ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು,ನೀರಿನ ಸಮಸ್ಯೆಗೆ ಪಿಡಿಓಗಳೇ ಹೊಣೆ

ಮೂರನೇ ತ್ರೈಮಾಸಿಕ ಕೆಡಿಪಿ ಸಭೆ: ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಕೆ
Last Updated 28 ಫೆಬ್ರುವರಿ 2017, 9:52 IST
ಅಕ್ಷರ ಗಾತ್ರ

ಬ್ಯಾಡಗಿ: ‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಇಂತಹ ವಿಷಯದಲ್ಲಿ ಲೋಪವೆಸಗುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸುವರ್ಣಸೌಧ ಸಭಾಭವನದಲ್ಲಿ ಸೋಮವಾರ ನಡೆದ 3ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಾನುವಾರುಗಳಿಗೆ ಮೇವಿನ ಕೊರತೆಯಾಗಬಾರದು, ಮೇಲಾಧಿಕಾರಿಗಳನ್ನು ನೆಪ ಮಾಡಿಕೊಳ್ಳದೇ, ಗ್ರಾಮದಲ್ಲಿ ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

‘ತಾಲ್ಲೂಕಿನ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಹೀಗಾಗಿ ಕೊಳವೆಬಾವಿಗಳಲ್ಲಿ ನೀರು  ಕಡಿಮೆ ಆಗುತ್ತಿದೆ. 10 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಲು ಪ್ರಸ್ತಾವ ಸಲ್ಲಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಭೂಸೇನಾ ನಿಗಮದಿಂದ ಅಳವಡಿಸಿದ ಶೇಕಡ 90ರಷ್ಟು ಶುದ್ಧ ನೀರಿನ ಘಟಕಗಳು ದುರಸ್ತಿ ಹಂತದಲ್ಲಿವೆ’ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್ ಮುಸ್ತಾಕ ಅಹ್ಮದ್ ಸಭೆಗೆ ಮಾಹಿತಿ ನೀಡಿದರು.

ಶುದ್ಧ ನೀರಿನ ಘಟಕ ದುರಸ್ತಿಯಲ್ಲಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ನಿಗಮದ ಎಂಜಿನಿಯರ್‌ ಎಸ್‌.ಎಚ್‌.ಎರೇಶೀಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ತ್ವರಿತವಾಗಿ ಘಟಕಗಳ ದುರಸ್ತಿ ಮಾಡಿ’ ಎಂದು ತಾಕೀತು ಮಾಡಿದರು.

‘ರಾಣೆಬೆನ್ನೂರ ತಾಲ್ಲೂಕಿನ ಮುದೇನೂರ ಬಳಿ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಈಗ ಭದ್ರಾ ಜಲಾಶಯದಿಂದ ಬಿಟ್ಟಿರುವ ನೀರು ಒಂದು ವಾರದಲ್ಲಿ ಖಾಲಿಯಾಗಲಿದೆ. ಹೀಗಾಗಿ ಇಲ್ಲಿಯ ಜನತೆ ನೀರಿನ ಕೊರತೆಯನ್ನು ಎದುರಿಸಬೇಕಾಗಿದೆ. ಈಗ ಪಟ್ಟಣದಲ್ಲಿ 47 ಕೊಳವೆ ಬಾವಿಗಳಿದ್ದು ಇನ್ನೂ 10 ಕೊಳವೆ ಬಾವಿಗಳನ್ನು ಕೊರೆಸಬೇಕು’ ಎಂದು ಪುರಸಭೆಯ ಕಂದಾಯ ಅಧಿಕಾರಿ ಮಂಜುನಾಥ ಮನವಿ ಮಾಡಿದರು.

ತಾಲ್ಲೂಕಿನ ಹಿರೇಅಣಜಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಸತಿ ಶಾಲೆಗಳು ಮೂಲ ಸೌಲಭ್ಯದ ಕೊರತೆ ಎದುರಿಸುತ್ತಿವೆ. ಹೀಗಾಗಿ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದಕ್ಕೆ ಮೇಲ್ವಿಚಾರಕರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಸದಸ್ಯ ಮಂಜನಗೌಡ ಲಿಂಗನಗೌಡ್ರ ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರು ಮುಂದಿನ ವರ್ಷ ಮಕ್ಕಳ ಸಂಖ್ಯೆ ಇಳಿಕೆಯಾದರೆ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಅಬ್ದುಲ್‌ಮುನಾಫ್‌ ಎಲಿಗಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ತಹಶೀಲ್ದಾರ್ ಶಿವಶಂಕರ ನಾಯಕ, ಕೆಡಿಪಿ ಸದಸ್ಯರಾದ ಕೇಶವ ಕಿತ್ತೂರ, ಮಾರುತಿ ಅಚ್ಚಿಗೇರಿ ಉಪಸ್ಥಿತರಿದ್ದರು.

ತಾಲ್ಲೂಕಿನಲ್ಲಿ ಮೇವು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಿ. ಸಮಸ್ಯೆ ಉದ್ಭವಿಸಿದರೆ ಪಿಡಿಓಗಳನ್ನು ಹೊಣೆಗಾರನ್ನಾಗಿ ಮಾಡಲಾಗುವುದು

-ಬಸವರಾಜ ಶಿವಣ್ಣನವರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT