನ್ನೂ ಚಾಲನೆಗೊಳ್ಳದ ನಾಗಾ ಶಾಂತಿ ಪ್ರಕ್ರಿಯೆಗೆ ಮೊದಲು ಆದ್ಯತೆ ನೀಡಬೇಕಾಗಿದೆ. ಈ ಗಡಿ ರಾಜ್ಯದಲ್ಲಿ ಸ್ಥಿರತೆ ಮೂಡಬೇಕಾದ ಅಗತ್ಯ ತೀವ್ರವಾಗಿದೆ. ಜೊತೆಗೆ ಮಹಿಳಾ ಮೀಸಲು ವಿಚಾರವನ್ನು ನಿರ್ವಹಿಸುವುದೂ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT