ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘನ್‌ ತಂಡದ ಕ್ರಿಕೆಟ್ ಪ್ರೀತಿ...

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಹಿಂದಿನ ದಿನವಷ್ಟೇ ಜಿಂಬಾಬ್ವೆ ಎದುರು ಏಕದಿನ ಪಂದ್ಯವಾಡಿದ  ದಣಿವಿದ್ದರೂ ಆಫ್ಘಾನಿಸ್ತಾನದ ಕ್ರಿಕೆಟಿಗರು ಬೆಳಿಗ್ಗೆ ಐದು ಗಂಟೆಗೇ (ಜಿಂಬಾಬ್ವೆಯ ಕಾಲಮಾನ) ಟಿ.ವಿ ಎದುರು ಕುಳಿತಿದ್ದರು. ಅವರಲ್ಲಿ ದ್ದದ್ದು ಕಾತರ, ಚಡಪಡಿಕೆ, ದೊಡ್ಡ ಆಸೆ, ಚಿಕ್ಕದೊಂದು ಭರವಸೆ. ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್‌ ಹರಾಜಿ ನಲ್ಲಿ ಆ ತಂಡದ ಐವರು ಆಟಗಾರರ ಹೆಸರೂ ಇತ್ತು.
 
ಹರಾಜಿನಲ್ಲಿ ಮೊದಲು ಬಂದ ಹೆಸರು ನಾಯಕ ಅಸ್ಗರ್‌ ಸ್ಟಾನಿಕ್‌ ಜಾಯ್‌ ಅವರದು. ಅವರನ್ನು ಯಾವ ಫ್ರಾಂಚೈಸ್‌ ಖರೀದಿಸಲಿಲ್ಲ. ತಮ್ಮ ಕಥೆಯೂ ಇದಕ್ಕಿಂತ ಭಿನ್ನವಾಗಲಾರದು ಎಂಬ ನಿರಾಸೆಗೊಂಡಿದ್ದವರಿಗೆ ಅಚ್ಚರಿ ಮೂಡಿಸಿದ್ದು ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸ್‌.  ಮೊಹಮ್ಮದ್‌ ನಬಿಗೆ ನಿಗದಿಯಾಗಿದ್ದ ಮೂಲಬೆಲೆ ₹30 ಲಕ್ಷಕ್ಕೆ  ಅವರನ್ನು ಖರೀದಿಸಿದಾಗ ಅಲ್ಲಿ ಸಂಭ್ರಮ ಮನೆಮಾಡಿತು.  
 
ಆ ಸಂಭ್ರಮವನ್ನು ದ್ವಿಗುಣಗೊಳಿಸಿದ್ದು, 18 ವರ್ಷದ ಯುವಕ ರಶೀದ್‌ ಖಾನ್‌ ಅರ್ಮಾನ್‌. ಅವರಿಗೆ ಬರೋಬ್ಬರಿ ₹4 ಕೋಟಿ ಬೆಲೆ ಬಂದಾಗ ಆಫ್ಘಾನಿಸ್ತಾನ ಮಾತ್ರವಲ್ಲ, ಇಡೀ ಕ್ರಿಕೆಟ್‌ ಲೋಕಕ್ಕೆ ಇದು ಅನಿರೀಕ್ಷಿತವೂ ಹೌದು. ಇಮ್ರಾನ್‌ ತಾಹಿರ್‌, ರಾಸ್ ಟೇಲರ್‌, ಇರ್ಫಾನ್‌ ಪಠಾಣ್‌, ಇಶಾಂತ್ ಶರ್ಮಾ, ಬ್ರಾಡ್‌ ಹಾಗ್‌, ಜಾನಿ ಬ್ರೆಸ್ಟೊವ್‌ ಮುಂತಾದ ಘಟಾನುಘಟಿ ಆಟಗಾರರಿಗೆ ಮೂಲ ಬೆಲೆ ನೀಡಿಯೂ ಖರೀದಿಸಲು ಒಲವು ತೋರಿಸದ ಫ್ರಾಂಚೈಸ್‌ಗಳು   ತನ್ನ ದೇಶದ ಆಟಗಾರರಿಗೆ ಜೀವಮಾನವಿಡೀ ಆಡಿದರೂ ಸಿಗದ ಮೊತ್ತ ನೀಡಿದ್ದು ಅಚ್ಚರಿ ಉಂಟು ಮಾಡಿತ್ತು.
 
ಮಿಗಿಲಾಗಿ ಐಪಿಎಲ್‌ ಎಂಬ ಬೆರಗಿನ ಸಂತೆಯಲ್ಲಿ ತನ್ನ ಹೆಸರನ್ನು ಕರೆಸಿಕೊಳ್ಳುವ ಅಪೂರ್ವ ಅವಕಾಶ ಸಿಕ್ಕಿರುವುದು ಆಫ್ಘನ್‌ ಕ್ರಿಕೆಟ್‌ ಜಗತ್ತು ತನಗೆ ದೊರೆತ ದೊಡ್ಡ ಉಡುಗೊರೆ ಎಂದೇ ಪರಿಗಣಿಸಿದೆ.
 
‘ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ಆಫ್ಘಾನಿಸ್ತಾನದ ಅಧಿಕೃತ ತವರು ತಂಡ. ಅದು ನಮ್ಮ ಇಬ್ಬರು ಆಟಗಾರರನ್ನು ಖರೀದಿಸುವ ಮೂಲಕ ಕ್ರಿಕೆಟ್‌ ಹುಚ್ಚಿನ ದೇಶದ ಸಂಪೂರ್ಣ ಬೆಂಬಲ ಪಡೆದುಕೊಂಡಿದೆ’ ಎಂದು ಆಫ್ಘನ್‌ ಕ್ರಿಕೆಟ್‌ ಮಂಡಳಿಯ ಸಿಇಒ ಶಫೀಕ್‌ ಸ್ತಾನಿಕ್‌ಜೈ ಹೇಳಿದ್ದಾರೆ. ಏಕದಿನ ಮತ್ತು ಚುಟುಕು ಕ್ರಿಕೆಟ್‌ನಲ್ಲಿ ನಿಧಾನವಾಗಿ ಛಾಪು ಮೂಡಿಸುತ್ತಿರುವ ಆಫ್ಘಾನಿಸ್ತಾನ ತನ್ನ ಛಲ ಮತ್ತು ಪ್ರತಿಭೆಯಿಂದ ಗಮನ ಸೆಳೆಯುತ್ತಿದೆ.
 
 
ಪ್ರತಿಭೆಗಳ ಕಣಜ
ಪ್ರಸ್ತುತ ಆಫ್ಘನ್‌ ಕ್ರಿಕೆಟ್‌ ತಂಡ ಅನುಭವಿ ಮತ್ತು ಅನನುಭವಿ ಪ್ರತಿಭೆಗಳ ಸಂಗಮ. ಐಪಿಎಲ್‌ ಪ್ರವೇಶಿಸುತ್ತಿರುವ 32 ವರ್ಷದ ಮೊಹಮ್ಮದ್‌ ನಬಿ, ರಾಷ್ಟ್ರೀಯ ತಂಡದ ನಾಯಕನ ಹೊಣೆಯನ್ನೂ ನಿರ್ವಹಿಸಿದ್ದವರು. 
 
ಅಲ್ಪಾವಧಿಯಲ್ಲಿಯೇ  ಲೆಗ್‌ಸ್ಪಿನ್‌ ಬೌಲಿಂಗ್‌ ಮೂಲಕ ಗಮನ ಸೆಳೆದಿರುವ ರಶೀದ್‌ ಖಾನ್, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಒಂದೂವರೆ ವರ್ಷವಷ್ಟೇ ಕಳೆದಿದೆ. ದೇಶಿ ಕ್ರಿಕೆಟ್‌ನಲ್ಲಿ ರಶೀದ್‌ ಅನುಭವವೂ ಇಷ್ಟೇ ಅವಧಿಯದ್ದು. 
 
ಆಫ್ಘನ್‌ ತಂಡ ಐಸಿಸಿ ಏಕದಿನ ಮತ್ತು 20–ಟ್ವೆಂಟಿ ವಿಶ್ವಕಪ್‌ಗಳಿಗೆ ಅರ್ಹತೆ ಗಳಿಸುವುದರಲ್ಲಿ ಮೊಹಮ್ಮದ್‌ ಷಹಜಾದ್‌, ದೌಲತ್‌ ಜದ್ರಾನ್‌, ಶಾಪೂರ್‌ ಜದ್ರಾನ್‌, ಅಸ್ಗರ್‌ ಸ್ತಾನಿಕ್‌ಜೈ, ಶಮೀವುಲ್ಲಾ ಶೆನ್ವಾರಿ ಮುಂತಾದ ಅನುಭವಿಗಳ ಪಾಲು ಮಹತ್ವದ್ದು. ಈಗ ಹಮೀದ್‌ ಹಸನ್, ಉಸ್ಮಾನ್ ಘನಿ, ಶಬ್ಬೀರ್‌ ನೂರಿ ಮುಂತಾದ ಹೊಸ ಪ್ರತಿಭೆಗಳೂ ತಂಡಕ್ಕೆ ಸೇರುವಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ನಿರಂತರ ಯುದ್ಧ,  ಭಯೋತ್ಪಾದನೆಯ ಅಟ್ಟಹಾಸಗಳಿಂದ ನಲುಗಿರುವ ಆಫ್ಘಾನಿಸ್ತಾನಕ್ಕೆ ತುಸು ಚೈತನ್ಯ ನೀಡಿರುವುದು ಕ್ರಿಕೆಟ್‌. ಅದರ ಬೆಳವಣಿಗೆಯ ಹಿಂದೆ ಇರುವುದು ಭಾರತ  ಕ್ರಿಕೆಟ್‌ ನಿಯಂತ್ರಣ ಮಂಡಳಿ.
 
ಹುಟ್ಟು ಹಳೆಯದೇ
ಕ್ರಿಕೆಟ್‌ನ ಹಸುಗೂಸಿನಂತೆ ಆಫ್ಘಾನಿಸ್ತಾನ ಅಂಬೆಗಾಲಿಡುತ್ತಿದ್ದರೂ, ಅದು ನಿನ್ನೆ ಮೊನ್ನೆ ಹುಟ್ಟಿದ ಮಗುವಲ್ಲ. 
 
ಆಫ್ಘನ್‌ ಕ್ರಿಕೆಟ್‌ಗೂ ಶತಮಾನದ ಇತಿಹಾಸವಿದೆ. ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಕಾಬೂಲ್‌ನಲ್ಲಿ 1839ರಲ್ಲಿ ಕ್ರಿಕೆಟ್‌ ಪಂದ್ಯವಾಡಿದ ದಾಖಲೆಯಿದೆ. ಬ್ರಿಟಿಷರ ನಿರ್ಗಮನದ ಬಳಿಕ ಅಲ್ಲಿ ಕ್ರಿಕೆಟ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಶದಲ್ಲಿ ಕ್ರಿಕೆಟ್‌ ಮತ್ತೆ ಜನಪ್ರಿಯತೆ ಪಡೆದುಕೊಂಡಿದ್ದು 1990ರ ದಶಕದಲ್ಲಿ. ಪಾಕಿಸ್ತಾನದಲ್ಲಿ ನೆಲೆಸಿದ್ದ ಆಫ್ಘನ್‌ ನಿರಾಶ್ರಿತರಲ್ಲಿ ಕ್ರಿಕೆಟ್‌ ಆಸಕ್ತಿ ಮೊಳೆಯಿತು. ದೇಶಕ್ಕೆ ಮರಳಿದ ಬಳಿಕವೂ ಕ್ರಿಕೆಟ್‌ ಮುಂದುವರಿಸಿದರು. ಇದರ ಫಲವಾಗಿ 1995ರಲ್ಲಿ ಅಲ್ಲಿ ಕ್ರಿಕೆಟ್ ಮಂಡಳಿ ರಚನೆಯಾಯಿತು. ದೇಶದ ಆಡಳಿತದ ಮೇಲೆ ನಿಯಂತ್ರಣ ಹೊಂದಿದ್ದ ತಾಲಿಬಾನ್‌, ಕ್ರಿಕೆಟ್‌ ಮೇಲೆ ನಿಷೇಧ ಹೇರಿತು. 2000ದಲ್ಲಿ ಆ ನಿಷೇಧವನ್ನು ತೆರವುಗೊಳಿಸಿತು. ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅನುಮತಿ ನೀಡಿರುವ ಏಕೈಕ ಕ್ರೀಡೆ ಕ್ರಿಕೆಟ್‌. 2001ರಲ್ಲಿ ಅದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಮಾನ್ಯತೆಯನ್ನೂ ಪಡೆದುಕೊಂಡಿತು.
 
ಪಾಕಿಸ್ತಾನದ ದೇಶಿ ಕ್ರಿಕೆಟ್‌ ತಂಡಗಳೊಂದಿಗೆ ಅವಕಾಶ ಪಡೆದ ಆಫ್ಘನ್‌ ತಂಡ, ನಂತರ ಎಸಿಸಿ ಟ್ರೋಫಿ, ಮಿಡ್ಲ್‌ಈಸ್ಟ್‌ ಟ್ರೋಫಿ, ವಿಶ್ವ ಕ್ರಿಕೆಟ್‌ ಲೀಗ್‌ ಮುಂತಾದವುಗಳಲ್ಲಿ  ಅನುಭವ ಗಿಟ್ಟಿಸಿಕೊಂಡಿತು. 2011ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾದರೂ, ಏಕದಿನ ಕ್ರಿಕೆಟ್‌ಗೆ ಮಾನ್ಯತೆ ದೊರಕಿತು. 2015ರ ಐಸಿಸಿ ವಿಶ್ವಕಪ್‌ ಮತ್ತು 2016ರಲ್ಲಿ ಭಾರತದಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡ ಆಫ್ಘಾನಿಸ್ತಾನ, ಬಲಿಷ್ಠ ವೆಸ್ಟ್‌ಇಂಡೀಸ್‌ ತಂಡವನ್ನು ಆರು ರನ್‌ಗಳಿಂದ ಮಣಿಸಿ  ಅಚ್ಚರಿ ಮೂಡಿಸಿತು. 
 
ಇದೇ ವೆಸ್ಟ್‌ಇಂಡೀಸ್‌ ತಂಡ ಚುಟುಕು ಕ್ರಿಕೆಟ್‌ನ ಟ್ರೋಫಿ ಎತ್ತಿಹಿಡಿದಿದ್ದರಿಂದ ಆಫ್ಘನ್‌ನ ಗೆಲುವು ಇನ್ನಷ್ಟು ಮಹತ್ವ ಪಡೆದುಕೊಂಡಿತು. ಅದೇ ಟೂರ್ನಿಯಲ್ಲಿ ಆಫ್ಘನ್ ತಂಡ  ಭಾರತವನ್ನು 20 ಓವರ್‌ಗಳಲ್ಲಿ 159 ರನ್‌ಗಳಿಗೆ ನಿಯಂತ್ರಿಸಿ ಪ್ರಬಲ ಪೈಪೋಟಿ ನೀಡಿತ್ತು. 
 
ಹೊರಗೇ ಆಡುವ ಅನಿವಾರ್ಯತೆ
ದೇಶಿಯ ಮಟ್ಟದಲ್ಲಿ ಆಫ್ಘಾನಿಸ್ತಾನ ಅನೇಕ ಟೂರ್ನಿಗಳನ್ನು ಆಯೋಜಿಸುತ್ತಿದೆ.  19,   23 ವರ್ಷದ ಒಳಗಿನವರ ವಿಭಾಗಗಳಲ್ಲಿಯೂ ಉತ್ತಮ ತಂಡಗಳಿವೆ. ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್‌ ಉತ್ತೇಜಿಸಲು, ತರಬೇತಿ ನೀಡಲು ಮತ್ತು ಕ್ರೀಡಾಂಗಣಗಳನ್ನು ನಿರ್ಮಿಸಲು ಬಿಸಿಸಿಐ ನೆರವು ನೀಡುತ್ತಿದೆ. 
 
ಭಾರತದ ಮಾಜಿ ಆಟಗಾರ ಲಾಲ್‌ಚಂದ್‌ ರಜಪೂತ್‌ ಅವರ ತರಬೇತಿಯಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಬರುತ್ತಿವೆ. ಅದರ ಭಾಗವಾಗಿಯೇ ಬಿಸಿಸಿಐ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಅಲ್ಲಿನ ಆಟಗಾರರಿಗೆ ಅವಕಾಶ ನೀಡಿರುವುದು. 
 
ತಂಡವೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ತವರಿನಲ್ಲಿ ಹೆಚ್ಚು ಪಂದ್ಯಗಳನ್ನು ಆಡುವಂತಾಗಬೇಕು. ತವರಿನಲ್ಲಿ ಅಭಿಮಾನಿಗಳ ಎದುರು ಆಡುವ ಅನುಭವ ಅವರಲ್ಲಿ ಉತ್ತೇಜನ ನೀಡಬಲ್ಲದು. ಆದರೆ, ಆಫ್ಘಾನಿಸ್ತಾನ ತಂಡಕ್ಕೆ ಆ ಅವಕಾಶವೇ ಇಲ್ಲ. 
 
ಸದಾ ಉಗ್ರರ ದಾಳಿಯ ಭೀತಿಯಲ್ಲಿಯೇ ಇರುವ ಅಲ್ಲಿಗೆ ಹೋಗಿ ಆಟವಾಡಲು ಯಾವ ತಂಡವೂ ಮುಂದಾಗುವುದಿಲ್ಲ. ಆಫ್ಘಾನಿಸ್ತಾನ ಸುರಕ್ಷಿತ ದೇಶ ಎಂಬ ಭಾವನೆ ಮೂಡುವವರೆಗೂ ಅಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಾರದು. ಇಂತಹ ಸವಾಲುಗಳ ನಡುವೆಯೇ ಅಲ್ಲಿನ ಕ್ರಿಕೆಟ್‌ ದೃಢ ಹೆಜ್ಜೆಗಳನ್ನು ಇರಿಸುತ್ತಿದೆ. 
 
ಆಫ್ಘಾನಿಸ್ತಾನಕ್ಕೆ ಟೆಸ್ಟ್ ಮಾನ್ಯತೆ ನೀಡುವ ವಿಚಾರದ ಕುರಿತೂ ಐಸಿಸಿಯಲ್ಲಿ ಚರ್ಚೆ ನಡೆಯುತ್ತಿದೆ. ಸೀಮಿತ ಓವರ್‌ಗಳಲ್ಲಿ ಆಡುತ್ತಿರುವ ಆಟವನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡರೆ ಆಫ್ಘನ್‌ ತಂಡ ಟೆಸ್ಟ್ ಅರ್ಹತೆ ಪಡೆಯುವುದು ಕಷ್ಟವಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT