ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯೋಗಿಕ ಸಂಚಾರ ಮತ್ತೆ ಒಂದು ವಾರ ವಿಳಂಬ

ಹಳಿ ತಪಾಸಣೆ, ತಾಂತ್ರಿಕ ಅಂಶಗಳ ಪರಿಶೀಲನೆ
Last Updated 27 ಫೆಬ್ರುವರಿ 2017, 20:35 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದವರೆಗೆ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಇನ್ನೂ ಒಂದು ವಾರ ವಿಳಂಬವಾಗಲಿದೆ. 

ಸಂಪಿಗೆ ರಸ್ತೆಯಿಂದ– ಯಲಚೇನಹಳ್ಳಿ ಮಾರ್ಗದಲ್ಲಿ ಫೆಬ್ರುವರಿ 16ರಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಈ ಹಿಂದೆ ತಿಳಿಸಿದ್ದರು.  ನಂತರ, ಫೆಬ್ರುವರಿ 25ರಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು ಎಂದು ನಿಗಮವು ಹೇಳಿತ್ತು. ಇದೀಗ  ಪ್ರಾಯೋಗಿಕ ಸಂಚಾರ ಆರಂಭಿಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ.

ಒಂದು ವಾರ ಕಾಲಾವಕಾಶ ಬೇಕು: ‘ಸಂಪಿಗೆ ರಸ್ತೆಯಿಂದ ಪ್ರಾಯೋಗಿಕ ಸಂಚಾರ ನಡೆಸುವ ಹೊಣೆಯನ್ನು ಫ್ರಾನ್ಸ್‌ ಮೂಲದ ಆಲ್‌ಸ್ಟೋಮ್‌  ಕಂಪೆನಿಗೆ ವಹಿಸಿದ್ದೇವೆ. ಅವರಿಗೆ ಹಳಿಗಳನ್ನು ಬಿಟ್ಟುಕೊಟ್ಟಿದ್ದೇವೆ. ಅವರು ಸಿಗ್ನಲಿಂಗ್‌ ವ್ಯವಸ್ಥೆ, ಹಳಿ ತಪಾಸಣೆ ಹಾಗೂ ಇತರ ತಾಂತ್ರಿಕ ಅಂಶಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅದು ಪೂರ್ಣಗೊಂಡ ಬಳಿಕವಷ್ಟೇ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ನಡೆಸಬಹುದು. ಇದಕ್ಕೆ ಏನಿಲ್ಲವೆಂದರೂ ಇನ್ನೂ ಒಂದು ವಾರ ಬೇಕಾಗಬಹುದು’ ಎಂದು ಖರೋಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ವರ್ಷ ವ್ಯರ್ಥ: ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿ ನಡುವಿನ ಎತ್ತರಿಸಿದ ಮಾರ್ಗದ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳೇ ಕಳೆದಿವೆ. ಆದರೂ, ಜಯನಗರ,  ಬನಶಂಕರಿ, ಜೆ.ಸಿ.ನಗರ  ಪ್ರದೇಶದ ಜನರು ಮೆಟ್ರೊ ರೈಲು ಸಂಪರ್ಕಕ್ಕೆ  ಚಾತಕಪಕ್ಷಿಯಂತೆ ಕಾಯಬೇಕಾದ ಸ್ಥಿತಿ ಇದೆ. ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜು ನಿಲ್ದಾಣ ನಡುವಿನ ಸುರಂಗ  ಮಾರ್ಗ ವಿಳಂಬವಾಗಿದ್ದರಿಂದ   ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿ ನಡುವಿನ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಿಸುವುದು ಸಾಧ್ಯವಾಗಿರಲಿಲ್ಲ.

ಸುರಂಗ ಕಾಮಗಾರಿ ಪೂರ್ಣಗೊಂಡ ಬಳಿಕ, ಒಂದು ಮಾರ್ಗದಲ್ಲಿ ಹಳಿಯನ್ನು ಅಳವಡಿಸಿ, ಬ್ಯಾಟರಿಚಾಲಿತ ಲೋಕೋಮೋಟಿವ್‌ ಯಂತ್ರದಸಹಾಯದಿಂದ ರೈಲನ್ನು ನ್ಯಾಷನಲ್‌ ಕಾಲೇಜು ನಿಲ್ದಾಣದವರೆಗೆ ಕೊಂಡೊಯ್ಯಲಾಗಿತ್ತು. ಈ ಮಾರ್ಗದಲ್ಲಿ 2016 ನವೆಂಬರ್‌ 20ರಿಂದ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ  ನಡೆಯುತ್ತಿದೆ.

ಮೆಜೆಸ್ಟಿಕ್‌ಗೂ ಸಂಪರ್ಕ ಕಲ್ಪಿಸಬಹುದಿತ್ತು: ‘ಸಂಪಿಗೆರಸ್ತೆಯಿಂದ ಮೆಜೆಸ್ಟಿಕ್‌ ನಿಲ್ದಾಣದ ನಡುವೆ ಸುರಂಗ ಕಾಮಗಾರಿ ಮುಗಿದು  ಆರೇಳು ತಿಂಗಳುಗಳು ಕಳೆದಿವೆ. ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಕನಿಷ್ಠ ಪಕ್ಷ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ ನಿಲ್ದಾಣವರೆಗೆ ಸಂಪರ್ಕ ಕಲ್ಪಿಸುತ್ತಿದ್ದರೂ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ  ಮೆಟ್ರೊ ಪ್ರಯಾಣಿಕ ನಾಗೇಶ್‌.

‘ಪ್ರಸ್ತುತ ನಾಗಸಂದ್ರ, ಪೀಣ್ಯ, ಯಶವಂತಪುರ, ರಾಜಾಜಿನಗರ ಕಡೆಯಿಂದ ಮೆಟ್ರೊದಲ್ಲಿ ಬರುವವರು ಎಂ.ಜಿ ರಸ್ತೆ, ಬೈಯಪ್ಪನಹಳ್ಳಿ ಕಡೆಗೆ ಮೆಟ್ರೊದಲ್ಲಿ ಹೋಗಲು  ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗೆ ಬಸ್‌ನಲ್ಲಿ ಪ್ರಯಾಣಿಸಬೇಕು. ಇದಕ್ಕೆ ಸುಮ್ಮನೆ ಸಮಯ ವ್ಯರ್ಥವಾಗುತ್ತಿದೆ. ಬಿಎಂಆರ್‌ಸಿಎಲ್‌ನವರು  ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದರೆ ಇಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ’ ಎನ್ನುತ್ತಾರೆ ಅವರು.

ಏಪ್ರಿಲ್‌ನಲ್ಲೂ ಉತ್ತರ–ದಕ್ಷಿಣ ಸಂಪರ್ಕ ಅನುಮಾನ
ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ  ಏಪ್ರಿಲ್‌ ಅಂತ್ಯದೊಳಗೆ ಪೂರ್ಣಪ್ರಮಾಣದಲ್ಲಿ ರೈಲು ಸಂಚಾರ ಆರಂಭಿಸುವುದಾಗಿ   ಬಿಎಂಆರ್‌ಸಿಎಲ್‌ ತಿಳಿಸಿದೆ. ಪ್ರಾಯೋಗಿಕ ಸಂಚಾರ ವಿಳಂಬವಾಗುತ್ತಿರುವುದರಿಂದ  ನಿರೀಕ್ಷೆಯಂತೆ ಏಪ್ರಿಲ್‌ನಲ್ಲೂ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ ಮೆಟ್ರೊ ಸಂಚಾರ ಆರಂಭವಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.  

ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ಮಾರ್ಗದಲ್ಲಿ 45 ದಿನಗಳ ಪ್ರಾಯೋಗಿಕ ಸಂಚಾರ ನಡೆಸಬೇಕಾಗುತ್ತದೆ. ಆನಂತರ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಬೇಕು. ಈ ಪ್ರಕ್ರಿಯೆ ಇನ್ನು ಏಪ್ರಿಲ್‌ನೊಳಗೆ ಮುಗಿಯಲು ಸಾಧ್ಯವೇ ಎಂಬುದು ಪ್ರಶ್ನೆ. ಈ ಮಾರ್ಗದಲ್ಲಿ 2016ರ ನವೆಂಬರ್‌ 1ರಿಂದ ಮೆಟ್ರೊ ಸಂಚಾರ ಆರಂಭಿಸುವುದಾಗಿ ಈ ಹಿಂದೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದರು.
ಆದರೆ ನಂತರ ಸುರಕ್ಷತೆಯ ಕಾರಣ ನೀಡಿ ಈ ಗಡುವನ್ನು 2017ರ ಏಪ್ರಿಲ್‌ವರೆಗೆ ವಿಸ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT