ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿನ್‌ ಬೂತ್‌ನಿಂದ ಪೋನ್‌ ಮಾಡಿಲ್ಲ...

ರಾಘವೇಶ್ವರ ಶ್ರೀಗಳ ವಿರುದ್ಧದ ಬ್ಲ್ಯಾಕ್‌ಮೇಲ್‌ ಪ್ರಕರಣ
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ ಆರೋಪಿ  ದಿವಾಕರ ಶಾಸ್ತ್ರಿ ಅವರು ಕಾಯಿನ್‌ ಬೂತ್‌ನಿಂದ ಮಠಕ್ಕೆ ಫೋನ್‌ ಮಾಡೇ ಇಲ್ಲ...
 
ಇತ್ತೀಚೆಗೆ ಹೊನ್ನಾವರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ಬಿ.ರಿಪೋರ್ಟ್‌ನಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಅದರ ಮುಖ್ಯಾಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
 
‘ಬಿ ರಿಪೋರ್ಟ್‌’ ಪ್ರಮುಖಾಂಶಗಳು: ‘ದಿವಾಕರ ಶಾಸ್ತ್ರಿ ಮತ್ತು ಅವರ ಪತ್ನಿ ಪ್ರೇಮಲತಾ ಅವರು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಎಲ್ಲೂ ಹೇಳಿಲ್ಲ. ಪ್ರೇಮಲತಾ ಅವರು, ತಮ್ಮ ಮೇಲೆ ಅತ್ಯಾಚಾರ ಆಗಿದೆ. ನ್ಯಾಯ ಕೊಡಿಸಿ ಎಂದು ಹೇಳಿದ್ದು ಬಿಟ್ಟರೆ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಯಾರೂ ಸಾಕ್ಷಿ ನುಡಿದಿಲ್ಲ. 
 
ಈ ಸಂಬಂಧ ಒಟ್ಟು 61 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ. ದೂರುದಾರ ಚಂದ್ರಶೇಖರ್ ಅವರೊಬ್ಬರು ಮಾತ್ರ ಪೂರಕ ಸಾಕ್ಷ್ಯ ನುಡಿದಿದ್ದು, ಉಳಿದ ಸಾಕ್ಷಿದಾರರಾಗಲೀ, ವಿಚಾರಣೆ ನಡೆಸಿದ ಮಠದ ಪ್ರಮುಖರು ಯಾರೂ ಇದನ್ನು ದೃಢಪಡಿಸಿಲ್ಲ. ಸಿಐಡಿಯವರು ವಶಪಡಿಸಿಕೊಂಡ ಒಟ್ಟು 21 ದಾಖಲಾತಿಗಳಲ್ಲಿ ಲ್ಯಾಪ್‌ಟಾಪ್‌, ಐ ಪ್ಯಾಡ್‌, ಟ್ಯಾಬ್‌, ಮೊಬೈಲ್‌ ಸೇರಿದಂತೆ ಯಾವುದರಲ್ಲೂ ಸ್ವಾಮೀಜಿ ಚಾರಿತ್ರ್ಯ ಹರಣ ಮಾಡುವಂತಹ ಸಂದೇಶ ಅಥವಾ ಸಂಭಾಷಣೆಗಳಿಲ್ಲ.
 
ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿರುವುದೂ ಕಂಡು ಬರುವುದಿಲ್ಲ. ಶ್ರೀಗಳ ಚಾರಿತ್ರ್ಯಹರಣ ಮಾಡಲು  ಇವರು ಸಿದ್ಧತೆ ಮಾಡಿಕೊಂಡಿದ್ದರು ಎನ್ನುವ ಅಂಶವೂ ಇಲ್ಲ. ಪ್ರೇಮಲತಾ ಅವರು ತಮಗಾದ ಅನ್ಯಾಯವನ್ನು ಅವರ ಭಾವನವರಿಗೆ ಇ– ಮೇಲ್‌ ಮುಖಾಂತರ ತಿಳಿಸಿರುವುದನ್ನು ಬಿಟ್ಟರೆ ಇನ್ನಾವುದೇ ಪಿತೂರಿ ಅಂಶಗಳು ಎಲ್ಲೂ ಕಂಡು ಬರುವುದಿಲ್ಲ.
 
ದಿವಾಕರ ಶಾಸ್ತ್ರಿ ಅವರು ಗಾರ್ಮೆಂಟ್ಸ್‌ ಉದ್ಯೋಗದಲ್ಲಿ ನಷ್ಟ ಅನುಭವಿಸಿದ್ದರು. ಅದನ್ನು ಸರಿದೂಗಿಸಲು ಈ ರೀತಿ ಪಿತೂರಿ ನಡೆಸಿದ್ದಾರೆ. ಸ್ವಾಮೀಜಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿರುವುದಾಗಿ ದೂರುದಾರರು ಹೇಳಿದ್ದಾರೆ. ಆದರೆ ಈ ಹೇಳಿಕೆ ಅನುಸಾರ ದಿವಾಕರ ಶಾಸ್ತ್ರಿ ಅವರ ಉದ್ಯಮದ ಲೆಕ್ಕಗಳನ್ನು ಪರಿಶೀಲಿಸಿದಾಗ ಅವರು ನಷ್ಟ ಅನುಭವಿಸಿರುವುದು ಕಂಡು ಬಂದಿಲ್ಲ. ಆದ ಕಾರಣ ದೂರುದಾರರ ಆರೋಪಗಳೆಲ್ಲಾ ಸುಳ್ಳು.
 
ಕಾಯಿನ್‌ ಬಾಕ್ಸ್‌ನಿಂದ ಕರೆ ಮಾಡಿದ್ದಾರೆ ಎನ್ನುವ ದೂರುದಾರರ ಆರೋಪವನ್ನು ವೈಜ್ಞಾನಿಕವಾಗಿ ಪರಿಶೀಲಿಸಿದಾಗ ದೂರುದಾರರು ಕೊಟ್ಟ 3 ಜನ ಸಾಕ್ಷಿಗಳ ಪೈಕಿ ಇಬ್ಬರ ಹಾಗೂ ದೂರುದಾರರ ಮೊಬೈಲ್‌ ಟವರ್‌  ಲೊಕೇಷನ್‌ಗಳು, ಅವರು ತಿಳಿಸಿದ ಕಾಯಿನ್ ಬೂತ್ ಸಮೀಪವೇ ತೋರಿಸುತ್ತಿರುವುದು ಸಂದೇಹಾಸ್ಪದವಾಗಿದೆ: ಎಂದು ಬಿ ರಿಪೋರ್ಟ್‌ನಲ್ಲಿ ವಿವರಿಸಲಾಗಿದೆ.
 
ಕೆಕ್ಕಾರು ಚಾತುರ್ಮಾಸ ಸಮಿತಿ ಕಾರ್ಯದರ್ಶಿ ಬಿ.ಆರ್.ಚಂದ್ರಶೇಖರ  2014ರ ಆ.17ರಂದು ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರೇಮಲತಾ ದಂಪತಿ ವಿರುದ್ಧ ದೂರು ಸಲ್ಲಿಸಿದ್ದರು. 
 
‘ಬಿ ರಿಪೋರ್ಟ್‌’ ಎಂದರೇನು..?
ಯಾವುದೇ ಪ್ರಕರಣದಲ್ಲಿ ತನಿಖೆ ಮುಗಿದ ನಂತರ ಪೊಲೀಸರು ನ್ಯಾಯಾಲಯಕ್ಕೆ ಮೂರು ವಿಧಗಳಲ್ಲಿ  ಅಂತಿಮ ವರದಿಯನ್ನು ಸಲ್ಲಿಸಬಹುದು.
ಮೊದಲನೆಯದು ‘ಎ ರಿಪೋರ್ಟ್’ : ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಸಾಧ್ಯವಿರುವಷ್ಟು ಸಾಕ್ಷ್ಯಾಧಾರಗಳು ಕಂಡು ಬಂದಿವೆ ಎಂಬುದು ‘ಎ ರಿಪೋರ್ಟ್’.
ಎರಡನೆಯದು ‘ಬಿ ರಿಪೋರ್ಟ್‌’ : ತನಿಖೆ ಕಾಲದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಸಾಕಾಗುವಷ್ಟು ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ ಎಂಬುದು ‘ಬಿ ರಿಪೋರ್ಟ್‌’.
ಮೂರನೆಯದು ‘ಸಿ ರಿಪೋರ್ಟ್‌’ : ತನಿಖೆ ಮಾಡಲು ಸಾಧ್ಯವಿಲ್ಲ ಎಂಬುದು (undetectable) ಸಿ ರಿಪೋರ್ಟ್‌.
-ಕರ್ನಾಟಕ ಪೊಲೀಸ್‌ ಕೈಪಿಡಿ–1963ರ ಅನುಸಾರ ಎ,ಬಿ ಮತ್ತು ಸಿ ರಿಪೋರ್ಟ್‌ಗಳ  ವರ್ಗೀಕರಣ ಮಾಡಲಾಗುತ್ತದೆ. ಉಳಿದೆಲ್ಲವೂ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅನುಸಾರ ನಡೆಯುತ್ತವೆ.
 
*  ದಂಪತಿ ರಕ್ಷಿಸುವ ಸಲುವಾಗಿ ಸರ್ಕಾರ ಉದ್ದೇಶಪೂರ್ವಕವಾಗಿ ‘ಬಿ. ರಿಪೋರ್ಟ್‌’ ಸಲ್ಲಿಸಿದೆ. ಇದರ ಹಿಂದೆ ಸರ್ಕಾರದ ಷಡ್ಯಂತ್ರವಿದೆ.
-ಶಂಭು ಶರ್ಮಾ, ಶ್ರೀಗಳ ಪರ ವಕೀಲ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT