ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ತಭಾವ ಇನ್ನೆಲ್ಲಿ?

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರಿಗೂ ನನಗೂ ಸುಮಾರು ಮೂವತ್ತೈದು ವರುಷಗಳ ಬಾಂಧವ್ಯ. ನಾನು ಹುಟ್ಟಿ ಬೆಳೆದಿದ್ದು ಹಾಸನ ಜಿಲ್ಲೆಯಲ್ಲಿ. ಓದಿದ್ದು ಮೈಸೂರಿನಲ್ಲಿ. ಆದರೆ, ನನ್ನ ಜೀವನದ ಬಹುಭಾಗ ಕಳೆದಿದ್ದು ಈ ಊರಿನಲ್ಲಿ.  ಎಲ್ಲೋ ಹುಟ್ಟಿ ಬೆಳೆದವಳಿಗೆ ಮೂರು ದಶಕಗಳಲ್ಲಿ ಈ ನಗರ ಕೊಟ್ಟ ಆಪ್ತಭಾವ ಅನನ್ಯ.

ಅದರಲ್ಲೂ ಬೆಂಗಳೂರಿನ ರಂಗಭೂಮಿಯಲ್ಲಿ ಹೆಚ್ಚಿನ ಸಮಯ ಕಳೆದ ನನಗೆ ಇಲ್ಲಿನ ರವೀಂದ್ರ ಕಲಾಕ್ಷೇತ್ರ, ರಂಗಶಂಕರ ನಲುಮೆಯ ತಾಣಗಳು. ಮನೆ ಬಿಟ್ಟರೆ ಹೆಚ್ಚು ಕಮ್ಮಿ ಕಲಾಕ್ಷೇತ್ರವೇ ನಮ್ಮನೆಯಾಗಿತ್ತು ಒಂದು ಕಾಲದಲ್ಲಿ. ಉಳಿದಂತೆ ನಾನು ರಿಹರ್ಸಲ್ ಮಾಡುತ್ತಿದ್ದ ತಾಣಗಳು, ಕೆಲಸ ಮಾಡುತ್ತಿದ್ದ ಎನ್ಎಂಕೆಆರ್‌ವಿ ಕಾಲೇಜು, ನನ್ನ ನಗರದ ನೆನಪುಗಳೊಂದಿಗೆ ಬಿಡಿಸಲಾಗದ  ಬಾಂಧವ್ಯ ಬೆಸೆದಿವೆ.

ನಾನಾಗ ಮೈಸೂರಿನ ರೀಜನಲ್ ಕಾಲೇಜಿನಲ್ಲಿ ಓದುತ್ತಿದ್ದೆ. ಮೊದಲ ಬಾರಿಗೆ ಬೆಂಗಳೂರಿಗೆ ಬಂದದ್ದು ನಾಟಕ ಪ್ರದರ್ಶನಕ್ಕೋಸ್ಕರ. ನನಗಾಗ ಇಪ್ಪತ್ತೈದು ವರ್ಷವಿರಬಹುದೇನೋ? ಹಾಗೆ ಬಂದ ನೆನಪು ಇಂದಿಗೂ ಅಚ್ಚಳಿಯದೇ ಉಳಿದಿದೆ.

‘ಉಲ್ಲಾಳ್ ಪಾರಿತೋಷಕ ನಾಟಕ ಸ್ಪರ್ಧೆ’ಗಾಗಿ ನಮ್ಮ  ಕಾಲೇಜಿನ ರಂಗತಂಡ ಬೆಂಗಳೂರಿಗೆ ಬಂದಿತ್ತು. ‘ಆಷಾಢಭೂತಿ’ ನಾಟಕ ತಂದಿದ್ದೆವು ಸ್ಪರ್ಧೆಗೆ. ನಮ್ಮೆಲ್ಲರಿಗೂ ಬೆಂಗಳೂರಿಗೆ ಹೋಗುವುದೇ ಒಂದು ಸಂಭ್ರಮವಾಗಿತ್ತು. ಅದರಲ್ಲೂ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಆಡುವುದು ನಮ್ಮೆಲ್ಲರ ಕನಸಾಗಿತ್ತು. ಆ ಕನಸು ಈ ನಾಟಕ ಸ್ಪರ್ಧೆಯ ಮೂಲಕ ನನಸಾಗಿತ್ತು. ಕಾಲೇಜು ದಿನಗಳಲ್ಲಿ ಮೊದಲ ಬಾರಿಗೆ  ಆರಂಭವಾದ ಕಲಾಕ್ಷೇತ್ರದ ನಂಟು ಇಂದಿಗೂ ಉಳಿದಿದೆ. 

ಇಂದಿಗೆ ಮೂವತ್ತೈದು ವರ್ಷಗಳ ಹಿಂದೆ ಮೈಸೂರಿನಲ್ಲಿ ಪ್ರಶಾಂತವಾದ ವಾತಾವರಣವಿತ್ತು. ಆಗ ಬೆಂಗಳೂರು ಈಗಿನಷ್ಟು ಬ್ಯುಸಿ ಇರಲಿಲ್ಲವಾದರೂ, ಮೈಸೂರಿನಿಂದ ಬೆಂಗಳೂರಿಗೆ ಬರೋದು ಅಂದರೆ ಮುಂಬೈಗೆ ಹೋದಂತೆ ಅನ್ನುವ ಭಾವನೆಯಿತ್ತು ನಮಗೆ. ಆದರೆ, ಈಗ ನಾನು ಮೈಸೂರಿಗೆ ಹೋದರೆ ಮೂರು ದಿನದ ಮೇಲೆ ಇರಲಾಗದು. ಆದಷ್ಟು ಬೇಗ ಬೆಂಗಳೂರಿಗೆ ಬಂದುಬಿಡುತ್ತೇನೆ.

ನನ್ನೆಲ್ಲಾ ಚಟುವಟಿಕೆಗಳಿಗೆ  ಈ ನಗರವೇ ಕೇಂದ್ರವಾಗಿದೆ. ಹಾಗಾಗಿ, ಬೆಂಗಳೂರೇ ನನಗೆ ಅಪ್ಯಾಯಮಾನ. ಈಗಂತೂ ಬೆಂಗಳೂರು ಬಿಟ್ಟರೆ ಬೇರೆಲ್ಲೂ ವಾಸ ಮಾಡಲು ಕಲ್ಪಿಸಿಕೊಳ್ಳಲು ನನಗಾಗದು.

ಮೈಸೂರಿನಲ್ಲಿದ್ದಾಗ ಪೀಟರ್ ಎನ್ನುವ ಇಂಗ್ಲಿಷ್ ರಂಗನಿರ್ದೇಶಕರೊಬ್ಬರ ಪರಿಚಯವಾಯಿತು. ಆಗ ಅವರು ಸ್ನೇಹಲತಾ ರೆಡ್ಡಿ ಅವರ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಆಗ ನಾಟಕದ ಮೂಲಕ ಪ್ರತಿಭಟನೆ ಮಾಡುವ, ಸಾಮಾಜಿಕ ಬದಲಾವಣೆ ಮಾಡುವ ಬಗ್ಗೆ ಚಿಂತನೆಗೆ ತೊಡಗಿಕೊಂಡೆ.

ಇಂಗ್ಲೆಂಡಿನಿಂದ ಉನ್ನತ ಅಧ್ಯಯನ ಮುಗಿಸಿಕೊಂಡು ಬಂದಿದ್ದ ನನ್ನ ಪತಿ ಪ್ರೊ.ಬಿ.ಕೆ. ಚಂದ್ರಶೇಖರ್ ಅವರು ಆಗ ಎಡಪಂಥೀಯ ಸ್ನೇಹಿತರ ಜತೆ ಗುರುತಿಸಿಕೊಳ್ಳುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ನನಗೆ ಮೇಷ್ಟ್ರಾಗಿದ್ದರು. ಅವರ ಪ್ರಭಾವವೂ ನನ್ನ ಮೇಲೆ ಬಹಳಷ್ಟಿತ್ತು. ಇವೆಲ್ಲದರ ಮೂಲಕ ‘ಸಮುದಾಯ’ದ ಸಂಘಟನೆಯ ಜತೆಗೆ ನಿಧಾನವಾಗಿ ಒಡನಾಟ ಮೂಡತೊಡಗಿತು.

ಬೆಂಗಳೂರಿಗೆ ಬಂದವಳೇ ಸೀದಾ  ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿ ‘ಸಮುದಾಯ’ದ ರಂಗಕರ್ಮಿ ಪ್ರಸನ್ನ ಅವರನ್ನು ಭೇಟಿ ಮಾಡಿದೆ. ಆಗ  ಬೆಂಗಳೂರಿನಲ್ಲಿ ಈ ರೀತಿಯ ನಾಟಕಗಳನ್ನು ಮಾಡಿಸುವುದರಲ್ಲಿ ಪ್ರಸನ್ನ ಮುಂಚೂಣಿಯಲ್ಲಿದ್ದರು.

ಅವರ ನಿರ್ದೇಶನದ ‘ಗೆಲಿಲಿಯೊ’ ನಾಟಕಕ್ಕೆ ಆಯ್ಕೆಯಾದೆ. ಕಲಾಕ್ಷೇತ್ರದ ಲೇಡಿಸ್ ಲಾಂಜ್‌ನಲ್ಲಿ ಪ್ರಸನ್ನ ನಾಟಕ ಪ್ರದರ್ಶಿಸಿದ್ದರು. ಅದು ಮರೆಯಲಾಗದ್ದು. ಪ್ರೇಕ್ಷಕರ ಮಧ್ಯದಲ್ಲಿಯೇ ರ್‍್ಯಾಂಪ್‌ ಮೂಲಕ ನಟರು  ನಾಟಕದ ವೇದಿಕೆಗೆ ಬರುವಂತೆ ಪ್ರಸನ್ನ ದೃಶ್ಯ ರೂಪಿಸಿದ್ದರು. ಅದು ಅದ್ಭುತ ಅನುಭವ.
ಮೈಸೂರಿನಿಂದ ಬಂದ ತಕ್ಷಣವೇ ಪ್ರಸನ್ನ ಅವರಂಥ ರಂಗಕರ್ಮಿಯೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನ್ನ ರಂಗಭೂಮಿ ಕೆರಿಯರ್‌ನಲ್ಲಿ ಸಹಾಯವಾಯಿತು. ಆಗೆಲ್ಲಾ ಸಮುದಾಯದಿಂದ ಒಳ್ಳೊಳ್ಳೆಯ ಪ್ರೊಡಕ್ಷನ್‌ಗಳಾದವು. ಆಗ ನಮ್ಮ ಸೋಷಿಯಲ್ ಲೈಫ್‌ ಅಂದರೆ ಬರೀ ನಾಟಕ, ರಿಹರ್ಸಲ್ ಆಗಿತ್ತು.

ಆಗ ಎನ್‌.ಆರ್. ಕಾಲೊನಿಯ ಚಿಕ್ಕದೊಂದು ಮನೆಯಲ್ಲಿ ‘ಸಮುದಾಯ’ದ ಕಚೇರಿ ಇತ್ತು. ಅಲ್ಲಿ ಪ್ರಗತಿಪರ ಮಿತ್ರರೆಲ್ಲಾ ಸೇರಿ ಹೊಸ ಪುಸ್ತಕಗಳ ಕುರಿತು ಚರ್ಚಿಸುತ್ತಿದ್ದೆವು.

‘ಎಕನಾಮಿಕ್ ಟೈಮ್ಸ್‌’ನ ನರೇಂದ್ರ ಪಾಣಿ ಅವರು ನಮಗೆ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದರು. ಚರ್ಚೆ, ಕ್ಲಾಸ್ ಮುಗಿದ ಬಳಿಕ ಅರ್ಧರ್ಧ ಲೋಟ ಟೀ ಕುಡಿಯುತ್ತಿದ್ದೆವು. ಅವೆಲ್ಲಾ ಮಧುರ ನೆನಪುಗಳು.

ಎನ್ಎಂಕೆಆರ್‌ವಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಳೆದದ್ದು 28 ವರ್ಷಗಳು! ಆ ದಿನಗಳು ನಿಜಕ್ಕೂ ಬಲು ಸುಂದರವಾಗಿದ್ದವು. ಚಿ.ನ. ಮಂಗಳಾ ಅವರನ್ನಂತೂ ಎಷ್ಟು ನೆನಪಿಸಿಕೊಂಡರೂ ಸಾಲದು.

ನಮ್ಮ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಮುಂದಿರುತ್ತಿತ್ತು. ಅತ್ತ ಬಹುಮಾನ ಘೋಷಣೆಯಾಗುತ್ತಿದ್ದಂತೆ ಇತ್ತ ದೂರವಾಣಿ ಮೂಲಕ ಮಂಗಳಾ ಅವರಿಗೆ ತಿಳಿಸುತ್ತಿದ್ದೆ. ಬಹುಮಾನಗಳನ್ನು ಒಯ್ಯುಲು ಒಂದು ಲಾರಿಯೇ ಬೇಕು ಎಂದು ತಮಾಷೆ ಮಾಡುತ್ತಿದ್ದರು. ಯುವ ಜನರು ಅಷ್ಟೊಂದು ಸಂಖ್ಯೆಯಲ್ಲಿ  ರಂಗಭೂಮಿಯಲ್ಲಿ ತೊಡಗಿಕೊಂಡದ್ದು ರೋಮಾಂಚನ ಉಂಟು ಮಾಡುತ್ತಿತ್ತು.

ಮರೆಯದ ಸ್ಥಳಗಳು
ಬನಶಂಕರಿಯಲ್ಲಿ ಸ್ವಂತ ಮನೆ ಮಾಡುವ ಮುನ್ನ ಗಾಂಧಿ ಬಜಾರಿನ ಎಚ್‌.ಬಿ. ಸಮಾಜದ ಹತ್ತಿರ ಮನೆ ಮಾಡಿದ್ದೆವು. ಅಲ್ಲಿ ಸುಬ್ಬಮ್ಮನ ಅಂಗಡಿ ಅಂತ ಇತ್ತು. ಅಲ್ಲಿ ಹೋಗಿ ಮಸಾಲೆ ಪದಾರ್ಥಗಳನ್ನು ತರುತ್ತಿದ್ದೆವು. ಅಂತೆಯೇ ಗಾಂಧಿ ಬಜಾರಿನಲ್ಲಿ ಕಾಫಿ ಪುಡಿ, ತರಕಾರಿಗಳನ್ನು ತರಲು ನಿರ್ದಿಷ್ಟ ಸ್ಥಳಗಳಿದ್ದವು. ಅಲ್ಲಿಗೆ ಹೋಗಿ ಸಾಮಾನು ತರುವುದು ಖುಷಿ ಕೊಡುತ್ತಿತ್ತು.

ಹೊರ ದೇಶಗಳಿಂದ ಬರುತ್ತಿದ್ದ ಸ್ನೇಹಿತರಿಗೆ ಕಹಳೆ ಬಂಡೆ ಉದ್ಯಾನಕ್ಕೆ (ಬ್ಯೂಗಲ್ ರಾಕ್‌) ಕರೆದುಕೊಂಡು ಹೋಗುತ್ತಿದ್ದೆ. ಸಮಯ ಸಿಕ್ಕಾಗ ಮಿನರ್ವ ವೃತ್ತದ ನ್ಯೂ ಮಾಡರ್ನ್‌ ಹೋಟೆಲ್‌ಗೆ (ಎನ್ಎಂಎಚ್‌) ಹೋಗಿ ಮಸಾಲೆ ದೋಸೆ, ಜಾಮೂನು ತಿನ್ನುತ್ತಿದ್ದೆವು.  ಎನ್ಎಂಎಚ್, ಕಲಾವಿದರ ನೆಚ್ಚಿನ ತಾಣವಾಗಿತ್ತು. ಅಲ್ಲಿ ಲಾಡ್ಜಿಂಗ್ ಕೂಡಾ ಇತ್ತು. ಅಲ್ಲಿ  ಕಲಾವಿದರು ತಿಂಗಳುಗಟ್ಟಲೇ ಉಳಿಯುತ್ತಿದ್ದರು.

ಲಿಂಕ್‌: bit.ly/2lT8w6E

ರಂಗಶಂಕರ ಒಡನಾಟ
ನಗರ ಬೆಳೆದಂತೆ ಕಲಾಕ್ಷೇತ್ರಕ್ಕೆ ಹೋಗಿಬರುವುದು ದೂರ ಎನಿಸತೊಡಗಿದಾಗ ನನಗೆ ಹತ್ತಿರವಾಗಿದ್ದು ರಂಗಶಂಕರ. ನಾಟಕ ಮಾಡುವವರಿಗೆ, ನೋಡುವವರಿಗೆ ತುಂಬಾ ಪ್ರಿಯವಾದ ಜಾಗವಿದು. ದೇಶವಿದೇಶಗಳ ರಂಗಕರ್ಮಿಗಳು, ನಾಟಕಗಳನ್ನು ಇಲ್ಲಿ ಕಾಣಬಹುದು.  ಈಗ ಅಲ್ಲೂ ಸುತ್ತಮುತ್ತ ಹೋಟೆಲ್‌ಗಳು ಶುರುವಾಗಿ ಆ ಪ್ರದೇಶವೂ ಬ್ಯುಸಿಯಾಗಿದೆ.

ರಂಗಶಂಕರ ಶುರುವಾದ ಹೊಸತರಲ್ಲಿ ಅಲ್ಲಿಗೆ ಹೋಗೋದು ಅಂದರೆ ಒಂಥರಾ ರಿಲ್ಯಾಕ್ಸ್‌ ಅನಿಸುತ್ತಿತ್ತು. ಆರಂಭದ ದಿನಗಳಲ್ಲಿ ನಮ್ಮ ‘ಕ್ರಿಯೇಟಿವ್‌’ ತಂಡದ ನಾಟಕಗಳೇ ಜಾಸ್ತಿ ಇರುತ್ತಿದ್ದವು. ತಿಂಗಳಲ್ಲಿ  ಎಂಟ್ಹತ್ತು ಷೋಗಳನ್ನು ಮಾಡುತ್ತಿದ್ದೆವು. ಆದರೆ, ಈಗ ತಿಂಗಳಲ್ಲಿ ಒಂದುಬಾರಿ ಸಿಕ್ಕರೆ ದೊಡ್ಡದು ಎನ್ನುವಂತಾಗಿದೆ.

ಮರೆಯಾದ ಆಪ್ತಭಾವ
ಆಗ ಬೆಂಗಳೂರಿನಲ್ಲಿ ಸ್ನೇಹಿತರ, ಆತ್ಮೀಯರ ಮನೆಗೆ ಸಲೀಸಾಗಿ ಹೋಗಿ ಬರಬಹುದಾಗಿತ್ತು. ನಮ್ಮ ಬನಶಂಕರಿಯ ಮನೆಗೆ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಶಿವಮೊಗ್ಗ ಸುಬ್ಬಣ್ಣ ಮೊದಲಾದವರೆಲ್ಲಾ ಬರುತ್ತಿದ್ದರು. ಆಗೆಲ್ಲಾ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು; ಚರ್ಚಿಸುತ್ತಿದ್ದೆವು. ಸಂಗೀತ ಸುಧೆಯೂ ಹರಿಯುತ್ತಿತ್ತು. ಆದರೆ, ಈಗ ಆಪ್ತರ ಮನೆಗೆ ಅಷ್ಟೊಂದು ಸಲೀಸಾಗಿ ಹೋಗಲಾಗದು. ವೇಗ, ಅಭಿವೃದ್ಧಿ, ಸಂಚಾರ ದಟ್ಟಣೆ ಇವೆಲ್ಲದರ ನಡುವೆ ನಗರದ ಆಪ್ತಭಾವವೇ ಕಾಣೆಯಾಗಿದೆ.

ಆಗಿನ ಬೆಂಗಳೂರಿನಲ್ಲಿ ಆತ್ಮೀಯ ಭಾವವಿತ್ತು. ಮುಗ್ಧತೆ ಇತ್ತು. ಜನರಲ್ಲೂ ಒಂದು ರೀತಿಯ ಮುಗ್ಧತೆ ಇತ್ತು ಎನ್ನಿ. ನಮ್ಮಲ್ಲೂ ಒಂದು ರೀತಿಯ ನಂಬಿಕೆ ಇರುತ್ತಿತ್ತು. ಎಲ್ಲೇ ಹೋದರೂ  ಧೈರ್ಯವಾಗಿ ಹಿಂತಿರುಗಿ ಬರುತ್ತೇವೆ ಅನ್ನುವ ಸುರಕ್ಷಾ ಭಾವವಿತ್ತು. ಆದರೆ, ಈಗ ಹಾಗಿಲ್ಲ.

ಇಪ್ಪತ್ತು ವರ್ಷಗಳಿಂದೀಚೆಗೆ ನಗರ ಬಹಳಷ್ಟು ಬದಲಾಗಿದೆ.   ಹೊರಗೆ ಓಡಾಡಲು ಭಯವಾಗುತ್ತದೆ. ನಗರದ ನೈತಿಕ ಎಳೆಯೇ ಛಿದ್ರವಾಗಿಬಿಟ್ಟಿದೆ ಅನಿಸುತ್ತದೆ. ಎಲ್ಲಿಯೂ ಒಂಟಿಯಾಗಿ, ಸುರಕ್ಷಿತವಾಗಿ ಇರಲಾಗದು ಅನ್ನುವ ಭಾವ ಆವರಿಸಿಬಿಟ್ಟಿದೆ. ಒಟ್ಟಿನಲ್ಲಿ ನಗರದಲ್ಲಿ ಹಿಂದೆ ಇದ್ದ ಆಪ್ತಭಾವ ನಾಪತ್ತೆಯಾಗಿದೆ.

ಲೂನಾ ಕೈಕೊಟ್ಟ ಪ್ರಸಂಗ
ಆಗಷ್ಟೇ ರಂಗ ವಿಮರ್ಶೆ ಬರೆಯಲು ಆರಂಭಿಸಿದ್ದೆ. ಆಗ ನನ್ನ ಬಳಿ ಒಂದು ಲೂನಾ ಇತ್ತು. ಬನಶಂಕರಿಯಿಂದ ಮಲ್ಲೇಶ್ವರದ ತನಕ ಆರಾಮವಾಗಿ ಹೋಗಿ ಬರುತ್ತಿದ್ದೆ. ಎಷ್ಟೋ ಬಾರಿ ಬರುವಾಗ ರಾತ್ರಿ ಆಗಿರುತ್ತಿತ್ತು. ಆಗ ಇಷ್ಟೊಂದು ಹೆದರಿಕೆ ಇರಲಿಲ್ಲ.  ಜೆ.ಸಿ. ರಸ್ತೆಯಲ್ಲಿ ಎರಡೂ ಬದಿ ವಾಹನ ಸಂಚಾರವಿತ್ತು.
ಆ ದಿನಗಳಲ್ಲಿ  ಒಂದು ಘಟನೆ ನಡೆಯಿತು.   ಮಲ್ಲೇಶ್ವರಕ್ಕೆ ಹೋಗಿ ನಾಟಕ ನೋಡಿಕೊಂಡು ವಾಪಸ್‌ ಬರುವಾಗ ಇಂಡಿಯನ್ ಎಕ್ಸ್‌ಪ್ರೆಸ್ ಬಳಿ ನನ್ನ ಲೂನಾ ಕೆಟ್ಟು ನಿಂತಿತು. ಆಗ ನನ್ನ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತರು ತಮ್ಮ ಗಾಡಿ ನಿಲ್ಲಿಸಿ, ನನ್ನ ಲೂನಾ ರಿಪೇರಿ ಮಾಡಿಕೊಟ್ಟರು. ಅಲ್ಲದೇ ಸೌತ್ ಎಂಡ್ ಸರ್ಕಲ್  ತನಕ ಬಿಟ್ಟುಹೋದರು. ಈಗ ಆ ರೀತಿಯ ಸಹಾಯ ಊಹಿಸಿಕೊಳ್ಳಲೂ ಆಗದು ಬಿಡಿ.

ವೈಯಕ್ತಿಕ ವಿವರ
ಜನನ: 1951ರಲ್ಲಿ ಹಾಸನದಲ್ಲಿ
ಶಿಕ್ಷಣ: ಇಂಗ್ಲಿಷ್ ಸ್ನಾತಕೋತ್ತರ ಪದವೀಧರೆ
ವೃತ್ತಿ: ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ 28 ವರ್ಷ ಉಪನ್ಯಾಸಕಿ, 2006ರಲ್ಲಿ ಸ್ವಯಂನಿವೃತ್ತಿ
ಪತಿ: ಪ್ರೊ.ಬಿ.ಕೆ.ಚಂದ್ರಶೇಖರ್‌
ಮಕ್ಕಳು: ಸರಯೂ (ಮಗಳು), ಮಾನಸ್‌ (ಮಗ)
ರಂಗಕೈಂಕರ್ಯ: ಐದು ದಶಕಗಳ ರಂಗಸೇವೆ, 350ಕ್ಕೂ ಹೆಚ್ಚು ಏಕವ್ಯಕ್ತಿ ರಂಗಪ್ರದರ್ಶನ. ಕಿರುತೆರೆ, ಬೆಳ್ಳಿತೆರೆಯಲ್ಲಿ ಸಕ್ರಿಯ
ಸ್ವಂತ ತಂಡ: ಕ್ರಿಯೇಟಿವ್ ಥಿಯೇಟರ್
ಜನಪ್ರಿಯತೆ ತಂದುಕೊಟ್ಟದ್ದು: ‘ಮಾಯಾಮೃಗ’ ಧಾರಾವಾಹಿ
ನಿವಾಸ: ಬನಶಂಕರಿ ಎರಡನೇ ಹಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT