ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಓಜೋನ್‌ನಿಂದಾಗಿ ಅಪಾರ ಬೆಳೆ ನಷ್ಟ!

Last Updated 27 ಫೆಬ್ರುವರಿ 2017, 4:50 IST
ಅಕ್ಷರ ಗಾತ್ರ
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 2000ನೇ ಇಸವಿಯೊಂದರಲ್ಲೇ ಕೆಟ್ಟ ಓಜೋನ್ ನಿಂದಾಗಿ  ₹20  ಸಾವಿರ ಕೋಟಿಯಿಂದ ₹ 40 ಸಾವಿರ ಕೋಟಿಗಳಷ್ಟು  ಅರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.  
 
ಕೃಷಿ ಮೇಲೆ ಹೆಚ್ಚು ಅವಲಂಬಿತವಾಗಿರುವ, ಹೆಚ್ಚುತ್ತಿರುವ ಕೈಗಾರೀಕರಣ ಹಾಗೂ ಏರುತ್ತಿರುವ ಮಾಲಿನ್ಯ ಸವಾಲುಗಳನ್ನು  ಎದುರಿಸುತ್ತಿರುವ  ದೇಶದಲ್ಲಿ  ಈ ಸಂಖ್ಯೆ ಎಚ್ಚರಿಕೆಯ ಕರೆಗಂಟೆಯಂತಿದೆ. ಇದರ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. 
 
ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿಯ (ಎಸ್‌ಇಆರ್‌ಬಿ)  ಅನುದಾನದಿಂದ  ಇತ್ತೀಚೆಗೆ ನಡೆಸಿರುವ  ಒಂದು ಅಧ್ಯಯನದಲ್ಲಿ,  ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿಜ್ಞಾನ ಸಂಸ್ಥೆಯ ವಾಯು ಮಾಲಿನ್ಯ ಹಾಗೂ ಜಾಗತಿಕ ಹವಾಮಾನ ಪ್ರಯೋಗಾಲಯದ  ಸಂಶೋಧಕರಾದ ಡಾ. ಎಸ್. ಬಿ. ಅಗರವಾಲ್ ಹಾಗೂ ಡಾ. ಆದಿತ್ಯ ಅಭಾ ಸಿಂಗ್, ಬದಲಾಗುವ ನೆಲ ಮಟ್ಟದ ಓಜೋನ್ ಸಾಂದ್ರತೆ ಹಾಗೂ ಕಾಲಾನುಕ್ರಮೇಣ ಬೆಳೆ ನಷ್ಟವಾಗುವ  ಪ್ರವೃತ್ತಿಗಳ ಬಗ್ಗೆ ವಿವರಿಸಿದ್ದಾರೆ. ನೆಲ ಮಟ್ಟದ ಓಜೋನ್‌ನ ಸಾಂದ್ರತೆ ಹಾಗೂ ಬೆಳೆ ನಷ್ಟದ ನಡುವಣ ಸಂಬಂಧವನ್ನು  ಸ್ಥಾಪಿಸುವಲ್ಲಿ ಅವರು  ಯಶಸ್ವಿಯಾಗಿದ್ದಾರೆ. 
 
ವಾಯುಮಂಡಲದ ಮೇಲ್ಮಟ್ಟದಲ್ಲಿನ ಓಜೋನ್, ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ (ಯು.ವಿ) ಕಿರಣಗಳನ್ನು ಸೋಸುವಿಕೆಯಲ್ಲಿ   ಮಹತ್ವದ ಪಾತ್ರ ವಹಿಸುತ್ತದೆ.  ಮಾಲಿನ್ಯದಿಂದಾಗಿ ಹಾಗೂ ನೈಟ್ರೋಜನ್‌ ಆಕ್ಸೈಡ್‌ (ಸಾರಜನಕದ ಆಕ್ಸೈಡ್) ನಂತಹ ವಿಷಕಾರಿ ಅನಿಲಗಳ ಹೊರಸೂಸುವಿಕೆಯಿಂದಾಗಿ, ಓಜೋನ್ ನೆಲದ ಮಟ್ಟದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಭೂಮಿಯ ಮೇಲಿನ ಜೀವಿಗಳಿಗೆ ಹಾನಿ ಉಂಟಾಗುತ್ತದೆ.
 
ಇದು ಗಿಡಮರಗಳ ಮೇಲೆ ಉತ್ಕರ್ಷಣ   (ಆಕ್ಸಿಡೇಟಿವ್‌) ಒತ್ತಡವನ್ನು (ಆಮ್ಲಜನಕದ ರೂಪಗಳಾದ - ಪೆರಾಕ್ಸೈಡ್, ಸೂಪರ್ ಆಕ್ಸೈಡ್ ಇರುವ ಪ್ರತಿಕ್ರಿಯಿಸುವ ರಾಸಾಯನಿಕ ವಿಧಗಳ ಅಸಮತೋಲನ ಹಾಗೂ ಇದರ ವಿಷನಿರ್ಮೂಲನೆಗೊಳಿಸುವ ಗಿಡಗಳ ಸಾಮರ್ಥ್ಯ)  ಸೃಷ್ಟಿಸುತ್ತದೆ. ಈ ತರಹದ ಆಮ್ಲಜನಕ-ಸಮೃದ್ಧ ಸಂಯುಕ್ತ ಹೆಚ್ಚಾಗುವುದರಿಂದ ಗಿಡಗಳ ಚಯಾಪಚಯ ಹೆಚ್ಚಾಗುತ್ತದೆ. ಇದರ ಪರಿಣಾಮ ಗಿಡಗಳಲ್ಲಿ  ದ್ಯುತಿಸಂಶ್ಲೇಷಣೆ  ಕ್ಷೀಣಿಸುತ್ತದೆ.  ಸಂತಾನೋತ್ಪತ್ತಿ ದುರ್ಬಲಗೊಳ್ಳುತ್ತದೆ.  ಬೇಗನೇ ವಯಸ್ಸಾಗುವಿಕೆ ಸಮಸ್ಯೆ ಎದುರಾಗುತ್ತದೆ.   ಇಂಗಾಲದ ಸಮೀಕರಣೆ ತಗ್ಗುತ್ತದೆ.  ಇದರಿಂದಾಗಿ ಧಾನ್ಯಗಳ  ಪೌಷ್ಟಿಕಾಂಶಗಳು ನಾಶವಾಗುವ ಮೂಲಕ ಉತ್ಪಾದಕತೆ ಕಡಿಮೆಯಾಗುತ್ತದೆ.
 
ಸಂಶೋಧಕರು ಭಾರತದ ಗಂಗಾನದಿಯ ಬಯಲಿನ (ಭಾರತದ ಅಕ್ಕಿ ಹಾಗೂ ಗೋಧಿ ಉತ್ಪಾದನೆಯ ಪ್ರಮುಖ ಮೂಲ) ಗತಕಾಲದ ಹಾಗೂ ಪ್ರಸ್ತುತದ ನೆಲ ಮಟ್ಟದ ಓಜೋನ್ ದಾಖಲೆಗಳನ್ನು ಹಾಗೂ ಆಯಾ ಪ್ರದೇಶಗಳಲ್ಲಿ, ಈ ನೆಲ ಮಟ್ಟದ ಓಜೋನ್  ಉಂಟುಮಾಡಿರುವ ನಷ್ಟದ ಸಂಬಂಧಿತ ಇಳುವರಿ ಹಾಗೂ ಪೌಷ್ಟಿಕಾಂಶದ ಗುಣಮಟ್ಟವನ್ನು  ಹೋಲಿಸಿ ನೋಡಿದಾಗ - ಇಷ್ಟು ವರ್ಷಗಳಲ್ಲಿ ಅಕ್ಕಿಯ ಒಟ್ಟು ಇಳುವರಿಯಲ್ಲಿ ಶೇಕಡಾ 5ರಿಂದ11ರಷ್ಟು ಹಾಗೂ ಗೋಧಿಯ ಒಟ್ಟು ಇಳುವರಿಯಲ್ಲಿ ಶೇಕಡಾ 3ರಿಂದ 6ರಷ್ಟು ನಷ್ಟವಾಗಿರುವುದು ಕಂಡುಬಂದಿದೆ.
 
ಬೀಜಗಳಲ್ಲಿ ಪಿಷ್ಟದ ಅಂಶ ಹಾಗೂ ಸಂಪೂರ್ಣ ಕರಗುವ ಸಕ್ಕರೆ ಅಂಶ ಕಡಿಮೆಯಾಗಿದ್ದು, ಖನಿಜಾಂಶ ಮತ್ತು ಪ್ರೋಟೀನ್ ಅಂಶ ಕಡಿಮೆಯಾಗಿದ್ದು ಹಾಗೂ ಅಮೈನೊ ಆಸಿಡ್‌ಗಳ ಪ್ರಮಾಣ ಬೇರೆ ಬೇರೆ ಆಗಿದ್ದ ಅಂಶಗಳ ಆಧಾರದ ಮೇಲೆ ಒಟ್ಟು ಪೌಷ್ಟಿಕಾಂಶದ ನಷ್ಟ ಅಂದಾಜಿಸಲಾಯಿತು. ‘ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ಸಾಸಿವೆ ಹಾಗೂ ಜೋಳದಲ್ಲಿ, ಈ ಓಜೋನ್, ಅಪರ್ಯಾಪ್ತ ಮೇದಾಮ್ಲವನ್ನು (unsaturated fatty acids) ಹೆಚ್ಚಿಸುತ್ತದೆ. ಇದರಿಂದಾಗಿ ಪಡೆದ ಎಣ್ಣೆಯಲ್ಲಿ ಕಮಟು ಹೆಚ್ಚಾಗುತ್ತದೆ. ಈ ಕಾರಣಕ್ಕೆ ಎಣ್ಣೆ ಬಳಕೆಗೆ ಅನರ್ಹವೆನಿಸಿಕೊಳ್ಳುತ್ತದೆ’ ಎನ್ನುತ್ತಾರೆ ಅಗರವಾಲ್ .
 
ಆದರೆ, ಈ ನೆಲ ಮಟ್ಟದ ಓಜೋನ್ ನ ಉತ್ಪಾದನೆಗೆ ಕಾರಣವೇನು? ಭಾರತದ ಉಪ ಉಷ್ಣವಲಯ ಪ್ರದೇಶಗಳಲ್ಲಿನ ಸಂರಚನೆ ಹಾಗೂ ಇದರ ಹವಾಮಾನ ಪರಿಸ್ಥಿತಿಗಳು ಈ ರೀತಿಯ ನೆಲ ಮಟ್ಟದ ಓಜೋನ್ ಹಾಗೂ ಓಜೋನ್‌ ಸಂಭಾವ್ಯ ಪೂರ್ವಗಾಮಿಗಳಾದ ಸಾರಜನಕದ ಆಕ್ಸೈಡ್‌ಗಳ ಉತ್ಪತ್ತಿಗೆ ಅನುಕೂಲಕರವಾದಂತಹ ಅಂಶಗಳು.   ಕ್ಷಿಪ್ರಗತಿಯ ಕೈಗಾರಿಕಾ ಅಭಿವೃದ್ಧಿ ಹಾಗೂ ವಾಹನೋದ್ಯಮದ ಬೆಳವಣಿಗೆಯಿಂದ  ಓಜೋನ್‌ ಉತ್ಪತ್ತಿ ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ. ಆಹಾರ ಭದ್ರತೆ ಸಾಧಿಸುವ ಸಲುವಾಗಿ ಇಂತಹ ಸಾರಜನಕದ ಆಕ್ಸೈಡ್‌ಗಳ ಹೊರಸೂಸುವಿಕೆ ಮಿತಗೊಳಿಸಲು ಹಾಗೂ ವಾಯುವಿನ ಗುಣಮಟ್ಟದ ಮಾನದಂಡಗಳನ್ನು  ಉತ್ತಮಗೊಳಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.  
 
ಹಾಗೆಯೇ ಕೆಟ್ಟ ಓಜೋನ್‌ನ ದುಷ್ಪರಿಣಾಮ ನಿವಾರಿಸಲು, ಭಾರತದಲ್ಲಿ  ಓಜೋನ್-ನಿರೋಧಕ ಬೆಳೆಗಳ ಅಭಿವೃದ್ಧಿ ಪಡಿಸುವುದು ಹಾಗೂ ಕೃಷಿವಲಯದಲ್ಲಿ ಇದಕ್ಕೆ ಪ್ರೋತ್ಸಾಹ ನೀಡುವುದು ಅತ್ಯವಶ್ಯಕ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ‘ಸರಿಯಾದ ಹಾಗೂ ಸಮಂಜಸ ಪರೀಕ್ಷೆಗಳ ನಂತರ ಓಜೋನ್-ತಡೆ ತಳಿಗಳಿಗೆ ಉತ್ತೇಜನ ನೀಡಬೇಕು ಹಾಗೂ ಇದರ ಬಗ್ಗೆ ಪ್ರಚಾರ ಮಾಡಬೇಕು’ ಎಂದು ಡಾ. ಅಗರ್ವಾಲ್, ಓಜೋನ್-ನಿರೋಧಕ ಬೆಳೆಗಳ ಅಭಿವೃದ್ಧಿಯನ್ನು ಶಿಫಾರಸು ಮಾಡುತ್ತಾರೆ.  
 
‘ಇದೊಂದು ಸಾಧಿಸಬಹುದಾದ ಕನಸು.  ನಾವು, ಓಜೋನ್-ಒತ್ತಡಕ್ಕೆ ಸ್ಪಂದಿಸುವ ಹಾಗೂ ಗಿಡಗಳಿಗೆ ಓಜೋನ್ ಪರಿಣಾಮ ಸಹಿಸುವ  ಸಾಮರ್ಥ್ಯವುಳ್ಳ ಸೂಕ್ತ ವಂಶವಾಹಿಗಳನ್ನು ಸರಣಿ ಪರೀಕ್ಷೆಗಳಿಗೆ ಒಡ್ಡಿ, ನಂತರ ಆಯ್ಕೆ ಮಾಡಬೇಕಾಗಿದೆ. ಈ ವಂಶವಾಹಿಗಳನ್ನು, ಅಧಿಕ ಇಳುವರಿ ನೀಡುವ ತಳಿಗಳಲ್ಲಿ ಅಳವಡಿಸಿ, ಓಜೋನ್ ನಿರೋಧಕ  ತಳಿಯ ಕುಲಾಂತರಿಗಳನ್ನು ಸೃಷ್ಟಿಸಬಹುದು’ ಎನ್ನುತ್ತಾರೆ ಡಾ. ಅಗರವಾಲ್.
 
ಈ ಅಧ್ಯಯನ ನೆಲ ಮಟ್ಟದ ಓಜೋನ್ ಉತ್ಪತ್ತಿಗೆ ಮುಖ್ಯ ಅಂಶಗಳನ್ನು ಗುರುತಿಸುತ್ತಾ, ವಿಷಕಾರಿ ಅನಿಲಗಳ ಹೊರಸೂಸುವಿಕೆಯ ಮಟ್ಟ ಸೀಮಿತಗೊಳಿಸಲು ಹಾಗೂ ನಮ್ಮ ಸುಭದ್ರ ಭವಿಷ್ಯಕ್ಕೆ ಅತ್ಯವಶ್ಯಕವಾದ ಗುಣಮಟ್ಟದ ವಾಯುವನ್ನು ಕಾಪಾಡಿಕೊಳ್ಳಲು ಅವಶ್ಯಕವಿರುವ ಕೆಲ ಕಾರ್ಯ ನೀತಿ ರೂಪಿಸುವ ಬಗ್ಗೆ ಬೆಳಕು ಚೆಲ್ಲುತ್ತದೆ.  ‘ಈ ವರದಿಯಲ್ಲಿ ನೀಡಿರುವ ಮಾಹಿತಿ, ಕಾರ್ಯನೀತಿ ರೂಪಿಸುವವರಿಗೆ, ಓಜೋನ್ ಪೂರ್ವಗಾಮಿಗಳ ಹೊರಸೂಸುವಿಕೆಯನ್ನು ಪರಿಶೀಲಿಸಲು ನೀತಿಗಳನ್ನು ರಚಿಸಲು ಸಹಾಯವಾಗಬಹುದು’ ಎಂದು ಡಾ. ಅಗರವಾಲ್ ಹೇಳುತ್ತಾರೆ.
ಗುಬ್ಬಿ ಲ್ಯಾಬ್ಸ್‌ (ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT