ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪುಗಳನ್ನು ‘ಸುಪ್ರೀಂ’ ಸರಿಪಡಿಸಿದ ಕತೆ

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಜಯಲಲಿತಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಎರಡು ದಶಕ ವ್ಯಾಪಿಸಿದ ವ್ಯಾಜ್ಯವೊಂದರ ಕಥನ. 1991ರಿಂದ 1996ರ ವರೆಗೆ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಸುಬ್ರಮಣಿಯನ್ ಸ್ವಾಮಿ ಅವರು ದೂರು ನೀಡುವುದರೊಂದಿಗೆ ಇದು ಆರಂಭವಾಯಿತು. ನಂತರ, ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶದೊಂದಿಗೆ ವಿಚಕ್ಷಣ ಮತ್ತು ಭ್ರಷ್ಟಾಚಾರ ವಿರೋಧಿ ಘಟಕದ ನಿರ್ದೇಶಕರಿಗೆ (ಡಿವಿಎಸಿ) ಪ್ರಕರಣದ ತನಿಖೆ ವರ್ಗಾವಣೆಗೊಂಡಿತು. 1996ರಲ್ಲಿ ಜಯಲಲಿತಾ ವಿರುದ್ಧ ಎಫ್‍ಐಆರ್ ದಾಖಲಾಯಿತು. 1997ರಲ್ಲಿ ಶಶಿಕಲಾ, ವಿ.ಎನ್. ಸುಧಾಕರನ್ ಮತ್ತು ಜೆ. ಇಳವರಸಿ ಅವರನ್ನು ಸಹಆರೋಪಿಗಳಾಗಿ ಸೇರಿಸಲಾಯಿತು. ಹಲವು ತಿರುವುಗಳ ರಸ್ತೆಯಲ್ಲಿ ಹಾದು ಹೋದ ವಿಚಾರಣೆ ಕೊನೆಗೆ ಕರ್ನಾಟಕಕ್ಕೆ ಸ್ಥಳಾಂತರಗೊಂಡಿತು ಮತ್ತು ವಿಚಾರಣಾ ನ್ಯಾಯಾಲಯವು ಆರೋಪಿಗಳು ತಪ್ಪಿತಸ್ಥರೆಂದು ಆದೇಶ ನೀಡಿತು. ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸಂಪೂರ್ಣ ಭಿನ್ನವಾದ ಲೆಕ್ಕಾಚಾರ ಮಾಡಿ ಜಯಲಲಿತಾ ಅವರು ಮಾಡಿಕೊಂಡಿರುವ ಆಸ್ತಿ, ಘೋಷಿತ ಆದಾಯಕ್ಕಿಂತ ಶೇ 8.12ರಷ್ಟು ಮಾತ್ರ ಹೆಚ್ಚಾಗಿದೆ. ಹಾಗಾಗಿ ಇದು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣ ಅಲ್ಲ ಎಂದು ಆರೋಪಿಗಳನ್ನು ಖುಲಾಸೆಗೊಳಿಸಿತು. ಪ್ರಕರಣ ದಾಖಲಾದ 20 ವರ್ಷದ ನಂತರ ಈಗ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಲು ಸುಪ್ರೀಂ ಕೋರ್ಟ್ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಅವುಗಳ ಪೈಕಿ, ಲೆಕ್ಕಾಚಾರದಲ್ಲಿ ಹೈಕೋರ್ಟ್ ಗಂಭೀರ ತಪ್ಪುಗಳನ್ನು ಮಾಡಿದೆ ಎಂಬ ಒಂದು ಅಂಶದತ್ತ ಮಾತ್ರ ಈ ಲೇಖನ ಗಮನ ಕೇಂದ್ರೀಕರಿಸಿದೆ. ಹಾಜರುಪಡಿಸಲಾದ ಸಾರಾಂಶ ಸ್ವರೂಪದ ಎಲ್ಲ ಸಾಕ್ಷ್ಯಗಳನ್ನು ಹೈಕೋರ್ಟ್ ಪರಿಶೀಲಿಸಿದ್ದರೂ ವಿಚಾರಣಾ ನ್ಯಾಯಾಲಯ ಪರಿಶೀಲಿಸಿ ವಿಶ್ಲೇಷಣೆ ನಡೆಸಿದ ಸಮಗ್ರ ಸಾಕ್ಷ್ಯಗಳನ್ನು ಪರಿಶೀಲನೆಗೆ ಒಳಪಡಿಸಿಲ್ಲ. ಆರೋಪಿಗಳ ಆದಾಯವನ್ನು ಹೈಕೋರ್ಟ್ ಲೆಕ್ಕ ಹಾಕಿದ ರೀತಿ ಲೋಪದಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉದಾಹರಣೆಗೆ, ಜಯಲಲಿತಾ ಅವರ ಮಾಲೀಕತ್ವದ ಆಸ್ತಿಗಳಿಂದ ಭಾರಿ ಪ್ರಮಾಣದ ಆದಾಯ ಬಂದಿದೆ ಎಂದು ಹೈಕೋರ್ಟ್ ಲೆಕ್ಕ ಹಾಕಿದೆ. ಆದರೆ ಇದನ್ನು ಸಾಕ್ಷ್ಯಗಳ ಆಧಾರದಲ್ಲಿ ನಿರ್ಧರಿಸಲಾಗಿಲ್ಲ. ಆದಾಯ ತೆರಿಗೆ ಪಾವತಿ ಲೆಕ್ಕಪತ್ರದ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಲಯಕ್ಕೆ ಆದಾಯ ತೆರಿಗೆ ಪಾವತಿ ಲೆಕ್ಕಪತ್ರವೇ ಅಂತಿಮ ಸಾಕ್ಷ್ಯ ಅಲ್ಲ. ಎರಡನೆಯದಾಗಿ, ಜಯಲಲಿತಾ ಅವರ ಆದಾಯ ಎಂದು ಹೈಕೋರ್ಟ್ ಪರಿಗಣಿಸಿದ ಅವರು ಪಡೆದ ಸಾಲದ ಮೊತ್ತದ ಲೆಕ್ಕಾಚಾರವೂ ಲೋಪದಿಂದ ಕೂಡಿದೆ. ಉಲ್ಲೇಖಿಸಲಾದ ಹಲವು ಸಾಲಗಳು ಆಗಲೇ ಚುಕ್ತಾ ಆಗಿದ್ದವು ಮತ್ತು ಹಾಗಾಗಿ ಅವುಗಳನ್ನು ಆದಾಯದ ಲೆಕ್ಕದಿಂದ ಹೊರಗೆ ಇಡಬೇಕಿತ್ತು. 1991 ರಿಂದ 96ರ ಅವಧಿಯಲ್ಲಿ ಕೆಲವು ದೊಡ್ಡ ಮೊತ್ತದ ಸಾಲಗಳು ಮಂಜೂರಾಗಿದ್ದರೂ ಅವುಗಳಲ್ಲಿ ಸ್ವಲ್ಪ ಭಾಗ ಮಾತ್ರ ಅವರು ಪಡೆದುಕೊಂಡಿದ್ದಾರೆ. ಹಾಗಿದ್ದರೂ ಮಂಜೂರಾದ ಸಂಪೂರ್ಣ ಮೊತ್ತವನ್ನು ಜಯಲಲಿತಾ ಅವರ ಆದಾಯ ಎಂದು ಹೈಕೋರ್ಟ್ ಪರಿಗಣಿಸಿದೆ. ಮಂಜೂರಾದ ಕೆಲವು ಸಾಲಗಳಲ್ಲಿ ಬಿಡಿಗಾಸನ್ನೂ ಜಯಲಲಿತಾ ಅವರಿಗೆ ನೀಡಲಾಗಿಲ್ಲ. ಆದರೆ ಈ ಮೊತ್ತವನ್ನು ಜಯಲಲಿತಾ ಅವರ ಆದಾಯ ಎಂದು ಪರಿಗಣಿಸಲಾಗಿದೆ. ಈ ಮೊತ್ತಗಳನ್ನು ಜಯಲಲಿತಾ ಅವರ ಆದಾಯ ಎಂದು ಪರಿಗಣಿಸಿದ ಹೈಕೋರ್ಟ್‌ನ ಕ್ರಮ ಸಂಪೂರ್ಣವಾಗಿ ಲೋಪದಿಂದ ಕೂಡಿದ್ದಾಗಿದೆ. ಇದು ಜಯಲಲಿತಾ ಅವರ ಆದಾಯವನ್ನು ಭಾರಿ ಪ್ರಮಾಣದಲ್ಲಿ ಹಿಗ್ಗಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇಂತಹ ತಪ್ಪು ಲೆಕ್ಕಾಚಾರಗಳಿಂದಾಗಿ ಅವರ ಆದಾಯ ಪ್ರಮಾಣ ಏರಿಕೆಯಾಗಿದೆ. ಅಂತೆಯೇ ಆಸ್ತಿಯ ಪ್ರಮಾಣ ಕಡಿಮೆ ಎಂಬ ನಿರ್ಧಾರಕ್ಕೆ ಬರುವುದಕ್ಕೂ ಲೋಪಗಳಿಂದ ಕೂಡಿದ ಲೆಕ್ಕಾಚಾರವೇ ಕಾರಣವಾಗಿದೆ. ಜಯಲಲಿತಾ ಅವರ ಆಸ್ತಿಯ ಮೌಲ್ಯ ₹66.44 ಕೋಟಿ ಎಂಬ ಪ್ರಾಸಿಕ್ಯೂಷನ್‌ ಮೌಲ್ಯಮಾಪನವನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಆದರೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಗುರುತಿಸುವ ಸಂದರ್ಭದಲ್ಲಿ ಕೆಲವು ಹೊಸ ಕಟ್ಟಡಗಳನ್ನು ಮಾತ್ರ ಪರಿಗಣಿಸಲಾಗಿದೆ. ಹಾಗಾಗಿ ಅವರ ಆಸ್ತಿಯ ಮೌಲ್ಯ ಕಡಿಮೆಯಾಗಿದೆ. ಇದನ್ನು ಹೈಕೋರ್ಟ್‌ನ ಲೋಪ ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಅದರ ಪರಿಣಾಮವಾಗಿ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಪ್ರಮಾಣ ನಿರ್ಧರಿಸುವಲ್ಲಿ ತಪ್ಪಾಗಿರುವುದು ಎದ್ದು ಕಾಣುತ್ತದೆ.

ಅಂತಿಮವಾಗಿ, ಆದಾಯಕ್ಕಿಂತ ಹೆಚ್ಚಾಗಿ ಅವರು ಗಳಿಸಿರುವ ಆಸ್ತಿಯ ಪ್ರಮಾಣ ಶೇ 8.12ರಷ್ಟು ಮಾತ್ರ ಎಂದು ಹೈಕೋರ್ಟ್‌ ನಿರ್ಧರಿಸಲು ಸಾಕ್ಷ್ಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡದ್ದು ಮತ್ತು ಲೆಕ್ಕಾಚಾರವನ್ನು ತಪ್ಪಾಗಿ ಮಾಡಿದ್ದು ಕಾರಣ. ವಿಚಾರಣಾ ನ್ಯಾಯಾಲಯವು ಲಭ್ಯವಿದ್ದ ಸಾಕ್ಷ್ಯಗಳನ್ನು ಸರಿಯಾಗಿ ಮತ್ತು ನ್ಯಾಯಸಮ್ಮತವಾಗಿ ವಿಶ್ಲೇಷಣೆ ನಡೆಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 13(1) (ಇ) ಅಡಿಯಲ್ಲಿ ಜಯಲಲಿತಾ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದು ಈ ಸಾಕ್ಷ್ಯಗಳ ಆಧಾರದಲ್ಲಿ ಸಾಬೀತಾಗಿದೆ. ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ ಎಂಬ ಕಾರಣಕ್ಕೆ ಆರೋಪಿಗಳನ್ನು ಖುಲಾಸೆಗೊಳಿಸಿರುವ ಹೈಕೋರ್ಟ್‌ನ ಕ್ರಮ ತಪ್ಪು. ಘೋಷಿತ ಆದಾಯಕ್ಕಿಂತ ಶೇ 10ರಷ್ಟು ಹೆಚ್ಚು ಆಸ್ತಿ ಹೊಂದುವುದಕ್ಕೆ ಸಾರ್ವಜನಿಕ ಸೇವಕರಿಗೆ ಅವಕಾಶ ಇದೆ ಎಂಬ ಯಾವುದೇ ನಿಯಮ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಾರ್ವಜನಿಕ ಸೇವಕರ ಭ್ರಷ್ಟಾಚಾರದ ವಿರುದ್ಧ ಇದೊಂದು ಮಹತ್ವದ ತೀರ್ಪು ಎಂದು ಈ ತೀರ್ಪಿಗೆ ವ್ಯಾಪಕ ಸ್ವಾಗತ ದೊರೆತಿದೆ. ಹಾಗಿದ್ದರೂ ತೀರ್ಪು ನೀಡಿದ ಸಮಯದ ಬಗ್ಗೆ ಗಂಭೀರ ಆತ್ಮಾವಲೋಕನದ ಅಗತ್ಯ ಇದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಮೇಲ್ಮನವಿಯನ್ನು 2016ರ ಫೆಬ್ರುವರಿ 23ರಿಂದ ಪ್ರತಿದಿನವೂ ವಿಚಾರಣೆ ನಡೆಸಲಾಗಿದ್ದು ಜೂನ್‌ 6ರಂದು ತೀರ್ಪು ಕಾಯ್ದಿರಿಸಲಾಯಿತು. ಹಾಗಾದರೆ ಎಂಟು ತಿಂಗಳ ನಂತರ 2017ರ ಫೆಬ್ರುವರಿ 14ರಂದು ಯಾಕೆ ತೀರ್ಪು ಪ್ರಕಟಿಸಲಾಯಿತು?  ಶಶಿಕಲಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಿದ್ದಾರೆ, ಹಾಗಾಗಿ ಬೇಗ ತೀರ್ಪು ನೀಡಬೇಕು ಎಂದು ವಕೀಲರು  ಸುಪ್ರೀಂ ಕೋರ್ಟನ್ನು ಕೋರಿದರು. ನಂತರವೇ ತೀರ್ಪು ಪ್ರಕಟಿಸಲಾಗಿದೆ. ಈ ಪ್ರಕರಣದ ವಿಚಿತ್ರ ವಾಸ್ತವಾಂಶಗಳು ಮತ್ತು ಕಳೆದ ಎಂಟು ತಿಂಗಳಲ್ಲಿ ನಡೆದ ಬೆಳವಣಿಗೆಗಳ ಬೆಳಕಿನಲ್ಲಿ ‘ವಿಳಂಬ ನ್ಯಾಯದಾನ ನ್ಯಾಯದ ನಿರಾಕರಣೆ’ ಎಂಬ ನಾಣ್ನುಡಿ ನಿಜವಾದಂತೆ ತೋರುತ್ತಿದೆ. ಇದಕ್ಕೆ ನಮ್ಮ ನ್ಯಾಯಾಲಯಗಳು ಉತ್ತರ ಕಂಡುಕೊಳ್ಳಲೇಬೇಕು.

ಲೇಖಕಿ ಸುಪ್ರೀಂ ಕೋರ್ಟ್‌ ವಕೀಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT