ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪಿಯುಸಿಗೂ ಸರ್ಕಾರಿ ಕೆಲಸ!

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ರಾಜು ಗ್ರಾಮೀಣ ಪ್ರದೇಶದ ಸಾಮಾನ್ಯ ಬುದ್ಧಿಮಟ್ಟದ ವಿದ್ಯಾರ್ಥಿಯಾಗಿದ್ದವ (ಹೆಸರನ್ನು ಬದಲಾಯಿಸಲಾಗಿದೆ). ಹತ್ತನೇ ತರಗತಿ ಪರೀಕ್ಷೆ ತೇರ್ಗಡೆಯಾದರೂ ಅತಿ ಹೆಚ್ಚು ಎನ್ನುವಷ್ಟು ಅಂಕಗಳೇನು ಬಂದಿರಲಿಲ್ಲ. ಡೊನೇಷನ್‍ ಕೊಟ್ಟು ಓದಿಸುವಷ್ಟು ಶಕ್ತರು ಅವರ ಮನೆಯವರಾಗಿರಲಿಲ್ಲ. ಅನಿವಾರ್ಯವಾಗಿ ಅಲ್ಲಿ ಇಲ್ಲಿ ಸಿಕ್ಕ ಕೆಲಸಗಳನ್ನು ಮಾಡಿಕೊಂಡಿದ್ದ. ಒಳ್ಳೆಯ ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬಂದ. ಒಂದು ಹೋಟೆಲಿನಲ್ಲಿ ತರಕಾರಿ ಹೆಚ್ಚುವ ಕೆಲಸ ಸಿಕ್ಕಿತು. ಮಾಡುತ್ತಿದ್ದ. ಆ ಹೋಟೆಲಿನ ಮಾಲೀಕರು ದಯಾಳು. ಇವನ ಕೆಲಸವನ್ನು ಮೆಚ್ಚಿಕೊಂಡಿದ್ದರು. ಹಿನ್ನೆಲೆ ವಿಚಾರಿಸಿ ಅವನಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ಹೇಳಿ ಕೊಂಚ ತರಬೇತಿಗೆ ವ್ಯವಸ್ಥೆ ಮಾಡಿದರು. ದಡ್ಡನೇನು ಅಲ್ಲದ ರಾಜು ಬೇಗನೇ ಅದರ ಆಂತರ್ಯವನ್ನು ಅರಿತು ಕಷ್ಟಪಟ್ಟು ಓದಿದ. ಸರ್ಕಾರಿ ಕೆಲಸ ಸಿಕ್ಕಿಬಿಟ್ಟಿತು! ಇಷ್ಟಕ್ಕೇ ನಿಲ್ಲಲಿಲ್ಲ. ಓದನ್ನು ಮುಂದುವರೆಸಿ ದೊಡ್ಡ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾಗಿ ಇಂದು ವಿಧಾನಸೌಧದಲ್ಲಿ ಎರಡನೇ ದರ್ಜೆ ಗುಮಾಸ್ತನಾಗಿ ಕೆಲಸಮಾಡುತ್ತಿದ್ದಾನೆ.
 
ಹತ್ತನೇ ತರಗತಿಯೂ ಅಲ್ಲದ ಒಬ್ಬ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿ ಸೇರಿ ಕ್ರಮೇಣ ಓದಿ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಅದೇ ಬ್ಯಾಂಕಿನ ಜನರಲ್‍ ಮ್ಯಾನೇಜರ್‍ ಆದ ಘಟನೆ ಕೆಲವು ವರ್ಷಗಳ ಹಿಂದೆ ಸಂಚಲನವನ್ನೇ ಮೂಡಿಸಿತ್ತು.  
 
ಬಾಡಿಗೆ ಆಟೋ ಓಡಿಸುತ್ತಿದ್ದ ಕುಮಾರ; ಸ್ಪರ್ಧಾತ್ಮಕ ಪರೀಕ್ಷೆಯ ವಿವರ ತಿಳಿದು ಪ್ರಯತ್ನ ಮಾಡಿ ಕೆಲವೇ ವರ್ಷದಲ್ಲಿ ಸರ್ಕಾರಿ ನೌಕರ ಎನಿಸಿಕೊಂಡ. ತನ್ನ ಮಕ್ಕಳಿಗೆ ಈಗ ಒಳ್ಳೆಯ ಭವಿಷ್ಯ ರೂಪಿಸಬಲ್ಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.
 
ಇತ್ತೀಚೆಗೆ ಇಎಸ್ಐ ಆಸ್ಪತ್ರೆಗಳಲ್ಲಿನ ಕ್ಯಾಂಟೀನಿನಲ್ಲಿ ಅಡುಗೆಭಟ್ಟರ ಸಹಾಯಕರ ಹುದ್ದೆಗೆ ಅರ್ಜಿ ಕರೆದಿದ್ದರು. ಇದಕ್ಕೆ ಬೇಕಾಗಿದ್ದ ವಿದ್ಯಾರ್ಹತೆ ಹತ್ತನೇ ತರಗತಿ. ಪರೀಕ್ಷೆ ಪಾಸಾಗಿ ಆಯ್ಕೆಯಾದವರು ಏಳು ಮಂದಿ. ಸಂಬಳ ಮೂವತ್ತು ಸಾವಿರಕ್ಕೂ ಹೆಚ್ಚು!
 
ಏನಿದು? ಸರ್ಕಾರಿ ಕೆಲಸ ಸಿಗುವುದು, ಅದರಲ್ಲೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾಡಿದವರಿಗೆ ಇಷ್ಟು ಸುಲಭವೆ? ಪ್ರಾಮಾಣಿಕ ಉತ್ತರವೆಂದರೆ ಸಾಮಾನ್ಯವಾಗಿ ಜನರು ಅಂದುಕೊಂಡಿರುವಷ್ಟು ಕಷ್ಟವೂ ಅಲ್ಲ! ಬನ್ನಿ, ಅದೇನೆಂದು ತುಸು ವಿವರವಾಗಿ ತಿಳಿಯೋಣ.
 
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಅನೇಕ ಹುದ್ದೆಗಳಿಗೆ ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತಿದೆ. ಸಾಮಾನ್ಯವಾದ ಕಲ್ಪನೆಯೆಂದರೆ ಇವು ಅತಿ ಭಯಂಕರವಾಗಿರುವ ಪರೀಕ್ಷೆಗಳೆಂಬುದು. ಆದರೆ, ಅವು ಅಷ್ಟು ಕಷ್ಟವಾಗಿರುವುದಿಲ್ಲ. ಮುಕ್ತ ತರಬೇತಿ, ಸ್ವಂತ ಪರಿಶ್ರಮದಿಂದ ಇವನ್ನು ಪಾಸು ಮಾಡಿ ಜೀವನವನ್ನು ರೂಪಿಸಿಕೊಳ್ಳಬಹುದು. ಇಂದಿನ ಕಾಲದಲ್ಲಿಯೂ ಇವು ಸಾಕಷ್ಟು ಪಾರದರ್ಶಕವಾಗಿ ನಡೆಯುತ್ತವೆ.
 
ಸರ್ಕಾರಗಳಲ್ಲಿ (ಕೇಂದ್ರ ಮತ್ತು ರಾಜ್ಯ) ಎಲ್ಲ ದರ್ಜೆಯ ಅಧಿಕಾರಿಗಳಿಗೆ ನೌಕರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಾಲಕಾಲಕ್ಕೆ ನಡೆಸಲಾಗುತ್ತದೆ. ಇವುಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಗಳನ್ನು ಹೊಂದಿದವರಿಗೆ ಬೇರೆ ಬೇರೆ ಸ್ತರದ ಪರೀಕ್ಷೆಗಳಿರುತ್ತವೆ. ವಿದ್ಯಾರ್ಥಿಗಳು ಇವನ್ನೆಲ್ಲ ಅರಿತು ಅಭ್ಯಾಸ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು.
 
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಪೊಲೀಸ್‍ ಕಾನ್ಸ್‌ಸ್ಟೇಬಲ್, ಸಿಎಆರ್ ಪೊಲೀಸ್‍ ಹುದ್ದೆಗಳು, ಆಸ್ಪತ್ರೆಗಳಲ್ಲಿ ಗ್ರೂಪ್ ಡಿ ಹುದ್ದೆಗಳು ದೊರೆಯುತ್ತವೆ. ಜೀವನವನ್ನು ರೂಪಿಸಕೊಳ್ಳಬಹುದು. ಲಿಫ್ಟ್ ಆಪರೇಟರ್, ಕುಕ್, ಕುಕ್‍ ಮೇಟ್, ಕಾವಲುಗಾರ, ಆಂಬುಲೆನ್ಸ್ ಅಟೆಂಡರ್, ಡ್ರೆಸ್ಸರ್  ಮುಂತಾದ ಹಲವು ಹುದ್ದೆಗಳೂ ದೊರೆಯುತ್ತವೆ. ನಿಮ್ಹಾನ್ಸ್‌, ಬಿಎಆರ್‌ಸಿಗಳಲ್ಲಿಯೂ ತೆಗೆದುಕೊಳ್ಳುತ್ತಾರೆ. ಕೋರ್ಟು, ಅಂಚೆ ಇಲಾಖೆಯಲ್ಲಿಯೂ ಸಹ ಕೆಲವು ಹುದ್ದೆಗಳು ದೊರೆಯುತ್ತವೆ. ಬ್ಯಾಂಕುಗಳಲ್ಲಿ ಅಟೆಂಡರ್ ಹುದ್ದೆಗಳು ಸಾಕಷ್ಟಿರುತ್ತವೆ. ಅಲ್ಲಿಯೂ ಕೆಲಸ ದೊರೆಯುತ್ತದೆ. ಬ್ಯಾಂಕುಗಳಲ್ಲಿ ಸಬ್‍ ಸ್ಟಾಫ್‌ ಎಂದು ತೆಗೆದುಕೊಂಡು ಆನಂತರ ಅವರನ್ನೇ ನೇಮಕ ಮಾಡಿಕೊಳ್ಳುವುದೂ ಉಂಟು. ಬ್ಯಾಂಕಿನ ಅಟೆಂಡರ್ ಹುದ್ದೆಗಳಿಗೆ ಸದ್ಯ ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ. ಪರೀಕ್ಷೆ ನಡೆಸಬೇಕು ಎಂಬ ಆಲೋಚನೆಯೂ ಇದೆ. ಆದರೆ ಯಾವ ಪರೀಕ್ಷೆಯೂ ಇದುವರೆಗೂ ನಡೆದಿಲ್ಲ. ಇಲ್ಲಿ ಕೆಲಸ ದೊರೆತ ನಂತರ ಸ್ವಂತ ಅಧ್ಯಯನದ ಮೂಲಕ ಮುಂದೆ ಬರಲು ಸಾಕಷ್ಟು ಅವಕಾಶಗಳಿವೆ. ಹಾಗೆ ನೋಡಿದರೆ ನೇರವಾಗಿ ಅಧಿಕಾರಿಯಾಗಿ ಸೇರುವುದಕ್ಕಿಂತ ಕೆಳ ಹಂತದಲ್ಲಿ ಸೇರಿ ಅನಂತರ ಮೇಲೇರುವುದು ಸುಲಭವೂ ಕೆಲಸಕ್ಕೆ ಅನುಕೂಲವೂ ಆಗಿರುತ್ತದೆ. ಸರಿಯಾಗಿ ಗಮನಿಸಿದರೆ  ಎಸ್‌ಎಸ್‌ಎಲ್‌ಸಿ ಪಾಸಾದವರು ಎಂಟು ಅರ್ಜಿಗಳನ್ನಾದರೂ ಹಾಕಬಹುದು!
 
ಹುದ್ದೆಗಳ ಕುರಿತಾದ ಮಾಹಿತಿ ಎಲ್ಲಿ ಸಿಗುತ್ತದೆ?
ಎಲ್ಲ ಪತ್ರಿಕೆಗಳಲ್ಲಿ ಜಾಹೀರಾತು ಬರುತ್ತದೆ; ಅದನ್ನು ಗಮನಿಸುತ್ತಿರಬೇಕು. ಎಂಪ್ಲಾಯಿಮೆಂಟ್‍ ಇಲಾಖೆಯಲ್ಲಿಯೂ ವಿಚಾರಿಸಬಹುದು. ಇಂದು ಮತ್ತೊಂದು ಸೌಲಭ್ಯವೂ ಉಂಟು. ಅದುವೇ ಜಾಲತಾಣಗಳು! ನಿಮಗೆ ತಿಳಿದಿರುವ ಎಲ್ಲ ಸರ್ಕಾರಿ ಸಂಸ್ಥೆಗಳ ಜಾಲತಾಣಗಳನ್ನು ನೋಡಿರಿ (ಜಾಲತಾಣ ತಿಳಿದಿರದಿದ್ದಲ್ಲಿ ಗೂಗಲ್ ಮಾಡಿ). ಅವುಗಳಲ್ಲಿ ನೇಮಕಾತಿ ಎಂದಿರುತ್ತದೆ. ಅಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ. ಇತ್ತೀಚೆಗಂತೂ ಪರೀಕ್ಷೆಯ ವಿವರಗಳು, ದಿನಾಂಕ ಮಾತ್ರವಲ್ಲ ಪರೀಕ್ಷೆಗೆ ಪರಿಗಣಿಸಲಾಗುವ ವಿವರವಾದ ಪಠ್ಯಕ್ರಮ (ಸಿಲಬಸ್) ಅನ್ನು ಸಹ ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಅವನ್ನು ನೋಡಿ ಅಂತೆಯೇ ಸಿದ್ಧವಾಗಿ ತಕ್ಕ ಹುದ್ದೆಯನ್ನು ಪಡೆಯಬಹುದು.
 
ಇನ್ನು ಪಿಯುಸಿ ಅರ್ಹತೆಗೆ ಬಂದರೆ ಹುದ್ದೆಗಳಿಗೆ ಬಹುಮುಖ್ಯ ಆಕರ ಕೆಪಿಎಸ್‌ಸಿ. ಎರಡನೇ ದರ್ಜೆ ಗುಮಾಸ್ತರ ಹುದ್ದೆಗಳು. ಇವಕ್ಕೆ ಪರೀಕ್ಷೆಗಳಿರುತ್ತವೆ. ಎರಡು ಪೇಪರುಗಳು ಇರುತ್ತವೆ: ಸಾಮಾನ್ಯ ಜ್ಞಾನ ಮತ್ತು ಕನ್ನಡ. ಸಾಮಾನ್ಯ ಜ್ಞಾನ ಎಂದರೆ ಕೇವಲ ಮುಖ್ಯ ಮಂತ್ರಿ–ಪ್ರಧಾನಿಗಳ ಹೆಸರಲ್ಲ! ಇದರಲ್ಲಿ ಇತಿಹಾಸ (ಕರ್ನಾಟಕ, ಭಾರತ, ವಿಶ್ವ, ಭಾರತದ ಸ್ವಾತಂತ್ರ್ಯ ಸಂಗ್ರಾಮ), ಭೂಗೋಳ (ಕರ್ನಾಟಕ, ಭಾರತ, ವಿಶ್ವ), ವಿಜ್ಞಾನ, ಅರ್ಥಶಾಸ್ತ್ರ,  ತಂತ್ರಜ್ಞಾನ – ಈ ಎಲ್ಲವೂ ಸೇರಿರುತ್ತವೆ; ಸದ್ಯದ ಆಗುಹೋಗುಗಳೂ ಸೇರುತ್ತವೆ. ಹಾಗೆಯೇ ಕನ್ನಡದಲ್ಲಿ ಸಾಹಿತ್ಯಚರಿತ್ರೆ, ಹಳೆ – ಹೊಸಗನ್ನಡ ಲೇಖಕರು, ಅವರ ಕೃತಿಗಳು, ವ್ಯಾಕರಣ ಇತ್ಯಾದಿಗಳಿರುತ್ತವೆ. ಹಾಗೆಯೇ ಇಂಗ್ಲಿಷ್‍. ‘ಇಲ್ಲಿ ಕೊಟ್ಟ ಉತ್ತರದಲ್ಲಿ ಸರಿಯಾದ್ದನ್ನು ಗುರುತಿಸುವ’ – ಮಾದರಿಯ ಪ್ರಶ್ನೆಗಳೂ ಇರುತ್ತವೆ. ಈ ಎಲ್ಲದಕ್ಕೂ ಚೆನ್ನಾಗಿ ಅಧ್ಯಯನ ಮಾಡಬೇಕು. ಇವಕ್ಕೆ ಸಾಕಷ್ಟು ಪುಸ್ತಕಗಳು, ವಾರ, ಮಾಸಪತ್ರಿಕೆಗಳು ದೊರೆಯುತ್ತವೆ. ಅವನ್ನು ಕೊಂಡು ಅಧ್ಯಯನ ಮಾಡಿರಿ. ಅದರಲ್ಲಿಯೂ ನೇಮಕಾತಿ ಕುರಿತ ಜಾಹಿರಾತುಗಳಿರುತ್ತವೆ. ಅಧ್ಯಯನದ ಕ್ರಮ ಅಂದರೆ ಈಗ ಭಾರತದ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಶ್ರೀ ನರೇಂದ್ರ ಮೋದಿ, ಶ್ರೀಮತಿ ಇಂದಿರಾ ಗಾಂಧೀ, ಶ್ರೀ ಜಾರ್ಜ್ ಬುಶ್, ಶ್ರೀ ಸಚಿನ್ ತಂಡೂಲ್ಕರ್ ಎಂಬ ಆಯ್ಕೆಗಳಿವೆ ಎಂದುಕೊಳ್ಳಿ. ಸರಿಯಾದ ಉತ್ತರ ನಮಗೆ ಗೊತ್ತು ಎಂದು ಪುಸ್ತಕ ಮುಚ್ಚಿಡುವುದಲ್ಲ! ಉಳಿದ ಮೂರು ಆಯ್ಕೆಗಳ ಸುತ್ತವೂ ನಮ್ಮ ಅಧ್ಯಯನ  ಸಾಗಬೇಕು! ಸಚಿನ್ ತೆಂಡೂಲ್ಕರ್ ಕುರಿತು ಬೇರೆ ಪ್ರಶ್ನೆ ಬರಬಹುದಲ್ಲವೆ? ಹೀಗೆ ಯೋಚಿಸಿ ಅಧ್ಯಯನ ಮಾಡಬೇಕು. ಈ ಬಗೆಯ ಇಪ್ಪತ್ತು ಸಾವಿರ ಪ್ರಶ್ನೆಗಳನ್ನು ನೀವು ಓದಿದ್ದರೂ ನೀವು ಓದಿದ್ದೇ ಬರುವ ಸಾಧ್ಯತೆ ಕಡಿಮೆ ಎಂದರೆ ಪಠ್ಯಕ್ರಮದ ವಿಸ್ತಾರ ನಿಮಗೆ ಮನದಟ್ಟಾಗುತ್ತದೆ.  ಪತ್ರಿಕೆಗಳನ್ನು ಅದರಲ್ಲಿಯೂ ಅವುಗಳ ಸಂಪಾದಕೀಯ ಮತ್ತು ಸಂಪಾದಕೀಯದ ಪುಟದ ಇತರ ಲೇಖನಗಳನ್ನು ಚೆನ್ನಾಗಿ ಓದಿ ಅಭ್ಯಾಸ ಮಾಡಿ ಟಿಪ್ಪಣಿ ಮಾಡಿಕೊಳ್ಳಬೇಕು.
 
ಕೆಪಿಎಸ್‌ಸಿ ಜೊತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಬುದಿದೆ. ಅವರೂ ಸಹ ಅನೇಕ ಹುದ್ದೆಗಳಿಗೆ ಕರೆಯುತ್ತಾರೆ. ಇಲ್ಲಿ ವಿಜ್ಞಾನ ಮತ್ತು ಗಣಿತದ ಜ್ಞಾನವೂ ಬೇಕಾಗುತ್ತದೆ. ಹಲವು ನಿಗಮ ಮಂಡಳಿಗಳಿವೆ ಅಲ್ಲಿಯೂ ಸಹ ನಿಮಗೆ ಸಾಕಷ್ಟು ಹುದ್ದೆಗಳು ಕಾದಿವೆ.
 
ಈ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳಿಗೆ ಹೋಗುವುದು ಒಳಿತು. ಇದರಿಂದ ನಿಮ್ಮ ಎರಡು ವರ್ಷಗಳಾದರೂ ಉಳಿಯುತ್ತವೆ ಎನ್ನುತ್ತಾರೆ ತಜ್ಞರು. ನೀವೇ ಎಲ್ಲವನ್ನೂ ಓದಿ, ಪರೀಕ್ಷೆಗೆ ತಯಾರಗುವುದಕ್ಕಿಂತಲೂ ತಜ್ಞರು ತಮ್ಮ ಅನುಭವದಿಂದ ಹೇಳುವುದು ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಅಂದರೆ ‘ಈ ವರ್ಷ ಪರೀಕ್ಷೆ ಬರೆದೆ; ಮುಂದಿನ ವರ್ಷವೇ ನಾನು ಸರ್ಕಾರಿ ಕುರ್ಚಿಯಲ್ಲಿ ಕೂತೆ’ ಎನ್ನುವ  ಅತಿ ವಿಶ್ವಾಸ ಬೇಡ. ಕೆಲವು ವರ್ಷ ಕಷ್ಟಪಡಲೇಬೇಕಾಗುತ್ತದೆ.
 
ಗುರಿಯನ್ನು ಸ್ಪಷ್ಟವಾಗಿರಿಸಿಕೊಳ್ಳಿ
ಕೆಲವು ಹತ್ತು ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು, ‘ಇಷ್ಟೆಲ್ಲ ಕಷ್ಟ ಪಟ್ಟೆ ಏನೂ ಆಗಲಿಲ್ಲ’ ಎಂದು ಕೊರಗುತ್ತಾರೆ. ಅದರ ಬದಲಾಗಿ ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು - ಬೇಕಾದಲ್ಲಿ - ತರಬೇತಿ ಕೇಂದ್ರದವರ ಸಲಹೆ ಪಡೆದು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಿ. ಒಮ್ಮೆ ಆಯ್ಕೆ ಮಾಡಿಕೊಂಡ ನಂತರ ತೀರಿತು. ನಿಮ್ಮ ಜೀವನದಲ್ಲಿ ಆ ಪರೀಕ್ಷೆ ಹೊರತು ಮತ್ತೇನೂ ಕಾಣಲೇಬಾರದು. ಆ ಅರ್ಜುನನಿಷ್ಠೆಯಿಂದ ಅಧ್ಯಯನ ಮಾಡಿದಲ್ಲಿ ನಿಮಗೆ ಸೂಕ್ತ ಹುದ್ದೆ ನಿಶ್ಚಿತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT