ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನಲ್ಲೇನು ಕೆಲಸ ಅಧಿಕಾರಿಗಳಿಗೆ?

ಕಾಳ್ಗಿಚ್ಚು: ಕಾರಣ, ನಿಯಂತ್ರಣ
Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕೆಲವು ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ನೇಮಕಕ್ಕೆ ಅನುಮತಿಯನ್ನೇ ನೀಡಿಲ್ಲ. ನಮ್ಮ ರಾಜ್ಯದಲ್ಲಿ ನಿಯಮಿತವಾಗಿ ಸಿಬ್ಬಂದಿ ನೇಮಕ ಆಗುತ್ತಿದೆ. ಆದರೆ, ಆ ಸಿಬ್ಬಂದಿ ಅಗತ್ಯ ಇರುವ ಜಾಗದಲ್ಲಿ ಇಲ್ಲ. ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಆಗುವುದು ಬೆಳಗಾವಿ, ವಿಜಯಪುರ ಹಾಗೂ ಕಲಬುರ್ಗಿ ಜಿಲ್ಲೆಗಳಿಂದ. ಅವರನ್ನು ಆರಂಭದಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಿಗೆ ನಿಯೋಜನೆ ಮಾಡಲಾಗುತ್ತದೆ. ಅವರು ಅಲ್ಲಿ ನಾಲ್ಕೈದು ವರ್ಷ ಕೆಲಸ ಮಾಡುತ್ತಾರೆ ಅಷ್ಟೆ. ಬಳಿಕ ರಾಜಕೀಯ ಪ್ರಭಾವ ಬಳಸಿ ತಮ್ಮೂರಿಗೆ ವರ್ಗ ಮಾಡಿಸಿಕೊಳ್ಳುತ್ತಾರೆ. ಆ ಜಿಲ್ಲೆಗಳಲ್ಲಿ ಸಿಬ್ಬಂದಿ ತುಂಬಿ ತುಳುಕುತ್ತಿದ್ದಾರೆ. ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಂತರೆ ಬಹುಪಾಲು ಸಮಸ್ಯೆ ಪರಿಹಾರ ಆಗುತ್ತದೆ. 
 
ಕಾಡಿನಲ್ಲಿ ಸಮಸ್ಯೆ ಸೃಷ್ಟಿಯಾದ ಸಂದರ್ಭದಲ್ಲಿ ಹೆಣಗಾಡುವವರು ಅರಣ್ಯ  ವೀಕ್ಷಕರು, ಅರಣ್ಯ ರಕ್ಷಕರು ಹಾಗೂ ವಲಯ ಅರಣ್ಯಾಧಿಕಾರಿಗಳು. ಹಿರಿಯ ಅಧಿಕಾರಿಗಳು ಪೂರ್ತಿ ಹೊಣೆಯನ್ನು ಅವರಿಗೆ ಬಿಟ್ಟು ಬಿಡುತ್ತಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಜಿಲ್ಲಾ ಕೇಂದ್ರಸ್ಥಾನ ಬಿಟ್ಟು ಹೊರಕ್ಕೇ ಬರುವುದಿಲ್ಲ. ಈ ಮನೋಭಾವ ಮೊದಲು ಹೋಗಬೇಕು.  ಕಾಳ್ಗಿಚ್ಚು ಉಂಟಾದ ವೇಳೆ ಅವರು ಅರಣ್ಯದಲ್ಲೇ ಮೊಕ್ಕಾಂ ಹೂಡಬೇಕು. ಆಗ ಉಳಿದ ಸಿಬ್ಬಂದಿಗೆ ಹೆಚ್ಚಿನ ಸ್ಫೂರ್ತಿ ಬರುತ್ತದೆ. 
 
ದನ ಕಾಯುವವರು, ಜೇನು ತೆಗೆಯುವವರು ತಮ್ಮ ಸ್ವಂತ ಲಾಭಕ್ಕಾಗಿ  ಅರಣ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಇದರಿಂದ ಇಡೀ ಕಾಡು ಭಸ್ಮವಾಗುತ್ತಿದೆ.  ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಂರಕ್ಷಿತ ಅರಣ್ಯಗಳಲ್ಲಿ ಲಂಟಾನ ಗಿಡಗಳು ವ್ಯಾಪಕ ಪ್ರಮಾಣದಲ್ಲಿ ಬೆಳೆದಿವೆ. ಇವುಗಳು ಸಹ ಬೆಂಕಿ ಹಬ್ಬಲು ಕಾರಣವಾಗುತ್ತಿವೆ. ಈ ಗಿಡಗಳನ್ನು ತೆಗೆಯಲು ಹೆಚ್ಚುವರಿ ಅನುದಾನ ಒದಗಿಸಬೇಕು. ಮೀಸಲು ಅರಣ್ಯಗಳಲ್ಲಿ ಬಿದ್ದ ಮರಗಳು ಹಾಗೂ ಸತ್ತ ಮರಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಇವುಗಳನ್ನು   ನಿಯಮಿತವಾಗಿ ವಿಲೇವಾರಿ ಮಾಡುತ್ತಿಲ್ಲ.  ಸಣ್ಣ ಬೆಂಕಿಯೂ ದೊಡ್ಡದಾಗಿ ವ್ಯಾಪಿಸಲು ಇವು ಕಾರಣ ಆಗುತ್ತಿವೆ. ಇವುಗಳನ್ನು ಹಂತ ಹಂತವಾಗಿ ತೆಗೆಯಬೇಕು. 
 
ಅರಣ್ಯದ ಮೇಲೆ ನಿಗಾ ಇಡಲು ಹಾಗೂ ಕಾಳ್ಗಿಚ್ಚು ನಂದಿಸಲು ಇಲಾಖೆ ದಿನಗೂಲಿ ಆಧಾರದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ. ಸ್ವರಕ್ಷಣೆಗಾಗಿ ಅವರಿಗೆ ಬೆಂಕಿ ತಡೆದುಕೊಳ್ಳುವ ಗ್ಲೌಸ್‌, ಎದೆಗವಚ, ನೀರಿನ ಬಾಟಲ್‌ ಹಾಗೂ ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ ನೀಡಬೇಕು. ಅವರಿಗೆ ಇನ್ನಷ್ಟು ಕೌಶಲ ತರಬೇತಿ ಕೊಡಬೇಕು. 
 
ಕುದುರೆಮುಖ ಭಾಗದಲ್ಲಿ ನಾಲ್ಕು ನದಿಗಳ ಉಗಮ ಆಗುತ್ತಿದೆ. ಆದರೆ, ಈ ಭಾಗದಲ್ಲಿ ದಶಕಗಳಿಂದ ಅರಣ್ಯವು ಬೆಂಕಿಗೆ ಆಹುತಿ ಆಗುತ್ತಿದೆ. ಇದರಿಂದಾಗಿ ಮಳೆ ಪ್ರಮಾಣವೂ ಕಡಿಮೆಯಾಗುತ್ತಿದೆ. ನದಿಗಳ ವ್ಯಾಪ್ತಿ ಕುಗ್ಗುತ್ತಿದೆ. ಈ ಸಮಸ್ಯೆಯನ್ನು ಜನ ಅರ್ಥ ಮಾಡಿಕೊಳ್ಳಬೇಕು. ಅರಣ್ಯ ರಕ್ಷಣೆಗೆ ಇಲಾಖೆಯ ಜತೆಗೆ ಕೈಜೋಡಿಸಬೇಕು. 
-ಬಿ.ಕೆ.ಸಿಂಗ್‌, ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) 
 
**
ದ್ವೇಷದಿಂದ ನಾಶ...
ಕಾನನದ ಬೆಂಕಿ ನಂದಿಸುವಲ್ಲಿ ಕೆಲವು ಗಿರಿಜನರು ನೈಪುಣ್ಯ ಪಡೆದಿರುತ್ತಾರೆ. ಅವರನ್ನೇ ಬೇಸಿಗೆ ವೇಳೆ ನೇಮಿಸಿಕೊಂಡು ವೈಜ್ಞಾನಿಕವಾಗಿ ತರಬೇತಿ ನೀಡಬೇಕು.
 
ಬೆಂಕಿರೇಖೆ ನಿರ್ಮಾಣ ಸೇರಿದಂತೆ ಇತರ ಸಂರಕ್ಷಣಾ ಕಾರ್ಯಕ್ಕೆ ಬಿಡುಗಡೆಯಾದ ಅನುದಾನವನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಬಳಸಬೇಕು. ಬೆಂಕಿ ನಂದಿಸುವ ಉದ್ದೇಶಕ್ಕಾಗಿ ದಿನಗೂಲಿ ಅರಣ್ಯ ವೀಕ್ಷಕರನ್ನು ನೇಮಿಸಿಕೊಳ್ಳುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಅಧಿಕಾರಿಗಳು ಅರಣ್ಯ ವೀಕ್ಷಕನೊಬ್ಬನನ್ನು ಆತನ ಮೇಲಿನ ವೈಯಕ್ತಿಕ ಸಿಟ್ಟಿನಿಂದ ನೇಮಿಸಿಕೊಳ್ಳದಿದ್ದರೆ ಕಾಡಿಗೆ ಅಪಾಯ ಕಟ್ಟಿಟ್ಟಬುತ್ತಿ. ಅಧಿಕಾರಿಗಳು ಮತ್ತು ದಿನಗೂಲಿ ಅರಣ್ಯ ವೀಕ್ಷಕರ ದ್ವೇಷದಿಂದ ಕಾಡು ನಾಶವಾಗಬಾರದು.
-ಮಲ್ಲೇಶಪ್ಪ
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
 
**
ಮಧ್ಯವರ್ತಿಗಳಿಂದ ಕಂಟಕ
ಕಾಡಿನ ನಾಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ. ಗಿರಿಜನರಿಂದ ಕಾಡಿಗೆ ಅಪಾಯ ಇಲ್ಲ. ಅವರು ಅರಣ್ಯ ಸಂರಕ್ಷಣೆ ಮಾಡುತ್ತಾರೆ. ಆದರೆ, ಕಾಡಂಚಿನ ಗ್ರಾಮಗಳಲ್ಲಿ ಇರುವ ಮಧ್ಯವರ್ತಿಗಳ ದುರಾಸೆಯಿಂದ ಕಾಡಿಗೆ ಕಂಟಕ ಎದುರಾಗಿದೆ.
 
ಅರಣ್ಯ ವೀಕ್ಷಕರು ಪ್ರತಿದಿನ ಗಸ್ತು ತಿರುಗಿ ಕಾಡಿನ ಸಂರಕ್ಷಣೆ ಮಾಡುತ್ತಾರೆ. ಆದರೆ, ಹಿರಿಯ ಅಧಿಕಾರಿಗಳು ಗಸ್ತಿಗೆ ತೆರಳುವುದಿಲ್ಲ. ಅವರ ಈ ಧೋರಣೆಯು ಕೆಳಹಂತದ ಸಿಬ್ಬಂದಿಯ ಆತ್ಮಸ್ಥೈರ್ಯವನ್ನು ಕುಂದಿಸುತ್ತದೆ. ಅವರು ಕೂಡ ಗಸ್ತು ತಿರುಗಬೇಕು. ಇದರಿಂದ ಅರಣ್ಯ ವೀಕ್ಷಕರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕಾಡಿಗೆ ಬೆಂಕಿ ಬಿದ್ದಾಗ ನಿಯಂತ್ರಿಸಲು ಧೈರ್ಯದಿಂದ ಮುನ್ನುಗ್ಗುತ್ತಾರೆ. ಜತೆಗೆ, ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ.
-ಪುಣಜನೂರು ದೊರೆಸ್ವಾಮಿ,
ಜಿಲ್ಲಾ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಚಾಮರಾಜನಗರ
 
**
ಸೇವೆಗೆ ಬೆಲೆ ಇಲ್ಲ
ಗಿರಿಜನರು ಕಾಡು ನಂಬಿ ಬದುಕುತ್ತಾರೆ, ಹಾಗಾಗಿ ಕಾಡಿಗೆ ಬೆಂಕಿ ಇಡುತ್ತಾರೆ ಎಂಬುದು ಸುಳ್ಳು. ಕಾಳ್ಗಿಚ್ಚು ಕಾಣಿಸಿಕೊಂಡಾಗ ಕಾಡಿನೊಳಗಿರುವ ಹಾಡಿಗಳ ಗಿರಿಜನರು ಸಾಮೂಹಿಕವಾಗಿ ತೆರಳಿ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಬೆಂಕಿ ನಂದಿಸಿರುವ ನಿದರ್ಶನ ಸಾಕಷ್ಟಿವೆ. ದುರಂತವೆಂದರೆ, ಕಾಳ್ಗಿಚ್ಚು ಕಾಣಿಸಿಕೊಂಡಾಗಲಷ್ಟೇ ಅರಣ್ಯ ಇಲಾಖೆಗೆ ಗಿರಿಜನರು ನೆನಪಾಗುತ್ತಾರೆ. ಉಳಿದ ದಿನಗಳಲ್ಲಿ ಕನಿಷ್ಠ ಉದ್ಯೋಗವನ್ನು ಕೂಡ ನೀಡುವುದಿಲ್ಲ. ಬೇಸಿಗೆ ವೇಳೆ ಬೆಂಕಿ ನಂದಿಸಲು ದಿನಗೂಲಿಗಳಾಗಿ ಗಿರಿಜನರನ್ನು ನೇಮಿಸಿಕೊಳ್ಳಲಾಗುತ್ತದೆ. ಆದರೆ, ಕೂಲಿ ನೀಡುವಾಗ ಮಲತಾಯಿ ಧೋರಣೆ ಎಸಗುತ್ತಾರೆ. ನಮ್ಮ ಸೇವೆಗೆ ಬೆಲೆ ಸಿಗುವುದಿಲ್ಲ.
 
ಹಿಂದಿನ ಮೂರು ವರ್ಷಗಳಿಂದ ಉದ್ಯೋಗ ಖಾತರಿ ಯೋಜನೆಯಡಿ ಚಾಮರಾಜನಗರ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಲಂಟಾನ ತೆರವುಗೊಳಿಸುವಂತಹ ಉದ್ಯೋಗವನ್ನು ಕೈಗೆತ್ತಿಕೊಂಡಿಲ್ಲ. ಹಾಗಾಗಿ, ಗಿರಿಜನರಿಗೆ ಉದ್ಯೋಗವೇ ಇಲ್ಲದಂತಾಗಿದೆ. ಇದರಿಂದ ನಮ್ಮ ಆರ್ಥಿಕತೆಗೆ ಪೆಟ್ಟುಬಿದ್ದಿದೆ. ಬೇಟೆ ತಡೆ ಶಿಬಿರಗಳಲ್ಲೂ ಗಿರಿಜನರು ದಿನಗೂಲಿಗಳಾಗಿ ದುಡಿಯುತ್ತಾರೆ. ಇಲ್ಲಿಯೂ ತಾರತಮ್ಯಕ್ಕೆ ಕೊನೆ ಇಲ್ಲದಂತಾಗಿದೆ.
-ಸಿ.ಮಾದೇವ,
ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ, ಸಂಘದ ಅಧ್ಯಕ್ಷ, ಚಾಮರಾಜನಗರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT