ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಚಿತ ಭಯಗಳು

ಮೂಲ: ಫರ್ನಾಂಡೊ ಸೊರಾಂಟಿನೊ
Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನಾನು ಅಷ್ಟಾಗಿ ಜನ ಸೇರದವನು, ಹಾಗಾಗಿ ಎಷ್ಟೋ ಬಾರಿ ನನ್ನ ಗೆಳೆಯರನ್ನೇ ಮರೆತುಬಿಡುತ್ತೇನೆ. ಎರಡು ವರ್ಷಗಳ ತರುವಾಯ 1979ರ ಜನವರಿ ತಿಂಗಳ ಯಾವುದೋ ಒಂದು ತಾರೀಖು – ಬೇಗೆಯ ದಿನಗಳವು – ನನ್ನ ಗೆಳೆಯನೊಬ್ಬನನ್ನು ಭೇಟಿ ಮಾಡಲು ಅವನ ಮನೆಗೆ ಹೋದೆ. ಅವನು ಒಂದು ವಿಚಿತ್ರ ಭಯದಿಂದ ನರಳುತ್ತಿದ್ದ. ಆ ಭಯವನ್ನು ನಿಮಗೆ ಹೇಳಿದರೆ ನೀವು ನಗುವಿರಿ, ನಂಬಲಾರರಿ, ಖಂಡಿತ! ಅವನ ಹೆಸರು... ಅದು ಇಲ್ಲಿ ಅಮುಖ್ಯ, ಆದರೂ ಹೀಗೆ –ಸುಮ್ನೆ ಹೀಗೆ – ಇಟ್ಕೊಳಿ, ಎನ್ರಿಕ್ ವಿಯಾನಿ.
 
1977ರ ಮಾರ್ಚ್ ತಿಂಗಳ ಒಂದು ನಿರ್ದಿಷ್ಟ ಶನಿವಾರ ಅವನ ಬದುಕಿನ ಗತಿಯೇ ಬದಲಾಯ್ತು. ಅದು ಏನು ಅಂತ ಅವನು ಹೇಳಿದ್ದು ಹೀಗೆ: ಬೆಳಿಗ್ಗೆ ತಿಂಡಿ ಮಾಡಿ ಕೆಲಸಕ್ಕೆ ಹೋಗಲು ಅಣಿಯಾಗುತ್ತಿದ್ದ. ತನ್ನ ಮನೆಯ ಹಜಾರದಲಿ – ಬಾಲ್ಕನಿ ಬಾಗಿಲಿಗೆ ನೇರ ಎದುರು – ನಿಂತು ಶೂ ಹಾಕಿಕೊಳ್ಳುತ್ತಿರುವಾಗ ತನ್ನ ಬಲಗಾಲಿನ ಶೂನಲ್ಲೊಂದು ಭಾರೀ ಗಾತ್ರದ – ಅವನು ಹೇಳಿದ್ದು ಹಾಗೆಯೇ – ಜೇಡರಹುಳುವೊಂದ ನೋಡಿ ಬೆಚ್ಚಿಬಿದ್ದಿದ್ದಾನೆ. ಇಂತಹ ಬೃಹತ್ ಜೇಡವನ್ನು ತನ್ನ ಜೀವಿತದಲ್ಲೇ ಕಂಡಿಲ್ಲ ಎಂದು ಅವನು ಅಂದುಕೊಳ್ಳುತ್ತಿರುವಾಗಲೇ ಆ ಜಂತು ಅವನ ಶೂವಿನಿಂದ ಎದ್ದು ಮೆಲ್ಲಗೆ ಅವನ ಪ್ಯಾಂಟಿನೊಳಗೆ ಹತ್ತುತ್ತಾ ಕಾಲಿಗೂ ಪ್ಯಾಂಟಿಗೂ ನಡುವೆ ಸಂಚರಿಸತೊಡಗಿದೆ.
 
ಎನ್ರಿಕ್ ವಿಚಲಿತಗೊಂಡು ಮರಗಟ್ಟಿ ಕಲ್ಲಾಗಿದ್ದಾನೆ (ಅವನು ಹೇಳಿದ್ದು ಹಾಗೆಯೇ). ಈ ತೆರನಾದ ಅಸಂಭವ ಅವನ ಬದುಕಿನಲ್ಲಿ ಘಟಿಸಿದ್ದೇ ಇಲ್ಲ. ತಕ್ಷಣ ಅವನಿಗೆ ಎಂದೋ ಎಲ್ಲೋ ಓದಿದ್ದ ಎರಡು ವಿಚಾರಗಳು ನೆನಪಾದವು. ಅವುಗಳ ವಿಚಾರ ಎನ್ನುವುದಕ್ಕಿಂತ ನಿಯಮಗಳು ಎನ್ನಬಹುದೇನೊ. ಅವು ಹೀಗಿದ್ದವು:
1. ಎಲ್ಲಾ ಜೇಡಗಳೂ – ಸಣ್ಣ ಪುಟಾಣಿ ಜೇಡಗಳೂ – ವಿಷಪೂರಿತವಾಗಿರುತ್ತವೆ.
 
2. ಅವುಗಳ ಮೇಲೆ ಆಕ್ರಮಣ ಎಸಗಿದಾಗಲೊ ಅಥವ ಅವುಗಳ ಹರಿದಾಟಕ್ಕೆ ಅಡ್ಡಿಪಡಿಸಿದರೊ ಮಾತ್ರ ಅವು ವಿಷ ಕಕ್ಕುತ್ತವೆ, ಕಚ್ಚುತ್ತವೆ. ಇಷ್ಟು ಮಾತ್ರವಲ್ಲದೆ ಮತ್ತೊಂದು ಯೋಚನೆ ಮುತ್ತಿಕೊಂಡು ಅವನನ್ನು ಥರಥರ ನಡುಗಿಸಿತು. ಇಂತಹ ಗಜಗಾತ್ರದ ಜೇಡದೊಳಗೆ ಖಂಡಿತ ವಿಷದ ಖಜಾನೆಯೇ ಇರುತ್ತದೆ, ಮಹಾನ್ ಅಪಾಯದ ವಿಷ, ಎಂದುಕೊಳ್ಳುತ್ತಾ ವಿಚಲಿತಗೊಂಡ. ಮಹಾ ದುರಂತವೊಂದರ ಆರಂಭದಲ್ಲಿದ್ದೇನೆ ಎಂದುಕೊಂಡ ಅವನು ಭಯದ ತುತ್ತ ತುದಿಗೇರಿ ವಿಹ್ವಲಗೊಂಡ. ಇದರಿಂದ ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲ, ಆದರೆ ಸಂಭವಿಸಲಿರುವ ದುರಂತವನ್ನು ಮುಂದಕ್ಕೆ ಹಾಕಬಹುದು... ಹೇಗೆ?... ಹೀಗೆ... ಕಿಂಚಿತ್ತೂ ಅಲುಗಾಡದೆ ಸ್ತಬ್ಧವಾಗಿ ಶಿಲೆಯಾಗುವುದು. ಚೂರು ಅಲುಗಾಡಿದರೂ ಆ ಜೇಡ ತನ್ನ ಕಚ್ಚಿ ಅದರೊಳಗಿರುವ ರಕ್ಕಸ ವಿಷವನ್ನು ತನ್ನ ದೇಹಕ್ಕೆ ರವಾನಿಸಿಬಿಡುತ್ತದೆ. 
 
ಈ ಯೋಚನೆಯಿಂದ ಚೂರು ಸಮಾಧಾನಗೊಂಡಿದ್ದ ಅವನು ತನ್ನ ಕಾಲ ಮೇಲೆ ಜೇಡ ಆಗಾಗ ಸರಿದಾಡುವುದನ್ನು ಅರಿಯುತ್ತಿದ್ದ. ಬೇಡದೆ ಬಂದ ಈ ಅತಿಥಿ ತನ್ನ ಓಡಾಟವನ್ನು ಈಗಾಗಲೇ ಶುರುಮಾಡಿತ್ತು. ಆ ಭಾರೀ ಜೇಡದ ಎಂಟು ಕಾಲುಗಳ ಪ್ರತಿ ಹೆಜ್ಜೆಗಳೂ ಎನ್ರಿಕ್‌ನಿಗೆ ಗೊತ್ತಾಗುತ್ತಿತ್ತು. ರೋಮಗಳೇ ತುಂಬಿದ್ದ ಅವನ ಕಾಲುಗಳಲ್ಲಿ ಅದರ ಪಸೆ ಅಲ್ಲಲ್ಲಿ ಅಂಟಿಕೊಂಡಿರುವುದನ್ನೂ ತಿಳಿಯುತ್ತಿದ್ದ. ಅವನ ದೇಹವನ್ನು ಬಿಟ್ಟು ಅದು ಇಳಿಯುವ ಲಕ್ಷಣಗಳೇ ಕಾಣಲಿಲ್ಲ. ಮೊಳಕಾಲು ಚಿಪ್ಪಿನ ಕೆಳಗಿರೊ ಕಿರು ಗುಂಡಿಯಲ್ಲಿ ಕೂತಿದ್ದ ಅದು ತನ್ನ ಎದೆ ಮತ್ತು ಉದರವನ್ನು ಆಗಾಗ ಒತ್ತುತ್ತ ಎನ್ರಿಕ್‌ನಿಗೆ ಬೆಚ್ಚನೆಯ ಭಾವ ಮೂಡಿಸುತ್ತಿತ್ತು.
 
2. ಇದುವೇ ನಮಗೆ ಸಿಕ್ಕ ಪ್ರಾಥಮಿಕ ವರದಿ, ಈ ಕತೆಯ ಕೇಂದ್ರ ಬಿಂದು. ಇದರಲ್ಲಿ ಕೆಲವೊಮ್ಮೆ ಬದಲಾವಣೆಗಳಾದರೂ ಒಂದು ವಿಷಯದಲ್ಲಿ ಮಾತ್ರ ಬದಲಾವಣೆಗಳೇ ಸಂಭವಿಸಲಿಲ್ಲ. ದೇಹವನ್ನು ಚೂರು ಅಲ್ಲಾಡಿಸಿದರೂ ಜೇಡ ಕುಟುಕಿ ಬಿಡುವ ನಡು ನೀಳ ಭಯ ಅವನನ್ನು ಕಲ್ಲಿನಂತೆ, ಶಿಲಾ ಮನುಷ್ಯನಂತೆ ನಿಲ್ಲಿಸಿದ್ದು ಮಾತ್ರ ಸ್ವಲ್ಪವೂ ಬದಲಾಗಿರಲೇ ಇಲ್ಲ. ಅವನ ಮನೆಯವರದು ಒಂದೇ ಗೋಳು! ಅವನ ಹೆಂಡತಿ, ಇಬ್ಬರು ಹೆಣ್ಣುಮಕ್ಕಳು ಯಾರು ಹೇಳಿದರೂ ಅವನು ಮಿಸುಗಾಡಲಿಲ್ಲ. ಏನು ಮಾಡುವುದೆಂದು ತಿಳಿಯದೆ ಅವರೆಲ್ಲರೂ ಕಂಗಲಾದರು.
 
ಕೊನೆಗೆ ಮನಸ್ಸು ಮಾಡಿ, ಗ್ರೆಸಿಲ – ಎನ್ರಿಕ್‌ನ ಹೆಂಡತಿ – ನನಗೆ ಕರೆ ಮಾಡುವ ಮರ್ಯಾದೆಯನ್ನು ತೋರಿ ಎನ್ರಿಕ್‌ನ ಆ ಸಮಸ್ಯೆಯನ್ನು ನಾನು ಬಗೆಹರಿಸಿಯೇನು ಎಂಬ ಆಸೆ, ಆತಂಕಗಳ ಮುಂದಿಟ್ಟಳು. ಆಗ ಮಧ್ಯಾಹ್ನ ಎರಡು ಗಂಟೆಯ ಸಮಯ. ವಾರಕ್ಕೊಮ್ಮೆ ಮಾತ್ರ ಸಿಗುವ ಹಗಲು ನಿದ್ರೆಯ ಸುಖವನ್ನು ಕಸಿದುಕೊಂಡದ್ದಕ್ಕೆ ಕೋಪ ಉಕ್ಕುಕ್ಕಿ ಬಂತು. ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳದ ಇಂತಹ ದಡ್ಡರನ್ನು ಮನದೊಳಗೇ ಶಪಿಸಿಕೊಂಡು ಎದ್ದೆ. ಅವರ ಮನೆಯ ಹೊಕ್ಕಿದ್ದೇ ನನ್ನ ಬೇಸರ, ಕೋಪಗಳೆಲ್ಲವೂ ಕೊಚ್ಚಿಹೋದವು. ಎನ್ರಿಕ್ ವಿಯಾನಿಯನ್ನು ನೋಡಿ ಬೆಚ್ಚಿಬಿದ್ದೆ; ಆತ ಅಲುಗಾಡದೆ ನಿಂತೇ ಇದ್ದ, ತುಂಬಾ ಬಿಗುವಾಗಿ ನಿಂತಿರಲಿಲ್ಲ, ಈ ಮಿಲಿಟರಿ ಯೋಧರು ವಿರಾಮದಲ್ಲಿ ನಿಂತಿರುತ್ತಾರಲ್ಲ, ಸ್ಟಾಂಡ್ ಅಟ್ ಈಸ್ ಎಂದಾಗ, ಹಾಗೇ ನಿಂತಿದ್ದ. ಗ್ರೆಸಿಯಾ ಮತ್ತು ಇಬ್ಬರು ಹುಡುಗಿಯರು ಅಳುತ್ತಿದ್ದರು.
 
ನನಗೂ ನೋವಾಯ್ತು. ಸುಧಾರಿಸಿಕೊಂಡು ಮೂವರನ್ನೂ ಸಮಾಧಾನಿಸಲು ಯತ್ನಿಸಿದೆ. ಎನ್ರಿಕ್‌ನತ್ತ ತಿರುಗಿ ‘ಆ ಜೇಡವನ್ನು ಓಡಿಸಲು ನನ್ನ ಬಳಿ ಒಂದು ಒಳ್ಳೆಯ ಪ್ಲಾನ್ ಇದೆ, ಒಪ್ಪಿಕೊಳ್ತೀಯ?’ ಅಂತ ಕೇಳಿದೆ. ಅವನು ಮೆಲ್ಲಗೆ, ಅತಿ ಮೆಲ್ಲಗೆ ಬಾಯಿ ತೆರೆದು – ಎಷ್ಟು ಮೆಲ್ಲಗೆಂದರೆ ತನ್ನ ಬಾಯಿಯ ಚಲನೆ ಕಾಲಿನವರೆಗೆ ತಲುಪೀತು ಎಂಬ ಅತಿಜಾಗೂರಕತೆಯಿಂದ ತುಟಿಗಳ ನಿಧಾನಕ್ಕೆ ಬಿಡಿಸಿ – ಕೇಳಿದ: ‘ಏನ್ ಪ್ಲಾನ್ ಅದು?’ – ಅವನ ಧ್ವನಿಯಲ್ಲಿ ಅಚ್ಚರಿಯಿತ್ತು.
 
ನಾನು ವಿವರಿಸಿದೆ: ಒಂದ್ ಬ್ಲೇಡ್ ತಗೊಂಡು ನಿನ್ನ ಪ್ಯಾಂಟನ್ನು ಮೇಲಿನಿಂದ ಕೆಳಕ್ಕೆ ಮೆಲ್ಲಗೆ ಕತ್ತರಿಸೋಣ, ಜೇಡಕ್ಕೆ ಚೂರೂ ತಾಕದಂತೆ... ನಂತರ, ಒಂದು ಪೇಪರ್ ತಗೊಂಡು ಅದನ್ನ ಕೆಳಗೆ ತಳ್ಳೋಣ, ತಳ್ಳಿದ ಮೇಲೆ ಅದನ್ನ ಸಾಯಿಸೋದೋ ಓಡಿಸೋದೋ ಆಮೇಲೆ ನೋಡ್ಕೊಳ್ಳೋಣ... ಹೇಗೆ? ಮಾಡೋಣ ತಾನೆ?, ಕೇಳಿದೆ.
 
ನಾನು ಮಾತು ಮುಗಿಸಿಯೇ ಇರಲಿಲ್ಲ, ಅವನು ಮ್‌ಹೂ ಮ್‌ಹೂ ಎಂದ. ಗಲಿಬಿಲಿಗೊಂಡಿದ್ದರೂ ದೇಹವನ್ನು ಅಲ್ಲಾಡಿಸದೆ ‘ಬೇಡವೇ ಬೇಡ’ ಎಂದ. ನನಗೆ ಕೋಪ ನೆತ್ತಿಗೇರಿತ್ತು, ಮೂರ್ಖನಂತೆ  ಆಡಬೇಡ ಎಂದು ಹೇಳಬೇಕೆನಿಸಿತು. ನಾ ಹೇಳಿದ್ದನ್ನು ಅರ್ಥೈಸಿಕೊಳ್ಳುವ ನಿಧಾನವನ್ನೂ ಅವನು ತೋರಲಿಲ್ಲ. ಅವನು ಹೇಳುತ್ತಿದ್ದ:
 
‘ಪ್ಯಾಂಟ್ ಮಿಸುಕಾಡಿದರೆ ಆ ಜೇಡ ಭಯ ಬಿದ್ದು ರಪ್ಪಂತ ಕಡಿಯುತ್ತಷ್ಟೆ! ಬೇಡ್ವೇ ಬೇಡ ನಿನ್ ಪ್ಲ್ಯಾನ್... ಎಷ್ಟು ಅಪಾಯ ಅಂತ ನಿಂಗೇನು ಗೊತ್ತು? ಅನುಭವಿಸೊ ನಂಗೊತ್ತು’ ಎಂದು ಒದರಿದ.
 
ಅರ್ಥವಿಲ್ಲದೆ ಒಣ ಹಟ ಮಾಡುವವರ ಕಂಡರೆ ನನಗೆ ಮೈಯೆಲ್ಲ ಹುರಿಯುತ್ತೆ. ನಿಜಕ್ಕೂ ನನ್ನದು ಒಳ್ಳೆಯ ಯೋಚನೆ! ಈ ಶತಮೂರ್ಖ ನನ್ನ ಮಧ್ಯಾಹ್ನದ ನಿದ್ರೆಯನ್ನು ಹಾಳು ಮಾಡಿದ್ದೂ ಅಲ್ಲದೆ ನನ್ನ ಯೋಚನೆಗೆ ಕಿಂಚಿತ್ತೂ ಗೌರವ ಕೊಡದೆ ಮುಖಕ್ಕೆ ಹೊಡೆಯುವಂತೆ ಮಾತನಾಡುತ್ತಾನೆ... ನನ್ನ ಮಾತನ್ನೇ ಅಲ್ಲಗೆಳೆಯುತ್ತಾನೆ... ‘ಏನೋ ಮಾಡ್ಕೊಂಡು ಹಾಳಾಗಿ ಹೋಗು’ ಎಂದೆ.
 
3. ‘ಏನ್ ಮಾಡೋದ್ ಹಾಗಾದ್ರೆ? ನನಗಂತೂ ಏನೂ ತೋಚ್ತಿಲ್ಲ’ – ಗ್ರೆಸಿಲ ಬಿಕ್ಕುತ್ತಿದ್ದಳು. ‘ಇವತ್ತು ಪ್ಯಾಟ್ರಿಶಿಯಾಳ ಹದಿನೈದನೇ ಬರ್ತ್‌ಡೇ ಬೇರೆ! ರಾತ್ರಿ ಪಾರ್ಟಿ... ಏನ್ ಮಾಡೋದೊ... ನಂಗೆ ಹುಚ್ ಹಿಡಿದಂಗಿದೆ’ ಎಂದಳು.
‘ಓ! ಹ್ಯಾಪಿ ಬರ್ತ್‌ಡೆ ಡಿಯರ್’ ಎನ್ನುತ್ತಾ ಪ್ಯಾಟ್ರಿಶಿಯಾಳ ಹಣೆಗೆ ಮುತ್ತಿಟ್ಟೆ. 
 
ನಿಟ್ಟುಸಿರಿಟ್ಟ ಗ್ರೆಸಿಲ ‘ಇವ್ರು ಹೀಗೆ ಶಿಲೆ ಹಂಗ್ ನಿಂತಿರೋದನ್ನ ಬರೋ ಅತಿಥಿಗಳು ನೋಡಬಾರದು... ಏನ್ ಮಾಡೋದು ಅದಕ್ಕೆ?’
‘ಇದನ್ನ ನೋಡಿದ್ರೆ ಅಲೆಜಾಂಡ್ರೊ ಏನಂದುಕೊಳ್ತಾನೆ... ಹೌದು ಮಮ್ಮಿ, ಏನಾದ್ರೂ ಮಾಡ್ಲೇಬೇಕು’, ಪ್ಯಾಟ್ರಿಶಿಯಾ ಆವೇಶಗೊಂಡಳು.
‘ಯಾರದು ಅಲೆಜಾಂಡ್ರೊ? ನನ್ನ ಬಾಯ್‌ಫ್ರೆಂಡ್’ – ಪ್ಯಾಟ್ರಿಶಿಯಾ ಹಿಂಜರಿಯದೆ ಥಟ್ಟನೆ ಹೇಳಿದಳು.
 
‘ಸೂಪರ್ ಐಡಿಯಾ!’ ಕುಪ್ಪಳಿಸಿದಳು ಕ್ಲಾಡಿಯಾ, ಎನ್ರಿಕ್–ಗ್ರೆಸಿಲರ ಎರಡನೆಯ ಮಗಳು, ‘ಡಾನ್ ನಿಕೋಲಾರನ್ನು ಕರೆಸಿ...’ಕ್ಲಾಡಿಯಾಳ ಯೋಚನೆ ನನಗೆ ಅಷ್ಟು ಸರಿ ಕಾಣಲಿಲ್ಲ; ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅಂತ ಮೊದಲೇ ನಿಮಗೆ ತಿಳಿಸಿಬಿಡುತ್ತೇನೆ. ನಿಜ ಹೇಳಬೇಕೆಂದರೆ, ಆ ಐಡಿಯಾ ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಆ ಮನೆಯಲ್ಲಿ ಎಲ್ಲರೂ ಅದನ್ನು ಕಾರ್ಯರೂಪಕ್ಕೆ ತರಲು ಉತ್ಸುಖರಾಗಿದ್ದರು, ಉಳಿದವರಿಗಿಂತ ಸ್ವತಃ ಎನ್ರಿಕ್‌ನೇ ಖುಷಿಯಿಂದಿದ್ದ. 
 
ಡಾನ್ ನಿಕೋಲನ ಆಗಮನ ಕ್ಷಿಪ್ರ ಗತಿಯಲ್ಲಿ ಸಂಭವಿಸಿತು. ಬಂದದ್ದೇ ಅವನು ಏಕಾಏಕಿ ತನ್ನ ಕೆಲಸವನ್ನು ಶುರು ಹಚ್ಚಿಕೊಂಡ; ತಾನು ಮಾತಿನ ಮಲ್ಲನಲ್ಲ – ಕೆಲಸದ ಮುಂದಾಳು ಎನ್ನುವುದನ್ನು ತೋರಿಸುವಂತೆ. ನೋಡನೋಡುತ್ತಿದ್ದಂತೆ ಸುಣ್ಣ–ಮಣ್ಣು ಬಳಸಿ ಇಟ್ಟಿಗೆಗಳ ಜೋಡಿಸುತ್ತಾ ಎನ್ರಿಕ್‌ನ ಸುತ್ತ ಕೊಳವೆಯಾಕಾರದ ಗೋಡೆಯನ್ನು ಕಟ್ಟಿ ಮುಗಿಸಿದ. ಎನ್ರಿಕ್ ವಿಯಾನಿಗೆ ಈಗ ಹಾಯೆನಿಸಿತು; ನಿಂತುಕೊಂಡೇ ನಿದ್ದೆ ಮಾಡುವುದಕ್ಕಿಂತಲೂ ತಲೆಯನ್ನು ಗೋಡೆಗೆ ಆನಿಸಿ ಚಣ ವಿರಮಿಸಬಹುದು, ಕೆಳಗೆ ಬೀಳುವ ಭಯವಿಲ್ಲ ಅವನಿಗೆ! ಡಾನ್ ನಿಕೋಲ ತನ್ನಾ ವೃತ್ತಾಕಾರದ ಗೋಡೆಗೆ ಸಿಮೆಂಟ್ ಗಿಲೊ ಮಾಡಿ, ಹಸಿರು ಬಣ್ಣ ಬಳಿದು, ಆ ಮನೆಯ ಮೇಜು–ಕುರ್ಚಿ, ಕಾರ್ಪೆಟ್‌ಗಳಿಗೆ ಸರಿ ಹೊಂದುವಂತೆ ಆ ಕೊಳವೆಯನ್ನು ಸಿಂಗರಿಸಿದ. 
 
ಆದರೂ, ಗ್ರೆಸಿಲಾಳಿಗೆ ಯಾಕೊ ಇಷ್ಟವಾಗಲಿಲ್ಲ. ಮನೆಯ ಹಜಾರದೊಳಗೆ ಕೊಳವೆಯಾಕಾರದ ಒಂದು ಅಸಹ್ಯಕರ ಗೋಡೆ! ಚಣ ಅತ್ತಿತ್ತ ಅಡ್ಡಾಡಿ, ತಲೆ ಕೆರೆದುಕೊಂಡು ಕೊನಗೆ ಹೂಬುಟ್ಟಿಯೊಂದನ್ನು ತೆಗೆದು ಆ ಕೊಳವೆಗೋಡೆಯ ನೆತ್ತಿಯ ಮೇಲಿಟ್ಟಳು, ಹಾಗೇ ಒಂದು ಅಲಂಕಾರಿಕ ದೀಪವನ್ನೂ. ಆದರೂ ತೃಪ್ತಿಯಾದಂತೆ ಕಾಣಲಿಲ್ಲ – ಮುಂದಿನ ಸೋಮವಾರ ಮಾರ್ಕೆಟ್‌ಗೆ ಹೋಗಿ ಒಂದ್ ಒಳ್ಳೆಯ ಷೋ ಪೀಸ್  ತಂದು ಇದರ ಮೇಲಿಡಬೇಕು, ಎಂದು ನಿಟ್ಟುಸಿರಿಟ್ಟಳು. 
 
ಎನ್ರಿಕ್ ವಿಯಾನಿಯನ್ನು ಒಂಟಿಯಾಗಿ ಬಿಟ್ಟು ಹೋಗಲು ನನಗ್ಯಾಕೊ ಮನಸ್ಸಾಗಲಿಲ್ಲ. ಪಾರ್ಟಿ ಮುಗಿಯುವವರೆಗೆ ಇಲ್ಲೇ ಇದ್ದು ಹೋಗುವ ಎಂದು ತೀರ್ಮಾನಿಸಿದೆ. ಆದರೆ, ಈ ಕಾಲದ ಹುಡುಗ–ಹುಡುಗಿಯರು ಇಷ್ಟಪಡುವ ಸಂಗೀತವನ್ನು ನೆನಪಿಸಿಕೊಂಡರೆ ಭಯವಾಗುತ್ತೆ. ಡಾನ್ ನಿಕೋಲ ನಿಜಕ್ಕೂ ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದ, ಎನ್ರಿಕ್‌ನ ಕಣ್ಣುಗಳ ನೇರ ಎದಿರು ಆ ಕೊಳವೆ ಗೋಡೆಯೊಳಗೆ ಎರಡು ಸಣ್ಣ ಕಿಟಕಿಗಳನ್ನು ನಿರ್ಮಿಸಿದ್ದ. ಅದರ ಮುಖೇನ ಮನೆಯ ಗೋಡೆಯಲ್ಲಿದ್ದ ವರ್ಣಚಿತ್ರವೊಂದನ್ನು ಎನ್ರಿಕ್ ಆಗಾಗ ನೋಡುತ್ತಾ ಮನರಂಜಿಸಿಕೊಳ್ಳಬಹುದಿತ್ತು. ಅಂತೂ ಎಲ್ಲವೂ ಒಂದು ಹದಕ್ಕೆ ಬಂದಂತೆ ನಾನು ಹೊರಟು ನಿಂತೆ. ಎನ್ರಿಕ್‌ನಿಗೂ ಡಾನ್ ನಿಕೋಲನಿಗೂ ಬೈ ಹೇಳಿ ನಿರ್ಗಮಿಸಿದೆ. 
 
4. ಆ ದಿನಗಳಲ್ಲಿ ನಮಗೆ ಬ್ಯುನೆಸ್ ಅಯ್‌ರಸ್‌ನಲ್ಲಿ ನಿರ್ವಹಿಸಲೇಬೇಕಾದ ಹತ್ತಾರು ಕೆಲಸಗಳಿದ್ದರಿಂದ, ಸತ್ಯವಾಗಲೂ, ಎನ್ರಿಕ್ ವಿಯಾನಿಯ ನೆನಪೇ ಬರಲಿಲ್ಲ. ಅಂತೂ, ಕಳೆದೆರಡು ವಾರಗಳ ಹಿಂದೆ, ಚೂರು ಸಮಯ ಸಿಕ್ಕಿದ್ದೇ ಅವನನ್ನು ಕಾಣಲು ಹೋಗಿದ್ದೆ. ಅಚ್ಚರಿಯೆಂದರೆ, ಅವನಿನ್ನೂ ಆ ಕೊಳವೆಗೋಡೆಯೊಳಗೇ ಜೀವಿಸುತ್ತಿದ್ದ. ಆ ಕೊಳವೆಯ ಸುತ್ತೆಲ್ಲ ಹೂ ಬಳ್ಳಿಗಳು ಹರಡಿಕೊಂಡು ನಳನಳಿಸುತ್ತಿದ್ದವು. ಅಗಲವಾದ ಎಲೆಯೊಂದನ್ನು ಸರಿಸಿ ಸಣ್ಣ ಕಿಟಕಿಯಲ್ಲಿ ಇಣುಕಿದೆ. ಎನ್ರಿಕ್‌ನ ಮುಖ ಬಿಳಿಚಿಕೊಂಡು ಕನ್ನಡಿಯಂತೆ ಪ್ರತಿಫಲಿಸುತ್ತಿತ್ತು. ನಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ಊಹಿಸಿ ಗ್ರೆಸಿಲ ಹೇಳಿದಳು: ‘ಹೊಸ ವಾತಾವರಣಕ್ಕೆ ಹೊಂದಿಕೊಂಡಂತೆ ಮಾಡಲಾಗಿರುವ ಕೆಲವು ಬದಲಾವಣೆಗನುಸಾರ ಪ್ರಕೃತಿಯೂ ಎನ್ರಿಕ್‌ನ ದೇಹವನ್ನು ಉಪಾಧಿಗಳಿಂದ ಮುಕ್ತಗೊಳಿಸಿದೆ’ ಎಂದಳು.
 
ಹೊರಡುವುದಕ್ಕಿಂತ ಮುಂಚೆ ಕೊನೆಯ ಬಾರಿಗೆ ಎನ್ರಿಕ್‌ನನ್ನು ನೋಡಿ ಬುದ್ಧಿವಾದದ ಮಾತೊಂದನ್ನು ಹೇಳಬೇಕೆನಿಸಿತು. ಅವನಿಗೆ ಹೇಳಿದೆ: ‘ಇಪ್ಪತ್ಮೂರು ತಿಂಗಳು ಈ ಕೊಳವೆಗೋಡೆಯ ಪಂಜರದಲಿ ಅಂಟಿಕೊಂಡಿದ್ದಿ, ಒಂದನ್ನ ಅರ್ಥ ಮಾಡ್ಕೊ, ಖಂಡಿತ ಆ ಜೇಡ ಇಷ್ಟು ದಿನ ಬದುಕಿರಲಿಕ್ಕೆ ಸಾಧ್ಯವೇ ಇಲ್ಲ. ಡಾನ್ ನಿಕೋಲನ ಈ ಗೋಡೆಯನ್ನು ಕೆಡವಿ...’
 
ಎನ್ರಿಕ್ ವಿಯಾನಿ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾನೆ ಅಥವ ನಮಗೆ ಕೇಳಿಸುವಷ್ಟು ಶಬ್ದವನ್ನು ಹೊರಡಿಸಲೂ ಅಶಕ್ತನಾಗಿದ್ದಾನೆ. ಕಣ್ಣಿನ ಕುಣಿಕೆಗಳ ಅಲ್ಲಾಡಿಸಿಯೇ ಅವನ ದೃಢವಾದ ಅಭಿಪ್ರಾಯವನ್ನು ತಿಳಿಸಿದ: ‘ಖಂಡಿತ ಬೇಡ’.  
 
ಈ ಭೇಟಿಯ ನಂತರ ಎನ್ರಿಕ್ ವಿಯಾನಿಯನ್ನು ನಾನು ಬಹುತೇಕ ಮರೆತುಹೋದೆ ಎಂದೇ ಹೇಳಬೇಕು. ಈ ಮಧ್ಯೆ ಎರಡು ಮೂರು ಬಾರಿ ಅವನನ್ನು ನೆನಪಿಸಿಕೊಂಡೆ. ಆಗ ಅವನ ಮೇಲೆ ಕೋಪ ಉಕ್ಕುಕ್ಕಿ ಬರುತ್ತಿತ್ತು. ಹ! ಇಂತಹ ಉಚಿತವಲ್ಲದ, ನ್ಯಾಯವಲ್ಲದ ಭಯಗಳು ಅವನನ್ನು ಮುತ್ತಿಕೊಂಡಿರದಿದ್ದಿದ್ದರೆ ಹಾರೆ–ಸಲಿಕೆಗಳ ತೆಗೆದುಕೊಂಡು ಒಂದೇ ಏಟಲ್ಲಿ ಡಾನ್ ನಿಕೋಲನ ಸೃಷ್ಟಿಯಾದ ಆ ಕೊಳವೆಗೋಡೆಯನ್ನು ಕೆಡವಿ... ಬಹುಶಃ ಇಷ್ಟೊತ್ತಿಗೆ ಎನ್ರಿಕ್ ವಿಯಾನಿ ತನ್ನ ಭಯದಿಂದ ಹೊರಬಂದು, ತನ್ನದು ನಿರರ್ಥಕ ಭಯ ಎನ್ನುವ ವಾಸ್ತವವನ್ನು ಅರಿತುಕೊಂಡು ತನ್ನ ಸಂಕಷ್ಟಕ್ಕೆ ಪೂರ್ಣ ವಿರಾಮ ಹಾಕಿರುತ್ತಾನೆ. 
 
ಆದರೆ ಈ ಅನಿಸಿಕೆಗಳೆಲ್ಲವೂ ಹುಟ್ಟಿದಷ್ಟೇ ಬೇಗನೆ ಮಾಯವಾಗುತ್ತವೆ; ಇತರರ ಬದುಕಿನಲ್ಲಿ ನಾವು ಹೀಗೆ ಮೂಗು ತೂರಿಸಬಾರದೆಂಬ ಪ್ರಜ್ಞೆಯ ಎದುರು ನಮ್ಮ ಕಾಳಜಿಗಳು ಮಾಯವಾಗುತ್ತವೆ. ಇತರರ ಬದುಕಿನಲ್ಲಿ ಪ್ರವೇಶಿಸಲು ನನಗ್ಯಾವ ಹಕ್ಕಿದೆ? ನನಗೆ ತಪ್ಪಾಗಿ ಕಾಣುವ ಸಂಗತಿಗಳು ಇತರರಿಗೂ ತಪ್ಪಾಗಿರಬೇಕು ಎಂದು ಅಪೇಕ್ಷಿಸುವುದು ಎಷ್ಟು ಸರಿ? ಎನ್ರಿಕ್ ವಿಯಾನಿಗದು ಅದ್ಭುತವಾದ ಅನುಭವವಾಗಿರಬಹುದು, ಬೆಲೆ ಕಟ್ಟಲಾಗದ ಸಂಪತ್ತಾಗಿಯೂ ಅದು ಅವನನ್ನು ಆವರಿಸಿರಲೂಬಹುದು!
 
ಲ್ಯಾಟಿನ್ ಅಮೆರಿಕನ್ ಸಾಹಿತ್ಯದಲ್ಲಿ ಮಾರ್ಕ್ವೆಸ್, ಬೋರ್ಹೆ, ಕಾರ್ಪೆಂತಿಯರ್‌ಗಳ ಜೊತೆ ಫರ್ನಾಂಡೊ ಸೊರಾಂಟಿನೊ ಕೂಡ ಮುಖ್ಯವಾದ ಹೆಸರು. ಅರ್ಜೆಂಟೀನಾದ ಬ್ಯುನೆಸ್ ಅಯ್‌ರಿಸ್‌ನಲ್ಲಿ 1942ರಲ್ಲಿ ಜನಿಸಿದ ಈತ ಸ್ಪಾನಿಷ್ ಸಾಹಿತ್ಯ ಪಡೆದುಕೊಂಡ ವಿಶ್ವಮಾನ್ಯತೆಯಲ್ಲಿ ಮಿಂದವ.
 
ಮಾಯಾವಾಸ್ತವ ಕಥೆಗಳ ಬರೆದ ಸೊರಾಂಟಿನೊ ಆರು ಸಣ್ಣಕತೆಗಳ ಸಂಕಲನ, ಒಂದು ನೀಳ್ಗತೆ, ಒಂದು ಕಿರು ಕಾದಂಬರಿ, ಜಾರ್ಜ್ ಲೂಯಿ ಬೋರ್ಹೆ ಮತ್ತು ಅಡೆಲ್ಫೊ ಕಾಸಾ ಅವರ ಸಂದರ್ಶನದ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಸ್ಪಾನಿಷ್ ಸಾಹಿತ್ಯದ ಹಲವು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈತನ ಬರಹಗಳು ಇಂಗ್ಲಿಷ್, ಜರ್ಮನ್, ಫ್ರೆಂಚ್, ಹಂಗೇರಿಯನ್, ಪೊಲಿಷ್, ವಿಯಟ್ನಾಮಿ ಮುಂತಾದ ಜಗತ್ತಿನ ಅನೇಕ ಭಾಷೆಗಳಲ್ಲಿ ಮಾತ್ರವಲ್ಲದೆ ಭಾರತೀಯ ಭಾಷೆಗಳಿಗೂ ಅನುವಾದಗೊಂಡಿವೆ. ತಮಿಳಿನ ಮೂಲಕ ಭಾರತಕ್ಕೆ ಪರಿಚಯವಾದ ಫರ್ನಾಂಡೊ ಸೊರಾಂಟಿನೊ ಈಗ ಕನ್ನಡದಲ್ಲೂ ಕಾಣಿಸಿಕೊಳ್ಳುತ್ತಿದ್ದಾನೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT