ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಭುಜ ಏರಿದ ಸಾಹಸ

ತಾಣ ಪಯಣ
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನಾವು ಧರ್ಮಸ್ಥಳ ಬಳಿ ಇರುವ ಶಿಶಿಲದಿಂದ ಬೆಳಿಗ್ಗೆ 9 ಗಂಟೆಗೆ ಪ್ರಯಾಣಕ್ಕೆ ಬೆಳೆಸಿ ಹೊಳೆಗುಂಡಿಗೆ ಹೋದೆವು. ಹೊಳೆಗುಂಡಿ, ಊರಿನ ಕೊನೆ. ಅಣ್ಣೇಗೌಡರ ಮನೆವರೆಗೆ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ರಸ್ತೆ ಇಲ್ಲ. ಅಲ್ಲಿಂದ ಮುಂದೆ ಸಿಗುವುದೇ ಎತ್ತಿನಭುಜ ಬೆಟ್ಟ.
 
ಅಲ್ಲಿಗೆ ಹೋಗುವುದಾದರೆ ಹೊಳೆ ದಾಟಬೇಕು. ಶೂ ಬಿಚ್ಚಿ ಕಾಲಿಗೆ ನಂಜು ನಿರೋಧಕ ಪೌಡರ್ ಬಳಿದು, ಕಾಲುಚೀಲದೊಳಕ್ಕೂ ಒಂದಷ್ಟು ಪೌಡರ್ ಉದುರಿಸಿ, ಬೆರಳುಗಳಿಗೆ ಅದೇನೋ ಮುಲಾಮು ಬಳಿದು, ಬೆರಳು ಉಜ್ಜಬಾರದೆಂದು ಪ್ಲಾಸ್ಟರ್ ಹಾಕಿ ತಯಾರಾದೆವು. ಮೆತ್ತಿದ ಪೌಡರ್‌ ಕಾಲು ಹೊಳೆದಾಟುವಾಗ ತೊಳೆದು ಹೋಯಿತೆನ್ನಿ! 
 
ಹೊಳೆದಾಟಿ ಪುನಃ ಶೂಗಳನ್ನು ಹಾಕಿ ಕಾಡು ದಾರಿಯೊಳಗೆ ನಡೆದೆವು. ಮೊದಲಿಗೆ ಸುಮಾರು 2ಕಿ. ಮೀ ನೇರ ದಾರಿ. ಮುಂದೆ ಚಡಾವು. ಹೀಗೆ ಏರು ತಗ್ಗಿನ ದಟ್ಟಕಾಡಿನೊಳಗೆ ನಡೆಯುವಾಗ ಒಂಥರಾ ಖುಷಿ. ಮರದ ಎಳೆಚಿಗುರು, ಬೋಳಾದ ಮರ, ಹುತ್ತ, ಜೇಡನಬಲೆ, ಕಾಡುಹೂಗಳು ನಮ್ಮ ಕ್ಯಾಮೆರಾದೊಳಗೆ ಸೆರೆಯಾದುವು. 
 
ಸುಮಾರು ನಾಲ್ಕು ಕಿ.ಮೀ ನಡೆದು ಹೋಗುವಾಗ ನಮ್ಮೆದುರು ಎತ್ತಿನ ಭುಜ ಎಂಬ ಬೃಹತ್ ಬಂಡೆ ಕಾಣುತ್ತದೆ.  ಹಾಗೆಂದು ಅಲ್ಲಿಯೇ ಹತ್ತಲು ಶುರು ಮಾಡಲಾಗದು. ಅದನ್ನು ಏರಬೇಕಾದರೆ ಮತ್ತೂ 3 ಕಿ.ಮೀ ನಡೆಯಬೇಕು. ಹುಲ್ಲುದಾರಿಯಲ್ಲಿ ಸಾಗಬೇಕು. ಕುಡಿಯಲು ತಂದ ನೀರು ಖಾಲಿ. ನಡೆದು ನಡೆದು ಸುಸ್ತಾಗಿ ಸಹಜವಾಗಿ ನಡಿಗೆ ನಿಧಾನಗತಿಯಲ್ಲಿ ಸಾಗಿತು. ಅಂತೂ ಮಧ್ಯಾಹ್ನ 1 ಗಂಟೆಗೆ ಎತ್ತಿನ ಬೆನ್ನಿನ ಭಾಗಕ್ಕೆ ಏರುವಲ್ಲಿವರೆಗೆ ತಲುಪಿದೆವು. ಇನ್ನು ಊಟ ಮಾಡದೆ ಇದ್ದರೆ ನನಗೆ ನಡೆಯಲು ಸಾಧ್ಯವೇ ಇಲ್ಲ ಎಂದು ನನ್ನ ಜೊತೆ ಬಂದಿದ್ದ ಸ್ನೇಹಿತೆ ಬುತ್ತಿ ತೆರೆದಳು. ಮಾರ್ಗದರ್ಶಕರು ‘ಇನ್ನು ನೀವು ಹೋಗಿ, ನಾವು ಇಲ್ಲೇ ಇರುತ್ತೇವೆ. ನೀರು ತುಂಬಿಸಲು ಬಾಟಲುಗಳನ್ನು ಇಟ್ಟು ಹೋಗಿ’ ಎಂದರು. ಎತ್ತಿನ ಬೆನ್ನನ್ನು ಏರುವ ಸಾಹಸಕ್ಕೆ ನಾನು ಅಣಿಯಾದೆ. ಅದಾಗಲೇ ಸುಸ್ತಾಗಿದ್ದರಿಂದ ಅಂತೂ ಅಲ್ಲಲ್ಲಿ ನಿಲ್ಲುತ್ತಾ ಎತ್ತಿನ ಬೆನ್ನು ತಲುಪಿದೆ. ಆದರೆ ಭುಜವನ್ನೇರಲು ಮತ್ತೂ ಏರಬೇಕಿತ್ತು. ಉಫ್‌... ಸಾಕಾಗಿ ಹೋಯಿತು. ಭುಜ ಹಿಡಿಯುವ ಸಾಹಸ ಮಾಡಲಾರೆ ಎನಿಸಿತು. ಕೂತು ವಿರಮಿಸು ಎಂದು ಮನಸ್ಸು ಪಿಸುನುಡಿಯಿತು. ಆದರೆ ಇಷ್ಟು ದೂರ ಬಂದು ಭುಜ ಏರದಿದ್ದರೆ ಏನು ಪ್ರಯೋಜನ? ಎಂದುಕೊಂಡು ಏರುವ ಸಾಹಸ ಮಾಡಿದೆ. ಸ್ನೇಹಿತೆ, ಊಟವಾಗಿ ಮೇಲೆ ಹತ್ತಿ ನನ್ನಿಂದ ಮುಂದಿದ್ದಳು. 
 
 
ಏರು ಅಂದರೆ ಏರು. ಕೆಲವು ಕಡೆ ಬಂಡೆಯನ್ನು ಕೋತಿಯಂತೆ ಏರಬೇಕು. ಅಂತೂ 2 ಗಂಟೆಗೆ ಎತ್ತಿನಭುಜವನ್ನು ಏರಿ ಅಲ್ಲಿ ಉಸ್ಸಪ್ಪ ಎಂದು ಕುಳಿತು ನಿಟ್ಟುಸಿರುಬಿಟ್ಟೆ. ಅಲ್ಲಿ ಕುಳಿತು ಸುತ್ತಲೂ ಪ್ರಕೃತಿಯ ವಿಸ್ಮಯವನ್ನು ನೋಡುತ್ತಿರಬೇಕಾದರೆ ಮೇಲೆ ಹತ್ತಿ ಬಂದದ್ದು ಸಾರ್ಥಕ ಎಂಬ ಭಾವ ಮೂಡಿತು. ದೂರದಲ್ಲಿ ಅಮೇದಿಕಲ್ಲು, ಒಂಬತ್ತುಗುಡ್ಡ ಇತ್ಯಾದಿ ಬೆಟ್ಟಗಳು ಕಾಣುತ್ತವೆ. ಮುಂದೊಂದು ದಿನ ಅವನ್ನೂ ಏರಬೇಕು ಎಂಬ ಉತ್ಸಾಹ ಪುಟಿಯಿತು.
 
ಎತ್ತಿನಭುಜದ ಮೇಲೆ ಒಂದು ಧ್ವಜ ಹಾರಾಡುತ್ತಿತ್ತು. ಅಲ್ಲಿ ಕುಳಿತು ಛಾಯಾಚಿತ್ರ ಕ್ಲಿಕ್ಕಿಸಿಕೊಂಡೆವು. ಹೆಚ್ಚು ಹೊತ್ತು ಕೂತಿರಬೇಡಿ. ಕೆಳಗೆ ಇಳಿದು ಕಾಡುದಾರಿಯಲ್ಲಿ ಊಟ ಮಾಡೋಣ ಎಂದು ಅಲ್ಲಿಯೇ ಇದ್ದ ಫತೇಖಾನ್ ಹೇಳಿದ್ದರು. ನಾವು ಬೆಟ್ಟ ಹತ್ತುವಾಗ ಮುಂದೆ ಹತ್ತಿದ್ದವರೆಲ್ಲ ಇಳಿಯಲು ತೊಡಗಿದ್ದರು. ಹಾಗಾಗಿ ನಾವು ಹೆಚ್ಚು ಹೊತ್ತು ಕೂರದೆ 2.30ಕ್ಕೆ ಬೆಟ್ಟ ಇಳಿಯಲು ಅನುವಾದೆವು. 
 
ನಾವು ಕೆಳಗೆ ಇಳಿದು ಕಾಡುದಾರಿಯಲ್ಲಿ ಸಾಗಿ ಮರದ ನೆರಳಿನಲ್ಲಿ ಕೂತು ಬುತ್ತಿ ಬಿಚ್ಚಿದೆವು. ನಮ್ಮ ಊಟ ಮುಗಿಯುವ ಮೊದಲು ಮಾರ್ಗದರ್ಶಕರು ನೀರು ತುಂಬಿ ತಂದು ಕೊಟ್ಟರು. ಊಟವಾಗಿ ತುಸು ವಿರಮಿಸಿ ಮುಂದೆ ನಡೆದೆವು. ಬೆಟ್ಟ ಹತ್ತುವಾಗ ಆಗಿದ್ದ ಆಯಾಸ ಇಳಿಯುವಾಗ ಇಲ್ಲವಾಗಿತ್ತು. ಹಾಗಾಗಿ ಕ್ಯಾಮೆರಾ ಬ್ಯಾಗಿನಿಂದ ಹೆಗಲಿಗೇರಿತು. ಇಳಿಯುವಾಗ ಹೆಚ್ಚು ವಿಶ್ರಾಂತಿ ಬಯಸದೆ ಒಂದೆರಡುಕಡೆ ವಿರಮಿಸಿದ್ದು ಬಿಟ್ಟರೆ ಎಲ್ಲೂ ನಿಲ್ಲದೆ ನಡೆದೆವು. ನಡೆದಷ್ಟೂ ಮುಗಿಯದ ದಾರಿ ಎನಿಸಿತ್ತು. 
 
ಮರದ ಬೊಡ್ಡೆಗಳು ದಾರಿಗಡ್ಡ ಬಿದ್ದದ್ದನ್ನು ಬಗ್ಗಿ ದಾಟುತ್ತ ಬರಬೇಕಾದರೆ ಇನ್ನೊಂದಿಷ್ಟು ಸೌಂದರ್ಯ ಕ್ಯಾಮೆರಾದೊಳಗೆ ಹೋಯಿತು. ಮರ ಕಡಿದ ಸ್ಥಳದಲ್ಲಿ ಟಿಸಿಲೊಡೆದು ಚಿಗುರಿದ ದೃಶ್ಯ ಅದ್ಭುತ ಕಾವ್ಯದಂತಿತ್ತು. 
 
ಜಲಥೆರಪಿ
ಅಂತೂ ನಾವು ಹೊಳೆ ಬಳಿ ಸಂಜೆ ಆರೂ ಕಾಲಕ್ಕೆ ಬಂದೇ ಬಿಟ್ಟೆವು. ಶೂಬಿಚ್ಚಿ ಹೊಳೆದಾಟಿ ಬಂಡೆಮೇಲೆ ಕುಳಿತು ನೀರಿಗೆ ಕಾಲು ಹಾಕಿ ಕುಳಿತೆವು. ಶೂಬಿಚ್ಚಿದಾಗ ಕಾಲುಬೆರಳುಗಳೆಲ್ಲ ನೋಯುತ್ತಿದ್ದುವು. ಇನ್ನು ಪುನಃ ಶೂ ಹಾಕಬೇಕಲ್ಲ ಎಂಬ ಚಿಂತೆ ಆಗಿತ್ತು. ಆದರೆ ಏನಾಶ್ಚರ್ಯ! ನೀರಿನಿಂದ ಎದ್ದಾಗ ಪಾದ ಹಾಗೂ ಬೆರಳುಗಳಲ್ಲಿ ನೋವೇ ಇಲ್ಲ. ಇದು ಜಲಥೆರಪಿಯ ಮ್ಯಾಜಿಕ್. ಇದು ನಮಗೆ ತುಂಬ ಖುಷಿ ಕೊಟ್ಟಿತು. ಕೆಲವರೆಲ್ಲ ನೀರಿಗೆ ಇಳಿದು ಮೈಚಾಚಿಕೊಂಡು ಒದ್ದೆಮುದ್ದೆಯಾಗಿ ಎದ್ದು ಚಳಿಯಲ್ಲಿ ನಡುಗಿದರು. ಎಲ್ಲರೂ ಬಸ್ ಬಳಿ ಬಂದು ಸೇರುವಾಗ ಗಂಟೆ ಏಳು ದಾಟಿತ್ತು.
 
ಹೊಳೆಗುಂಡಿಯಿಂದ ಶಿಶಿಲ ತಲುಪಿ ಪುರುಷೋತ್ತಮರ ಶ್ರೀಶೈಲ ಕ್ಯಾಂಟೀನಿನಲ್ಲಿ ಅವಲಕ್ಕಿ ಮಿಕ್ಶ್ಚರು, ಕಷಾಯ, ಕಾಫಿ ಹೊಟ್ಟೆ ಸೇರಿದಾಗ ಆದ ಆಯಾಸವೆಲ್ಲ ಮಾಯವಾಗಿ ನೆಮ್ಮದಿ ಆಯಿತು. ಪುರುಷೋತ್ತಮ ಅವರು ನಮಗೆಲ್ಲ ಆದರದ ಉಪಚಾರ ಮಾಡಿದ್ದರು. ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಅಯ್ಯಪ್ಪ, ಪಲ್ಲವಿ, ಅಡಪ ಹಾಗೂ ಫತೇಖಾನ್, ಸತೀಶಬಾಬು ಸಹಕರಿಸಿದ್ದರು, ಚಾರಣ ಸಮಯದಲ್ಲಿ ನಮ್ಮೆಲ್ಲರನ್ನೂ ಹುರಿದುಂಬಿಸಿ ಕರೆದೊಯ್ದಿದ್ದ ಫಲವಾಗಿ ಒಂದು ಸುಂದರ ತಾಣ ನೋಡಲು ಸಾಧ್ಯವಾಯಿತು.
 
ಎರಡು ದಿನ ಶಿಶಿಲದಲ್ಲಿ ಉಳಿದುಕೊಂಡು ಅಮೇದಿಕಲ್ಲು, ಎತ್ತಿನಭುಜ ಚಾರಣ ಹೋಗಬಹುದು. ಚಾರಣ ಹೋಗುವವರು ಆದಷ್ಟು ಗುಂಪಿನಲ್ಲಿ ಹೋಗಿ. ಶಿಶಿಲದಲ್ಲಿ ಅತ್ಯುತ್ತಮ ಊಟ ವಸತಿಗೆ ಪುರುಷೋತ್ತಮ ರಾವ್ 8762921154, ಚಾರಣ ಮಾರ್ಗದರ್ಶನಕ್ಕೆ ಚೆನ್ನಪ್ಪ 9481735895 ಇವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT