ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಪ್ರತಿಭಟನೆ ಮತ್ತು ಪ್ರೀತಿ

Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನಾಲ್ಕು ದಶಕಗಳ ಹಿಂದೆ ನಾನು ಪದವಿ ತರಗತಿಯಲ್ಲಿ ಓದುತ್ತಿದ್ದೆ. ಅಂತಿಮ ವರ್ಷದ ಪರೀಕ್ಷೆಯ ಸಮಯ. ಭೌತಶಾಸ್ತ್ರದ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದೆ. ಮನೆ ಚಿಕ್ಕದು. ಜನ ಜಾಸ್ತಿ. ಎಲ್ಲೋ ಒಂದೆಡೆ ಮೂಲೆಯಲ್ಲಿ ಕೂತು ಗಲಾಟೆ, ಗದ್ದಲಗಳ ನಡುವೆ ಓದಬೇಕಿತ್ತು.
 
ಅವತ್ತು ರಾತ್ರಿ ಹಜಾರದಲ್ಲಿ ನನ್ನ ಅಣ್ಣತಮ್ಮಂದಿರು ಹಾಗೂ ಅಕ್ಕ ಊಟಕ್ಕೆ ಕುಳಿತರು.  ಅಮ್ಮ ನನ್ನನ್ನೂ ಊಟಕ್ಕೆ ಕರೆದರು. ಓದುವುದರಲ್ಲಿ ತಲ್ಲೀನಳಾಗಿದ್ದ ನನಗೆ ಊಟಕ್ಕೆಂದು ಸಮಯ ಹಾಳಾಗುವುದು ಬೇಡವಾಗಿತ್ತು. ಐದು ನಿಮಿಷದಲ್ಲಿ ಊಟ ಮಾಡಿ ಬರಲು ನನಗೇನೂ ತೊಂದರೆ ಇರಲಿಲ್ಲ. ನಂತರದ ಗೋಮೆ ಕೆಲಸಕ್ಕೆ ಸಮಯ ವ್ಯರ್ಥವಾಗುತ್ತಲ್ಲ ಎನ್ನುವುದು ನನ್ನ ಸಂಕಟ. ಹಸಿವಿದ್ದರೂ ‘ಹಸಿವಿಲ್ಲ, ಊಟ ಬೇಡ’ ಎಂದುಬಿಟ್ಟೆ. 
 
ಅಕ್ಕ ಎಲ್ಲರ ತಟ್ಟೆಗಳನ್ನು ತೊಳೆದರೆ ನಾನು ನೆಲದಲ್ಲಿನ ಎಂಜಲು ಅಗುಳನ್ನು ಬಳಿದು ನೀರಿನಿಂದ ಸಾರಿಸಿ ನಂತರ ಬಟ್ಟೆಯಲ್ಲಿ ಒರೆಸಬೇಕಿತ್ತು. ಇದು ನಮ್ಮಿಬ್ಬರಲ್ಲಿ ಹಂಚಿಕೊಂಡ ಕೆಲಸ. ನಾನು ಊಟವನ್ನೇ ಮಾಡದಿದ್ದರೆ ಕೆಲಸವೂ ತಪ್ಪುತ್ತೆ, ಸಮಯವೂ ಉಳಿಯುತ್ತೆ ಎಂಬುದು ನನ್ನ ವಿಚಾರ. ಆದರೆ ಅಕ್ಕ ‘ಬಾರೆ ಊಟಕ್ಕೆ, ನಿನ್ನ ಕಳ್ಳಾಟ ನನಗೆ ಗೊತ್ತು. ನಿನ್ನ ಕೆಲಸವನ್ನೂ ನಾನೇ ಮಾಡ್ಬೇಕು ಅಂತಾನ’ ಎಂದು ಕೆಣಕಿದಳು. 
 
ಇದೆಲ್ಲವನ್ನು ಗಮನಿಸುತ್ತಿದ್ದ ಅಪ್ಪ ನಯವಾಗಿ ‘ಹೋಗಮ್ಮ, ಊಟ ಮಾಡಿ ಬಾ’ ಎಂದರು. ‘ಊಟ ಮಾಡ್ತೀನಪ್ಪ, ಆದರೆ ಗೋಮೆ ಇಡಲ್ಲ’ ಎಂದು ಐದು ನಿಮಿಷದಲ್ಲಿ ಊಟ ಮುಗಿಸಿಬಂದು ಓದಲು ಕುಳಿತೆ. 
 
ಅಕ್ಕ ತನ್ನ ಪಾಲಿನ ಕೆಲಸ ಮುಗಿಸಿ ನನಗೆ ಬೈಯುತ್ತಿದ್ದಳು. ಅಮ್ಮನ ಗೊಣಗು ಬೇರೆ. ‘ಅಪ್ಪ, ನೀನಾದರೂ ನನ್ನನ್ನು ಅರ್ಥ ಮಾಡಿಕೊಳ್ಳಪ್ಪ, ಇವರು ನನಗೆ ಓದಲು ಬಿಡ್ತಿಲ್ಲವಲ್ಲ’ ಎಂದು ಅಳತೊಡಗಿದೆ. ಥಟ್ಟನೆ ಎದ್ದ ಅಪ್ಪ ಲೋಟವೊಂದರಲ್ಲಿ ನೀರು ತಂದು ಕುಕ್ಕರಗಾಲಿನಲ್ಲಿ ಕೂತು ಊಟದ ಸ್ಥಳವನ್ನು ಚೊಕ್ಕಟ ಮಾಡತೊಡಗಿದರು. ಅಷ್ಟರಲ್ಲಿ ಅಮ್ಮ ‘ಬಿಡಿ, ನಾನು ಮಾಡ್ತೀನಿ’ ಎಂದು ಅಪ್ಪನಿಂದ ಲೋಟ ಕಿತ್ತುಕೊಳ್ಳಲು ಹೋದಾಗ ಅಪ್ಪ ಅಮ್ಮನನ್ನು ಕೋಪದಿಂದ ಬಲವಾಗಿ ತಳ್ಳಿಬಿಟ್ಟರು. ಅಕ್ಕ ವಾಗ್ದಾಳಿ ಮುಂದುವರಿಸಿದ್ದಳು. ನನ್ನ ಪರವಾಗಿ ಅಮ್ಮ–ಅಕ್ಕನನ್ನು ಪ್ರತಿಭಟಿಸಿದ ಅಪ್ಪನ ಪ್ರೀತಿ ಕಂಡು ನನಗೆ ಖುಷಿಯಾಯ್ತು.
 
ಅಪ್ಪನ ಹಿರಿಯ ಗಂಡುಮಕ್ಕಳು ಅಪ್ರಯೋಜಕರಾದಾಗ ನಾನು ಮುಂದೆ ಉದ್ಯೋಗಕ್ಕೆ ಸೇರಿ ನನ್ನ ಸಂಪಾದನೆಯಿಂದ ಸಂಸಾರಕ್ಕೆ ನೆರವಾದೆ. ಕಡೆಗಾಲದಲ್ಲಿ ನನ್ನತ್ತ ಬೀರುವ ಅವರ ನೋಟದಲ್ಲಿ ನಾನು ಕಂಡದ್ದು ಮೌನದ ಕೃತಜ್ಞತೆಯನ್ನು.  
–ಕೆ.ವಿ. ಉಭಯಭಾರತಿ  ಬೆಂಗಳೂರು
 
ಉಪ್ಪಿನಕಾಯಿ ಕಳ್ಳ ಮತ್ತು ಪಾಪಪ್ರಜ್ಞೆ!
ಅವನು ಸಮೀಪ ಸಂಬಂಧಿ ಹುಡುಗ. ಎಂದಾದರೊಮ್ಮೆ ಬಂದರೆ ಒಂದೆರಡು ದಿನ ನಿಂತು ಹೊರಟುಹೋಗುತ್ತಿದ್ದ. ಅವನ ಮನೆಯಲ್ಲಿ ಕಾಡುವ ಬಡತನ ಇತ್ತು. ಹೀಗಾಗಿ ಅವನಿಗೆ ಊಟ ಎಂದರೆ ತುಂಬ ಆಸೆ. ಇಬ್ಬರ ಪಾಲಿನ ಆಹಾರವನ್ನು ಅವನೊಬ್ಬನೇ ತಿನ್ನುತ್ತಿದ್ದ. ನನಗೆ ಅವನ ಮೇಲೆ ಪ್ರೀತಿಯಿರಲಿಲ್ಲ. ಬಡವರ ಹುಡುಗ. ಅವಕಾಶ ಸಿಕ್ಕಿದರೆ ಕಳವು ಮಾಡದೆ ಇರಲಾರ ಎಂಬ ಗುಮಾನಿ.

ಒಂದು ಸಲ ಹುಡುಗ ಬಂದಿದ್ದ. ನಾನು ಹೊರಗಿನಿಂದ ಬರುವಾಗ ಪಾಲಿಥಿನ್ ಹಾಳೆಯಲ್ಲಿ ಯಾವುದೋ ವಸ್ತುವನ್ನು ಸುತ್ತಿ ಚೀಲದೊಳಗಿಡುವ ಪ್ರಯತ್ನದಲ್ಲಿದ್ದ. ನನ್ನನ್ನು ನೋಡಿದ ಕೂಡಲೇ ಅದನ್ನು ಹುದುಗಿಸಿಡುವ ಪ್ರಯತ್ನ ಮಾಡಿದ. ನನಗೆ ಅನುಮಾನ ಬಲವಾಯಿತು. ಅವನು ಆಚೆ ಕಡೆ ಇರುವಾಗ ಚೀಲಕ್ಕೆ ಕೈ ಹಾಕಿ ಆ ಪುಟ್ಟ ಗಂಟನ್ನು ತೆಗೆದು ಬೀರುವಿನ ಒಳಗಿರಿಸಿದೆ.
 
ಅದನ್ನು ಬಿಡಿಸಿ ನೋಡಿ ಅವನ ಚೋರತನವನ್ನು ಬಯಲಿಗೆ ಬಿಚ್ಚಿಡಬೇಕೆಂದು ನೆನೆಸಿದ್ದೆ. ಆದರೆ ಏನೋ ಕಾರಣದಿಂದ ಹೊರಗೆ ಹೋಗಬೇಕಾಯಿತು. ಮನೆಗೆ ಬರುವಾಗ ಹುಡುಗ ಹೊರಟು ಹೋಗಿದ್ದ. ನಾನು ಗಂಟಿನ ವಿಷಯ ಮರೆತುಬಿಟ್ಟೆ. ಕೆಲವು ದಿನ ಕಳೆಯಿತು. ‘ಆ ಹುಡುಗನ ತಾಯಿ ತೀರಿಕೊಂಡಳಂತೆ. ಉಬ್ಬಸ ಜೋರಾಗಿ ಹಾಸಿಗೆ ಹಿಡಿದಿದ್ದಾಳೆ ಅನ್ತಿದ್ದನಲ್ಲ. ಪಾಪ!’ ಎಂದು ಅವನು ಬರೆದ ಪತ್ರ ತಂದು ತೋರಿಸಿದಳು ಹೆಂಡತಿ.

‘ಪಾಪ ಅನ್ತೀಯಾ? ಕಳ್ಳ ಅವನು’ ಗುರುಗುಟ್ಟಿದೆ.
‘ಕಳ್ಳನೆ? ಬಡವ ನಿಜ. ಹಾಗಂತ ಕಳ್ಳ ಅಂತ ಯಾಕೆ ಆರೋಪ ಮಾಡ್ತೀರಾ?” ಕೇಳಿದಳು ಹೆಂಡತಿ.
‘ಅವನು ಕದ್ದು ಅಡಗಿಸಿಡುತ್ತಿದ್ದ ವಸ್ತುವನ್ನು ಅವನಿಗೆ ತಿಳಿಯದಂತೆ ತೆಗೆದಿಟ್ಟಿದ್ದೇನೆ. ಅದರಲ್ಲಿ ಏನಿದೆ ಅಂತ ನೋಡುತ್ತೇನೆ ಬಿಡು’ ಎಂದು ಹೇಳಿ, ಅಂದು ತೆಗೆದಿರಿಸಿದ್ದ ಗಂಟನ್ನು ಹುಡುಕಿ ತಂದೆ. ಪಾಲಿಥಿನ್ ಹಾಳೆಯನ್ನು ಬಿಡಿಸಿದೆ. ಅದರೊಳಗೆ ಇನ್ನೊಂದು ಹಾಳೆ. ಅದನ್ನೂ ಬಿಡಿಸಿದೆ. ಕಡೆಗೂ ಅವನನ್ನು ಕಟಕಟೆಯಲ್ಲಿ ನಿಲ್ಲಿಸಲು ಕಾತರವಾಗಿದ್ದ ಕಣ್ಣುಗಳಿಗೆ ಕಾಣಿಸಿದ್ದು ಎರಡು ಮಾವಿನ ಮಿಡಿಯ ಉಪ್ಪಿನಕಾಯಿ ಮಾತ್ರ. ಉಪ್ಪಿನಕಾಯಿಯೆ? ಇದು ನಮ್ಮ ಮನೆಯದ್ದಲ್ಲ. ಯಾಕೆ ತಂದ? ಹೀಗೆ ಯಾಕೆ ಜೋಪಾನವಾಗಿ ಇಟ್ಟ?

‘ಅಯ್ಯೋ ದೇವರೇ’ ಎಂದಳು ಹೆಂಡತಿ. ‘ಅವನ ಅಕ್ಕನ ಮನೆಗೆ ಹೋಗಿ ಇಲ್ಲಿಗೆ ಬಂದಿದ್ದನಲ್ಲ. ಅಲ್ಲಿ ಉಪ್ಪಿನಕಾಯಿ ಕೇಳಲು ದಾಕ್ಷಿಣ್ಯವಾಗಿ ಎಲೆಗೆ ಬಡಿಸಿದ್ದ ಎರಡು ಮಿಡಿ ಉಪ್ಪಿನಕಾಯಿಯನ್ನೇ ಗೊತ್ತಾಗದಂತೆ ಎತ್ತಿ ಗಂಟು ಕಟ್ಟಿಕೊಂಡನಂತೆ. ಅಮ್ಮನಿಗೆ ಉಪ್ಪಿನಕಾಯಿ ಅಂದರೆ ಪ್ರೀತಿ. ಎದ್ದು ಅಡಿಗೆ ಮಾಡಲು ಅವಳಿಂದಾಗುವುದಿಲ್ಲ. ಮನೆಯಲ್ಲಿ ಮಾಡೋಣವೆಂದರೆ ಮೆಣಸು, ಸಾಸಿವೆ ಇಲ್ಲ. ಹೀಗಾಗಿ ಅಮ್ಮನಿಗೆ ಕೊಡಲು ಉಪ್ಪಿನಕಾಯಿ ತಂದಿದ್ದೇನೆ. ಅಮ್ಮ ಖುಷಿಯಿಂದ ಊಟ ಮಾಡಬಹುದು ಅಂತ ನನ್ನಲ್ಲಿ ಹೇಳಿದ್ದ. ಈ ಉಪ್ಪಿನಕಾಯಿಯನ್ನು ನೀವು ಎತ್ತಿಟ್ಟಿರಿ. ಕಡೆಗೂ ಇದನ್ನು ತಿನ್ನದೆ ಅವನ ಅಮ್ಮ ಲೋಕವನ್ನೇ ಬಿಟ್ಟುಹೋದಳು’ – ಇಷ್ಟು ಹೇಳುವಾಗ ಅವಳ ಗಂಟಲು ಉಬ್ಬಿ ಬಂದಿತ್ತು.

ನನಗೆ ಒಗೆದ ಬಟ್ಟೆಯನ್ನು ಹಿಂಡುವಂತೆ ಕರುಳನ್ನು ಹಿಂಡುವ ಅನುಭವವಾಯಿತು. ಬಡವ ಎಂಬ ಒಂದೇ ಕಾರಣಕ್ಕೆ ಸಂದೇಹಪಟ್ಟು ಕಡೆಗೂ ಅವನ ತಾಯಿಗೆ ಸೇರಬೇಕಾದ ವಸ್ತುವನ್ನು ಅಪಹರಿಸಿದ ನಾನೇ ಕಳ್ಳನಲ್ಲವೆ? ಕೇಳಿತು ಮನಸ್ಸು. ಈಗ ಅದೇ ಹುಡುಗ ಕಲಿತು ಒಳ್ಳೆಯ ನೌಕರಿಯಲ್ಲಿದ್ದಾನೆ. ಎಂದಾದರೊಮ್ಮೆ ನಮ್ಮಲ್ಲಿಗೆ ಬರುತ್ತಾನೆ. ಅವನ ಮುಖದಲ್ಲಿ ನಮ್ಮ ಮೇಲೆ ನಿಷ್ಕಲ್ಮಷ ಪ್ರೀತಿಯಿದೆ. ಆದರೆ ಅವನಿಗೆ ನಾನು ಎಸಗಿದ ದ್ರೋಹದ ನೆನಪು ಆಗ ಕಾಡುತ್ತದೆ, ಕುಬ್ಜನಾಗಿ ಬಿಡುತ್ತೇನೆ.
–ಪ. ರಾಮಕೃಷ್ಣ ಶಾಸ್ತ್ರಿ,  ತೆಂಕಕಾರಂದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT