ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮವೇ ಸರ್ವಸ್ವ

Last Updated 28 ಫೆಬ್ರುವರಿ 2017, 4:58 IST
ಅಕ್ಷರ ಗಾತ್ರ

ಅಂಜು ಬಾಬಿ ಜಾರ್ಜ್‌ ಭಾರತದ ಲಾಂಗ್‌ಜಂಪ್‌ ಕ್ರೀಡಾಪಟು. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಆಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಲಾಂಗ್‌ಜಂಪ್‌ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎನಿಸಿದರು. ಈ ಸಾಧನೆಗೆ ಅರ್ಜುನ ಪ್ರಶಸ್ತಿ, ರಾಜೀವ್‌ ಖೇಲ್‌ ರತ್ನ  ಮತ್ತು ಪದ್ಮಶ್ರೀ ಗೌರವ ಸಂದಿದೆ.

ಕೇರಳದ ಕೊಟ್ಟಾಯಂನ ಇವರು  ಪತಿ (ಟ್ರಿಪಲ್‌ ಜಂಪ್‌ ಮಾಜಿ ರಾಷ್ಟ್ರೀಯ ಚಾಂಪಿಯನ್‌) ರಾಬರ್ಟ್‌ ಬಾಬಿ ಜಾರ್ಜ್‌ ಮತ್ತು ಇಬ್ಬರು ಪುಟ್ಟ ಮಕ್ಕಳ ಜತೆ ಕೆಂಗೇರಿಯಲ್ಲಿ ನೆಲೆಸಿದ್ದಾರೆ. ಕ್ರೀಡಾ ಅಕಾಡೆಮಿ ಸ್ಥಾಪನೆಗಾಗಿ ದುಡಿಯುತ್ತಿರುವ ಅಂಜು, ಕ್ರೀಡಾಕ್ಷೇತ್ರದ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ.

ಭಾನುವಾರ ಮ್ಯಾಕ್ಸ್‌ ಹೆಲ್ತ್‌ ಇನ್ಶೂರೆನ್ಸ್‌  ಆಯೋಜಿಸಿದ್ದ ‘ಮ್ಯಾಕ್ಸ್‌ ಬುಪಾ’ ವಾಕಥಾನ್‌ಗೆ ಚಾಲನೆ ನೀಡಿದ  ನಂತರ ‘ಮೆಟ್ರೊ’ದೊಂದಿಗೆ ಅವರು ಮುಕ್ತವಾಗಿ ಮಾತನಾಡಿದರು.

2003ರಲ್ಲಿ ಪ್ಯಾರಿಸ್‌ನಲ್ಲಿ ಪದಕ ಗಳಿಸಿದಾಗ ಹೇಗಿದ್ದಿರೋ ಈಗಲೂ ಹಾಗೇ ಇದ್ದೀರಿ, ನಿಮ್ಮ ಫಿಟ್‌ನೆಟ್‌ನ ಗುಟ್ಟೇನು?
ದಿನಾ ವ್ಯಾಯಾಮ ಮಾಡಿದ್ರೆ ಒಂದೇ ತೆರನಾದ ಮೈಕಟ್ಟು ಇಟ್ಟುಕೊಳ್ಳುವುದು ಸಾಧ್ಯ. ನಾನು ಈಗಲೂ ಒಂದು ಗಂಟೆ ವ್ಯಾಯಾಮ ಮಾಡುತ್ತೇನೆ. ಆದರೆ ಹಿಂದಿಗಿಂತ ಈಗ ಹೆಚ್ಚು ಕೆಲಸ ಮಾಡುತ್ತೇನೆ. ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ಆಗಾಗ ದೆಹಲಿಗೆ ಹೋಗಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ವ್ಯಾಯಾಮಕ್ಕೆ ಸಮಯ ಸಿಗುವುದಿಲ್ಲ. ವ್ಯಾಯಾಮ ಮಾಡುವುದರಿಂದ  ವಯಸ್ಸಾಗಿರುವುದು ಕಾಣುವುದೇ ಇಲ್ಲ.

ಕ್ರೀಡೆ, ಸಂಸಾರ ಎರಡನ್ನೂ ಹೇಗೆ ನಿಭಾಯಿಸುತ್ತೀರಿ?
ನನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳುವುದು ದೊಡ್ಡ ಜವಾಬ್ದಾರಿ. ಅಡುಗೆ ಮಾಡುತ್ತೇನೆ, ಮನೆಗೆಲಸ ಮಾಡುತ್ತೇನೆ.  ಇದರ ನಡುವೆ ವೃತ್ತಿ ಸಂಬಂಧ ಓಡಾಟ ಇದ್ದೇ ಇರುತ್ತದೆ.  ಎರಡನ್ನೂ ಸರಿದೂಗಿಸುವುದು ಅನಿವಾರ್ಯ

ಪದಕ ಗೆದ್ದ ನಂತರ ಬದುಕಿನಲ್ಲಿ ಆದ ಬದಲಾವಣೆ ಏನು?
ಚಿನ್ನ ಗೆದ್ದರೆ ಇಡೀ ದೇಶ ಸಂಭ್ರಮಿಸುತ್ತದೆ. ಇಂಥ ಭಾಗ್ಯ ಸಿಗುವುದು ಕ್ರೀಡಾಪಟುಗಳಿಗೆ ಮಾತ್ರ. ಪದಕ ಗೆದ್ದ ನಂತರ ನಮ್ಮ  ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಹೆಸರು, ಹಣ ಒಂದೇ ಸಲಕ್ಕೆ ನಮ್ಮದಾಗುತ್ತದೆ. ನಾವೂ ಸೆಲೆಬ್ರಿಟಿಗಳಾಗುತ್ತೇವೆ. ನನ್ನ ಬದುಕಿನಲ್ಲೂ ಇದು ಆಗಿದೆ.

ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಬೆಳ್ಳಿಯ ಪದಕ ವಂಚಿತರಾದ ಕ್ಷಣ ಈಗಲೂ ಕಾಡುತ್ತಾ?
ಹೌದು. ಆ ಸಾಧನೆಯನ್ನು ಬೇರೆಯವರಾದರೂ ಮಾಡಲಿ ಎಂದು ಕಾಯುತ್ತಿದ್ದೇನೆ. ಕ್ರೀಡಾ ಅಕಾಡೆಮಿಯ ಮೂಲಕ ಅಂಥಾ ಕ್ರೀಡಾಪಟುಗಳನ್ನು ತಯಾರು ಮಾಡುತ್ತೇನೆ.

ನಿಮ್ಮ ಕಾಲಕ್ಕೆ ಹೋಲಿಸಿದರೆ ಈಗ ಕ್ರೀಡಾಕ್ಷೇತ್ರದಲ್ಲಿ ಏನಾದರೂ ಬದಲಾವಣೆ ಆಗಿದೆಯಾ?
ಈಗ ಸಾಕಷ್ಟು  ಬದಲಾವಣೆ ಆಗಿದೆ. ಕಾರ್ಪೊರೇಟ್‌ ಸಂಸ್ಥೆಗಳ ಕಡೆಯಿಂದ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ದೇಶದ ಎಲ್ಲ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.  ಇದು ದೊಡ್ಡ ಬದಲಾವಣೆ.

ಯುವ ಕ್ರೀಡಾಳುಗಳಿಗೆ ಏನು ಸಲಹೆ ನೀಡುತ್ತೀರಿ?
ಕಠಿಣ ಪರಿಶ್ರಮಪಟ್ಟರೆ ಸಾಧನೆ ಮಾಡುವುದು ಸಾಧ್ಯ. ಒಮ್ಮೆ ಪದಕ ಪಡೆದಿರೆಂದರೆ ಪ್ರಸಿದ್ಧಿ, ಹಣ, ಅವಕಾಶ   ನಿಮ್ಮನ್ನು ಹಿಂಬಾಲಿಸುತ್ತದೆ. ಪರಿಶ್ರಮವೊಂದೇ ಸಾಧನೆಗೆ ಇರುವ ಮಾರ್ಗ.

ನಿಮ್ಮ ಮಕ್ಕಳನ್ನು ಹೇಗೆ ತಯಾರು ಮಾಡುತ್ತಿದ್ದೀರಿ?
ಖಂಡಿತಾ ಅವರನ್ನು ಕ್ರೀಡಾಕ್ಷೇತ್ರದಲ್ಲಿ ಮುಂದೆ ತರುವ ಯೋಚನೆ ಇದೆ. ಆದರೆ, ಈಗಿನ್ನೂ ಅವರು ಚಿಕ್ಕವರು.
 
ಕ್ರೀಡಾ ಅಕಾಡೆಮಿಯ ಕೆಲಸ ಹೇಗೆ ಸಾಗಿದೆ?
ಕೆಲಸ ಆರಂಭವಾಗಿ ಆರು ತಿಂಗಳಷ್ಟೇ ಆಗಿದೆ. ಇನ್ನು ಎರಡು ವರ್ಷದಲ್ಲಿ ಪೂರ್ಣವಾಗಲಿದೆ. ನಂತರ ತರಬೇತಿ ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT