ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕ್ತಿಹಳ್ಳಿ ಬಳಿ ಕಾರುಗಳ ಡಿಕ್ಕಿ ಪ್ರಕರಣ: ಎಸ್‌ಐ ಮೇಲೆ ಹಲ್ಲೆ, 7 ಮಂದಿ ಬಂಧನ

Last Updated 28 ಫೆಬ್ರುವರಿ 2017, 9:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರ ಸಮೀಪದ ಮೂಕ್ತಿಹಳ್ಳಿ ಬಳಿ ಮಂಗಳವಾರ ಕಾರು ಅಪಘಾತ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದು, ಪಿಎಸ್‌ಐ ಬಂದೂಕು ತೋರಿಸಿ ಹೆದರಿಸಿದರು ಎನ್ನುವ ಕಾರಣಕ್ಕೆ ಯುವಕರು ಪಿಎಸ್‌ಐ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಸಣ್ಣ ಅಪಘಾತ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ದೊಡ್ಡ ಕದನ ನಡೆಯಲು ಕಾರಣವಾಗಿದೆ.

ಗ್ರಾಮಾಂತರ ಠಾಣೆ ಪಿಎಸ್‌ಐ ಗವಿರಾಜ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಾಫಿ ಬೆಳೆಗಾರ ನಟರಾಜ್‌, ಚೇತನ್‌, ಶಶಿ ಸೇರಿದಂತೆ 7 ಮಂದಿ ಯುವಕರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಡೂರು–ಮಂಗಳೂರು ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ಬಿಗುವಿನ ವಾತಾವರಣ ಉಂಟಾಗಿತ್ತು.

ಘಟನೆ ಹಿನ್ನೆಲೆ: ಪಿಎಸ್‌ಐ ಗವಿರಾಜ್‌ ಕಳವು ಪ್ರಕರಣದ ತನಿಖೆ ಮುಗಿಸಿಕೊಂಡು ಇಬ್ಬರು ಆರೋಪಿಗಳೊಂದಿಗೆ ಬಸ್ಕಲ್‌ ಕಡೆಯಿಂದ ಖಾಸಗಿ ಕಾರಿನಲ್ಲಿ ನಗರದ ಕಡೆಗೆ ಬೆಳಿಗ್ಗೆ ಬರುತ್ತಿದ್ದರು. ಮೂಕ್ತಿಹಳ್ಳಿ ಬಳಿ ಹೆದ್ದಾರಿಯಲ್ಲಿ ನಗರದ ಕಡೆಗೆ ಹೋಗುತ್ತಿದ್ದ ಕಾಫಿ ಬೆಳೆಗಾರ ಆಲದುಗುಡ್ಡೆಯ ನಟರಾಜ್‌ ಎಂಬಾತನ ಎಕ್ಸ್‌ಯುವಿ ಕಾರಿಗೆ ಪಿಎಸ್‌ಐ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ನಟರಾಜ್‌ ಹಿಂಬದಿ ಕಾರು ಚಾಲನೆ ಮಾಡುತ್ತಿದ್ದ ಪಿಎಸ್‌ಐ ಗವಿರಾಜ್‌ ಅವರನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ಕೈಕೈ ಮಿಲಾಯಿಸಿದ್ದು, ಸ್ಥಳೀಯರು ಸ್ಥಳದಲ್ಲಿ ಜಮಾಯಿಷಿದ್ದಾರೆ. ಜನರು ಗುಂಪುಗೂಡುತ್ತಿದ್ದಂತೆ ಮಫ್ತಿಯಲ್ಲಿದ್ದ ಗವಿರಾಜ್ ಆತ್ಮರಕ್ಷಣೆಗೆ ಬಂದೂಕು ಹೊರತೆಗೆದಿದ್ದಾರೆ. ಇದರಿಂದ ಕ್ರುದ್ಧಗೊಂಡ ಸಾರ್ವಜನಿಕರು ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಬರಬೇಕೆಂದು ಪಟ್ಟುಹಿಡಿದು, ಸಾರ್ವಜನಿಕರು ರಸ್ತೆ ತಡೆ ನಡೆಸಲು ಮುಂದಾದರು. ಈ ನಡುವೆ ಸ್ಥಳೀಯರು ಗಲಾಟೆ ನಿಯಂತ್ರಿಸಲು, ಆಕ್ರೋಶಗೊಂಡಿದ್ದ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದ ಪಿಎಸ್‌ಐ ಗವಿರಾಜ್‌ ಮತ್ತು ಅವರ ಜತೆಗಿದ್ದ ಇಬ್ಬರು ವ್ಯಕ್ತಿಗಳನ್ನು ಶಿರಗುಂದ ಗ್ರಾಮದ ಶೇಷಣ್ಣ ಎಂಬುವವರ ಮನೆಯಲ್ಲಿಟ್ಟು ರಕ್ಷಣೆ ಒದಗಿಸಿದರು ಎಂದು ಮೂಲಗಳು ತಿಳಿಸಿವೆ.

ಡಿವೈಎಸ್‌ಪಿ ಚಂದ್ರಶೇಖರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣರಾಜು, ವಿನೋದ್‌ ಭಟ್‌ ಹಾಗೂ ನೂರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಅಂಬರ್‌ ವ್ಯಾಲಿ ಶಾಲೆಯಿಂದ ಭಂಟರಭವನದವರೆಗೂ ರಸ್ತೆ ಸಂಚಾರ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸಾಲುಗಟ್ಟಿದ್ದು, ರಸ್ತೆಯನ್ನು ಸಂಚಾರಕ್ಕೆ ಸುಗಮಗೊಳಿಸಲು ಹರಸಾಹಸ ಪಟ್ಟರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಭೇಟಿ ನೀಡಿ, ಪಿಎಸ್‌ಐ ಮೇಲೆ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆಯಲು ಶಿರಗುಂದ ಗ್ರಾಮದ ಪ್ರತಿ ಮನೆಗಳನ್ನು ಶೋಧ ನಡೆಸಿದರು. ಗ್ರಾಮದ ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದ 6 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಪೊಲೀಸರನ್ನು ಕಂಡು ಓಡಿದ ಯುವಕನನ್ನು ಪೊಲೀಸರು ಗದ್ದೆಬಯಲಿನಲ್ಲಿ ಬೆನ್ನಟ್ಟಿ ಹಿಡಿದುಕೊಂಡು ಜೀಪು ಹತ್ತಿಸಿಕೊಂಡರು.

ಕೆಲ ಯುವಕರಿಗೆ ಪೊಲೀಸರು ಸ್ಥಳದಲ್ಲೇ ಗೂಸಾ ನೀಡಿದರು. ನಗರ ಠಾಣೆಯಲ್ಲಿ ಕೆಲಕಾಲ ಇಟ್ಟುಕೊಂಡು ಕಾಫಿ ಬೆಳೆಗಾರ ನಟರಾಜ್‌ ಸೇರಿದಂತೆ 7 ಮಂದಿಯನ್ನು ತೀವ್ರ ವಿಚಾರಣೆ ನಡೆಸಿದರು. ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ, ಸಾರ್ವಜನಿಕ ಆಸ್ತಿ ನಷ್ಟಪಡಿಸಿದ, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪಗಳಡಿ (ಐಪಿಸಿ ಸೆಕ್ಷನ್‌ 327, 353, 504, 506) ನಗರ ‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೂಕ್ತಿಹಳ್ಳಿ ಮತ್ತು ಶಿರಗುಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, 1 ಕೆಎಸ್‌ಆರ್‌ಪಿ ತುಕಡಿಯನ್ನು ಗ್ರಾಮಕ್ಕೆ ನಿಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ‘ತಾಕತ್‌ ಇದ್ದರೆ ನನ್ನ ಎದುರಿಗೆ ರಸ್ತೆ ಸಂಚಾರ ಸ್ಥಗಿತಗೊಳಿಸಿ, ನಾನೂ ಪೊಲೀಸ್‌ ಕರೆಸುತ್ತೇನೆ, ನಾವೋ ನೀವೋ ನೋಡಿಯೇ ಬಿಡೋಣ’ ಎಂದು ಸಾರ್ವಜನಿಕರಿಗೆ ಪಂಥಾಹ್ವಾನ ನೀಡಿದರು. ರಸ್ತೆ ಸಂಚಾರ ನಡೆಸಲು ಮುಂದಾಗಿದ್ದ ಸಾರ್ವಜನಿಕರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ನಾನೇ ಖುದ್ದು ತನಿಖೆ ನಡೆಸುತ್ತೇನೆ:
‘ಕಳವು ಪ್ರಕರಣದ ತನಿಖೆಗೆ ಹೋಗಿ ಬರುತ್ತಿದ್ದ ಪಿಎಸ್‌ಐ ಮೇಲೆ ಹಲ್ಲೆ ಮಾಡಿರುವುದು ತಪ್ಪು. ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದ ಗುಂಪನ್ನು ಚದುರಿಸಿ, 6 ಮಂದಿ ವಶಕ್ಕೆ ತೆಗೆದುಕೊಂಡಿದ್ದೇವೆ. ಪ್ರತಿ ಮನೆಯನ್ನು ಶೋಧಿಸುತ್ತಿದ್ದೇವೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಯಾರೆಲ್ಲ ಸಹಕಾರ ನೀಡಿದ್ದಾರೆ ಅವರೆಲ್ಲರನ್ನೂ ಬಂಧಿಸುತ್ತೇವೆ. ಈ ಪ್ರಕರಣ ನಾನೇ ಖುದ್ದು ತನಿಖೆ ನಡೆಸುತ್ತೇನೆ’ ಎಂದು ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.

ಸಬ್‌ಇನ್‌ಸ್ಪೆಕ್ಟರ್‌ ಎಂದರೂ ಬಿಡಲಿಲ್ಲ
‘ಕಳವು ಪ್ರಕರಣದ ಆರೋಪಿ ಪತ್ತೆ ಮತ್ತು ಕಳವಾಗಿದ್ದ ವಸ್ತು ವಶಪಡಿಸಿಕೊಳ್ಳಲು ಖಾಸಗಿ ಕಾರಿನಲ್ಲಿ ಮಫ್ತಿಯಲ್ಲಿ ಹೋಗಿ ಬರುತ್ತಿದ್ದೆ. ಮುಂದೆ ಹೋಗುತ್ತಿದ್ದ ಎಕ್ಸ್‌ಯುವಿ ಕಾರು ಚಾಲಕ ಏಕಾಏಕಿ ಬ್ರೇಕ್‌ ಹಾಕಿದರು. ಕಾರು ನಿಯಂತ್ರಿಸುವಾಗ ಮುಂದೆ ಇದ್ದ ಕಾರಿಗೆ ಸ್ವಲ್ಪ ತಗುಲಿತು. ಚಾಲಕ ನಟರಾಜ ಇಳಿದು ಬಂದು ಏಕಾಏಕಿ ನಿಂದಿಸಿದರು. ನಾನು ಸಬ್‌ಇನ್‌ಸ್ಪೆಕ್ಟರ್‌ ಎಂದು ಹೇಳಿದರೂ ಬಿಡದೆ ಹಲ್ಲೆ ಮಾಡಿದರು. ಆಗ ನಾನು ಕೆಳಗೆ ಬಿದ್ದೆ. ಸೊಂಟದಲ್ಲಿದ್ದ ಸರ್ವಿಸ್‌ ಪಿಸ್ತೂಲ್‌ ಕೆಳಗೆ ಬಿಳುತ್ತದೆ ಎಂದು ಕೈಯಲ್ಲಿಡಿದುಕೊಂಡೆ. ಸ್ವರಕ್ಷಣೆಗೆ ಬಂದೂಕು ಹಿಡಿದುಕೊಂಡಾಗ ಬಹಳಷ್ಟು ಬಂದು ಹಿಂಬದಿಯಿಂದ ಬಂದು ಏಕಾಏಕಿ ಹಲ್ಲೆ ನಡೆಸಿದರು.ತಕ್ಷಣದ ನಮ್ಮ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿದೆ’ ಎಂದು ಪಿಎಸ್‌ಐ ಗವಿರಾಜ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಪಿಎಸ್‌ಐ ಬೆದರಿಸಿದರು:
‘ಮುಂದೆ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದರೂ ತಪ್ಪು ಒಪ್ಪಿಕೊಳ್ಳದೆ ಪಿಎಸ್‌ಐ ಗವಿರಾಜ್‌, ಎಕ್ಸ್‌ಯುವಿ ಕಾರಿನ ಚಾಲಕ ನಟರಾಜ್‌ ಪ್ರಶ್ನಿಸಿದ ಎನ್ನುವ ಕಾರಣಕ್ಕೆ ಏಕಾಏಕಿ ತೀವ್ರ ಹಲ್ಲೆ ನಡೆಸಿದರು. ಬಂದೂಕು ತೋರಿಸಿ ಕೊಲ್ಲುವ ಬೆದರಿಕೆ ಹಾಕಿದರು. ಇದರಿಂದ ತಕ್ಷಣ ಸುತ್ತುಮುತ್ತಲಿನ ಜನರು ಸೇರಿಕೊಂಡು, ಪಿಎಸ್‌ಐ ತೋರಿದ ದರ್ಪ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಚಕಮಕಿ ನಡೆದು, ಪಿಎಸ್‌ಐ ಸರ್ವಿಸ್‌ ಪಿಸ್ತೂಲ್‌ ತೋರಿಸಿ ಬೆದರಿಕೆ ಒಡ್ಡಿದ್ದರಿಂದ ಕೆಲ ಯುವಕರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ’ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮೂಡಿಗೆರೆ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಗವಿರಾಜ್‌ ಅವರ ಕರ್ತವ್ಯನಿಷ್ಠೆ ಮೆಚ್ಚಿ, ಇತ್ತೀಚೆಗಷ್ಟೆ ಎಸ್‌ಪಿ ಅಣ್ಣಾಮಲೈ ವೈಯಕ್ತಿಕ ಆಸ್ಥೆವಹಿಸಿ ಗ್ರಾಮಾಂತರ ಠಾಣೆಗೆ ಹಾಕಿಸಿಕೊಂಡಿದ್ದರು ಎನ್ನುತ್ತವೆ ಪೊಲೀಸ್‌ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT