ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ವಯಸ್ಸಿನ ಮಹಿಳೆಗೆ ಬಂತು ಬೊಜ್ಜು

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಹಿಳೆ ಮಧ್ಯಮ ವಯಸ್ಸಿಗೆ ಹೆಜ್ಜೆ ಇಟ್ಟಾಗ ಬೊಜ್ಜು ಬರಲು ಪ್ರಾರಂಭವಾಗುತ್ತದೆ. ವಯಸ್ಸು ಆದಂತೆಲ್ಲ ಶರೀರದಲ್ಲಿಯ ಹಾರ್ಮೋನಗಳ ಅಸಮತೋಲನ ತಲೆದೋರುತ್ತದೆ.  ಐಷಾರಾಮಿನ ಹಾಗೂ ಚಟುವಟಿಕೆರಹಿತ ಜೀವನಶೈಲಿ ಬೊಜ್ಜಿನ ಬೆಳವಣಿಗೆಗೆ ನಾಂದಿ ಹಾಡುತ್ತದೆ.      
                            
ನಲವತ್ತು ವಸಂತಗಳು ದಾಟಿದ ನಂತರ ಮೆದುಳಿನ ಅಡಿಯಲ್ಲಿಯ ಪಿಟ್ಯುಟರಿ ಗ್ರಂಥಿಯ ಪ್ರಚೋದನೆಗೆ ಮಹಿಳೆಯರ ಕಿಬ್ಬೊಟ್ಟೆಯ ಬುಡದಲ್ಲಿಯ ಅಂಡಾಶಯಗಳು ಪ್ರತಿಕ್ರಿಯಿಸುವುದಿಲ್ಲ. ಅಥವಾ ಅಲ್ಪ ಸ್ವಲ್ಪ ಸ್ಪಂದಿಸಬಹುದು. ಹೀಗಾಗಿ ಲೈಂಗಿಕ ರಸದೂತವಾದ ಇಸ್ಟ್ರೋಜನ್‌ನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದು.

ಥೈರಾಯಿಡ್‌ ಗ್ರಂಥಿಯ ಹಾರ್ಮೋನ್‌ಗಳು ಶರೀರದ ಚಯಾಪಚಯ (Metabolism) ಕ್ರಿಯೆಗೆ ಹೇಗೆ ಅವಶ್ಯವೋ ಹಾಗೆ ಇಸ್ಟ್ರೋಜನ್ ಕೂಡ. ಶರೀರದಲ್ಲಿ ಇಸ್ಟ್ರೋಜನ್ ಹೆಚ್ಚಿದಂತೆ ಚಯಾಚಪಯ ಕ್ರಿಯೆ ಹೆಚ್ಚಾಗುತ್ತದೆ. ಇದರಿಂದ ಆಮ್ಲಜನಕದ ಉಪಯೋಗದಲ್ಲಿ ಹೆಚ್ಚಳವಾಗುತ್ತದೆ. ಕ್ಯಾಲರಿಗಳ ಕೋರಿಕೆ ಬಹಳವಾಗುತ್ತದೆ. ಇಸ್ಟ್ರೋಜನ್‌ನ ಕೊರತೆ ಮಧ್ಯಮ ವಯಸ್ಸಿನ ಮಹಿಳೆಯರಲ್ಲಿ ತಲೆದೋರುವುದರಿಂದ ಇವುಗಳ ತದ್ವಿರುದ್ಧದ ಪರಿಣಾಮಗಳಿಗೆ ಹಾದಿ ಮಾಡಿ ಕೊಡುತ್ತದೆ. ಜೊತೆಗೆ ತಮ್ಮ ಚಟುವಟಿಕೆಗಳಿಗೆ ತಕ್ಕಂತೆ ಆಹಾರಸೇವನೆಯಲ್ಲಿ ಮಾರ್ಪಾಡನ್ನು ಮಹಿಳೆಯರು ಸಾಮಾನ್ಯವಾಗಿ ಮಾಡಿಕೊಳ್ಳುವುದಿಲ್ಲವಾದ್ದರಿಂದ ತಮಗೆ ಅರಿವಿಲ್ಲದಂತೆ ಬೊಜ್ಜಿನ ಬೆಳೆವಣಿಗೆಯತ್ತ ಹೆಜ್ಜೆ ಹಾಕುತ್ತಾರೆ.

ಮಧ್ಯಮ ವಯಸ್ಸಿನಲ್ಲಿ ಮಹಿಳೆಯರು ಮಕ್ಕಳನ್ನು ಬೆಳೆಸುವ ದೈಹಿಕ–ಮಾನಸಿಕ ಒತ್ತಡ ಹಾಗೂ ಪರಿಶ್ರಮಗಳ ಬಂಧನದಿಂದ ಬಿಡುಗಡೆ ಪಡೆದಿರುತ್ತಾರೆ. ಈ ಹಂತದಲ್ಲಿ ಬದುಕು ಸಾಮಾನ್ಯವಾಗಿ ನೆಮ್ಮದಿ ಹಾಗೂ ಆಲಸ್ಯಗಳ ಸಂಗಮವಾಗಿರುತ್ತದೆ. ಶಕ್ತಿಯ ವಿನಿಯೋಗ ಕಡಿಮೆಯಾಗಿರುತ್ತದೆ. ಆದರೆ ಹೆಚ್ಚಿನ ತಿನ್ನುವ ಹವ್ಯಾಸ, ಸುಖದ ಮನೋಭಾವ ಬಲಿಯುತ್ತಿರುತ್ತದೆ. ಇವೆಲ್ಲವುಗಳ ಪರಿಣಾಮಗಳು ಒಂದಕ್ಕೊಂದು ಪೂರಕ–ಪೋಷಕಗಳಾಗಿ ಬೊಜ್ಜಿನ ಶೇಖರಣೆಗೆ ಸಹಾಯಕವಾಗುತ್ತವೆ. ಬೊಜ್ಜಿನ ಶೇಖರಣೆ ಆಲಸ್ಯತನಕ್ಕೂ, ಆಲಸ್ಯತನ ಬೊಜ್ಜಿನ ಶೇಖರಣೆಗೂ ಪರಸ್ಪರ ಎಡೆ ಮಾಡಿಕೊಡುತ್ತವೆ. ಹೀಗಾಗಿ ಒಮ್ಮೆ ಆದಿ–ಅಂತ್ಯಗಳಿಲ್ಲದ ಈ ವಿಷವೃತ್ತದ ತಿರುಗುಣಿ ಮಡುವಿಗೆ ಸಿಕ್ಕ ಮಧ್ಯಮ ವಯಸ್ಸಿನ ಮಹಿಳೆ ಹೊರಬರಲು ಹೋರಾಡಬೇಕಾಗುತ್ತದೆ. ಇದಕ್ಕೆ ದೃಢವಾದ, ಅಚಲವಾದ ಮನೋನಿರ್ಧಾರ ಅತ್ಯಗತ್ಯ.

ಹೆಚ್ಚುವರಿ ತೂಕ (Over Weight) ಹಾಗೂ ಬೊಜ್ಜು (Obese) ಒಂದೇ ಅರ್ಥದ ಪದಗಳಲ್ಲ. ಹೆಚ್ಚುವರಿ ತೂಕದವರು ಬೊಜ್ಜಿನವರಾಗಿರಲಿಕ್ಕಿಲ್ಲ. ಕ್ರಿಡಾಪಟುಗಳಲ್ಲಿ, ಪರಿಶ್ರಮ ಜೀವಿಗಳಲ್ಲಿ ಮಾಂಸಖಂಡಗಳು ಬಲಿಷ್ಠವಾಗಿ ಬೆಳವಣಿಗೆಯಾಗುವುದರಿಂದಾಗಿ ತೂಕದ ಹೆಚ್ಚಾಗುತ್ತದೆಯೇ ಹೊರತು ಬೊಜ್ಜಿನಿಂದೇನೋ ಅಲ್ಲ. ಬೊಜ್ಜಿನ ಮಹಿಳೆಯರಲ್ಲಿ ಹೃದ್ರೋಗ, ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆ, ಸಕ್ಕರೆ ಕಾಯಿಲೆಯ ಹಾವಳಿ ಹೆಚ್ಚು ಎಂಬುದು ಅಧ್ಯಯನಗಳ ಅಂಕಿ–ಅಂಶಗಳು ದೃಢಪಡಿಸಿವೆ.  ಮಹಿಳೆಯರು ಸಾಮಾನ್ಯವಾಗಿ ಬೊಜ್ಜಿನ ಪ್ರಜ್ಞೆ ಚಿತ್ತದಲ್ಲಿ ಚುಚ್ಚುವಾಗ, ನಿಯಂತ್ರಣಕ್ಕೆ ಪಥ್ಯದ ಗೀಳಿನಲ್ಲಿ ಗೋಳಾಡುವರು.  ಪ್ರಾರಂಭದ ಮೂರು ನಾಲ್ಕು ವಾರಗಳಲ್ಲಿ ಬೊಜ್ಜನ್ನು ಇಳಿಸುವಲ್ಲಿ ಸ್ವಲ್ಪ ಯಶಸ್ವಿಯಾದರೂ, ಪಥ್ಯ ಕೈ ಕೊಟ್ಟು, ಇಳಿದ ಬೊಜ್ಜು ಬೆಳೆದು ಮೊದಲಿನ ಸ್ಥಿತಿಗೆ ಮುಟ್ಟುತ್ತದೆ.

ಆಹಾರಸೇವನೆ ಮತ್ತು ಶಾರೀರಿಕ ವ್ಯಾಯಾಮಗಳು ಬೊಜ್ಜನ್ನು ಕರಗಿಸುವ ಸಾಧನೆಗಳೆಂದು ತಿಳಿಯದೇ ಬಾಳಿನ ಭಾಗಗಳೆಂದು ಬಗೆದು ಬದುಕನ್ನು ಸಾಗಿಸಬೇಕು. ಎಷ್ಟು ತಿನ್ನುತ್ತೇವೆ ಅನ್ನುವುದು ಮುಖ್ಯವಲ್ಲ; ಏನು ತಿನ್ನುತ್ತೇವೆ ಎಂಬುದು ಮುಖ್ಯ. ಬೊಜ್ಜು ಇಳಿಸುವ ಭರದಲ್ಲಿ ಅಪಾಯಕರ ಉಪಾಯಗಳಿಗೂ ವಿಫಲದಲ್ಲಿ ಕೊನೆಗೊಳ್ಳುವ ಪ್ರಯತ್ನಗಳಿಗೂ ವಶವಾಗದೆ ಅಂಥವಕ್ಕೆ ವಿದಾಯ ಹೇಳಬೇಕು. ಶರೀರಕ್ಕೆ ಎಲ್ಲ ಜೀವಸತ್ವ ಲವಣಾಂಶಗಳನ್ನು ಪೂರೈಸುವ ಸಮತೋಲ ಆಹಾರಸೇವನೆಯನ್ನು ರೂಢಿಸಿಕೊಳ್ಳಬೇಕು. ಬೊಜ್ಜು ಶೇಖರಣೆಗೆ ಸಹಾಯಕವಾಗುವ ಎಣ್ಣೆಯ ಪದಾರ್ಥಗಳನ್ನು ವರ್ಜಿಸಬೇಕು. ಕಡಿಮೆ ಕ್ಯಾಲರಿ ಕೊಡುವ ಪದಾರ್ಥಗಳ ಸೇವನೆಗೆ ತೊಡಗಬೇಕು. ‘Balanced diet to boost and not to burst the body’ – ಎಂಬ ಮಾತನ್ನು ನೆನಪಿಡಬೇಕು.

ಮಹಿಳೆಯರು ಮನೆಗೆಲಸ ಮಾಡುವಾಗ ಆಮ್ಲಜನಕದ ವಿನಿಯೋಗ, ಕ್ಯಾಲರಿಗಳ ಖರ್ಚು ಹೆಚ್ಚುತ್ತದೆ.  ಬೊಜ್ಜನ್ನು ಕರಗಿಸಲು ಆಟದ ಬಯಲಿನ ವ್ಯಾಯಾಮವೇ ಬೇಕೆಂದೇನೂ ಇಲ್ಲ. ಮನೆಯಲ್ಲಿ ಕಸ ಗುಡಿಸುವುದು, ನೆಲ ಸಾರಿಸುವುದು, ಪಾತ್ರೆಗಳನ್ನು ತೊಳೆಯುವುದು, ಕಪಾಟು ಸ್ವಚ್ಛ ಮಾಡಿ ಪಾತ್ರೆ–ಪಗಡಿಗಳನ್ನು ಓರಣವಾಗಿ ಹೊಂದಿಸಿಡುವುದು – ಇಂಥ ಮನೆಕೆಲಸಗಳು  ಕ್ಯಾಲರಿಗಳ ಖರ್ಚಿಗೂ ಬೊಜ್ಜು ಇಳಿಕೆಗೂ ಮೈಮಾಟದ ರಕ್ಷಣೆಗೂ ಸಹಾಯಕವಾಗುತ್ತದೆ ಎಂಬುದನ್ನು ಮಧ್ಯಮ ವಯಸ್ಸಿನ ಮಹಿಳೆಯರು ನೆನಪಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT