ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದ ಬಿಡಿಚಿತ್ರಗಳು

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಜನ ಸರಿಯಿಲ್ಲ ಸಾರ್, ಕಷ್ಟವನ್ನು ಕಷ್ಟ ಅಂತ್ಲೇ ಅಂದ್ಕೊಳಲ್ಲ. ಎಲ್ಲದಕ್ಕೂ ಹೊಂದಾಣಿಕೆ ಮಾಡ್ಕೊಂಡು ಬದುಕಿಬಿಡ್ತಾರೆ...’
 
–ತೋವಿನಕೆರೆ ಗೋಶಾಲೆಯಲ್ಲಿ ದನಗಳಿಗೆಂದು ಹಾಕಿದ್ದ ಚಪ್ಪರದಡಿ ಗೊಬ್ಬರ ಚೀಲದ ಮೇಲೆ ಕುಳಿತು ಏದುಸಿರು ಬಿಡುತ್ತಾ ಮಾತನಾಡುತ್ತಿದ್ದರು ಪದ್ಮರಾಜು. ಅವರ ಮಾತು ಕಿವಿಗೇ ಬಿದ್ದಿಲ್ಲ ಎನ್ನುವಂತೆ ಮಾತು ಶುರು ಮಾಡಿದರು ತಿಮ್ಮಪ್ಪ. ಅವರು ತೋವಿನಕೆರೆಗೆ 6ಕಿ.ಮೀ. ದೂರವಿರುವ ಮರೆಯನಾಯಕನಹಳ್ಳಿ ಗ್ರಾಮದವರು.
 
‘ಅಷ್ಟಕ್ಕೂ ಈಗ ನಮಗೆ ಬಂದಿರೋ ಕಷ್ಟ ಆದ್ರೂ ಏನು ಸ್ವಾಮಿ? ಮಳೆ ಸರಿಯಾಗಿ ಬರಲಿಲ್ಲ. ನೆಲದಾಗೆ ನೀರು ಉರುಳದಷ್ಟು ಬಿಸಿಲು. ರಾಗಿ ಬೆಳೆ ಕೈಗೆ ಬರಲಿಲ್ಲ. ನಮಗೂ ಉಣ್ಣಕ್ಕೆ ರಾಗಿ ಇಲ್ಲ– ದನಗಳಿಗೆ ಹುಲ್ಲು ಸಿಗಲಿಲ್ಲ. ಇದೇ ಹೊತ್ತಿಗೆ ಫಾರೆಸ್ಟ್‌ನವರು ಗುಡ್ಡಕ್ಕೆ ಬೇಲಿ ಹಾಕಿದರು. ಮೇವಿಲ್ಲದೆ ದನಗಳು ಬಡಕಲಾದೊ. ಹೊಟ್ಟೆಗಿಲ್ಲದೆ ಅವು ನರಳೋದು ನೋಡೋಕೆ ಆಗದೆ ಗೋಶಾಲೆಗೆ ಬರಬೇಕಾಯ್ತು. ಬೆಳಿಗ್ಗೆ ಊರಿಂದ ಯಾರಾದ್ರೂ ತಿಂಡಿ ತಂದ್ಕೊಡ್ತಾರೆ. ಮಧ್ಯಾಹ್ನ– ರಾತ್ರಿ ಊಟ ಇದ್ರೆ ಇತ್ತು; ಇಲ್ಲಾಂದ್ರೆ ಇಲ್ಲ. ಸ್ನಾನ ಮಾಡಿ ವಾರ ಆಯ್ತು. ಅಷ್ಟಕ್ಕೂ ಈಗ ನಮಗೆ ಬಂದಿರೋ ಕಷ್ಟ ಆದ್ರೂ ಏನು ಅಂತೀನಿ. ಶಿವ ಮಡಗಿದಂತೆ ಇರಬೇಕು ಅಲ್ವಾ...?’
 
ತಿಮ್ಮಪ್ಪನವರ ಮಾತು ಕೇಳಿ ಸಿಟ್ಟಿಗೆದ್ದ ಪದ್ಮರಾಜು, ‘ಇದ್ಯಾವೂ ಕಷ್ಟ ಅಲ್ವೇನೋ ಗೌಡ, ಸುಮ್ಕಿರು ಮತ್ತೆ’ ಎಂದು ಬುಸುಗುಟ್ಟುತ್ತಾ ಚಪ್ಪರತ್ಯಾಗ ಮಾಡಿದರು.
‘ಅಲ್ಲ ಕಣಜ್ಜ, ಹೊತ್ತುಹೊತ್ತಿಗೆ ಹೊಟ್ಟೆಗೆ ಹಿಟ್ಟು ಸಿಗ್ತಿಲ್ಲ ಅಂತೀರಾ. ಅದು ಸಮಸ್ಯೆ ಅನ್ಸಲ್ವಾ?’ ಎಂಬ ಪ್ರಶ್ನೆಗೆ, 
 
‘ನೋಡಿ ಸ್ವಾಮಿ ನಮ್ಮದು ಸಿದ್ದರಬೆಟ್ಟದ ಬುಡ. ಒಂದು ಕಾಲಕ್ಕೆ ನೆಲ ಗುದ್ದಿದರೆ ನೀರು ಚಿಮ್ಮುವಷ್ಟು ಒರತೆ ಇತ್ತು. ಅಡಿಕೆ ಬೆಳೆ ಹೆಚ್ಚಾಯ್ತು, ಜನ ಬೋರ್‌ವೆಲ್ ಕೊರೆಸಿದ್ರು, ನೀರು ಇಂಗೋಯ್ತು. ನನಗೆ ಈಗ 70 ವರ್ಷ. ಎಂಥ ಬರಗಾಲದಲ್ಲೂ ನಮ್ಮೂರ ದನಗಳ್ನ ಗೋಶಾಲೆಗೆ ಹೊಡೆದಿರಲಿಲ್ಲ. ಈ ಸಲ ಕಾಡಲ್ಲೂ ಹುಲ್ಲು ಇಲ್ಲ. ದನಗಳು ಹೊಟ್ಟೆಗಿಲ್ಲದೆ ಸಾಯೋದು ನೋಡೋಕಾಗದೆ ಇಲ್ಲೀತನಕ ಬರಬೇಕಾಯಿತು’ ಎನ್ನುತ್ತಾ ತಿಮ್ಮಪ್ಪನವರು ತಮ್ಮ ಬದುಕನ್ನೇ ಬಿಡಿಸಿಟ್ಟರು.
 
ಅವರ ಮನಸು ಅನುಭವಿಸುತ್ತಿರುವ ಹಿಂಸೆ ಅವರ ಮುಖದ ಪ್ರತಿ ಗೆರೆಯಲ್ಲೂ ಎದ್ದು ಕಾಣುತ್ತಿತ್ತು.
 
ತಿಮ್ಮಪ್ಪನವರ ಮನಸು ಈ ಪರಿ ನೋಯಲು ಮುಖ್ಯ ಕಾರಣ ಅವರು ಬದುಕಿರುವ ವಾತಾವರಣ. ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಸುತ್ತಮುತ್ತ ಶಿವರಾತ್ರಿ ಕಳೆದರೂ ಹಸಿ ಹುಲ್ಲು ಸಮೃದ್ಧವಾಗಿರುತ್ತಿತ್ತು. ಆದರೆ ಈ ಸಲ ಡಿಸೆಂಬರ್ ತಿಂಗಳಿನಲ್ಲೇ ಮೇವಿಗೆ ಬರ ಕಾಣಿಸಿಕೊಂಡು ರಾಸುಗಳು ಕಟುಕರ ಮನೆಯ ಹಾದಿ ಹಿಡಿದವು. ಪರಿಸ್ಥಿತಿ ಅರಿತ ಜಿಲ್ಲಾಡಳಿತ ಡಿ.22ರಂದು ತೋವಿನಕೆರೆಯಲ್ಲಿ ಗೋಶಾಲೆ ಆರಂಭಿಸಿತು. ಸುತ್ತಮುತ್ತಲ 10 ಕಿ.ಮೀ. ಫಾಸಲೆಯ ಹತ್ತಾರು ಹಳ್ಳಿಗಳ ನೂರಾರು ರಾಸುಗಳು ಮೇವಿಗಾಗಿ ಗೋಶಾಲೆಯನ್ನೇ ಅವಲಂಬಿಸಿವೆ. ಫೆ.18ರಂದು ಗೋಶಾಲೆಯಲ್ಲಿದ್ದ ರಾಸುಗಳ ಸಂಖ್ಯೆ ಸುಮಾರು 900.
 
(ಗೋಶಾಲೆಯಲ್ಲಿ ಮಧ್ಯಾಹ್ನದ ಸಾಮೂಹಿಕ ಭೋಜನಕ್ಕೆ ಸಿದ್ಧತೆ)
 
‘ಜೀವಮಾನದಲ್ಲಿ ಇನ್ನೊಬ್ಬರಿಂದ ಏನನ್ನೂ ಬೇಡದ ನಾವು ಈಗ ಹುಲ್ಲು ಬೇಡುವ ಸ್ಥಿತಿ ಬಂದಿದೆ. ನಮ್ಮ ಬದುಕಿಗೆ ಇನ್ನೇನು ಆಗಬೇಕು ಸ್ವಾಮಿ’ ಎಂಬ ಮಾತಿನಲ್ಲಿ ಅವರ ಮನಸು ಚುಚ್ಚುತ್ತಿದ್ದ ಕೂಳೆಯೊಂದು ಹೊರಗೆ ಬಿದ್ದಂತೆ ಆಯಿತು.
 
‘ಐದು ಎಕರೆ ಭೂಮಿಗೆ ರಾಗಿ ಬಿತ್ತಿದ್ವಿ. ಕಡಿಮೆ ಅಂದ್ರೂ 200 ಹೊರೆ ಹುಲ್ಲು, 8 ಮೂಟೆ ರಾಗಿ ಆಗಬೇಕಿತ್ತು. ಈ ಸಲ ನೋಡಿ ಎರಡು ಮೂಟೆ ರಾಗಿ 30 ಪಿಂಡಿ ಹುಲ್ಲೂ ಸಿಗಲಿಲ್ಲ’ ಎಂದು ಬೋರಪ್ಪ ತಮ್ಮ ಪರಿಸ್ಥಿತಿ ವಿವರಿಸಿದರು. 
 
ತಿಳಿಮುತ್ತಿನ ಬಣ್ಣದ ಇನ್ವಿಟೇಶನ್  ಕಾರ್ಡ್‌ ಒಳಗೆ ಅಡಗಿಸಿಟ್ಟಿದ್ದ ಮೇವಿನ ಕಾರ್ಡ್‌ ಹಿಡಿದು ಲಗುಬಗೆಯಿಂದ ಓಡಾಡುತ್ತಿದ್ದವರ ಹೆಸರು ಸಿದ್ದಮ್ಮ. ದನಗಳ ಪಕ್ಕದಲ್ಲೇ ಕುಳಿತು ಮೊಮ್ಮಕ್ಕಳು ಓದಿಕೊಳ್ಳುತ್ತಿದ್ದರು. ಅವರ ಬದಿಯಲ್ಲೇ ಅಜ್ಜ ರಾಗಿ ಮುದ್ದೆ ಮುರಿಯುತ್ತಿದ್ದರು.
 
‘ಒಂದು ಹಸು ಅಥವಾ ಎಮ್ಮೆಗೆ 5 ಕೆ.ಜಿ. ಮೇವು ಕೊಡ್ತಾರೆ. ಕರುಗಳಿಗೂ ಅದೇ ಲೆಕ್ಕದಲ್ಲಿ ಮೇವು ಕೊಡ್ತಿರೋದ್ರಿಂದ ದೊಡ್ಡ ದನಗಳಿಗೆ ಅನುಕೂಲ. ರಾತ್ರಿ ಉಳಿಯೋ ದನಗಳಿಗೆ ಇನ್ಮೇಲೆ ಹೆಚ್ಚುವರಿಯಾಗಿ 2 ಕೆ.ಜಿ. ಮೇವು ಕೊಡ್ತಾರಂತೆ. ಗೋಶಾಲೆ ಮಾಡಿ ಮೇವು ಕೊಡೋ ವ್ಯವಸ್ಥೆ ಮಾಡದಿದ್ರೆ ನಾವು ರಾಸುಗಳನ್ನು ಉಳಿಸಿಕೊಳ್ಳೋಕೆ ಆಗ್ತಾ ಇರ್ಲಿಲ್ಲ’ ಎಂದು ಸಿದ್ದಮ್ಮ ನಿಜದ ಮಾತಾಡಿದರು.
 
ನಾಟಿಹಸುಗಳಿಗಿಂತ ಸೀಮೆಹಸುಗಳಿಗೆ ಬರದ ಬಿಸಿ ತೀವ್ರವಾಗಿ ತಟ್ಟಿದೆ. ಜಮೀನು ಇಲ್ಲದಿದ್ದರೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕೊರಟಗೆರೆ ತಾಲ್ಲೂಕಿನಲ್ಲಿ ಗಮನಾರ್ಹ ಪ್ರಮಾಣದಲ್ಲಿದೆ. ಹಾಲನ್ನೇ ಜೀವನಾಧಾರ ಮಾಡಿಕೊಂಡಿದ್ದ ಇಂಥವರೂ ಬರದ ಬಿಸಿಗೆ ಕಂಗಾಲಾಗಿದ್ದಾರೆ.
 
ತೋವಿನಕೆರೆಯ ನಾಗರಾಜು ಅವರು 4 ಸೀಮೆಹಸು ಸಾಕಿದ್ದಾರೆ. ವರ್ಷಕ್ಕೆ 500 ಹೊರೆ ಹುಲ್ಲು, ವಾರಕ್ಕೆ 1 ಮೂಟೆ ಫೀಡ್ ಮತ್ತು 1 ಮೂಟೆ ಬೂಸಾ ಕೊಂಡು ಹಸುಗಳ ಹೊಟ್ಟೆ ತುಂಬಿಸುತ್ತಿದ್ದರು. ಅವರ ಹಸುಗಳು ಒಂದು ದಿನಕ್ಕೆ ಸರಾಸರಿ 34 ಲೀಟರ್ ಹಾಲು ಕೊಡುತ್ತಿದ್ದವು. 
 
‘ಬರದಿಂದಾಗಿ ಅಕ್ಕಪಕ್ಕದ ಊರಿನವರು ಈ ವರ್ಷ ಮೇವು ಮಾರಲೇ ಇಲ್ಲ. ಹಾಲಿನ ಕರಾವೂ ಕಡಿಮೆಯಾಯಿತು’ ಎಂದು ನಿಟ್ಟುಸಿರು ಬಿಡುವ ನಾಗರಾಜು ಅವರಂಥವರ ಎದುರಿಗೆ ಉಳಿದಿರುವುದು ‘ಈ ವರ್ಷನಾದ್ರೂ ಚೆನ್ನಾಗಿ ಮಳೆ ಆದ್ರೆ ಸಾಕು’ ಎಂಬ ನಿರೀಕ್ಷೆ ಮಾತ್ರ.
 
ಹುಣಸೆ ಒಣಗುವಂಥ ಬರ: ಹುಣಸೆಗೆ ಬರ ಸಹಿಷ್ಣು ಮರ ಎಂಬ ಹೆಗ್ಗಳಿಕೆ. ಎಂಥ ಬರಗಾಲದಲ್ಲೂ ರೈತರ ಕೈ ಹಿಡಿಯುವ ಬೆಳೆ ಇದು. ಆದರೆ ಈ ಬಾರಿ ಈ ಮಾತಿಗೂ ಅಪವಾದ ಒದಗಿದೆ. ರೈತರು ‘ಹುಣಸೆ ಒಣಗುವಂಥ ಬರ’ ಎಂದೇ 2017ಕ್ಕೆ ನಾಮಕರಣ ಮಾಡಿಬಿಟ್ಟಿದ್ದಾರೆ. ತೋವಿನಕೆರೆಗೆ ಸಮೀಪದಲ್ಲಿಯೇ ಇರುವ 100 ಮನೆಗಳ ಊರು ಚಿಕ್ಕಣ್ಣನಹಳ್ಳಿ. ಗ್ರಾಮದಲ್ಲಿ ಹುಣಸೆ ಖರೀದಿ, ಸಂಸ್ಕರಣೆಯ ಗೃಹೋದ್ಯಮ ವರ್ಷದಲ್ಲಿ ನಾಲ್ಕು ತಿಂಗಳು ನಡೆಯುತ್ತದೆ. ಆದರೆ ಈ ವರ್ಷ ಅಲ್ಲಿಯೂ ಅಂಥ ಚಟುವಟಿಕೆ ಇಲ್ಲ.
 
‘ಸಿಪ್ಪೆ ತುಂಬುವಷ್ಟು ಹಣ್ಣು ಬಂದಿಲ್ಲ. ಬೆಳೆ ಕಡಿಮೆಯಾಗಿದೆ’ ಎಂದು ಹುಣಸೆ ಮರ ಗುತ್ತಿಗೆ ಹಿಡಿಯುವ ನಾಗರಾಜ ಪ್ರತಿಕ್ರಿಯಿಸಿದರು.
 
ಕೊರೆಸಿ ಕೊರೆಸಿ ಸುಸ್ತಾದರು
ರಾಗಿ– ಹುರುಳಿಯಂಥ ಒಣಭೂಮಿ ಬೆಳೆಗಳಿಗೆ ಸೂಕ್ತ ಎನಿಸುವ ದಿಣ್ಣೆ ಭೂಮಿ ಇರುವ ಚಿಕ್ಕಣ್ಣನಹಳ್ಳಿಯಲ್ಲಿ ಈಗ ಒಣಗಿನಿಂತ ಅಡಿಕೆ– ತೆಂಗಿನ ಮರಗಳು ಕಾಣಿಸುತ್ತಿವೆ. ಊರಿನ ಸುತ್ತಮುತ್ತ ಇದ್ದ 60 ಕೊಳವೆಬಾವಿಗಳ ಪೈಕಿ 50 ಒಣಗಿವೆ. ಕೇವಲ ಒಂದೇ ತಿಂಗಳಲ್ಲಿ 20 ಕೊಳವೆಬಾವಿಗಳನ್ನು ಹೊಸದಾಗಿ ಕೊರೆಸಲಾಗಿದೆ. ಕೊಳವೆಬಾವಿಗಳ ಆಳ 1000 ಅಡಿ ಮುಟ್ಟಿದೆ. ಒಂದು ಕೊಳವೆಬಾವಿ ಕೊರೆಸಲು ಕನಿಷ್ಠ ₹2 ಲಕ್ಷ ಖರ್ಚಾಗುತ್ತೆ ಎಂದರೆ 20 ಕೊಳವೆಬಾವಿ ಕೊರೆಸಲು ಎಷ್ಟು ಖರ್ಚಾಗಿರಬಹುದು? ನೀರು ಬಿದ್ದ ಕೊಳವೆಬಾವಿಗಳ ಗಂಟಲು ಯಾವಾಗ ಒಣಗೀತು ಎಂಬುದು ಉತ್ತರ ಸಿಗದ ಪ್ರಶ್ನೆ.
 
ದೂರದ ಕಬ್ಬಿಗೆರೆ ಕೆರೆಯಲ್ಲಿರುವ ಕೊಳವೆಬಾವಿ ಕುಡಿಯುವ ನೀರು ಕೊಡುತ್ತಿದೆ. ನೀರಿನ ಪ್ರಮಾಣ ಅಲ್ಲಿಯೂ ಕಡಿಮೆಯಾಗುತ್ತಿದೆ. ಮುಂದೇನು ಎಂಬುದು ಇಂಥ ಹಳ್ಳಿಗಳ ಜನರ ಯಕ್ಷಪ್ರಶ್ನೆ.
 
ಗೋಶಾಲೆಗೆ ರಾಸುಗಳನ್ನು ಕರೆತಂದಿರುವ ತುರುಗಾಹಿಗಳ ಪೈಕಿ ಅನೇಕರು ಸಂಜೆಗೂ ವಾಪಸ್ ಊರಿಗೆ ಹೋಗುವುದಿಲ್ಲ. ಇಂಥವರಿಗೆ ಒಪ್ಪತ್ತು ಮಾತ್ರ ಮನೆಗಳಿಂದ ಡಬ್ಬಿ ಬರುತ್ತದೆ. ಉಳಿದ ಎರಡು ಹೊತ್ತು ಹಸಿದುಕೊಂಡೇ ಇರಬೇಕಾಗಿದೆ. 
 
‘ಕಳೆದ ವರ್ಷ ಡಿಸಿಸಿ ಬ್ಯಾಂಕ್ ವತಿಯಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಿದ್ದರು. ಈ ವರ್ಷವೂ ಯಾರಾದರೂ ಮುಂದೆ ಬಂದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗೋಶಾಲೆಯಲ್ಲಿಯೇ ನೆಲೆ ನಿಂತಿರುವ ರೈತರು.
 
**
ರಾಸುಗಳ ಆರೋಗ್ಯ ಚೆನ್ನಾಗಿದೆ
ಈ ಭಾಗದಲ್ಲಿ ಬರಗಾಲವಿದ್ದರೂ ರಾಸುಗಳು ಬಡಕಲಾಗಿಲ್ಲ. ಸದ್ಯಕ್ಕೆ ಪ್ರತಿ ಪ್ರಾಣಿಗೆ ಪ್ರತಿದಿನ ಬೆಳಿಗ್ಗೆ 5 ಕೆ.ಜಿ. ಮೇವು ಕೊಡುತ್ತಿದ್ದೇವೆ. ರಾತ್ರಿ ಇಲ್ಲೇ ಉಳಿಯುವ ಪ್ರಾಣಿಗಳಿಗೆ ಹೆಚ್ಚುವರಿಯಾಗಿ 2 ಕೆ.ಜಿ. ಕೊಡುವ ಆಲೋಚನೆ ಹಿರಿಯ ಅಧಿಕಾರಿಗಳಿಗೆ ಇದೆ. ಗೋಶಾಲೆಗೆ ಬಂದಿರುವ ಎಲ್ಲ ದನ– ಎಮ್ಮೆಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿದ್ದೇವೆ ಎಂದು ಪಶು ವೈದ್ಯಾಧಿಕಾರಿ ಮಂಜುನಾಥ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT