ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಗೆ ಕನ್ನಡಿ... ಈ ಕಿಡಿ

ಕಾಳ್ಗಿಚ್ಚು: ಕಾರಣ, ನಿಯಂತ್ರಣ
Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಈ ವರ್ಷದ ಕಾಡಿನ ಬೆಂಕಿ ಹಿಂದೆಂದಿಗಿಂತಲೂ ಬಹು ವಿಷಾದನೀಯ ಸನ್ನಿವೇಶದಲ್ಲಿ ಪ್ರಾರಂಭವಾಗಿದೆ. ಮುರುಗಪ್ಪ ತಮ್ಮನಗೋಳ ಎಂಬ ಅರಣ್ಯ ರಕ್ಷಕ ಬಂಡೀಪುರ ಅರಣ್ಯದ ಕಲ್ಕೆರೆ ವಲಯದಲ್ಲಿ ಬೆಂಕಿಗಾಹುತಿಯಾದರು. ಸುಟ್ಟ ಗಾಯಗಳಿಂದ ಕಾಡಿನಲ್ಲಿ ಬಿದ್ದಿದ್ದ ಅವರ ಕಳೇಬರದ ಚಿತ್ರಗಳು ನೋಡಲಾಗದಂತಿದ್ದವು. ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಪ್ರಸಂಗ ನಡೆದಿದೆ. ಈ ಘಟನೆ ನಮ್ಮ ಅರಣ್ಯಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಎದುರಿಸುವ ದಿನನಿತ್ಯದ ಕುತ್ತುಗಳನ್ನು ಎತ್ತಿ ತೋರುತ್ತದೆ. ಇಷ್ಟೆಲ್ಲಾ ತೊಂದರೆಗಳಿದ್ದರೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯತ್ತ ಸಮಾಜ ಹಾಗೂ ಸರ್ಕಾರದ ನಿಲುವು ಹೆಚ್ಚು ಬದಲಾಗುವುದು ಅನುಮಾನ. 
 
ಕಾಡಿಗೆ ಬೆಂಕಿ ಬಿದ್ದಾಗ ಅರಣ್ಯ ಇಲಾಖೆಯನ್ನು ತೆಗಳುವುದು ಬಹು ಸಾಮಾನ್ಯ ಸಂಗತಿ. ಇಲಾಖೆ ಎದುರಿಸುವ ಸಮಸ್ಯೆಗಳತ್ತ ಗಮನ ಕೊಡುವವರು, ಆ ಬಗ್ಗೆ ಆಸಕ್ತಿ ವಹಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ, ಅರಣ್ಯ ವಿಶ್ರಾಂತಿಧಾಮದಲ್ಲಿ ಉಳಿಯಲು ಬಯಸುವವರು, ಅರಣ್ಯದೊಳಗೆ ಸಫಾರಿ ಹೋಗಲು, ಛಾಯಾಚಿತ್ರ ತೆಗೆಯಲು, ಮೋಜು ಮಸ್ತಿ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯ ಕೇಳಿ ಬರುವವರು ಸಾವಿರಾರು ಜನ. 
 
ರಾಜ್ಯದ ಬಹುತೇಕ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಶೇಕಡ ಐವತ್ತರಷ್ಟು ಹುದ್ದೆಗಳು ಖಾಲಿ ಇವೆ. ‘ಹೀಗಿದ್ದಾಗ ಬೆಂಕಿಯನ್ನು ನಿರ್ವಹಿಸುವುದಾದರೂ ಹೇಗೆ’ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡ ಅರಣ್ಯ ಇಲಾಖೆ ಮುಖ್ಯಸ್ಥರ ಗೋಳಿನಲ್ಲಿ ಅರ್ಥವಿದೆ. ಇರುವ ಬೆರಳೆಣಿಕೆಯ ಕಾಯಂ ಸಿಬ್ಬಂದಿಯೊಡನೆ ಕೈಜೋಡಿಸುವವರೆಂದರೆ, ಕಾಳ್ಗಿಚ್ಚಿನ  ಕಾಲದಲ್ಲಿ ಹಂಗಾಮಿಯಾಗಿ ಕೆಲಸಕ್ಕೆ ಸೇರಿಸಿಕೊಳ್ಳುವ ಕಾಡು ಕುರುಬರು  ಮತ್ತಿತರ ಕೆಲ ಬುಡಕಟ್ಟು ಜನಾಂಗದವರು. ಬೆಂಕಿ ನಂದಿಸುವುದು ಸುಲಭದ ಕೆಲಸವೇನಲ್ಲ. ಬಿಸಿಲಿನ ತಾಪ, ಉರಿಯುವ ಬೆಂಕಿ, ಹಸಿ ಸೊಪ್ಪು ಹಿಡಿದು ಆ ಬೆಂಕಿಯನ್ನು ಬಡಿದೂ ಬಡಿದೂ ಎರಡೂ ಹಸ್ತಗಳಲ್ಲಿ ಕಾಣಿಸಿಕೊಳ್ಳುವ ಉರಿಯುವ ಬೊಬ್ಬೆಗಳು, ಕುಡಿಯಲು ಸಹ ನೀರಿಲ್ಲದಿರುವುದು, ಇವೆಲ್ಲ ಬೆಂಕಿ ನಂದಿಸುವುದು ಯಾವ ಶತ್ರುವಿಗೂ ಬೇಡದ ಕಾರ್ಯ ಎನಿಸುವಂತೆ ಮಾಡುತ್ತವೆ. ಹೀಗಾಗಿ ಹಂಗಾಮಿ ನೌಕರರನ್ನು ಕೆಲಸಕ್ಕೆ ಕರೆತರುವುದು ಸಹ ಬಹು ಕಷ್ಟದ ಕೆಲಸವಾಗುತ್ತಿದೆ. ಅವರು ಕೆಲಸಕ್ಕೆ ಬಂದರೂ ದುರದೃಷ್ಟವಶಾತ್ ಏನಾದರೂ ಅವಘಡಗಳಾದರೆ ಅವರಿಗೆ  ವಿಮೆ ಅಥವಾ ಇತರ ಯಾವುದೇ ಸೌಲಭ್ಯಗಳಿಲ್ಲ. ಬಂಡೀಪುರದಲ್ಲಿ ಇತ್ತೀಚೆಗೆ ಕಾಳ್ಗಿಚ್ಚಿನಿಂದ ತೀವ್ರವಾಗಿ ಗಾಯಗೊಂಡ ಮೂವರು ಸಿಬ್ಬಂದಿಯಲ್ಲಿ ಇಬ್ಬರು ಹಂಗಾಮಿ ನೌಕರರಾಗಿದ್ದು, ಕಾಡು ಕುರುಬ ಜನಾಂಗಕ್ಕೆ ಸೇರಿದ ಯುವಕರು. ಇವರಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ದಿನಗಳಲ್ಲಿ ಬೇಕಾಗುವ ಔಷಧಿ, ಚಿಕಿತ್ಸೆಗೆ ತಗಲುವ ವೆಚ್ಚದ ಜವಾಬ್ದಾರಿ ಯಾರದು? ಅವರು ಗುಣಮುಖರಾಗಿ ಕೆಲಸಕ್ಕೆ ಹೋಗುವವರೆಗೂ ಅವರ ಕುಟುಂಬದ ಜವಾಬ್ದಾರಿ ಯಾರದು? ಇದಕ್ಕೆಲ್ಲ ಸ್ಪಷ್ಟ ಉತ್ತರವಿಲ್ಲ.
 
 
ಇನ್ನು ಕಾಯಂ ನೌಕರರ ಪರಿಸ್ಥಿತಿ ಸಹ ಕಷ್ಟಕರವಾದುದು. ವನ್ಯಜೀವಿ ವಿಭಾಗಗಳಲ್ಲಿ ಕೆಲಸ ಮಾಡಲು ಸ್ವಇಚ್ಛೆಯಿಂದ ಬರುವವರು ಕಡಿಮೆ. ಇರುವವರಿಗೆ ಸರಿಯಾದ ಸೌಲಭ್ಯಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಹೊಸ ನಿಯಮವೊಂದನ್ನು ತರಲಾಗಿದೆ. ಅರಣ್ಯ ವೀಕ್ಷಕ, ಅರಣ್ಯ ರಕ್ಷಕ ಮತ್ತು ಉಪ ಅರಣ್ಯ ವಲಯಾಧಿಕಾರಿಗಳು ಒಂದು ಅರಣ್ಯ ವೃತ್ತದಿಂದ ಇನ್ನೊಂದು ವೃತ್ತಕ್ಕೆ ವರ್ಗಾವಣೆಯಾದರೆ ಅವರ ಸೇವಾ ಹಿರಿತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ, ಹೊಸದಾಗಿ ಸೇರಿದ ಹಲವಾರು ಸಿಬ್ಬಂದಿ ಐದು ವರ್ಷದ ಕಡ್ಡಾಯ ವನ್ಯಜೀವಿ ವಿಭಾಗ ಸೇವೆಯ ನಂತರ ಇತರ ವೃತ್ತಗಳಿಗೆ ಹೋಗುವುದು ಅಸಾಧ್ಯವಾಗಿದೆ. ಮೃತಪಟ್ಟ ಮುರುಗಪ್ಪ ತಮ್ಮನಗೋಳ  ಅವರೂ ಇದೇ ಕಾರಣದಿಂದ ಬಂಡೀಪುರದಲ್ಲಿ ಉಳಿದುಕೊಂಡಿದ್ದುದು. ಈ ನಿಯಮ ಬದಲಾಗಬೇಕು ಮತ್ತು ರಾಜ್ಯ ಮಟ್ಟದಲ್ಲಿ ಒಂದೇ ಸೇವಾ ಹಿರಿತನದ ಪಟ್ಟಿಯಾಗಬೇಕು ಎಂಬುದು ಅರಣ್ಯ ಸಿಬ್ಬಂದಿಯ ಅಭಿಪ್ರಾಯ. ವನ್ಯಜೀವಿ ವಿಭಾಗದಲ್ಲಿ ದೀರ್ಘಾವಧಿ ಕಾರ್ಯ ನಿರ್ವಹಿಸುವುದು ಬಹು ಕಷ್ಟದ ವಿಚಾರ. ಮೂರ್ನಾಲ್ಕು ವರ್ಷಗಳಾದ ನಂತರ ಇತರ ಪ್ರದೇಶಗಳಲ್ಲಿ ಕೆಲಸ ಮಾಡಿದರೆ ಸಿಬ್ಬಂದಿ ಸ್ವಲ್ಪವಾದರೂ ಚೇತರಿಸಿಕೊಳ್ಳಬಹುದು.
 
ಕಾಳ್ಗಿಚ್ಚಿನ ಸಂದರ್ಭದಲ್ಲಿ ನೆರವಿಗೆ ಬರುವಂತೆ ಕೆಲ ಕನಿಷ್ಠ ಸೌಲಭ್ಯಗಳು ಹಾಗೂ  ಮಾಹಿತಿಯನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು. ತುರ್ತುಪರಿಸ್ಥಿತಿಯಲ್ಲಿ ಕಾಡಿನ ಸುತ್ತಮುತ್ತ ಎಲ್ಲೆಲ್ಲಿ ದೊಡ್ಡ ಮಟ್ಟದಲ್ಲಿ ನೀರು ಒದಗಿಸುವ ರೈತರಿದ್ದಾರೆ, ಕೊಳವೆ ಬಾವಿಗಳೆಲ್ಲಿವೆ, ಕಾಡಿಗೆ ಬೆಂಕಿ ಹಾಕುವ ಅಭ್ಯಾಸವಿರುವ ವ್ಯಕ್ತಿಗಳ್ಯಾರು, ತುರ್ತುಪರಿಸ್ಥಿತಿ ಬಂದಾಗ ಯಾವ ಸಾಮಾಜಿಕ ನಾಯಕರ ಸಹಾಯ ತೆಗೆದುಕೊಳ್ಳಬಹುದು ಎಂಬಂತಹ  ಮಾಹಿತಿಯನ್ನು ಕ್ರೋಡೀಕರಿಸಿ ಇಟ್ಟುಕೊಳ್ಳಬೇಕು. ಈ ಮಾಹಿತಿ ಮತ್ತು ತಿಳಿವಳಿಕೆ ಮುಂಬರುವ ಅಧಿಕಾರಿಗಳಿಗೂ ಹಸ್ತಾಂತರವಾಗಬೇಕು. ಇಲ್ಲವಾದಲ್ಲಿ ಸ್ಥಳ ಮತ್ತು ಜನ ಪರಿಚಯವಿಲ್ಲದ ಅಧಿಕಾರಿಗಳು ಪ್ರತಿ ಎರಡು, ಮೂರು ವರ್ಷಗಳಿಗೊಮ್ಮೆ ವರ್ಗವಾಗಿ ಬಂದಾಗ, ಅವರು ಕಾರ್ಯವನ್ನು ಸಂಪೂರ್ಣ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಹಿಂದಿನ ಅಧಿಕಾರಿಗಳ ಅನುಭವ, ಕಾರ್ಯನೀತಿ, ರೂಪುರೇಷೆ, ಸಂಘಟನಾ ನಕ್ಷೆಗಳೆಲ್ಲ ನದಿಯಲ್ಲಿ ಹುಣಿಸೆ ಹಣ್ಣು ತೊಳೆದಂತಾಗುತ್ತವೆ. ಹಾಗೆಯೇ ಮುಖ್ಯವಾದ ಮತ್ತು ಸೂಕ್ಷ್ಮವಾದ ಪ್ರದೇಶಗಳಿಗೆ ಅನುಭವಸ್ಥರು, ಸ್ಥಳೀಯ ಜನ ಹಾಗೂ ಮುಂಚೂಣಿ ಸಿಬ್ಬಂದಿಯೊಡನೆ ಉತ್ತಮ ಬಾಂಧವ್ಯ ಹೊಂದಿರುವವರನ್ನು ನಿಯೋಜಿಸುವುದು ಬಹುಮುಖ್ಯ. ಹುಲಿ ಯೋಜನಾ ಪ್ರದೇಶಗಳಲ್ಲಿರುವ ಹುಲಿ ಪ್ರತಿಷ್ಠಾನದ ಹಣವನ್ನು ಬೆಂಕಿ ನಿರೋಧಕ ಸಮವಸ್ತ್ರ, ಎಲ್ಲಾ ಬಗೆಯ  ನೆಲಹರವುಗಳಲ್ಲೂ ತೆರಳಬಲ್ಲ ಬೆಂಕಿ ತಡೆ ವಾಹನ ಹಾಗೂ ಇತರ ಸಲಕರಣೆಗಳನ್ನು ಖರೀದಿಸಲು ವಿನಿಯೋಗಿಸಬಹುದು.  
 
ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯನ್ನು ಸೇರುತ್ತಿರುವ ಯುವಕರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದವರು. ದುಡಿಯುವ ಛಲವಿರುವವರು. ಆದರೆ, ಅವರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಅವರು ತರಬೇತಿ ಸಮಯದಲ್ಲಿ ಹೆಚ್ಚಾಗಿ, ಪುಸ್ತಕದಲ್ಲಿರುವ ಸಿದ್ಧಾಂತ ಮತ್ತು ನಿಯಮಗಳನ್ನು ಕಲಿಯುತ್ತಾರೆ. ಇದರ ಜೊತೆಗೆ ಬೆಂಕಿ ನಿರ್ವಹಣೆ ಹಾಗೂ ತಡೆಯ ಬಗ್ಗೆ ಕ್ರಿಯಾಶೀಲ, ಪ್ರಾಯೋಗಿಕ ತರಬೇತಿ ಕಡೆಗೆ ಒತ್ತು ನೀಡುವುದು ಅತ್ಯವಶ್ಯಕ. ಕಾಡಿನ ಬೆಂಕಿಯ ಬಗ್ಗೆ ಹಲವರಿಗೆ ಅರಿವೇ ಇರುವುದಿಲ್ಲ. ಅವರಿಗೆ ಇಂತಹ ಬೃಹದಾಕಾರದ ಬೆಂಕಿಯನ್ನು ನಿರ್ವಹಿಸಿ ಎನ್ನುವುದು, ವ್ಯಕ್ತಿಯೊಬ್ಬನನ್ನು  ದಷ್ಟಪುಷ್ಟವಾಗಿದ್ದಾನೆಂಬ ಕಾರಣಕ್ಕೆ ತರಬೇತಿಯಿಲ್ಲದೆ ಕುಸ್ತಿಯ ಅಖಾಡಕ್ಕೆ ಇಳಿಸಿದಂತೆ. 
 
ಧಾರವಾಡದ ಗುಂಗರಘಟ್ಟಿ ಅರಣ್ಯ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಈ ನಿಟ್ಟಿನಲ್ಲಿ ಸ್ವಲ್ಪ ಕಾರ್ಯ ಮುಂದುವರಿದಿರುವುದು ಶ್ಲಾಘನೀಯ. ರಾಜ್ಯದಲ್ಲಿರುವ ಅರಣ್ಯ ತರಬೇತಿ ಸಂಸ್ಥೆಗಳಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿರುಚಿ ಹುಟ್ಟಿಸುವ, ಕುತೂಹಲ ಕೆರಳಿಸುವ ಪ್ರಾಧ್ಯಾಪಕರಿರಬೇಕು. ಈ ನಿಟ್ಟಿನಲ್ಲಿ ಅತೀ ಹೆಚ್ಚು ಗಮನ ನೀಡಬೇಕಾಗಿದೆ. ಇದರೊಡನೆ, ಕಾಳ್ಗಿಚ್ಚಿನ ಸಂದರ್ಭಗಳನ್ನು ನಿಭಾಯಿಸುವ ಕವಾಯತನ್ನು  ನಿಯಮಿತವಾಗಿ ಮಾಡುವುದು ಕಡ್ಡಾಯವಾಗಬೇಕು. ಇದನ್ನು ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಗಳು ನಿಯಮಿತವಾಗಿ ಕೈಗೊಳ್ಳುತ್ತವೆ. ಜೊತೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತವೆ. ಈ ತರಬೇತಿ ಅರಣ್ಯ ಇಲಾಖೆ ಸಿಬ್ಬಂದಿಗೆ ಬಹು ಉಪಯೋಗಿಯಾಗಬಹುದು. ದುರಂತ, ತುರ್ತು ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕಾರ್ಯ ಸುಲಭವಾಗಬಹುದು.
 
ಕಾಡಿಗೆ ಬೆಂಕಿ ಬೀಳುವುದರ ಕಾರಣ ಎಲ್ಲರಿಗೂ ತಿಳಿದದ್ದೆ. ನಮ್ಮ ರಾಜ್ಯದಲ್ಲಂತೂ ಬೆಂಕಿ ಬೀಳುವುದು ನೂರಕ್ಕೆ ನೂರರಷ್ಟು ಮಾನವರಿಂದಲೇ. ಇದನ್ನು ತಡೆಗಟ್ಟಲು  ಕಾಡಿನ ಸುತ್ತಮುತ್ತಲಿರುವ ಜನರೊಡನೆ ನಮ್ಮ ಬಾಂಧವ್ಯ ಉತ್ತಮಗೊಳಿಸಿಕೊಳ್ಳುವುದು ಬಹು ಅವಶ್ಯಕ. ಆದರೆ ಕಿಡಿಗೇಡಿಗಳಿದ್ದರೆ ಅವರನ್ನು ಕಾನೂನಿನ ಪ್ರಕಾರವೇ ನಿಭಾಯಿಸಬೇಕಾಗುತ್ತದೆ. ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಾಡಿನ ಸುತ್ತಮುತ್ತಲಿರುವ ಹಿರಿಯರು, ಪ್ರಭಾವಿ ಸಾಮಾಜಿಕ ನಾಯಕರು, ಹೀಗೆ ಎಲ್ಲರ ಪಾತ್ರವೂ ಕಾಡು ಹಾಗೂ ಅರಣ್ಯ ಇಲಾಖೆ ಬಾಂಧವ್ಯ ಸುಧಾರಿಸಲು ನೆರವಾಗುವಂತೆ ಇರಬೇಕು. ಬೆಂಕಿ ಹಾಕಿದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದರೆ ಸಾಮಾಜಿಕ ನಾಯಕರು ಅವರ ಬೆಂಬಲಕ್ಕೆ ನಿಲ್ಲುವುದು ತಪ್ಪಾಗುತ್ತದೆ. 
 
ಇತ್ತೀಚಿನ ವರ್ಷಗಳಲ್ಲಿ ಕೆಲ ಅಧಿಕಾರಿಗಳಲ್ಲಿ, ‘ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸಲು ಯಾರ ಬೆಂಬಲವೂ ಬೇಕಿಲ್ಲ. ನಮ್ಮಲ್ಲಿ ಸಾಕಷ್ಟು ಹಣವಿದೆ. ಎಲ್ಲರೂ ಆಚೆಯಿದ್ದರೆ ಸಾಕು’ ಎನ್ನುವ ಭಾವನೆಯಿದೆ. ಹಣದಿಂದಷ್ಟೇ ಸಂಬಂಧಗಳು ಉತ್ತಮಗೊಳ್ಳುವುದಿಲ್ಲ, ವನ್ಯಸಂಪತ್ತು ಉಳಿಯುವುದಿಲ್ಲ. ಸಂಬಂಧಪಟ್ಟವರೆಲ್ಲರೂ  ಕೈಗೂಡಿಸಿದರೆ ಅಸಾಧ್ಯವಾದುದನ್ನು ಸಾಧ್ಯ ಮಾಡಬಹುದು. 
 
ಕಾಡಿನ ಬೆಂಕಿ, ವನ್ಯಜೀವಿ ಸಂಘರ್ಷ, ವನ್ಯಜೀವಿಗಳು ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಬಂದರೆ ಕೇವಲ ಟೀಕಿಸುವ ತಜ್ಞರಲ್ಲಿ ಎಷ್ಟು ಮಂದಿಗೆ ಈ ವಿಷಯಗಳ ನಿರ್ವಹಣೆಯಲ್ಲಿ ಪ್ರಾಯೋಗಿಕವಾದ ಅನುಭವವಿದೆಯೆಂದರೆ, ಅದು ಖಂಡಿತ ಸೊನ್ನೆ. ಕಾಳ್ಗಿಚ್ಚಿನ  ಕಾಲ ಬಂದರೆ ಇಂತಹವರು ಮಾಧ್ಯಮಗಳ ಮೂಲಕ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರುವುದನ್ನು ಕಡಿಮೆ ಮಾಡಬೇಕು. ಈ ರೀತಿಯ ಒತ್ತಡದಲ್ಲಿ ಸಿಬ್ಬಂದಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಗರಗಳಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳು ಹಾಗೂ  ಮಾಧ್ಯಮಗಳ ಮೂಲಕ ಟೀಕಿಸುವುದಕ್ಕೆ ಸಮಯ ವ್ಯರ್ಥ ಮಾಡುವ ಬದಲು ಅರಣ್ಯ ಇಲಾಖೆಯೊಡನೆ ಕೈಜೋಡಿಸುವುದು ಉತ್ತಮ. 
 
ಕಾಡಿನ ಬೆಂಕಿಯಲ್ಲಿ ಒಬ್ಬರ ತಪ್ಪಿರುತ್ತದೆ ಎಂದು ಹೇಳುವುದು ಅಥವಾ ಒಬ್ಬರನ್ನೇ ದೂರುವುದು ಬಹು ಕಷ್ಟ. ಇದೊಂದು ವ್ಯವಸ್ಥೆಯ ವೈಫಲ್ಯ. ವ್ಯವಸ್ಥೆಯಲ್ಲಿರುವ ಹಲವು ವಿಚಾರಗಳು ಬದಲಾಗುವವರೆಗೂ ಈ ಅವಘಡಗಳು ತಪ್ಪುವುದು ಅನುಮಾನ. ಆದರೆ ಇಷ್ಟೆಲ್ಲಾ ತೊಂದರೆ, ಇತಿಮಿತಿಗಳ ಮಧ್ಯೆಯೂ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಕೆಲಸ ನಿರ್ವಹಿಸುತ್ತಿರುವ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿಗೆ ಸಲಾಂ ಹೇಳೋಣ.
 
***
ಬೆಂಕಿಗೆ ತುಪ್ಪ ಸುರಿಯುವವರು 
2012ರ ಬೇಸಿಗೆ. ರಾಜ್ಯದ ಹಲವೆಡೆ ಕಾಡುಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ರಾಜ್ಯದ ಖ್ಯಾತ ಹುಲಿ ತಜ್ಞರೊಬ್ಬರು, ನಾಗರಹೊಳೆಯಲ್ಲಿ ಸುಮಾರು 9,700 ಎಕರೆ ಕಾಡು ಸುಟ್ಟು ಕರಕಲಾಗಿದೆಯೆಂದು ಪತ್ರಿಕೆಗಳಿಗೆ ಹೇಳಿಕೆ ನೀಡಿ ಬೆಂಕಿಗೆ ತುಪ್ಪ ಸುರಿದರು. ಒಂದೇ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಹೆಚ್ಚೂಕಡಿಮೆ ಹತ್ತು ಸಾವಿರ ಎಕರೆ ಕಾಡು ಸುಟ್ಟಿದೆಯೆಂದರೆ ಚಿಕ್ಕ ವಿಷಯವೇ? ಎಲ್ಲೆಡೆ ಅಲ್ಲೋಲಕಲ್ಲೋಲ. ಮತ್ತದೇ, ಅರಣ್ಯ ಇಲಾಖೆಗೆ ಎಲ್ಲರಿಂದಲೂ ವ್ಯಾಪಕ ಬೈಗುಳ. 
 
ನಂತರ ನಡೆದ ವೈಜ್ಞಾನಿಕ ಅಧ್ಯಯನದಿಂದ, ವಾಸ್ತವವಾಗಿ ನಾಗರಹೊಳೆಯಲ್ಲಿ ಸುಮಾರು 5,100 ಎಕರೆಯಷ್ಟು ಕಾಡು ಸುಟ್ಟು ಹೋಗಿದ್ದ ವಿಷಯ ಪತ್ತೆಯಾಯಿತು. ತಜ್ಞರು ಅದನ್ನು ಎರಡರಷ್ಟು ಮಾಡಿ ಪ್ರಚಾರ ಗಿಟ್ಟಿಸಿಕೊಂಡುಬಿಟ್ಟಿದ್ದರು. ಕಾಡು ಎಷ್ಟೇ ಪ್ರಮಾಣದಲ್ಲಿ ಸುಟ್ಟರೂ ಅದು ನಷ್ಟವೇ, ಅದು ತಪ್ಪೇ. ಆದರೆ ವಾಸ್ತವಾಂಶವನ್ನು ಬಿಟ್ಟು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ, ಅರಣ್ಯ ಇಲಾಖೆ ಹಾಗೂ ಅದರ ಸಿಬ್ಬಂದಿ ವಿರುದ್ಧ ಅವರನ್ನು ಎತ್ತಿಕಟ್ಟುವುದು ಎಷ್ಟು ಸಮಂಜಸ? ಸುಳ್ಳು ಮಾಹಿತಿ ನೀಡಿ ಕೋಮು ಗಲಭೆ ಉಂಟು ಮಾಡಿಸಿದಷ್ಟೇ ಕೆಟ್ಟ ಕೆಲಸ ಇದು. ಇಂತಹವರು ಹೇಳುವ ಸುಳ್ಳುಗಳಿಗೆ ಶಿಕ್ಷೆಯೇನು?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT