ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸೋಲಿನ ಹಿಂದೆ ಭಾರತೀಯ!

ಆಸ್ಟ್ರೇಲಿಯಾ ತಂಡಕ್ಕೆ ತಮಿಳುನಾಡಿನ ಶ್ರೀರಾಮ್‌ ಸ್ಪಿನ್‌ ತರಬೇತಿ
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪುಣೆ:  ಎರಡು ದಿನಗಳ ಹಿಂದೆ ಇಲ್ಲಿನ ಕ್ರೀಡಾಂಗಣದಲ್ಲಿ ಮುಕ್ತಾಯವಾದ ‘ಬಾರ್ಡರ್‌–ಗಾವಸ್ಕರ್‌’ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋಲು ಕಂಡಿತು. ಆಸ್ಟ್ರೇಲಿಯಾ 333 ರನ್‌ಗಳ ಅಮೋಘ ಗೆಲುವು ಸಾಧಿಸಿ ವಿಜೃಂಭಿಸಿತು. ಈ ಜಯದ ಹಿಂದೆ ಭಾರತದವರೇ ಆದ ಶ್ರೀಧರನ್‌ ಶ್ರೀರಾಮ್‌ ಅವರ ಕೈಚಳಕವಿದೆ!

ಹೌದು; ತಮಿಳುನಾಡಿನವರಾದ ಶ್ರೀರಾಮ್‌ ಕಾಂಗರೂಗಳ ನಾಡಿನ ತಂಡಕ್ಕೆ ಸ್ಪಿನ್‌ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳಿಕೊಟ್ಟ ಕೌಶಲದಿಂದ ಪ್ರವಾಸಿ ತಂಡದ ಸ್ಪಿನ್ನರ್‌ಗಳು ಭಾರತದ ನೆಲದಲ್ಲಿ ಮೆರೆದಾಡಿದ್ದಾರೆ. ಸ್ಪಿನ್ನರ್‌ ಸ್ಟೀವ್‌ ಓ ಕೀಫ್‌ ಒಟ್ಟು 12 ವಿಕೆಟ್‌ಗಳನ್ನು ಉರುಳಿಸಿ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ.

ಶ್ರೀರಾಮ್‌ ಅವರು ಎಂಟು ಏಕದಿನ, 133 ಪ್ರಥಮ ದರ್ಜೆ, 147 ಲೀಸ್ಟ್‌ ‘ಎ’ ಮತ್ತು 15 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ದೇಶಿ ಟೂರ್ನಿಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳನ್ನು ಪ್ರತಿನಿಧಿಸಿದ್ದರು.

‘ಆಸ್ಟ್ರೇಲಿಯಾ ತಂಡದವರು ತುಂಬಾ ಚೆನ್ನಾಗಿದ್ದಾರೆ. ನಾನು ಹೇಳಿಕೊಟ್ಟ ಕೌಶಲಗಳನ್ನು ಮೊದಲು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಕಠಿಣ ಅಭ್ಯಾಸ ಮಾಡುತ್ತಾರೆ. ಇಲ್ಲಿ ಕೀಫ್‌ ನೀಡಿದ ಸಾಮರ್ಥ್ಯವಂತೂ ಅತ್ಯದ್ಭುತ’ ಎಂದು ಶ್ರೀರಾಮ್‌ ಶ್ಲಾಘಿಸಿದ್ದಾರೆ. ‘ಕೇವಲ ಸ್ಪಿನ್ನರ್‌ಗಳಷ್ಟೇ ಅಲ್ಲ. ತಂಡದ ಎಲ್ಲಾ ಆಟಗಾರರ ಜೊತೆಗೂ ಚರ್ಚಿಸುತ್ತೇನೆ.

ತಂಡದ ಮುಖ್ಯ ಕೋಚ್‌ ಕೂಡ ನನಗೆ ಎಲ್ಲಾ ಆಟಗಾರರ ಜೊತೆ ಮಾತನಾಡುವ ಮತ್ತು ಯಾವುದೇ ವಿಷಯದ ಬಗ್ಗೆಯಾದರೂ ಮುಕ್ತವಾಗಿ ಚರ್ಚಿಸುವ  ಸ್ವಾತಂತ್ರ್ಯ ನೀಡಿದ್ದಾರೆ.  ಕೀಫ್‌ ಮೊದಲ ಪಂದ್ಯದಲ್ಲಿ ಯಾವ ರೀತಿ ಬೌಲ್‌ ಮಾಡಿದರೋ ಅದೇ ರೀತಿ ಮುಂದಿನ ಪಂದ್ಯಗಳಲ್ಲಿಯೂ ಸ್ಪಿನ್‌ ಮಾಡಿದರೆ ಸಾಕು. ಬದಲಾವಣೆ ಅಗತ್ಯವಿಲ್ಲ. ಭಾರತ ಕೂಡ ಬಲಿಷ್ಠ ತಂಡವೇ. ಆದ್ದರಿಂದ ಪ್ರತಿ ಹಂತದಲ್ಲಿ ಯಶಸ್ಸು ಪಡೆಯಲು ಸದಾ ಯೋಜನೆಗಳನ್ನು ರೂಪಿಸುತ್ತಲೇ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕೀಪ್‌ 2015ರಲ್ಲಿ ಚೆನ್ನೈಗೆ ಬಂದಾಗ ಕಠಿಣ ಅಭ್ಯಾಸ ಮಾಡಿದ್ದರು. ಹೆಚ್ಚು ಸಮಯವನ್ನು ನೆಟ್ಸ್‌ನಲ್ಲಿ ಕಳೆದಿದ್ದರು. ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಭೋಜನ ವಿರಾಮದ ಬಳಿಕ ಕೀಫ್‌  ಮಾಡಿದ ಸ್ಪಿನ್‌ ಮೋಡಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ’ ಎಂದೂ ಶ್ರೀರಾಮ್‌ ಹೇಳಿದರು.

‘ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಬರುವುದಕ್ಕಿಂತಲೂ ಮೊದಲು ಆಸ್ಟ್ರೇಲಿಯಾ ತಂಡ ದುಬೈನಲ್ಲಿ ಅಭ್ಯಾಸ ನಡೆಸಿತ್ತು. ಅಲ್ಲಿ ಪಟ್ಟ  ಶ್ರಮ ಅತ್ಯುತ್ತಮವಾದದ್ದು. ಬೇರೆ ಬೇರೆ ವಾತಾವರಣ ಮತ್ತು ಅಲ್ಲಿನ ಪಿಚ್‌ಗಳಿಗೆ ಹೊಂದಿಕೊಂಡು ಅಭ್ಯಾಸ ನಡೆಸುವುದು ಸುಲಭದ ಮಾತಲ್ಲ’ ಎಂದರು. ಆದರೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದ ಪಿಚ್‌ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT