ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಪಾತ್ರಗಳಲ್ಲಿ ಟಾಲಿವುಡ್‌ ನಾಯಕರು

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಆರು ಹಾಡು, ಮೂರು ಫೈಟ್‌, ಅಲ್ಲಲ್ಲಿ ಪಂಚಿಂಗ್ ಡೈಲಾಗ್‌ಗಳು ಕಳೆದ ಕೆಲ ವರ್ಷಗಳಿಂದ ತೆಲುಗು ಚಿತ್ರರಂಗದ ಯಶಸ್ಸಿನ ಸೂತ್ರಗಳಾಗಿವೆ.
‘ಅಭಿಮಾನಿಗಳ ಆಸಕ್ತಿ ಮತ್ತು ಅವರು ಹೇಗೆ ನಮ್ಮನ್ನು ನೋಡಲು ಬಯಸುತ್ತಾರೋ ಅದೇ ರೀತಿ ಕಾಣಿಸಿಕೊಳ್ಳುತ್ತೇವೆ’ ಎಂಬ ನಿಲುವಿನಿಂದ ಯಾವುದೇ ಸ್ಟಾರ್ ನಟ ಸುಲಭವಾಗಿ ಹಿಂದೆಗೆಯುವುದಿಲ್ಲ. ಒಂದು ರೀತಿಯಲ್ಲಿ ಇದು ತೆಲುಗು ಚಿತ್ರರಂಗದ ಮಿತಿಯೂ ಆಗಿತ್ತು.

ನಟರಿಗೆ ಹೊಸ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದ್ದರೂ ನಿರ್ಮಾಪಕರು ಕೈ ಸುಟ್ಟುಕೊಂಡರೆ, ಅಭಿಮಾನಿ ನಿರಾಶೆಯಾಗಿಬಿಟ್ಟರೆ ಎಂದು ಲೆಕ್ಕಚಾರ ಮಾಡುತ್ತಾ ಅಳೆದು, ತೂಗಿಯೇ ಮುಂದಿನ ಹೆಜ್ಜೆ ಇಡುತ್ತಿದ್ದರು. ಆದರೆ ಈಚೆಗೆ ಟಾಲಿವುಡ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ‘ಚಿತ್ರ ವಿಫಲವಾದರೂ ಪರವಾಗಿಲ್ಲ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಲೇಬೇಕು’ ಎಂದು ಹಲವು ಸ್ಟಾರ್‌ಗಳು ತೀರ್ಮಾನಿಸಿದಂತಿದೆ. ತೆಲುಗು ಸಿನಿರಂಗದ ಪ್ರಮುಖ ನಟರು ಆಯ್ಕೆ ಮಾಡಿಕೊಂಡಿರುವ ಕೆಲ ಚಿತ್ರಗಳನ್ನು ಗಮನಿಸಿದರೆ ಈ ಮಾತು ನಿಜ ಎನಿಸುತ್ತದೆ.

ವಿಶಿಷ್ಟ ಪಾತ್ರದಲ್ಲಿ ರಾಮ್‌ಚರಣ್
ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದ ಚಿತ್ರವೊಂದರಲ್ಲಿ ರಾಮ್‌ಚರಣ್‌ ನಟಿಸುತ್ತಾರೆ ಎಂಬುದು ಹಳೆಯ ವಿಷಯ. ಆದರೆ ಈ ಚಿತ್ರದಲ್ಲಿ ಅವರು ಕಿವಿ ಕೇಳಿಸದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿ.

ಖಳನಾಯಕನಾಗಿ ಜೂ.ಎನ್‌ಟಿಆರ್
‘ಟೆಂಪರ್‌’ ಚಿತ್ರದಲ್ಲಿ ಖಳನಾಯಕನ ಲಕ್ಷಣಗಳಿರುವ ನಾಯಕನಾಗಿ ಜೂನಿಯರ್‌ ಎನ್‌ಟಿಆರ್ ಮಿಂಚಿದ್ದರು. ಪೂರಿ ಜಗನ್ನಾಥ್‌ ನಿರ್ದೇಶನದ ಈ ಚಿತ್ರ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಇದೀಗ ಇದೇ ಸ್ಟಾರ್ ಪೂರ್ಣ ಪ್ರಮಾಣದ ಖಳನಾಯಕನಾಗಿ ಮಿಂಚಲು ಆಸಕ್ತಿ ತೋರಿದ್ದಾರೆ. ಬಾಬಿ ನಿರ್ದೇಶನದ ‘ಜೈ ಲವಕುಶ’ ಚಿತ್ರದಲ್ಲಿ  ಮೂರು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ಪಾತ್ರ ಖಳನಾಯಕನದು. ಇದಕ್ಕಾಗಿ ಅವರು ತಮ್ಮ ಹಾವ–ಭಾವಗಳನ್ನು ಬದಲಿಸಿಕೊಂಡಿದ್ದಾರಂತೆ.

ಬಾಕ್ಸಿಂಗ್ ಗುರುವಾಗಿ ವೆಂಕಟೇಶ್‌
ಟಾಲಿವುಡ್‌ನಲ್ಲಿ ವಿಕ್ಟರಿ ವೆಂಕಟೇಶ್‌ ಎಂದೇ ಖ್ಯಾತರಾಗಿರುವ ನಟ ವೆಂಕಟೇಶ್‌ ಅವರು ಕೌಟುಂಬಿಕ ಕಥೆಗಳಿರುವ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದರು. ಆದರೆ ಸದ್ಯದಲ್ಲೇ ತೆರೆಕಾಣಲಿರುವ ಅವರ ಬಹುನಿರೀಕ್ಷಿತ ‘ಗುರು’ ಚಿತ್ರದಲ್ಲಿ ಬಾಕ್ಸಿಂಗ್‌ ಕೋಚ್‌ ಆಗಿ ನಟಿಸಿದ್ದಾರೆ.

ಅಂಧನಾಗಿ ರವಿತೇಜ
‘ಮಾಸ್‌ ಮಹಾರಾಜ’ ರವಿತೇಜ ಅವರು ಸದಾ ಮಾಸ್‌ ಪಾತ್ರಗಳಿರುವ ಕಥೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗಷ್ಟೇ ಸೆಟ್ಟೇರಿರುವ ‘ರಾಜಾ ದಿ ಗ್ರೇಟ್‌’ ಚಿತ್ರದಲ್ಲಿ ಅವರು ಅಂಧನ ಪಾತ್ರ ಮಾಡುತ್ತಿದ್ದಾರೆ.

‘ರಾಜುಗಾರಿ ಗದಿ 2’ ಚಿತ್ರದಲ್ಲಿ ನಾಗಾರ್ಜುನ
ಟಾಲಿವುಡ್‌ನ ‘ರೊಮ್ಯಾಂಟಿಕ್ ಕಿಂಗ್’ ಖ್ಯಾತರಾದ ಅಕ್ಕಿನೇನಿ ನಾಗಾರ್ಜುನ ಅವರು ಓಂಕಾರ್ ನಿರ್ದೇಶನದ ಹಾರರ್‌ ಮತ್ತು ಹಾಸ್ಯ ಮಿಶ್ರಿತ ‘ರಾಜುಗಾರಿ ಗದಿ –2’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇಂತಹ ಚಿತ್ರಗಳಲ್ಲಿ ಅಗ್ರ ನಾಯಕನಟರೊಬ್ಬರು ನಟಿಸುತ್ತಿರುವುದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT