ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ವಿರುದ್ಧದ ಟೀಕೆಗಳನ್ನು ಸಹಿಸಿಕೊಳ್ಳೋಣ: ಪ್ರಮೋದ್

ರಾಜ್ಯ ಮಟ್ಟದ ಗಾಂಧಿ ತತ್ವ ಪ್ರಚಾರ ಅಭಿಯಾನ ಕಾರ್ಯಕ್ರಮ
Last Updated 27 ಫೆಬ್ರುವರಿ 2017, 20:20 IST
ಅಕ್ಷರ ಗಾತ್ರ
ಬೆಂಗಳೂರು: ‘ಮಹಾತ್ಮ ಗಾಂಧೀಜಿ ಒಬ್ಬ ಅಪ್ಪಟ ಪ್ರಜಾಪ್ರಭುತ್ವವಾದಿ. ಆದರೆ, ಅವರನ್ನೂ ಟೀಕೆ ಮಾಡುವವರಿದ್ದಾರೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು. 
 
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಗರದ ಗಾಂಧಿ ಭವನದಲ್ಲಿ  ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಗಾಂಧಿ ತತ್ವ ಪ್ರಚಾರ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
‘ತಮ್ಮ ವಿರುದ್ಧದ ಎಂತಹದ್ದೇ ಟೀಕೆಗಳನ್ನು ಎಲ್ಲ ಸಮಯದಲ್ಲೂ ಗಾಂಧೀಜಿ ಸ್ವಾಗತಿಸುತ್ತಿದ್ದರು.  ಅವರ ವಿರುದ್ಧದ ಟೀಕೆಗಳನ್ನು ನಾವೂ ಸಹಿಸಿಕೊಳ್ಳೋಣ’ ಎಂದು ಹೇಳಿದರು.
 
‘ತುಂಬಾ ಒಳ್ಳೆಯವರನ್ನು ‘ಗಾಂಧಿ’ ಎಂದು ಕರೆದು ತಾತ್ಸಾರ ಭಾವದಿಂದ ಕೆಲವರು ನೋಡುತ್ತಾರೆ. ಕಾಲೇಜು ದಿನಗಳಲ್ಲಿ ತುಂಬಾ ಶಿಸ್ತಿನ ವಿದ್ಯಾರ್ಥಿಯಾಗಿದ್ದರಿಂದ ನನ್ನನ್ನು ಗಾಂಧಿ ಎಂದು ಕರೆಯುತ್ತಿದ್ದರು. ಇದು ಅಭಿಮಾನದಿಂದ ಕರೆಯುತ್ತಿದ್ದ ಹೆಸರಲ್ಲ. ವ್ಯಂಗ್ಯದಿಂದ ಕರೆಯುತ್ತಿದ್ದ ಹೆಸರು. ಜಗತ್ತು ಸರ್ವ ಶ್ರೇಷ್ಠ ವ್ಯಕ್ತಿ ಎಂದು ಭಾವಿಸಿದ್ದ ಗಾಂಧಿ ಅವರ ಹೆಸರನ್ನು ನಮ್ಮ ದೇಶದಲ್ಲಿ ಅಣುಕಿಸಲು ಬಳಸುತ್ತಿರುವುದು ದುರಂತ’ ಎಂದರು. 
 
ಪ್ರಾಧ್ಯಾಪಕ ಬಿ.ಕೆ.ರವಿ ಮಾತನಾಡಿ, ‘ಇಂದಿನ ಯುವಕರಲ್ಲಿ ತಂತ್ರಜ್ಞಾನದ ಒತ್ತಡ ಮತ್ತು ಅದರ ಬಳಕೆ ಮೇಲಿನ ವ್ಯಾಮೋಹ ಹೆಚ್ಚಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಗಾಂಧಿ ತತ್ವ ಸಿದ್ಧಾಂತಗಳ ಬಗ್ಗೆ ತಿಳಿವಳಿಕೆ ಕಡಿಮೆಯಾಗುತ್ತಿದೆ. ಅವರ ತತ್ವಗಳನ್ನು ಯುವಕರು ಹಾಸ್ಯವಾಗಿ ಕಾಣುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
‘ಯುವಕರು ಅಹಿಂಸಾ ತತ್ವದ ಸಾರವನ್ನು ಅರಿಯಬೇಕು. ಗಾಂಧಿ ಅವರು ಅಹಿಂಸೆ ತತ್ವದ ಬೋಧನೆ ಮಾಡದೇ ಇದ್ದಿದ್ದರೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಕ್ತಪಾತವೇ ನಡೆದು ಮನುಕುಲಕ್ಕೆ ಕಂಟಕವಾಗುತ್ತಿತ್ತು’ ಎಂದರು.
 
‘ವ್ಯವಸ್ಥೆಯನ್ನು ಮೂದಲಿಸುವ ಪದ್ಧತಿ ನಮ್ಮಲ್ಲಿದೆ. ಇದನ್ನು ಬಿಟ್ಟು ಸ್ವಾವಲಂಬನೆಯತ್ತ ಯುವಕರು ಮುಂದಾಗಬೇಕು. ಇದು ಅನಿವಾರ್ಯ ಕೂಡ. ಜತೆಗೆ ನೈತಿಕ ಜವಬ್ದಾರಿಯನ್ನೂ ಹೊರಬೇಕಿದೆ’ ಎಂದು ಹೇಳಿದರು. 
 
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ, ‘ಗಾಂಧಿ ಹೇಳಿದಂತೆ ದ್ವೇಷ ಬಿಟ್ಟು ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು.  ಬದುಕುವ ಕಲೆಯನ್ನು ಯುವಕರು ಕಲಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT