ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಿರುವಿಕೆ ದೌರ್ಬಲ್ಯ ಹೃದ್ರೋಗದ ಲಕ್ಷಣವೇ?

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹೃದ್ರೋಗಕ್ಕೂ ನಿಮಿರುವಿಕೆ ದೌರ್ಬಲ್ಯಕ್ಕೂ ಇರುವ ಸಂಬಂಧವೇನು?
ಹೃದ್ರೋಗಕ್ಕೂ ನಿಮಿರುವಿಕೆ ದೌರ್ಬಲ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮಿರು ದೌರ್ಬಲ್ಯ ಹೊಂದಿರುವ ಪುರುಷನು ಹೃದ್ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುತ್ತದೆ ಎಂದು ಅನೇಕ ಅಧ್ಯಯನಗಳು ಸಾರಿ ಹೇಳುತ್ತವೆ. ಬೈಪಾಸ್ ಸರ್ಜರಿ ಮಾಡಿಸಿಕೊಂಡವರಲ್ಲಿ ಶೇ.57ರಷ್ಟು ಮತ್ತು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಶೇ.67ರಷ್ಟು ಪುರುಷರು ನಿಮಿರು ದೌರ್ಬಲ್ಯವನ್ನು ಅನುಭವಿಸುತ್ತಾರೆ ಎಂದು ಅಧ್ಯಯನವೊಂದು ತಿಳಿಸುತ್ತದೆ.

ಸಾಮಾನ್ಯವಾಗಿ ನಿಮಿರು ದೌರ್ಬಲ್ಯ ಕಾಣಿಸಿಕೊಂಡ ಐದು ವರ್ಷಗಳಲ್ಲಿ ಹೃದ್ರೋಗದ ಲಕ್ಷಣಗಳೂ ಗೋಚರಿಸುತ್ತವೆ. ಹೃದ್ರೋಗದ ಆನುವಂಶಿಕತೆ ಮತ್ತು ಧೂಮಪಾನದಷ್ಟೇ ನಿಮಿರು ದೌರ್ಬಲ್ಯವೂ ಆತಂಕಕಾರಿ. ಹೃದ್ರೋಗ ಮತ್ತು ಮಧುಮೇಹದಿಂದ ಉಂಟಾಗುವ ನಿಮಿರು ದೌರ್ಬಲ್ಯ ದೇಹಕ್ಕೆ ಒಂದೇ ರೀತಿ ಹಾನಿ ಎಸಗುತ್ತವೆ. ಎರಡೂ ಸಮಸ್ಯೆಗಳು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತವೆ. ಮಧುಮೇಹ ಮತ್ತು ನಿಮಿರು ದೌರ್ಬಲ್ಯ ಹೊಂದಿರುವ ಪುರುಷರಿಗೆ ಹೃದಯಾಘಾತದ ಅಪಾಯ ಹೆಚ್ಚು. ನೀವು ಒಂದು ವೇಳೆ ಕೊಲೆಸ್ಟ್ರಾಲ್ ಮತ್ತು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದರೆ ಹೃದಯಾಘಾತದ ಅಪಾಯ ಮತ್ತಷ್ಟು ಹೆಚ್ಚುತ್ತದೆ (ಶೇ. 70). ನಿಮಗೆ ನಿಮಿರು ದೌರ್ಬಲ್ಯದಿಂದ ಸಮಸ್ಯೆ ಇದೆಯೇ? ನಿಮ್ಮ ಆರೋಗ್ಯ ಸ್ಥಿತಿಯ ಸರಿಯಾದ ಮಾಹಿತಿ ತಿಳಿದುಕೊಂಡರೆ ಸಕಾಲದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಟೈಪ್ 2 ಮಧುಮೇಹದಿಂದಾಗಿ ನಿಮಿರು ದೌರ್ಬಲ್ಯ ಅನುಭವಿಸುತ್ತಿರುವ ಪುರುಷರು ಸಾಮಾನ್ಯವಾಗಿ ದೇಹದ ಸಕ್ಕರೆ ಅಂಶ (ಗ್ಲೂಕೋಸ್) ನಿಯಂತ್ರಣದಲ್ಲಿ ವಿಫಲರಾಗುತ್ತಾರೆ. ವಿಪರೀತ ಕೊಬ್ಬು (ಕೊಲೆಸ್ಟರಾಲ್), ಹೆಚ್ಚು ರಕ್ತದೊತ್ತಡ, ಟೆಸ್ಟೊಸ್ಟಿರಾನ್ ಹಾರ್ಮೋನ್ ಸ್ರವಿಸುವಿಕೆಯಲ್ಲಿ ಏರುಪೇರು, ವಿಪರೀತ ತೂಕ ಅಥವಾ ಬೊಜ್ಜು, 40 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುತ್ತದೆ, ಧೂಮಪಾನ ಮಾಡುತ್ತಾರೆ, ವ್ಯಾಯಾಮ ಮಾಡುವುದಿಲ್ಲ. ನಿಮಿರು ದೌರ್ಬಲ್ಯ, ಹೃದಯದ ರಕ್ತನಾಳಗಳ ಕಾಯಿಲೆ, ಬೊಜ್ಜು, ಸೋಮಾರಿ ಜೀವನಪದ್ಧತಿ ಅವರದ್ದಾಗಿರುತ್ತದೆ.

ಉದ್ರೇಕದ ಸಂದರ್ಭದಲ್ಲಿ ಶಿಶ್ನಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳು ದಪ್ಪಗಾಗುತ್ತವೆ. ಇದರಿಂದ ಶಿಶ್ನದ ಗಾತ್ರ ಹೆಚ್ಚುವುದು ಮತ್ತು ಗಟ್ಟಿಯಾಗುವುದು ಸಾಧ್ಯವಾಗುತ್ತದೆ. ರಕ್ತನಾಳಗಳು ಸಪೂರವಾಗುವ ಅರ್ಥೆರೊಸ್ಲೊಸಿಸ್‌ನಿಂದ (atherosc* erosis) ಬಳಲುತ್ತಿದ್ದರೆ ರಕ್ತದ ಹರಿವು ಕುಂಠಿತಗೊಳ್ಳುತ್ತದೆ. ಇದರಿಂದಾಗಿ ಉದ್ರೇಕಗೊಳ್ಳುವುದು ಮತ್ತು ಉದ್ರೇಕವನ್ನು ಕಾಪಾಡಿಕೊಳ್ಳುವುದರಲ್ಲಿ ಸಮಸ್ಯೆಯಾಗುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವೂ ಹೆಚ್ಚಾಗುತ್ತದೆ.

ಶಿಶ್ನದ ರಕ್ತನಾಳಗಳು ಕಿರಿದಾಗಿರುವ ಕಾರಣ, ನಿಮಿರುವಿಕೆಯ ಸಮಸ್ಯೆಗಳು ಹೃದ್ರೋಗದ ಲಕ್ಷಣಗಳೂ ಆಗಿರಬಹುದು.
ನಿಮಗೆ ಅರ್ಥೆರೊಸ್ಲೊಸಿಸ್‌ ಅಥವಾ ಮಧುಮೇಹದ ಸಮಸ್ಯೆ ಇದ್ದು, ನಿಮಿರುವಿಕೆ ದೌರ್ಬಲ್ಯವನ್ನೂ ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅವರು ನಿಮ್ಮ ದೇಹದ ವಿವಿಧ ಸಮಸ್ಯೆಗಳ ನಡುವೆ ಇರುವ ಸಂಬಂಧಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಕೆಲವು ಪರೀಕ್ಷೆಗಳನ್ನು ಅವರು ಸೂಚಿಸಬಹುದು. ವೈದ್ಯರ ಗಮನಕ್ಕೆ ತಾರದೆ ನಿಮಿರುವಿಕೆ ದೌರ್ಬಲ್ಯಕ್ಕೆ ಯಾವುದೇ ಔಷಧ ತೆಗೆದುಕೊಳ್ಳಬೇಡಿ.

ಮಧುಮೇಹದಿಂದ ಬರುವ ನಿಮಿರು ದೌರ್ಬಲ್ಯಕ್ಕೆ ಪರಿಹಾರ
ನಿಮಗೆ ಮಧುಮೇಹ ಇದೆ ಎಂಬ ಒಂದೇ ಕಾರಣಕ್ಕೆ ಲೈಂಗಿಕ ಸುಖದಿಂದ ವಂಚಿತರಾಗಬೇಕಿಲ್ಲ. ಮಧುಮೇಹಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಹಲವು ರೀತಿಯಲ್ಲಿ ನೆರವಾಗುತ್ತದೆ. ಈ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ:
1. ಮಧುಮೇಹ ನಿಯಂತ್ರಣ
ಅಮೆರಿಕನ್ ಮಧುಮೇಹ ಸಂಸ್ಥೆಯ (ಎಡಿಎ) ಅಧ್ಯಯನದ ಪ್ರಕಾರ, ಎ1ಸಿ ಪರೀಕ್ಷೆಯಲ್ಲಿ ನೀವು ಸದಾ ತೇರ್ಗಡೆಯಾಗುವ ಜೀವನಪದ್ಧತಿಯನ್ನು ಅನುಸರಿಸಬೇಕು. ಎ1ಸಿ ರಕ್ತಪರೀಕ್ಷೆ ಮಾಡಿಸುವ ಮೂಲಕ ಕಳೆದ ಕೆಲವು ತಿಂಗಳುಗಳಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಎಷ್ಟಿತ್ತು ಎಂಬುದನ್ನು ತಿಳಿದುಕೊಳ್ಳಬಹುದು. ಜೀವನಪದ್ಧತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅದೇ ರೀತಿ ದೇಹಸ್ಥಿತಿಗೆ ತಕ್ಕ ಔಷಧಗಳನ್ನು ತೆಗೆದುಕೊಳ್ಳಬೇಕು. ಮಧುಮೇಹಕ್ಕೆ ತೆಗೆದುಕೊಳ್ಳುವ ಔಷಧಿಯಿಂದ ನಿಮಿರು ದೌರ್ಬಲ್ಯದ ಸಮಸ್ಯೆ ಹೆಚ್ಚಾಗುವುದಿಲ್ಲ.
2. ಆರೋಗ್ಯಕರ ಜೀವನಪದ್ಧತಿ
ಉತ್ತಮ ಪೌಷ್ಟಿಕಾಂಶ ಇರುವ ಆಹಾರ ಸೇವನೆ, ಸಾಕಷ್ಟು ವ್ಯಾಯಾಮದಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಇದು ನಿಮಿರು ದೌರ್ಬಲ್ಯಕ್ಕೆ ಕಡಿವಾಣ ಹಾಕಲೂ ಮೊದಲ ಹೆಜ್ಜೆ ಆಗಬಲ್ಲದು.
3. ಧೂಮಪಾನವನ್ನು ನಿಲ್ಲಿಸಿ
4. ತೂಕದ ಬಗ್ಗೆ ಗಮನ ಇರಲಿ
ನೀವು ಬೊಜ್ಜು ಅಥವಾ ಅತಿತೂಕದಿಂದ ಬಳಲುತ್ತಿದ್ದರೆ ಮೊದಲು ತೂಕ ಇಳಿಸಿಕೊಳ್ಳಿ. ಬೊಜ್ಜಿನ ಸಮಸ್ಯೆಗೆ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿಯೂ ಪರಿಹಾರ ಆಗಬಲ್ಲದು. ಈ ಚಿಕಿತ್ಸೆ ಪಡೆದುಕೊಂಡ ಕೆಲ ರೋಗಿಗಳಲ್ಲಿ ನಿಮಿರು ದೌರ್ಬಲ್ಯ ವಾಸಿಯಾಗಿದೆ.
5. ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದುಕೊಳ್ಳಿ
ನಿಮಿರು ದೌರ್ಬಲ್ಯಕ್ಕೆ ಮಾತ್ರೆ, ಇಂಜೆಕ್ಷನ್, ವ್ಯಾಕ್ಯುಂ ಪಂಪ್ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ರೀತಿಯ ಚಿಕಿತ್ಸೆಗಳು ಲಭ್ಯ. ಮಧುಮೇಹ ನಿಯಂತ್ರಣಕ್ಕೆ ನೀವು ಪ್ರಯತ್ನಪಡುತ್ತಿರುವಾಗಲೇ, ನಿಮಿರು ದೌರ್ಬಲ್ಯಕ್ಕೆ ಪರಿಹಾರ ಕಂಡುಕೊಳ್ಳಲು ಏನು ಮಾಡಬಹುದು ಎಂಬ ಬಗ್ಗೆ ನಿಮ್ಮ ಯೂರಾಲಜಿಸ್ಟ್‌ ಅವರೊಂದಿಗೆ ಚರ್ಚಿಸಿ.
6. ಹೃದ್ರೋಗದ ಸವಾಲು ನಿರ್ವಹಿಸಿ
ರಕ್ತದ ಒತ್ತಡ ಮತ್ತು ಕೊಬ್ಬಿನ ಅಂಶ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ವೈದ್ಯರಿಂದ ತಿಳಿದುಕೊಂಡು, ಅದರಂತೆ ಜೀವನ ಪದ್ಧತಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಿ.

ನಿಮಿರು ದೌರ್ಬಲ್ಯ ಮತ್ತು ಮಧುಮೇಹದ ನಡುವೆ ಸಂಬಂಧ ಇರುವುದನ್ನು ಯಾರೂ ಅಲ್ಲಗೆಳೆಯಲಾರರು. ಇದರ ಅರ್ಥ ನೀವು ಅನಾರೋಗ್ಯವನ್ನು ಒಪ್ಪಿಕೊಳ್ಳಲೇಬೇಕು ಎಂದೇನಲ್ಲ. ಮಧುಮೇಹ ನಿಯಂತ್ರಣಕ್ಕೆ ಮತ್ತು ನಿಮಿರು ದೌರ್ಬಲ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ನಿಮ್ಮ ಜೀವನಮಟ್ಟವನ್ನು ಖಂಡಿತ ಸುಧಾರಿಸಿಕೊಳ್ಳಬಹುದು.

ಮುಚ್ಚಿಟ್ಟು ಪ್ರಯೋಜನವಿಲ್ಲ
ನಿಮಿರು ದೌರ್ಬಲ್ಯ ಇದೆ ಎಂದು ಒಪ್ಪಿಕೊಳ್ಳುವುದು ಕಷ್ಟ. ಅದರ ಬಗ್ಗೆ ಮಾತನಾಡುವುದು ಇನ್ನೂ ಕಷ್ಟ. ಆದರೆ ಮಾತನ್ನೇ ಆಡದಿದ್ದರೆ ಚಿಕಿತ್ಸೆ ಪಡೆದುಕೊಳ್ಳುವುದಾದರೂ ಹೇಗೆ? ಹೆದರಬೇಡಿ, ವೈದ್ಯರು ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ವರ್ತನೆಗಳ ಬಗ್ಗೆ ತೀರ್ಪು ಕೊಡುವುದಿಲ್ಲ.
* ನಿಮ್ಮ ಸಮಸ್ಯೆಯ ಲಕ್ಷಣಗಳನ್ನು ವೈದ್ಯರಿಗೆ ವಿವರಿಸಿ.
* ನಿಮ್ಮ ಗೊಂದಲಗಳನ್ನು ಹಂಚಿಕೊಳ್ಳಿ, ನಿಮಗೆ ಇತರ ಲೈಂಗಿಕ ಸಮಸ್ಯೆಗಳೇನಾದರೂ ಇವೆಯೇ ತಿಳಿದುಕೊಳ್ಳಿ.
* ನಿಮ್ಮ ಇತರ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳನ್ನೂ ವೈದ್ಯರ ಎದುರು ವಿವರಿಸಿ.
* ನೀವು ಪ್ರಸ್ತುತ ತೆಗೆದುಕೊಳ್ಳುತ್ತಿರುವ ಎಲ್ಲ ಔಷಧಿಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿ. ಕೆಲವೊಮ್ಮೆ ಔಷಧಗಳಿಂದಲೂ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
* ನಿಮ್ಮ ಸಮಸ್ಯೆಯನ್ನು ಮತ್ತು ಅದಕ್ಕೆ ಇರುವ ಚಿಕಿತ್ಸಾ ವಿಧಾನಗಳನ್ನು ವಿವರಿಸುವಂತೆ ವೈದ್ಯರನ್ನು ಕೋರಿ.
ಮುಖ್ಯ ಅಂಶಗಳು
* ನಿಮಿರು ದೌರ್ಬಲ್ಯವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ.
* ವೈದ್ಯರೊಂದಿಗೆ ನಿಸ್ಸಂಕೋಚವಾಗಿ ಮಾತನಾಡಿ. ನೀವು ಮಾತನಾಡದಿದ್ದರೆ ಸಮಸ್ಯೆ ಅರಿತು, ಚಿಕಿತ್ಸೆ ಆರಂಭಿಸಲು ಆಗುವುದಿಲ್ಲ.
* ನಿಮಿರು ದೌರ್ಬಲ್ಯ ಹೃದ್ರೋಗ ಮತ್ತು ಇತರ ಗಂಭೀರ ಸಮಸ್ಯೆಗಳ ಮುನ್ಸೂಚನೆ.
* ಅತಿತೂಕ, ಬೊಜ್ಜು, ಸೋಮಾರಿ ಜೀವನಶೈಲಿಯು ಮಧುಮೇಹಕ್ಕಿಂತ ಅಪಾಯಕಾರಿ.
* ನಿಮಿರು ದೌರ್ಬಲ್ಯಕ್ಕೆ ಹಲವು ಚಿಕಿತ್ಸಾ ವಿಧಾನಗಳು ಲಭ್ಯ. ಜೀವನಶೈಲಿ ಬದಲಾವಣೆ, ವ್ಯಾಯಾಗಳು, ಆಹಾರದಲ್ಲಿ ಪಥ್ಯ, ಮಾತ್ರೆಗಳು, ಹಾರ್ಮೋನ್ ಚಿಕಿತ್ಸೆ, ಶಾಕ್‌ವೇವ್‌, ಸ್ಟೆಮ್‌ಸೆಲ್, ಶಸ್ತ್ರಚಿಕಿತ್ಸೆ.
* ಸಂಗಾತಿಯನ್ನು ತೃಪ್ತಿಪಡಿಸುವುದು ಎಲ್ಲ ಪುರುಷರು ಬಯಕೆ. ಈ ವಿಚಾರದಲ್ಲಿ ಆಧುನಿಕ ಚಿಕಿತ್ಸಾ ಪದ್ಧತಿಗಳು ಸಂಪೂರ್ಣ ನೆರವು ನೀಡಬಲ್ಲದು.
* ಒಳಗೇ ನೋವು ತಿನ್ನಬೇಡಿ, ಮುಕ್ತವಾಗಿ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT