ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನರಾಶಿಗೆ ‘ಉದರದ ಕಿಚ್ಚು’

ಕಾಳ್ಗಿಚ್ಚು: ಕಾರಣ, ನಿಯಂತ್ರಣ
Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ವೇಳೆಯೂ ಕಾಡಿನ ಸಂರಕ್ಷಣೆಯಲ್ಲಿ ತೊಡಗಿರುತ್ತಾರೆ. ಮುಂಜಾನೆ ವೇಳೆಗೆ ಆ ದಿನದ ಸಿದ್ಧತೆಗಾಗಿ ಮನೆಯತ್ತ ಬರುವುದು ಸಹಜ. ಈ ಸಮಯ ನೋಡಿಕೊಂಡು ಕಿಡಿಗೇಡಿಗಳು ಕಾಡಿನೊಳಗೆ ನುಸುಳುತ್ತಾರೆ. ಜೊತೆಯಲ್ಲಿ ಏಳೆಂಟು ಮೀಟರ್‌ ಉದ್ದದ ತೆಂಗಿನನಾರಿನ ಹಗ್ಗಗಳು, ಬೆಂಕಿಪೊಟ್ಟಣ ಕೊಂಡೊಯ್ಯುತ್ತಾರೆ. ಹಗ್ಗದ ಒಂದು ತುದಿಗೆ ಬೆಂಕಿ ಹಚ್ಚುತ್ತಾರೆ. ಮತ್ತೊಂದು ತುದಿಯಲ್ಲಿ ಬೆಂಕಿಕಡ್ಡಿಗಳನ್ನು ಸುರಿಯುತ್ತಾರೆ. ಈ ಹಗ್ಗವು ನಿಧಾನವಾಗಿ ಉರಿದು ತುದಿಯ ಕೊನೆಗೆ ಬರುವಾಗ ಸೂರ್ಯ ನೆತ್ತಿಗೇರಿರುತ್ತಾನೆ. ಬಿಸಿಲಿನ ಪ್ರಖರತೆಯೂ ಹೆಚ್ಚಿರುತ್ತದೆ. ಒಮ್ಮೆಲೇ ಬೆಂಕಿಕಡ್ಡಿಗಳು ಹೊತ್ತಿಕೊಂಡು ಕಾಡು ಉರಿಯಲಾರಂಭಿಸುತ್ತದೆ. 
 
ಅರಣ್ಯದ ಅಲ್ಲಲ್ಲಿ ಇದೇ ಮಾದರಿ ಅನುಸರಿಸಿ ಬೆಂಕಿ ಹಚ್ಚುತ್ತಾರೆ. ಒಂದು ಭಾಗದಲ್ಲಿ ಬೆಂಕಿ ನಂದಿಸಿ ಮತ್ತೊಂದು ಪ್ರದೇಶಕ್ಕೆ ಸಿಬ್ಬಂದಿ ತೆರಳುವ ವೇಳೆಗೆ ಅಲ್ಲಿನ ವನ ಸಂಪತ್ತು ನಾಶವಾಗಿರುತ್ತದೆ. ಕಾಡು ಭಸ್ಮವಾಗುವ ಪರಿಣಾಮ ಬೆಂಕಿ ಹೊತ್ತಿಸಲು ಬಳಸಿದ ಕುರುಹು ಕೂಡ ಸಿಗುವುದು ವಿರಳ. ಸೊಳ್ಳೆಬತ್ತಿ ಹಚ್ಚಿ ಅದರ ಕೆಳಗೆ ಬೆಂಕಿಕಡ್ಡಿಗಳನ್ನು ಸುರಿದು ಕಾಡಿಗೆ ಬೆಂಕಿಹಚ್ಚುವ ಕಿಡಿಗೇಡಿಗಳೂ ಇದ್ದಾರೆ. ಆನೆಯ ಒಣಗಿದ ಲದ್ದಿಯಲ್ಲಿ ಬೆಂಕಿ ಹಚ್ಚುವ ವಿಧಾನ ಬಳಸುತ್ತಾರೆ. ಈ ಬೆಂಕಿಯು ನಿಧಾನವಾಗಿ ಉರಿದು ಇಡೀ ಕಾಡಿಗೆ ಆವರಿಸುತ್ತದೆ. 
 
ಉದ್ದೇಶಪೂರ್ವಕವಾಗಿ ಮತ್ತು ತಮಾಷೆಗಾಗಿ ಕಾಡಿಗೆ ಬೆಂಕಿ ಹಚ್ಚುವುದೇ ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿ ಸಂರಕ್ಷಣಾ ನಿಯಮಗಳು ಬಿಗಿಯಾಗುತ್ತಿವೆ. ಗಿರಿಜನರು, ಕಾಡಂಚಿನ ಜನರು ಅರಣ್ಯ ಪ್ರವೇಶಿಸುವುದು ಸುಲಭವಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾನೂನು ಪಾಲನೆಗೆ ಮುಂದಾಗುತ್ತಾರೆ. ಇದರಿಂದ ಅಧಿಕಾರಿಗಳು ಮತ್ತು ಕಾಡು ಅವಲಂಬಿಸಿರುವ ಜನರ ನಡುವೆ ಮುಸುಕಿನ ಗುದ್ದಾಟ ಏರ್ಪಡುತ್ತದೆ. ಇದೇ ಕಾಳ್ಗಿಚ್ಚಿಗೆ ಮೂಲ ಕಾರಣ.  
 
 
ದೈನಂದಿನ ಅಗತ್ಯ ಪೂರೈಸಿಕೊಳ್ಳಲು ಕಾಡಂಚಿನ ಜನ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಇಡುತ್ತಾರೆ. ಕಾಡಿನಲ್ಲಿ ಅತಿಎತ್ತರದ ಹುಲ್ಲು (ಇದಕ್ಕೆ ಎಲಿಫೆಂಟ್ ಗ್ರಾಸ್‌ ಎಂದೂ ಕರೆಯುತ್ತಾರೆ) ಬೆಳೆಯುತ್ತದೆ. ಬೇಸಿಗೆ ವೇಳೆ ಕಾಡಾನೆಗಳಿಗೆ ತೇವಾಂಶಭರಿತ ಹುಲ್ಲು, ಬಿದಿರು ಸಿಗುವುದು ಅಪರೂಪ. ಆಗ ಕಾಡಾನೆಗಳಿಗೆ ಅತಿ ಎತ್ತರವಾಗಿ ಬೆಳೆಯುವ ಹುಲ್ಲೇ ಆಹಾರದ ಮೂಲ. ಈ ಹುಲ್ಲು ಸಹ ಒಣಗಿ ಹೋಗಿರುತ್ತದೆ. ಆದರೆ, ಅದನ್ನು ಆನೆಗಳು ಬುಡಸಮೇತ ಕಿತ್ತು ಅದಕ್ಕೆ ಅಂಟಿಕೊಂಡಿರುವ ಮಣ್ಣನ್ನು ಕೊಡವಿ ಕೇವಲ ಬೇರುಗಳನ್ನು ತಿನ್ನುತ್ತವೆ. ಆದರೆ, ಜಾನುವಾರುಗಳು ಈ ಹುಲ್ಲು ತಿನ್ನುವುದಿಲ್ಲ. ಇದಕ್ಕೆ ಬೆಂಕಿ ಹಚ್ಚಿದರೆ ಚಿಗುರೊಡೆಯುವ ಹುಲ್ಲು ಜಾನುವಾರುಗಳಿಗೆ ಆಹಾರವಾಗುತ್ತದೆ. ಹಾಗಾಗಿ, ಕಾಡಂಚಿನ ಜನ ಅರಣ್ಯಕ್ಕೆ ಬೆಂಕಿ ಹಾಕುತ್ತಾರೆ.
 
ಗಿರಿಜನ ಮತ್ತು ಕಾಡಂಚಿನ ಜನರಲ್ಲಿ ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನವನ್ನು ಸಂಗ್ರಹಿಸುವ ಪರಿಪಾಠ ಹೊಸದೇನಲ್ಲ. ಸಂತಾನೋತ್ಪತ್ತಿ ವೇಳೆ ಜಿಂಕೆಗಳ ಕೊಂಬುಗಳು ಉದುರಿ ಮತ್ತೆ ಹುಟ್ಟುತ್ತವೆ. ಇಂತಹ ಕೊಂಬುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ದಂಧೆಯೂ ಇದೆ. ಈ ದಂಧೆಕೋರರು ಕೂಡ ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ. ಜೇನು ಸಂಗ್ರಹಿಸುವವರು ಗೂಡಿನಿಂದ ದುಂಬಿಗಳನ್ನು ಹೊರಹಾಕಲು ಮತ್ತು ಅರಗು, ಚಂದನ ಸಂಗ್ರಹಿಸುವವರು ಕಾಡಿಗೆ ಬೆಂಕಿ ಹಾಕುತ್ತಾರೆ.
 
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮಂಗಲ ಗ್ರಾಮದ ಬಳಿ ಸಣ್ಣದೊಂದು ಕೆರೆ ಇದೆ. 2014ರ ಮಾರ್ಚ್‌ನಲ್ಲಿ ಈ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮೀನು ಹಿಡಿಯಲು ಜನರ ಗುಂಪೊಂದು ಅಲ್ಲಿಗೆ ಬಂದಿತು. ರಾಷ್ಟ್ರೀಯ ಉದ್ಯಾನದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಮೀನುಗಾರಿಕೆ ನಿಷಿದ್ಧ. ಅರಣ್ಯ ಸಿಬ್ಬಂದಿ ಜನರಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟರು. ಇದನ್ನು ಲೆಕ್ಕಿಸದೆ ಮೀನು ಹಿಡಿಯಲು ಮುಂದಾದಾಗ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡರು. ಆ ವೇಳೆ ಬಂಡೀಪುರದಲ್ಲಿ ಬಿದಿರು ಹೂಬಿಟ್ಟು ಒಣಗಿಹೋಗಿತ್ತು. ಮಾರನೆಯ ದಿನವೇ ಕಾಡಿಗೆ ಬೆಂಕಿ ಬಿದ್ದಿತ್ತು. ಮೂರು ದಿನಗಳವರೆಗೆ ಕಾಡು ಹೊತ್ತಿ ಉರಿಯಿತು. ಇಂದಿಗೂ ಬೆಂಕಿಹಚ್ಚಿದ ಕಿಡಿಗೇಡಿಗಳು ಪತ್ತೆಯಾಗಿಲ್ಲ. 
 
ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವವರನ್ನು ಬಂಧಿಸುವುದು ಸಹಜ. ಮರಗಳ ಕಳ್ಳ ಸಾಗಾಣಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ.
 
 
‘ಬೇಸಿಗೆ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸೇಡು ತೀರಿಸಿಕೊಳ್ಳಲು ಅಕ್ರಮ ಚಟುವಟಿಕೆಯಲ್ಲಿ ನಿರತರಾದವರು ಹವಣಿಸುತ್ತಾರೆ. ಅವರಿಗೆ ವನ ಸಂಪತ್ತು ನಾಶವಾಗುತ್ತದೆಂಬ ಅರಿವು ಅತ್ಯಲ್ಪ’ ಎನ್ನುತ್ತಾರೆ ಅಧಿಕಾರಿಗಳು.
 
ಕಾಡಂಚಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಣಿಕೆ ಮಾಡುವ ದಂಧೆಯೂ ಬೇರೂರಿದೆ. ಅರಣ್ಯ ಸಿಬ್ಬಂದಿ ಕಾವಲು ಕಾಯುವುದರಿಂದ ಹೊರ ಸಾಗಿಸಲು ಕಷ್ಟವಾಗುತ್ತದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ದೂರದಲ್ಲಿದ್ದರೆ ಮರದ ತುಂಡುಗಳನ್ನು ಹೊರಸಾಗಿಸುವುದು ಸುಲಭ. ಹಾಗಾಗಿ, ದುರ್ಗಮ ಸ್ಥಳದಲ್ಲಿ ಕಾಡಿಗೆ ಬೆಂಕಿ ಹಚ್ಚುತ್ತಾರೆ. ಅಧಿಕಾರಿಗಳು, ಸಿಬ್ಬಂದಿಯ ಚಿತ್ತ ಬೆಂಕಿ ನಂದಿಸುವತ್ತ ಹರಿದಿರುತ್ತದೆ. ಈ ವೇಳೆ ಮರಗಳ್ಳರು ತಮ್ಮ ಕಾರ್ಯ ಸಾಧಿಸುತ್ತಾರೆ.
ಅರಣ್ಯದೊಳಗಿರುವ ಗಿರಿಜನ ಮತ್ತು ಕಾಡಂಚಿನಲ್ಲಿರುವ ಜನರಿಗೆ ಕಾಡು ಆದಾಯದ ಮೂಲ. ಋತುಮಾನಕ್ಕೆ ಅನುಗುಣವಾಗಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಆದಾಯ ಗಳಿಸುತ್ತಾರೆ. ವನ್ಯಜೀವಿ ಸಂರಕ್ಷಣೆಯ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ಕಿರುಉತ್ಪನ್ನ ಸಂಗ್ರಹಕ್ಕೆ ಅನುಮತಿ ಸಿಗುತ್ತಿಲ್ಲ. ಇದರಿಂದ ಕಾಡು ಅವಲಂಬಿತರ ತುತ್ತಿನಚೀಲಕ್ಕೆ ಪೆಟ್ಟುಬಿದ್ದಿದೆ.
 
ಗಿರಿಜನರಿಗೆ ಕಾಡಿನಲ್ಲಿ ಮಾಡುವ ಕೆಲಸ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಇನ್ನೊಂದೆಡೆ ಅರಣ್ಯದ ಅಭಿವೃದ್ಧಿಗೆ ಬರುವ ಕೋಟ್ಯಂತರ ರೂಪಾಯಿ ಅನುದಾನದಡಿ ಗಿರಿಜನರು, ಕಾಡಂಚಿನ ಜನರಿಗೆ ವರ್ಷದಲ್ಲಿ ತಾತ್ಕಾಲಿಕ ಉದ್ಯೋಗ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ಇದು ಅಧಿಕಾರಿಗಳು ಮತ್ತು ಗಿರಿಜನರ ನಡುವೆ ವೈಮನಸ್ಯಕ್ಕೆ ನಾಂದಿ ಹಾಡಿದೆ.
 
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗಿರಿಜನರಿಗೆ ಅರಣ್ಯಗಳಲ್ಲಿ ಲಂಟಾನ ತೆರವುಗೊಳಿಸುವಂತಹ ಉದ್ಯೋಗ ನೀಡಲು ಅವಕಾಶವಿದೆ. ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತದೆ. ಇದರಿಂದ ಪಂಚಾಯಿತಿಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ‘ಲಾಭ’ ಇಲ್ಲ. ಹೀಗಾಗಿ ಉದ್ಯೋಗ ನೀಡುವ ಪ್ರಯತ್ನಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ ಎಂಬುದು ಗಿರಿಜನರ ಸಾಮಾನ್ಯ ಆರೋಪ.
ಗಿರಿಜನರು ಕಾಡಿನಲ್ಲಿ ಉದ್ಯೋಗ ಸಿಗದೆ ವಂಚಿತರಾಗುವುದು ಸಹಜ. ಕಾಡುಗಳ್ಳರು, ಬೇಟೆಗಾರರು, ವನ್ಯಜೀವಿ ವ್ಯಾಪಾರಿಗಳು ಅರಣ್ಯದಲ್ಲಿ ನಡೆಸುವ ಅಕ್ರಮ ಚಟುವಟಿಕೆಗಳಿಗೆ ಇವರನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಸೆರೆಸಿಕ್ಕಾಗ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಿನ ದ್ವೇಷಕ್ಕಾಗಿ ಕಾಡಿಗೆ ಬೆಂಕಿ ಹಚ್ಚುತ್ತಾರೆ.
 
ಬಂಡೀಪುರವು ಒಣ ಉದುರೆಲೆ ಅರಣ್ಯ ಪ್ರದೇಶ. ಬೇಸಿಗೆಯಲ್ಲಿ ಎಲೆಗಳನ್ನೆಲ್ಲ ಉದುರಿಸಿ ಮರಗಳು ಬೋಳಾಗುತ್ತವೆ. ಈ ಉದ್ಯಾನದ ಪೂರ್ವ ಭಾಗವು ಕುರುಚಲು ಕಾಡಾಗಿದೆ. ಉಷ್ಣವಲಯ ಅರಣ್ಯದ ನೆಲೆ ತರಗೆಲೆಗಳ ಹಾಸಿನಿಂದ ಮುಚ್ಚಿಕೊಂಡಿರುತ್ತದೆ. ಉದುರೆಲೆ ಕಾಡುಗಳಲ್ಲಿ ಕಾಳ್ಗಿಚ್ಚಿನ ಪ್ರಖರತೆಯನ್ನು ಊಹಿಸುವುದು ಅಸಾಧ್ಯ. ಹಾಗಾಗಿ, ಬಂಡೀಪುರದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೂ ನಿಯಂತ್ರಿಸುವುದು ತ್ರಾಸದಾಯಕ.
 
ಇಲ್ಲಿ ಕೆಳಹಂತದ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇರುವ ಸಿಬ್ಬಂದಿಯ ಸೇವೆ ಉದ್ಯಾನದ ಸಂರಕ್ಷಣೆಗೆ ಸಾಕಾಗುವುದಿಲ್ಲ. ಹುದ್ದೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕಿದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಸ್ತು ತಿರುಗುವುದು ಸವಾಲಿನ ಕೆಲಸ. ಅರಣ್ಯ ವೀಕ್ಷಕರೇ ಗಸ್ತು ತಿರುಗಬೇಕು. ಜತೆಗೆ, ಬೇಟೆ ತಡೆ ಶಿಬಿರಗಳಲ್ಲಿ ತಿಂಗಳುಗಟ್ಟಲೆ ವಾಸ್ತವ್ಯ ಹೂಡಬೇಕು. ನಾಲ್ವರಿಂದ ಐವರು ವೀಕ್ಷಕರನ್ನು ಒಳಗೊಂಡ ತಂಡಕ್ಕೆ ಸ್ವಯಂರಕ್ಷಣೆಗಾಗಿ ಒಂದು ಗನ್‌ ನೀಡಲಾಗಿರುತ್ತದೆ. 
 
ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡರೂ ಈ ಸಿಬ್ಬಂದಿಯೇ ತೆರಳಬೇಕಿದೆ. ಇವರಿಗೆ ಯಾವುದೇ ಜೀವರಕ್ಷಕ ಸಾಧನ ನೀಡಿಲ್ಲ. ವೈಜ್ಞಾನಿಕ ತರಬೇತಿ ದೂರದ ಮಾತು. ಬೆಂಕಿ ನಂದಿಸಲು ಮರದ ಹಸಿರು ಸೊಪ್ಪು ಆಧಾರ.
 
ಬಂಡೀಪುರದಲ್ಲಿ ಖಾಸಗಿ ಕಂಪೆನಿಯೊಂದು ನೀಡಿರುವ ‘ಡ್ರೋನ್‌’ ಇದೆ. ಕಾಳ್ಗಿಚ್ಚು ತಡೆಯುವ ಭಾಗವಾಗಿ ಇದರ ಬಳಕೆಯಾಗುತ್ತಿಲ್ಲ. ಹುಲಿ ಸಂರಕ್ಷಣಾ ನಿಧಿಯಿಂದ ‘ಡ್ರೋನ್‌’ ಖರೀದಿಸಿ ಅರಣ್ಯ ಸಂರಕ್ಷಣೆಗೆ ಬಳಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿಲ್ಲ. 
 
ಕಾಳ್ಗಿಚ್ಚಿನಿಂದ ಎಷ್ಟು ಅರಣ್ಯ ಪ್ರದೇಶ ಸುಟ್ಟುಹೋಗಿದೆ ಎಂಬ ಬಗ್ಗೆ ಬೆಂಗಳೂರಿನ ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ಘಟಕದಿಂದ ಉಪಗ್ರಹದ ನೆರವಿನಡಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೊಬೈಲ್‌ ಸಂದೇಶ ರವಾನೆಯಾಗುತ್ತದೆ. ಆದರೆ, ಬೆಂಕಿ ಕಾಣಿಸಿಕೊಂಡ ತಕ್ಷಣ ಆ ಸ್ಥಳಗಳ ಬಗ್ಗೆ ಮೊಬೈಲ್‌ ಸಂದೇಶ ಮುಟ್ಟಿಸಿ ಎಚ್ಚರಿಸುವ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ.
 
**
ಗಾಂಜಾ ಬೆಳೆಯಲು ಅನುಕೂಲ
ಅರಣ್ಯದಲ್ಲಿ ದುರ್ಗಮ ಸ್ಥಳಗಳಿರುತ್ತವೆ. ಅಲ್ಲಿಗೆ ಇಲಾಖೆಯ ಸಿಬ್ಬಂದಿ ಹೋಗುವುದೇ ಕಷ್ಟಕರ. ಕೆಲವೊಮ್ಮೆ ಇಂತಹ ದುರ್ಗಮ ಸ್ಥಳ, ಎತ್ತರದ ಬೆಟ್ಟದ ಮೇಲ್ಭಾಗದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಾಗ ಅಚ್ಚರಿಯಾಗುತ್ತದೆ. ಹರಸಾಹಸಪಟ್ಟು ಅಲ್ಲಿಗೆ ತೆರಳುವ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುತ್ತಾರೆ.
ದಶಕದಿಂದ ಇಂತಹ ಕಾಳ್ಗಿಚ್ಚು ಪ್ರಕರಣಗಳು ನಿಗೂಢವಾಗಿಯೇ ಉಳಿದಿದ್ದವು. ಆದರೆ ಇದರ ಹಿಂದೆ ಗಾಂಜಾ ಬೆಳೆಯುವ ದುರುದ್ದೇಶ ಅಡಗಿರುವ ಅಂಶ ಇತ್ತೀಚೆಗೆ ಬಯಲಾಗಿದೆ. 
 
ಕೆಲವು ಗಿರಿಜನರು ಮತ್ತು ಕಾಡಂಚಿನ ಜನರು ಗಾಂಜಾ ಸೇವನೆ ಚಟಕ್ಕೆ ಅಂಟಿಕೊಂಡಿರುತ್ತಾರೆ. ಅವರು ಗುಟ್ಟಾಗಿ ಕಾಡಿಗೆ ತೆರಳುತ್ತಾರೆ. ಸಮೃದ್ಧವಾಗಿರುವ ಪ್ರದೇಶದಲ್ಲಿ ಬೆಂಕಿ ಹಚ್ಚಿ ಬರುತ್ತಾರೆ. ಮಳೆಗಾಲದ ವೇಳೆಗೆ ಅಲ್ಲಿಗೆ ತೆರಳಿ ಬೂದಿಮಿಶ್ರಿತ ಮಣ್ಣಿನಲ್ಲಿ ಪಾತಿ ಮಾಡಿ ಗಾಂಜಾ ಗಿಡದ ಬೀಜಗಳನ್ನು ಬಿತ್ತುತ್ತಾರೆ. ಅವು ಹುಲುಸಾಗಿ ಬೆಳೆದಾಗ ಕತ್ತರಿಸಿಟ್ಟುಕೊಂಡು ಬಳಸುತ್ತಾರೆ. ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ಇಂತಹ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT