ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಕೊಹ್ಲಿ ‘ವರ್ಷದ ನಾಯಕ’

ಕ್ರಿಕ್‌ ಇನ್ಫೋ ಹತ್ತನೇ ವರ್ಷದ ವಾರ್ಷಿಕ ಪ್ರಶಸ್ತಿ
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಿರಾಟ್‌ ಕೊಹ್ಲಿ
ಕ್ರಿಕೆಟ್‌ ವೆಬ್‌ಸೈಟ್‌ ಕ್ರಿಕ್‌ ಇನ್ಫೋ ಹತ್ತನೇ ವರ್ಷದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಭಾರತ  ತಂಡದ ಮುಂದಾಳತ್ವ ವಹಿಸಿರುವ ವಿರಾಟ್ ಕೊಹ್ಲಿ ಅವರು ‘ವರ್ಷದ ನಾಯಕ’ ಗೌರವಕ್ಕೆ ಭಾಜನರಾಗಿದ್ದಾರೆ.

2016ರಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ನೀಡಿದವರಿಗೂ ಪ್ರಶಸ್ತಿ ಪ್ರಕಟಿಸಲಾಗಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಹೋದ ವರ್ಷ ಆಡಿದ 12 ಟೆಸ್ಟ್‌ಗಳಲ್ಲಿ ಒಂಬತ್ತರಲ್ಲಿ ಗೆಲುವು ಸಾಧಿಸಿದೆ.

ಬೆನ್‌ ಸ್ಟೋಕ್ಸ್‌ (ಟೆಸ್ಟ್‌ ಬ್ಯಾಟ್ಸ್‌ಮನ್‌)
ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌  ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ 198 ಎಸೆತಗಳಲ್ಲಿ 258 ರನ್ ಹೊಡೆದಿದ್ದರು.

ಸುನಿಲ್‌ ನಾರಾಯಣ(ಏಕದಿನ ಮಾದರಿಯಉತ್ತಮ ಬೌಲರ್‌)
ವೆಸ್ಟ್‌ ಇಂಡೀಸ್‌ನ ಸ್ಪಿನ್ನರ್‌ ಸುನಿಲ್‌ ನಾರಾಯಣ್ ಗಯಾನದಲ್ಲಿ ನಡೆದ ತ್ರಿಕೋನ ಏಕದಿನ   ಸರಣಿಯಲ್ಲಿ ಉತ್ತಮ ಸಾಮರ್ಥ್ಯ ನೀಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 27 ರನ್ ನೀಡಿ ಆರು ವಿಕೆಟ್‌ಗಳನ್ನು ಪಡೆದಿದ್ದರು.

ಕ್ವಿಂಟನ್‌ ಡಿ ಕಾಕ್‌(ಏಕದಿನ ಮಾದರಿಯಉತ್ತಮ ಬ್ಯಾಟ್ಸ್‌ಮನ್‌)
ಕ್ವಿಂಟನ್‌ ಡಿ ಕಾಕ್‌ ಸೆಂಚೂರಿಯನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 178 ರನ್ ಗಳಿಸಿದ್ದರು. ಇದು ಏಕದಿನ ಮಾದರಿಯಲ್ಲಿ ದಕ್ಷಿಣ ಆಫ್ರಿಕಾದ ಆಟಗಾರನ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಕಾರ್ಲೊಸ್‌ ಬ್ರಾಥ್‌ವೈಟ್‌(ಟ್ವೆಂಟಿ–20 ಮಾದರಿಯಉತ್ತಮ ಬ್ಯಾಟ್ಸ್‌ಮನ್‌)
ವೆಸ್ಟ್‌ ಇಂಡೀಸ್‌ನ  ಬ್ರಾಥ್‌ವೈಟ್‌ ಕೋಲ್ಕತ್ತದಲ್ಲಿ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯ ಫೈನಲ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದರಿಂದ ವಿಂಡೀಸ್ ತಂಡ ಇಂಗ್ಲೆಂಡ್‌ ಎದುರು ಗೆಲುವು ಪಡೆದು ಟ್ರೋಫಿ ಎತ್ತಿ ಹಿಡಿದಿತ್ತು. ಆ ಪಂದ್ಯದಲ್ಲಿ ಕಾರ್ಲೊಸ್‌, ಅಜೇಯ 34 ರನ್ ಗಳಿಸಿದ್ದರು.

ಮುಸ್ತಫಿಜರ್ ರಹಮಾನ್‌(ಟ್ವೆಂಟಿ–20 ಕ್ರಿಕೆಟ್‌ನಉತ್ತಮ ಬೌಲರ್‌)
ಬಾಂಗ್ಲಾದೇಶದ ಎಡಗೈ ವೇಗಿ ರಹಮಾನ್‌ ಹೋದ ವರ್ಷ ಚುಟುಕು ಕ್ರಿಕೆಟ್‌ನಲ್ಲಿ ಚುರುಕಿನ ಬೌಲಿಂಗ್ ಮಾಡಿದ್ದರು. ವಿಶ್ವ ಟ್ವೆಂಟಿ–20 ಟೂರ್ನಿಯ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು 22 ರನ್  ನೀಡಿ ಐದು ವಿಕೆಟ್‌ಗಳನ್ನು ಉರುಳಿಸಿದ್ದರು.

ಸ್ಟುವರ್ಟ್‌ ಬ್ರಾಡ್‌(ಟೆಸ್ಟ್ ಬೌಲರ್‌)
ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌  2016ರ ಜನವರಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ   12.1 ಓವರ್‌ ಬೌಲ್‌ ಮಾಡಿ  ಆರು ವಿಕೆಟ್‌ಗಳನ್ನು ಕಬಳಿಸಿದ್ದರು.

ಮೆಹೆದಿ ಹಸನ್‌ ಮಿರಾಜ್‌ (ಪದಾರ್ಪಣೆ ಪಂದ್ಯದಲ್ಲಿಯೇ ಮಿಂಚಿದ ಯುವ ಆಟಗಾರ)
ಬಾಂಗ್ಲಾದೇಶದ ಹಸನ್ ಮಿರಾಜ್‌ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನಾಡಿ 19 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದರು.

ಮಹಿಳೆಯರಿಗೂ ಗೌರವ
ವೆಸ್ಟ್‌ ಇಂಡೀಸ್‌ನ ಹೆಲೆಯ್‌ ವಿಲಿಯಮ್ಸ್‌ ಮತ್ತು ನ್ಯೂಜಿಲೆಂಡ್‌ನ ಲೇಯಿ ಕಾಸ್ಪರೆಕ್‌ ಅವರು ಟ್ವೆಂಟಿ–20 ಕ್ರಿಕೆಟ್ ಮಾದರಿಯಲ್ಲಿ ಕ್ರಮವಾಗಿ ಉತ್ತಮ ಬ್ಯಾಟ್ಸ್‌ವುಮನ್‌ ಮತ್ತು ಉತ್ತಮ ಬೌಲರ್‌ ಗೌರವ ಪಡೆದಿದ್ದಾರೆ. ವಿಶ್ವ ಟೂರ್ನಿಯಲ್ಲಿ ವಿಲಿಯಮ್ಸ್‌ ಆಸ್ಟ್ರೇಲಿಯಾ ವಿರುದ್ಧ 45 ಎಸೆತಗಳಲ್ಲಿ 66 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ಎದುರಿನ ಹೋರಾಟದಲ್ಲಿ ಕಾಸ್ಪರೆಕ್‌ 13 ಎಸೆತಗಳಲ್ಲಿ ಮೂರು ವಿಕೆಟ್‌ ಪಡೆದಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇದ್ದವರು
ಮಾಜಿ ಕ್ರಿಕೆಟಿಗರಾದ ಇಯಾನ್‌ ಚಾಪೆಲ್‌, ಮಾಹೇಲ ಜಯವರ್ಧನೆ, ರಮೀಜ್ ರಾಜಾ, ಇಶಾ ಗುಹಾ,  ಕರ್ಟ್ನಿ ವಾಲ್ಶ್‌,  ಮಾರ್ಕ್ ಬೌಷರ್‌, ಸಿಮೊನ್ ಟೌಫೆಲ್‌, ಕ್ರಿಕ್‌ ಇನ್ಫೋ ಮುಖ್ಯ ಸಂಪಾದಕ ಸಂಬೀತ್ ಬಾಲ್‌ ಮತ್ತು  ಹಿರಿಯ ಸಂಪಾದಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT