ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ವ್ಯಕ್ತಿತ್ವ – ಪಾರದರ್ಶಕ ಬರವಣಿಗೆ

ಡಾ. ಎಂ.ಪಿ. ಉಮಾದೇವಿ ಪ್ರತಿಭಾವಂತ ಲೇಖಕಿ
Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಹಸು... ಪ್ರಾಣಿಗಳ ಮೇಲೆ ಪ್ರೀತಿ ಅಪಾರ
ತಿಂದು ತಣಿಯಲಿ ನನ್ನ ಸಂಪತ್ತಿನ ಭಂಡಾರ
 
ಶವಯಾತ್ರೆಯಲ್ಲಿರಲಿ ಇದೇ ವೇಷಭೂಷ
ನನ್ನೊಡನೆ ಸಾಕು... ನನ್ನ ಮಂದಹಾಸ
ಹೀಗೆಂದು ಉಯಿಲು ಬರೆದಿಟ್ಟಿದ್ದರು ಡಾ. ಎಂ.ಪಿ. ಉಮಾದೇವಿ, ತಮ್ಮ ‘ಓ ಗಂಡಸೇ ನೀನೆಷ್ಟು ಒಳ್ಳೆಯವನು!’ ಎಂಬ ಕಥಾಸಂಕಲನದ ಬೆನ್ನುಡಿಯಲ್ಲಿ!
‘ನಾನು ಎಲ್ಲೇ ಕೊನೆಯುಸಿರೆಳೆದರೂ ನನ್ನನ್ನು ನಮ್ಮ ಊರಿನ ತುಂಗಾನದಿಯ ದಂಡೆಯ ಮೇಲೆ ನಾನು ಸ್ಥಾಪಿಸಿರುವ ‘ಅಪೂರ್ವ ಅನಲಾಕ್ಷ’ ವಿಗ್ರಹದ ಬಳಿ ಮಣ್ಣು ಮಾಡಬೇಕು. ಮಣ್ಣಿನ ಮಡಿಲಲ್ಲಿ ನನ್ನ ಶವವನ್ನು ಮಲಗಿಸಿದ ನಂತರ ಯಾವುದಾದರೂ ಶ್ವಾನಗಳಿಂದ ಮಣ್ಣನ್ನು ತಳ್ಳಿಸಬೇಕು.
 
ಯಾವ ಒಬ್ಬ ವ್ಯಕ್ತಿಯೂ ಒಂದು ಹಿಡಿ ಮಣ್ಣನ್ನು ಹಾಕಬಾರದು. ಇದಕ್ಕೆ ತಗಲುವ ವೆಚ್ಚವನ್ನು ದಾವಣಗೆರೆಯ ಎಸ್‌.ಬಿ.ಎಂ. ಹಾಗೂ ಬಾಪೂಜಿ ಕೋ ಆಪರೇಟಿವ್‌ ಬ್ಯಾಂಕಿನಲ್ಲಿ ಇಟ್ಟಿರುತ್ತೇನೆ. ತಮಗೆ ಬೇಕಾದ್ದಷ್ಟನ್ನು ತೆಗೆದುಕೊಂಡು ಉಳಿದ ಹಣವನ್ನು ಸಿದ್ಧಗಂಗಾ ಮಠಕ್ಕೆ ತಲುಪಿಸಬೇಕಾಗಿ ಪ್ರಾರ್ಥಿಸುತ್ತೇನೆ. ನಾಯಿಗಳ ಮೇಲಿನ ಪ್ರೀತಿಯೇ ಇದಕ್ಕೆ ಕಾರಣ’. ತಮ್ಮ ಅಂತಿಮ ಸಂಸ್ಕಾರ ಹೀಗೆ ನಡೆಯಬೇಕೆಂದು ಉಮಾ ಬಯಸಿದ್ದರು (ಬೆನ್ನುಡಿ: ಕಾಮದೇವನ ಕವಡೆಯಾಟ, ಪ್ರಥಮ ಮುದ್ರಣ: 2016)
 
‘ನನ್ನ ಪ್ರೀತಿಯ ನಾಯಿ, ಬದುಕಿಡೀ ನನ್ನನ್ನು ರಕ್ಷಿಸಿದ್ದ ಕಾರಣಕ್ಕಾಗಿ ನನ್ನ ಸಂಪತ್ತಿನ ಕೆಲ ಭಾಗವನ್ನು ಅದರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಮೂಕ ಪ್ರಾಣಿಗಳಿಗೆ (ಬೀದಿ ನಾಯಿಗಳು, ಬಿಡಾಡಿ ದನಗಳಿಗೆ) ಆಹಾರ ಪೂರೈಸಲು ಇಟ್ಟಿದ್ದೇನೆ...’. ಹ್ಯಾಟ್‌್ಸ ಆಫ್‌ ಬೇಟ (ನಂಜುಂಡ – ಜರ್ಮನ್‌ ಶೆಫರ್ಡ್‌ ಶ್ವಾನ) ಎಂದು ತಮ್ಮ ಪ್ರೀತಿಯ ನಾಯಿ ಬೇಟನ ಹೆಸರಿನಲ್ಲಿ ಉಮಾದೇವಿ ದತ್ತಿನಿಧಿ ಸಂಸ್ಥೆಯನ್ನು ಸ್ಥಾಪಿಸಿದ್ದರು. (ಮುನ್ನುಡಿ: ಕಾಮದೇವನ ಕವಡೆಯಾಟ)
 
ಅಷ್ಟೇ ಅಲ್ಲ, ತಮ್ಮ ಕೊನೆಯ ಕೃತಿ ‘ಕಾಮದೇವನ ಕವಡೆಯಾಟ’ (ಇದೊಂದು ಆತ್ಮಕತೆ ಆಧರಿಸಿದ ಕಾದಂಬರಿ ಮತ್ತು ಅಭಿನಂದನಾ ಗ್ರಂಥ ಹಾಗೂ ಬಿನ್ನವತ್ತಳೆ ಎಂದು ಅವರೇ ಬರೆದಿರುವರು) ಪುಸ್ತಕವನ್ನು ತಮ್ಮ ಪ್ರೀತಿಯ ನಾಯಿಗಳಾದ ಬೇಟ–ಬೇಟಿ, ಬಚ್ಚ–ಬಚ್ಚಿ, ಬಬ್ಬಿ, ಡಿಪ್ಪಿ, ಮಿನ್ನಿ, ಗವಿ, ಶ್ರೀವಧು–ಶ್ರೀವರ, ರಾಕ್ಷಸ್‌–ಹೇಷಾರವ – ‘ಇವುಗಳ ಬಂಗಾರದ ಪಾದಗಳಿಗೆ ಸಾಷ್ಟಾಂಗ ನಮಸ್ಕಾರದೊಡನೆ’ ಎಂದು ಅರ್ಪಿಸಿರುವರು.
***
ನಾನು ಬಾಲಕಿಯಾಗಿದ್ದಾಗ ಆಕೆ ಬರಹಗಾರ್ತಿ ಎಂದು ನನ್ನಕ್ಕ ತೋರಿದ್ದು, ನೆನಪಿದೆ. ನಾನು ಹದಿಹರಯದಲ್ಲಿ ಆಕೆಯ ‘ಓ ಗಂಡಸೆ ನೀನೇಷ್ಟು ಒಳ್ಳೆಯವನು!’ ಕತೆಯನ್ನು ಮಯೂರದಲ್ಲಿ ಓದಿ ವಿಚಲಿತಳಾಗಿದ್ದೂ ನೆನಪಿಗೆ ಬರುತ್ತಿದೆ. ನಾನು ಮರಳಿ ಶಿವಮೊಗ್ಗೆಗೆ ಬಂದು ನೆಲೆಸಿದ ಮೇಲೆ ಆಕೆಯೂ ಇಲ್ಲಿಯೇ ಗಾಜನೂರಿನ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುವ ವಿಷಯ ತಿಳಿದು ಒಮ್ಮೆ ಆಕೆಯನ್ನು ಭೇಟಿ ಮಾಡಬೇಕು ಎಂದು ಆಕೆಯ ನಿಕಟ ಬಂಧುವಿಗೆ ಹೇಳಿದ್ದೆ. ಆದರೆ ಆಕೆ ಭೇಟಿಗೆ ಅವಕಾಶವೇ ನೀಡುವುದಿಲ್ಲ, ಜನರೊಂದಿಗೆ ಸೇರುವುದಿಲ್ಲ, ಗೇಟಿನೊಳಗೂ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದ ಮೇಲೆ ಸುಮ್ಮನಾಗಿದ್ದೆ.
 
ಇತ್ತೀಚೆಗೆ ನನ್ನ ಗೆಳತಿಯೂ ಆಕೆಯ ನಿಕಟ ಬಂಧುವೂ ಆದ ರೇಖಾ ಆಕೆಯ ಹೊಸ ಕಾದಂಬರಿ ‘ಕಾಮದೇವನ ಕವಡೆಯಾಟ’ ಪ್ರಕಟವಾಗಿರುವ ಬಗ್ಗೆ ಹೇಳಿದ್ದರು. ನನಗೂ ಒಂದು ಪ್ರತಿ ಕೊಡಿ ಎಂದು ಹೇಳಿದ್ದೆ. ಈ ಮಾತುಕತೆ ನಡೆದು ಒಂದು ವಾರವಾಗಿಲ್ಲ... ಆಕೆ ತೀರಿಕೊಂಡರು ಎಂಬ ವಿಷಯವನ್ನು 18–12–2016ರ ಮುಂಜಾನೆ ತಿಳಿಸಿದರು. ಹೃದಯ ಸಂಬಂಧಿ ಕಾಯಿಲೆಯಿಂದ ಹಠಾತ್ತಾಗಿ ದಿನಾಂಕ 17–12–2016 ರಂದು ಈ ಲೋಕಕ್ಕೆ ವಿದಾಯ ಹೇಳಿದ ಉಮಾದೇವಿಯವರ ಮಣ್ಣು–ಸಂಸ್ಕಾರ ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿಯಲ್ಲಿ, ತುಂಗಾನದಿ ತೀರದಲ್ಲಿ ನಡೆಯಿತು.
 
ವೈದ್ಯೆಯಾಗಿ, ಪ್ರಾಧ್ಯಾಪಕಿಯಾಗಿ ಮೂವತ್ತಕ್ಕೂ ಹೆಚ್ಚು ವರುಷ ಸೇವೆಸಲ್ಲಿಸಿದ, ಕತೆ–ಕಾದಂಬರಿ, ಅಪರೂಪದ ಮಹಾಕಾವ್ಯ ರಚಿಸಿದ ಈ ಜೀವ ತೀರಿಕೊಂಡದ್ದು ಬಹುಶಃ ಯಾರಿಗೂ ಗೊತ್ತಾಗಲೇ ಇಲ್ಲ. ಈಕೆಯ ಮಣ್ಣಿಗೆ ಹೋದವರು ಹತ್ತೋ–ಹನ್ನೆರಡು ಮಂದಿ. ಯಾವ ಮಾಧ್ಯಮದಲ್ಲೂ – ಕೊನೆಗೆ ಸ್ಥಳೀಯ ಸುದ್ದಿಯಾಗಿ ಕೂಡ ಪತ್ರಿಕೆಗಳಲ್ಲಿ ಚುಟುಕು ಸುದ್ದಿ ಪ್ರಕಟವಾಗಲಿಲ್ಲ. ತನ್ನ ಜೀವಮಾನದ ಗಳಿಕೆಯನ್ನು ಒಟ್ಟುಗೂಡಿಸಿ ಈಕೆ ಕೆತ್ತಿಸಿದ ‘ಅಪೂರ್ವ ಅನಲಾಕ್ಷ’ ಶಿವನ ಬೃಹತ್‌ ಮೂರುತಿ ದಾವಣಗೆರೆಯ ಬಾಪೂಜಿ ಮೆಡಿಕಲ್‌ ಕಾಲೇಜಿನ ಆವರಣದಲ್ಲಿದೆ ಎಂದು ಹೇಳಲಾಗುತ್ತಿದ್ದು, ಈಕೆಯ ಬಯಕೆಯಂತೆ ತುಂಗಾನದಿ ತೀರದಲ್ಲಿ ಇನ್ನೂ ಪ್ರತಿಷ್ಠಾಪನೆಗೊಳ್ಳಬೇಕಿದೆ.
 
ಈ ಹೊತ್ತೂ ಈಕೆಯ ಬೆರಳೆಣಿಕೆಯ ನಿಕಟವರ್ತಿಗಳಿಗೂ ಈಕೆಯ ಸಾವಿನ ಸುದ್ದಿ ತಿಳಿದಿಲ್ಲ! ಅದಕ್ಕೆ ಕಾರಣವೂ ಉಂಟು. ಜನರಿಂದ ದೂರವಾಗಿ ಏಕಾಕಿಯಾಗಿ, ತನ್ನ ನಾಯಿ ಪರಿವಾರದೊಂದಿಗೆ ಮಾತ್ರ ಬೆರೆತು ಬದುಕಿದ್ದ ಈಕೆಯ ನಿಗೂಢ–ವಿಶೇಷ ವ್ಯಕ್ತಿತ್ವ. ಒಂದು ರೀತಿಯ ವಿಕ್ಷಿಪ್ತತೆಯ ಅಂಶ ಅದರಲ್ಲಿ ಇದ್ದುದನ್ನು ತಳ್ಳಿಹಾಕಲಾಗುವುದಿಲ್ಲ. ಈಕೆಯ ಸ್ನೇಹಿತೆ ವಿಜಯಾ ಶ್ರೀಧರ್‌ಗೆ ನಾನು ಫೋನ್‌ ಮಾಡಿ ಸಾವಿನ ವಿಚಾರ ತಿಳಿಸಿದಾಗ ಗಾಬರಿಯಾಗಿ ‘ಹೌದೆ? ಯಾವಾಗ?’ ಎಂದು ಹೇಳಿ, ‘ನೊಂದ ಜೀವ’ ಎಂದು ಉದ್ಗರಿಸಿದರು. ಹೌದು. ಸೂಕ್ಷ್ಮ–ಭಾವುಕ ವ್ಯಕ್ತಿತ್ವದ ಕಾರಣದಿಂದಾಗಿ ಬಡತನ–ಅವಮಾನ–ಹತಾಶೆಯಿಂದಾಗಿ ನೊಂದು ಬೆಂದು ತಮ್ಮೆದುರಿನ ಲೋಕವನ್ನೇ ಅನುಮಾನ, ಅಪನಂಬಿಕೆಯಿಂದ ಪರಿಭಾವಿಸುತ್ತ ಸಂಶಯದ ಹುತ್ತದಲ್ಲಿ ಅಡಗಿ, ಲೋಕದ ಬಗ್ಗೆ ತಿರಸ್ಕಾರವನ್ನು ಎದೆಯಲ್ಲಿ ಮಡಗಿಕೊಂಡು ಬೆಂದುಹೋದವರು ಈ ಉಮಾದೇವಿ.
 
563 ಪುಟಗಳ ಈಕೆಯ ಬೃಹತ್‌ ಕಾದಂಬರಿ ‘ಬದುಕಲಾರದ ಬಲವಂತರು’ ಓದಿದರೆ ಒಳ ಸುಳಿವುಗಳು ಸಿಗುತ್ತವೆ. ಈ ಕೃತಿಗೆ 1988ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವೂ ದೊರೆತಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ‘ಕನ್ನಡ ಲೇಖಕಿಯರ ಕಥನ ಸಾಹಿತ್ಯದಲ್ಲಿಯೇ ಇದು ಪ್ರತ್ಯೇಕ ದಾರಿ ಹಿಡಿದ ಅಪರೂಪದ ಕೃತಿಯಾಗಿದೆ, ಇಂದಿನ ನಮ್ಮ ಕಾದಂಬರಿಗೆ ಪರಿಣಾಮಕಾರಿಯಾದ ಸಾರ್ಥಕವಾದ ಒಂದು ಹೊಸ ಜೋಡಣೆ’ ಎಂದು ಹಾ.ಮಾ. ನಾಯಕರು ಆಗಲೇ ಗುರುತಿಸಿದ್ದರು. ‘ಈ ಕಾದಂಬರಿಯನ್ನು ಓದುತ್ತಿದ್ದಂತೆ ಇದನ್ನು ಬರೆದವರು ಗ್ರಾಮೀಣ ಹೆಣ್ಣುಮಗಳು, ರೈತಾಪಿ ಕುಟುಂಬದಿಂದ ಬಂದವರು – ಹೊಲಗದ್ದೆಗಳ, ಪೈರು ಪಚ್ಚೆಗಳ ಹಾಲು–ಹೈನು ಕರಾವಿನ ಸಂಪರ್ಕವುಳ್ಳ ಮಣ್ಣಿನ ಮಗಳು ಎನಿಸುತ್ತದೆ’ ಎಂದು ವಿಮರ್ಶಕ ಟಿ.ಪಿ. ಅಶೋಕ ಅವರು ಈ ಹಿಂದೆ ತಮ್ಮ ಅಭಿಪ್ರಾಯವನ್ನು ದಾಖಲಿಸಿರುವರು.
 
ಒಂದು ಘನವಾದ ಪ್ರೇಮ ಸಾಂಗತ್ಯವನ್ನು ಬಯಸಿ ಕನಸು–ಕಲ್ಪನೆ–ತೊಳಲಾಟಗಳ ತಿರುಗಣಿಯಲ್ಲಿ ಸಿಕ್ಕಿ, ತಾನೇ ನಿರ್ಮಿಸಿಕೊಂಡಿದ್ದ ಸುಳಿಯೊಳಗೆ ಗಿರಗಿಟ್ಟಲೆಯಾಡಿ ನರಳಿ, ಎಲ್ಲರನ್ನೂ ಎಲ್ಲವನ್ನೂ ಅಪನಂಬಿಕೆಯ ಕಣ್ಣುಗಳಿಂದ ನೋಡುತ್ತ ಶ್ರೇಷ್ಠತಾವ್ಯಸನಕ್ಕೆ ಈಡಾಗಿ ಕೊನೆಗೆ ತಾನು ಪರಶಿವನ ಪ್ರೇಯಸಿ ‘ಉಮೆ’ ಎಂದು ಪರಿಭಾವಿಸುತ್ತಾ, 25 ವರುಷಗಳ ಕಾಲ ತಪಗೈದು 8 ಭಾಗಗಳ –16 ಅಧ್ಯಾಯಗಳ – 16128 ದ್ವಿಪದಿಗಳಲ್ಲಿ ರಚಿಸಲಾಗಿರುವ ‘ಶೈವ ವಾತ್ಸಲ್ಯ’ ಎಂಬ ಮಹಾಕಾವ್ಯವನ್ನು ಕನ್ನಡಕ್ಕೆ ನೀಡಿಹೋಗಿರುವರು.
 
ಸರಳ–ಸುಭಗ ಶೈಲಿಯಲ್ಲಿರುವ ಈ ಮಹಾಕಾವ್ಯವನ್ನು ವಿಮರ್ಶಿಸುವ ಎದೆಗಾರಿಕೆ ನನಗಿಲ್ಲ. ಈ ಮಹಾಕಾವ್ಯವನ್ನು ಪೂರ್ತಿ ಓದಿದ ಮೇಲೆ ಒಂದು ಗಳಿಗೆ ಮೂಕಳಾಗಿ ಕುಳಿತುಬಿಟ್ಟೆ, ಅಷ್ಟೆ. ಆತ್ಮಸಂಗಾತಕ್ಕಾಗಿ ಹಂಬಲಿಸಿ ಅನಾಮಿಕಳಾಗಿ ಬದುಕಿ, ಬರೆದು ಕನ್ನಡ ಕಾವ್ಯಕ್ಕೆ ಕಿರುಕಾಣಿಕೆಯಾಗಿ ‘ಮಹಾಕಾವ್ಯ’ ನೀಡಿದ ಲೇಖಕಿಗೆ ಆಕೆಯ ‘ಅಪೂರ್ವ ಅನಲಾಕ್ಷ’ ಸಾಂಗತ್ಯ ನೀಡಲಿ ಎಂದು ಪ್ರಾರ್ಥಿಸಬಹುದಷ್ಟೇ.
 
ಡಾ. ಎಂ.ಪಿ. ಉಮಾದೇವಿ (8 ಡಿಸೆಂಬರ್‌ 1949 – 17 ಡಿಸೆಂಬರ್‌ 2016)
ಅವಿಭಜಿತ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿಯವರು (ಮರ್ಗನಳ್ಳಿ). ತಂದೆ: ಮಹೇಂದ್ರನಾಥ್‌ ಪಾಟೀಲ್‌, ತಾಯಿ: ಪಾರ್ವತಮ್ಮ. ಮರಿಗೊಂಡನಹಳ್ಳಿ ಹಾಗೂ ಶಿವಮೊಗ್ಗದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪದವಿ ಪಡೆದ ಅವರು, ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ವೈದ್ಯರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವರು.
 
‘ಓ ಗಂಡಸೇ ನೀನೆಷ್ಟು ಒಳ್ಳೆಯವನು!’ (ಕಥಾ ಸಂಕಲನ), ‘ಬದುಕಲಾರದ ಬಲವಂತರು’ (ಕಾದಂಬರಿ), ‘ಶೈವ ವಾತ್ಸಲ್ಯ’ (ಮಹಾಕಾವ್ಯ), ‘ಕಾಮದೇವನ ಕವಡೆಯಾಟ’ (ಕಾದಂಬರಿ–ಆತ್ಮವೃತ್ತಾಂತ) ಉಮಾದೇವಿಯವರ ಕೃತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT