ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ

ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದಲ್ಲಿ ನಡೆದ ಧರ್ಮಸಭೆ: ರಂಭಾಪುರಿ ಸ್ವಾಮೀಜಿ ಅಭಿಮತ
Last Updated 28 ಫೆಬ್ರುವರಿ 2017, 9:41 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮಷ್ಟಿಪ್ರಜ್ಞೆ ಮತ್ತು ಸಮಾಜ­ದಲ್ಲಿ ಸಾಮರಸ್ಯ ಬೋಧಿಸುತ್ತ ವೀರಶೈವ ಧರ್ಮ ವಿಶ್ವದಲ್ಲಿ ಬಂಧುತ್ವ ಸಾರಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾ­ಚಾರ್ಯ ಭಗವತ್ಪಾದರು ತಿಳಿಸಿದರು.

ಇಲ್ಲಿಗೆ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ  ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಶೈವ ಧರ್ಮ ಶಿವಾಗಮ ಸಾಹಿತ್ಯ, ಶರಣರ ವಚನ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೆ ಅಪಾರ ಕೊಡುಗೆ ನೀಡುತ್ತಿದೆ. ತಾನು ಎಲ್ಲರಿಗಾಗಿ ಅನ್ನುವುದೇ ನಿಜವಾದ ಧರ್ಮ. ಎಲ್ಲ­ರೂ ತನಗಾಗಿ ಅನ್ನುವುದು ಅಧರ್ಮ. ಅಧರ್ಮದ ವಿರುದ್ಧ ಧರ್ಮದ ದಂಡ­ಯಾತ್ರೆ ಯಾವಾಗಲೂ ನಡೆದಿರು­ವುದನ್ನು ಕಾಣಬಹುದು. ಅಶಾಂತಿ, ಅಸತ್ಯ, ಅನಾಗರಿಕ ವರ್ತನೆ­ಯಿಂದ ತಲ್ಲಣಿಸುತ್ತಿರುವ ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಸಾಮರಸ್ಯ ಬೆಳೆದು ಬರಬೇಕಾದುದು ಅಗತ್ಯವಾಗಿದೆ.

ಧರ್ಮ- ಧರ್ಮಗಳಲ್ಲಿ, ಜಾತಿ- ಜಾತಿಗಳಲ್ಲಿ ಸಾಮರಸ್ಯ ಮತ್ತು ಉತ್ತಮ ಬಾಂಧವ್ಯ ವೃದ್ಧಿಸುವುದೇ ಜಾತ್ರೆಗಳ ಮೂಲ ಗುರಿಯಾಗಿರಬೇಕು. ಅದ­ಕ್ಕಾಗಿಯೇ  ವೀರಗಂಗಾಧರ ಜಗದ್ಗುರು­ಗಳು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಮಂತ್ರವನ್ನು ಜನರಲ್ಲಿ ಬಿತ್ತಿದ್ದರು. ಅವರ ಮಂತ್ರವನ್ನು ದಿನಾಲೂ ಪಠಣ ಮಾಡಿದರೆ ಸಮಾಜದಲ್ಲಿ ಒಡಕು ಬರಲು ಸಾಧ್ಯವಿಲ್ಲ ಎಂದರು.
ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವ ಸಮಾರಂಭಗಳು ಜನ ಸಮುದಾಯದಲ್ಲಿ ಸಾಮರಸ್ಯ ಸಂವರ್ಧನೆಗೊಳ್ಳಲು ಸಹಕಾರಿ ಆಗಿವೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ವೀರಗಂಗಾಧರ ಜಗದ್ಗುರುಗಳು ತಮ್ಮ ತಪಸ್ಸಿನ ಫಲದಿಂದ ಭಕ್ತ ಸಮೂಹವನ್ನು ಉದ್ಧರಿಸಿದ್ದಾರೆ. ಅವರ ಸತ್ಯ ಸಂಕಲ್ಪದಂತೆ ಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನಾ ಕಾರ್ಯ ಭರದಿಂದ ಸಾಗಿದ್ದು ಈ ಪುಣ್ಯದ ಕೆಲಸದಲ್ಲಿ ಭಕ್ತರು ತನು, ಮನ, ಧನದಿಂದ ಸಹಾಯ ಸಹಕಾರ ಸಲ್ಲಿಸಿ ಇದರಲ್ಲಿ ಪಾಲ್ಗೊಳ್ಳ­ಬೇಕು ಎಂದು ಕರೆ ನೀಡಿದರು. ಗಿರಿಸಾಗರ, ಕುಂದಗೋಳ, ಲಕ್ಷ್ಮೇಶ್ವರ, ಬಿಲ್ಕೆರೂರು, ಕನ್ನೂರು ಮಠಾಧೀಶರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ ಎಸ್.ಪಿ. ಪಾಟೀಲ ಉದ್ಘಾಟಿಸಿದರು.  ಶಾಸಕ ಸಿ.ಎಸ್‌. ಶಿವಳ್ಳಿ,  ಶಾಸಕ ಎನ್‌.ಎಚ್‌. ಕೋನರೆಡ್ಡಿ, ಬಿ.ಪಿ. ಹಳ್ಳೂರ, ಬಸಟ್ಟೆಪ್ಪ ಯಲಿಗಾರ, ಜಗದೀಶ ಬೂದಿಹಾಳ,  ಇದ್ದರು. ಇದಕ್ಕೂ ಮೊದಲು  ರಂಭಾ­ಪುರಿ  ವೀರಗಂಗಾಧರ ಶಿವಾ­ಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಹಾಗೂ ಶಿವರಾತ್ರಿ  ಮಹಾ ರಥೋತ್ಸವ ಜರು­ಗಿತು.   ರೇಣುಕಾಚಾರ್ಯ ಗುರು­ಕುಲದ ಸಾಧಕರಿಂದ ವೇದಘೋಷ ನಡೆಯಿತು. ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಸಾಹಿತಿ ನೀಲಪ್ಪ ಶೆರಸೂರಿ ಅವರು ‘ಬನ್ನಿ ಪುಲಿಗೆರೆ ಪುರಕ್ಕೆ–2’ ಪುಸ್ತಕವನ್ನು ರಂಭಾಪುರಿ  ಸ್ವಾಮೀಜಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT