ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕಾನೂನಿನ ಸೋಲು!

ಶಶಿಕಲಾ ಪ್ರಕರಣದಂತೆ ನ್ಯಾಯದಾನ ವ್ಯವಸ್ಥೆ ಮತ್ತೆ ಮತ್ತೆ ಸೋಲು ಕಾಣದಿರಲು, ಭ್ರಷ್ಟರ ವಿರುದ್ಧದ ತನಿಖೆ ಹಾಗೂ ವಿಚಾರಣೆಗೆ ಕಾಲಮಿತಿ ನಿಗದಿ ಮಾಡಬೇಕು
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಪ್ರೊ. ನಿಗಮ್ ನುಗ್ಗೇಹಳ್ಳಿ
ವಿ.ಕೆ. ಶಶಿಕಲಾ ನಟರಾಜನ್ ಪ್ರಕರಣದಲ್ಲಿ ಬಂದಿರುವ ತೀರ್ಪು ಕಾನೂನಿನ ಜಯಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಅದರ ಸೋಲಿಗೆ ಸಂಬಂಧಿಸಿದ್ದು. ತೆರಿಗೆದಾರರ ಹಣ ಕದ್ದವರನ್ನು ಬಹಳ ಕಾಲದ ನಂತರ ಶಿಕ್ಷೆಗೆ ಗುರಿಪಡಿಸಲಾಗಿದೆ. ಆದರೆ, ನ್ಯಾಯಾಂಗವು ನಮ್ಮನ್ನು ಭ್ರಷ್ಟ ರಾಜಕಾರಣಿಗಳಿಂದ ಪಾರು ಮಾಡಿದೆ ಎಂದು ನಂಬುವುದು ತಪ್ಪಾಗುತ್ತದೆ.  ಭ್ರಷ್ಟ ರಾಜಕಾರಣಿಗಳನ್ನು ಶಿಕ್ಷಿಸುವುದು ಎಷ್ಟು ಕಷ್ಟ ಎಂಬುದನ್ನು ಈ ಪ್ರಕರಣ ತೋರಿಸಿದೆ. 
 
ಸುಪ್ರೀಂ ಕೋರ್ಟ್‌ ಈಗ ನೀಡಿರುವ ಶಿಕ್ಷೆಯನ್ನು ಗಮನಿಸುವ ಭ್ರಷ್ಟರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಲಿಕ್ಕಿಲ್ಲ. ಶಶಿಕಲಾ ಪ್ರಕರಣದಲ್ಲಿ ಆದೇಶ ನೀಡಲು ವಿಶೇಷ ನ್ಯಾಯಾಲಯಕ್ಕೆ ಹದಿನೆಂಟು ವರ್ಷಗಳು ಬೇಕಾದವು. ಅದಾದ ನಂತರ, ಅಂತಿಮ ತೀರ್ಪು ಹೊರಬರಲು ಎರಡೂವರೆ ವರ್ಷ ಬೇಕಾಯಿತು.
 
ಕಾನೂನು ತನ್ನ ತೀರ್ಮಾನವನ್ನು ಈ ಮೊದಲೇ ಪ್ರಕಟಿಸಿದ್ದರೆ, ಜೆ.ಜಯಲಲಿತಾ ಅವರು ಬಹುಕಾಲದವರೆಗೆ ಚುನಾಯಿತ ನಾಯಕಿ ಆಗಿರುತ್ತಿರಲಿಲ್ಲ. ಅಲ್ಲದೆ, ದೈವಾಂಶ ಸಂಭೂತರಿಗೆ ಸಿಗುವಂತಹ ಪಟ್ಟ ಕೂಡ ಅವರಿಗೆ ಸಿಗುತ್ತಿರಲಿಲ್ಲ. ಇಂದು ಜಯಾ ಅವರು ಹುತಾತ್ಮ ಸ್ಥಾನದಲ್ಲಿದ್ದಾರೆ. ಅವರು ಹೊಂದಿರುವ ರಾಜಕೀಯ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಯಾವ ಧಕ್ಕೆಯೂ ಆಗಿಲ್ಲ. ಪರಸ್ಪರ ಕಚ್ಚಾಡಿಕೊಳ್ಳುತ್ತಿರುವ ಜಯಾ ಪಕ್ಷದ ನಾಯಕರು, ಜಯಾ ಅವರ ಸಮಾಧಿಗೆ ಗೌರವ ಸಲ್ಲಿಸುವ ವಿಚಾರದಲ್ಲಿ ಒಂದಾಗಿದ್ದಾರೆ.
 
ಶಶಿಕಲಾ ಅವರು ಬಹುಶಃ ಮೂರೂವರೆ ವರ್ಷಗಳನ್ನು ಜೈಲಿನಲ್ಲಿ ಕಳೆಯುತ್ತಾರೆ. ಮುಂದಿನ ಚುನಾವಣೆ ವೇಳೆ ಅವರು ಜೈಲಿನಿಂದ ಹೊರಬಂದಿರುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಿದ್ದರೂ ಅಲ್ಲಿ ತಮ್ಮ ಪ್ರಭಾವ ತೋರಿಸುತ್ತಾರೆ. ಸೋನಿಯಾ ಗಾಂಧಿ, ಬಾಳಾ ಠಾಕ್ರೆ ಹಾಗೂ ಅಮಿತ್ ಷಾ ಅವರು ತೋರಿಸಿಕೊಟ್ಟಂತೆ, ಭಾರತದಲ್ಲಿ ರಾಜಕೀಯ ಹುದ್ದೆ ಹೊಂದಿರದಿದ್ದರೂ ಅಪಾರ ರಾಜಕೀಯ ಶಕ್ತಿ ಹೊಂದಲು ಸಾಧ್ಯವಿದೆ.
 
ಶಶಿಕಲಾ ಪ್ರಕರಣವು ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಮುಂದಿಟ್ಟಿದೆ. ಅದರಲ್ಲೂ ಮುಖ್ಯವಾಗಿ, ಮೂರು ಪ್ರಶ್ನೆಗಳು ನ್ಯಾಯಾಂಗದ ಪಾತ್ರಕ್ಕೆ ಸಂಬಂಧಿಸಿದ್ದಾಗಿವೆ. ಮೊದಲನೆಯದು: ಜಯಾ ಅವರು ಅಧಿಕಾರದಲ್ಲಿದ್ದಾಗ ನಿರ್ಲಜ್ಜ ರೀತಿಯಲ್ಲಿ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಸಂಪಾದಿಸಿದ್ದರೂ, ಅವರ ಪ್ರಕರಣ ಇತ್ಯರ್ಥಪಡಿಸಲು ಸುಮಾರು ಎರಡು ದಶಕ ಬೇಕಾಗಿದ್ದು ಏಕೆ? ಈ ವಿಳಂಬಕ್ಕೆ ನ್ಯಾಯಾಂಗ ಹೊಣೆ ಅಲ್ಲವೇ?
 
ಎರಡನೆಯದು: ಪ್ರಕರಣ ರಾಜಕೀಯವಾಗಿ ಮಹತ್ವದ್ದಾಗಿದ್ದರೂ, ಅದರ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಏಕಸದಸ್ಯ ಪೀಠಕ್ಕೆ ವಹಿಸಿದ್ದು ಏಕೆ, ಕೆಲವೇ ತಿಂಗಳುಗಳಲ್ಲಿ ಅದನ್ನು ಇತ್ಯರ್ಥಪಡಿಸಿದ್ದು ಏಕೆ? ಮೂರನೆಯ ಪ್ರಶ್ನೆ: ಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಎಂಟು ತಿಂಗಳು ಕಾಯ್ದಿರಿಸಿದ್ದು ಏಕೆ, ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಬಿಕ್ಕಟ್ಟಿನ ಹಂತ ತಲುಪಿದಾಗ ತೀರ್ಪು ಪ್ರಕಟಿಸಿದ್ದು ಏಕೆ? ನ್ಯಾಯಾಂಗಕ್ಕೆ ಅಗೌರವ ತೋರುವ ಉದ್ದೇಶದಿಂದ ಈ ಪ್ರಶ್ನೆಗಳನ್ನು ಕೇಳುತ್ತಿಲ್ಲ. ಬದಲಿಗೆ, ನ್ಯಾಯಾಂಗ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.
 
ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯದಾನ ವ್ಯವಸ್ಥೆಯ ಲೋಪಗಳನ್ನು ಭ್ರಷ್ಟ ರಾಜಕಾರಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಬೇಕು ಎನ್ನುವ ಒತ್ತಡವನ್ನು ಜನಸಾಮಾನ್ಯರು ನಮ್ಮ ರಾಜಕಾರಣಿಗಳ ಮೇಲೆ ತರಬೇಕಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು ಸಂಸತ್ತು ಈಗ ಪರಿಗಣಿಸುತ್ತಿದೆ. 
 
ಆದರೆ, ಈ ತಿದ್ದುಪಡಿಗಳು ಈ ಕಾಯ್ದೆಯ ಉದ್ದೇಶವನ್ನು ಈಡೇರಿಸಲು ಸಾಕಾಗುವುದಿಲ್ಲ. ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವು ಗರಿಷ್ಠ ನಾಲ್ಕು ವರ್ಷಗಳಲ್ಲಿ ಆದೇಶ ನೀಡಬೇಕು ಎಂಬ ಅಂಶವನ್ನು ಕಾಯ್ದೆಗೆ ಸೇರಿಸುವ ಬಗ್ಗೆ ರಾಜ್ಯಸಭೆ ಪರಿಶೀಲಿಸುತ್ತಿದೆ. ಕಾಯ್ದೆಯಲ್ಲಿ ಈ ಅಂಶ ಸೇರಿಸುವುದಕ್ಕೆ ಸಂಸತ್ತು ಅನುಮೋದನೆ ನೀಡಿದರೂ, ಅದನ್ನು ಕೋರ್ಟ್‌ಗಳು ಒಪ್ಪುತ್ತವೆಯೇ ಎಂಬುದನ್ನು ಕಾದು ನೋಡಬೇಕು. ಕೋರ್ಟ್‌ಗಳು ಇಂಥ ತಿದ್ದುಪಡಿಯನ್ನು ಒಪ್ಪದಿದ್ದರೆ, ನ್ಯಾಯಾಂಗದಿಂದ ಆಗಿರುವ ವಿಳಂಬದ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಂಗದ ಇನ್ನಷ್ಟು ಸಮಯ ವ್ಯರ್ಥವಾಗುತ್ತದೆಯೇ ಎಂಬುದನ್ನೂ ಕಾದು ನೋಡಬೇಕು. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೂ ಕಾಲಮಿತಿ ನಿಗದಿ ಮಾಡಬೇಕು.
 
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧ ತನಿಖೆ ನಡೆಸುವ ಮುನ್ನ ಪೊಲೀಸರು ಸರ್ಕಾರದಿಂದ ಅನುಮತಿ ಪಡೆಯಬೇಕು ಎಂಬ ತಿದ್ದುಪಡಿಯನ್ನು ಕಾಯ್ದೆಗೆ ಸೇರಿಸುವ ಪ್ರಸ್ತಾವ ಕೂಡ ಸಂಸತ್ತಿನ ಪರಿಶೀಲನೆಯಲ್ಲಿ ಇದೆ. ಕಾಯ್ದೆಗೆ ಈ ತಿದ್ದುಪಡಿಯನ್ನು ಸೇರಿಸಿದರೆ, ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗುವುದು ಇನ್ನಷ್ಟು ವಿಳಂಬ ಆಗುತ್ತದೆ. ಹಾಗಾಗಿ, ಇದನ್ನು ಕಾಯ್ದೆಗೆ ಸೇರಿಸಬಾರದು. ಬದಲಿಗೆ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸುವ ರಾಜಕಾರಣಿಗಳ ವಿರುದ್ಧ ಕ್ರಮ ಜರುಗಿಸುವುದನ್ನು ಸುಲಭವಾಗಿಸುವಂಥ ತಿದ್ದುಪಡಿ ಬಗ್ಗೆ ಸಂಸತ್ತು ಗಮನಹರಿಸಬೇಕು. 
 
ಶಶಿಕಲಾ ಪ್ರಕರಣವು ಕ್ಲಿಷ್ಟವಾದುದ್ದೇನೂ ಆಗಿರಲಿಲ್ಲ. ಏಕೆಂದರೆ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವುದು ಸ್ಪಷ್ಟವಾಗಿತ್ತು. ತಮ್ಮ ಆಸ್ತಿಯನ್ನು ಬಚ್ಚಿಡಲು ಶಶಿಕಲಾ ಅಥವಾ ಜಯಾ ಗಂಭೀರ ಪ್ರಯತ್ನವನ್ನೇನೂ ನಡೆಸಲಿಲ್ಲ. ಆಸ್ತಿಯನ್ನು ಮುಚ್ಚಿಡಬೇಕು ಎಂದು ಅವರಿಗೆ ಅನಿಸಿದಾಗ, ಅವರು ಕೆಲವು ಕಂಪೆನಿಗಳನ್ನು ಅವಸರದಲ್ಲಿ ಹುಟ್ಟುಹಾಕಿದರು. ಕಂಪೆನಿಗಳನ್ನು ಅವಸರದಲ್ಲಿ ಹುಟ್ಟುಹಾಕಿದ ಬಗೆಯೇ, ಅವುಗಳ ಅಕ್ರಮ ಸ್ವರೂಪವನ್ನು ಸಾಬೀತುಮಾಡಲು ಸಾಕಿತ್ತು.
 
ತಮ್ಮಲ್ಲಿನ ಹಣವನ್ನು ಖರ್ಚು ಮಾಡಬೇಕು ಎಂಬ ಬಯಕೆ ಅವರಲ್ಲಿ ಬಂದಾಗ, ಒಂದು ವೈಭವೋಪೇತ ವಿವಾಹಕ್ಕೆ ಅದನ್ನು ಎಲ್ಲರಿಗೂ ಕಾಣುವಂತೆ ಖರ್ಚು ಮಾಡಿದರು. ಅವರ ಬಳಿ ಕಾನೂನಿಗೆ ವಿರುದ್ಧವಾಗಿ ಸಂಪಾದಿಸಿದ ಹಣ ಇದೆ ಎಂಬುದು ಜಗತ್ತಿಗೇ ಗೊತ್ತಾಗುವಂತಿತ್ತು ಆ ಖರ್ಚು. ಇತರ ರಾಜಕಾರಣಿಗಳು ಕಾನೂನಿನ ಬಗ್ಗೆ ಇಷ್ಟು ಉದಾಸೀನ ಧೋರಣೆ ತೋರಲಿಕ್ಕಿಲ್ಲ.
 
ಅಕ್ರಮ ಆಸ್ತಿಯನ್ನು ಬಚ್ಚಿಡಲು ಇನ್ನಷ್ಟು ಗೋಪ್ಯವಾದ ಮಾರ್ಗಗಳನ್ನು ಹುಡುಕಿಕೊಳ್ಳುವ ರಾಜಕಾರಣಿಗಳನ್ನು ಹಿಡಿಯಲು ಈಗಿರುವುದಕ್ಕಿಂತ ಕಠಿಣ ಕಾನೂನು ಬೇಕು. ತನಿಖೆ ಹಾಗೂ ವಿಚಾರಣೆಗೆ ಕಾಲಮಿತಿ ನಿಗದಿ ಮಾಡಬೇಕು. ಶಶಿಕಲಾ ಪ್ರಕರಣದಲ್ಲಿ ಆದಂತೆ, ನ್ಯಾಯದಾನ ವ್ಯವಸ್ಥೆ ಮತ್ತೆ ಮತ್ತೆ ಸೋಲು ಕಾಣಬಾರದು.
ಲೇಖಕ: ಕಾನೂನು ಸಹ ಪ್ರಾಧ್ಯಾಪಕ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT