ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗಾಗಿ ತ್ಯಾಜ್ಯ ಸಂಸ್ಕರಣೆ

ಹಾವೇರಿಯ ಗೌರಾಪುರದಲ್ಲಿ ನಗರಸಭೆಯಿಂದ ಭೂ ಭರ್ತಿ ಸ್ಥಳದ ತಾಂತ್ರಿಕ ಅಭಿವೃದ್ಧಿ
Last Updated 28 ಫೆಬ್ರುವರಿ 2017, 10:05 IST
ಅಕ್ಷರ ಗಾತ್ರ

ಹಾವೇರಿ: ನಗರದ ತ್ಯಾಜ್ಯ ಸಂಸ್ಕರಿಸುವ ಹಲವಾರು ಯೋಜನೆಗಳು ನಗರಸಭೆಯ ಮುಂದಿದೆ. ಈ ಪೈಕಿ ಗೌರಾಪುರದ ಭೂ ಭರ್ತಿ ಸ್ಥಳಕ್ಕೆ ಬಂದ ತ್ಯಾಜ್ಯವನ್ನು ಜೈವಿಕ ವಿಧಾನದಲ್ಲಿ ಸಂಸ್ಕರಿಸಿ, ನವೀಕರಿಸ ಬಹುದಾದ ತ್ಯಾಜ್ಯವನ್ನು ಬೇರ್ಪಡಿಸಿ, ಒಟ್ಟು ತ್ಯಾಜ್ಯದ ಪ್ರಮಾಣ ಕಡಿಮೆಗೊಳಿಸುವ ಯೋಜನೆಯೊಂದು ಅನುಷ್ಠಾನದ ಹಂತದಲ್ಲಿದೆ.

ಹಾನಗಲ್– ಹಾವೇರಿಯ ಹೆದ್ದಾರಿಯ ಗೌರಾಪುರದಲ್ಲಿ 10 ಎಕರೆಯ ವಿಸ್ತಾರದ ಭೂ ಭರ್ತಿ ನಿವೇಶನದಲ್ಲಿ ಈಗಾಗಲೇ ಕಾಮಗಾರಿ ಆರಂಭಗೊಂಡಿದೆ.

41.5 ಟನ್‌ ತ್ಯಾಜ್ಯ:  ನಗರದಲ್ಲಿ ಪ್ರತಿನಿತ್ಯ 41.5 ಟನ್ ತ್ಯಾಜ್ಯ ಉತ್ಪಾದನೆಗೊಳ್ಳುತ್ತಿದೆ. ಇದನ್ನು ಯಥಾವತ್ತಾಗಿ ಭೂ ಭರ್ತಿ ಸ್ಥಳದಲ್ಲಿ ತುಂಬಿಸಿದರೆ, ಕೆಲವೇ ವರ್ಷಗಳಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ಪರಿಸರ ಮಾಲಿನ್ಯದ ಸಾಧ್ಯತೆ ಅಧಿಕವಾಗಿದೆ. ಅದಕ್ಕಾಗಿ
ಎರೆಹುಳು ಗೊಬ್ಬರ ಘಟಕ, ಜೈವಿಕ ಸಂಸ್ಕರಣೆ, ನವೀಕರಿಸಲಾರದ ತ್ಯಾಜ್ಯದ ಬೇಪರ್ಡಿಸುವಿಕೆ ಹಾಗೂ ಸೋಸುವಿಕೆ ವಿಧಾನದ ಮೂಲಕ ಒಟ್ಟು ತ್ಯಾಜ್ಯವನ್ನು ನಾಲ್ಕನೇ ಒಂದು ಭಾಗಕ್ಕೆ ಇಳಿಸುವ ಪ್ರಕ್ರಿಯೆ ಇದಾಗಿದೆ. ಇದರಿಂದ, ಕೇವಲ ಶೇ 25ರಷ್ಟು ತ್ಯಾಜ್ಯ ಮಾತ್ರ ಭೂ ಭರ್ತಿ ಸ್ಥಳಕ್ಕೆ ಹೋಗಲಿದೆ.

ಅನುಷ್ಠಾನ: ನಗರದ ತ್ಯಾಜ್ಯದ ಪೈಕಿ
ಶೇ 70ರಷ್ಟು ಮಾರುಕಟ್ಟೆ ಮತ್ತಿತರ ವಾಣಿಜ್ಯ ಪ್ರದೇಶದಲ್ಲಿ ಉತ್ಪಾದನೆಯಾಗುತ್ತದೆ. ಇದರಲ್ಲಿ ಹಸಿ ತ್ಯಾಜ್ಯವೇ ಹೆಚ್ಚು. ಇದನ್ನು ಎರೆಹುಳ ಗೊಬ್ಬರ ಘಟಕಕ್ಕೆ ಹಾಕಲಾಗುತ್ತದೆ. ಇದು ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ. ಮೇಲ್ಪದರಲ್ಲಿ ಉಳಿದ ಅಲ್ಪಸ್ವಲ್ಪ ಪ್ಲಾಸ್ಟಿಕ್ ಅನ್ನು ಪ್ರತ್ಯೇಕಿಸಲಾಗುತ್ತದೆ.

ಆದರೆ, ‘ಬಡಾವಣೆಗಳಿಂದ ಬರುವ ತ್ಯಾಜ್ಯದಲ್ಲಿ ಹಸಿ ಮತ್ತ ಒಣ (ಪ್ಯಾಸ್ಟಿಕ್ ಇತ್ಯಾದಿ) ಪ್ರಮಾಣಗಳೆರಡೂ ಬಹುತೇಕ ಸಮಾನವಾಗಿದೆ’ ಎನ್ನುತ್ತಾರೆ ನಗರಸಭೆಯ ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನೆವರ.

ಈ ತ್ಯಾಜ್ಯಕ್ಕೆ ಜೈವಿಕ ತಂತ್ರಜ್ಞಾನದ ಪರಿಸರ ಸ್ನೇಹಿ ಬ್ಯಾಕ್ಟೀರಿಯಾ, ಎನ್‌ಜೈಮ್‌ಗಳನ್ನು ಸಿಂಪಡಿಸಲಾಗುತ್ತದೆ. ಬಳಿಕ  1,800 ಚದರ ಮೀಟರ್ಸ್‌ ಹಾಗೂ 1,100 ಚದರ ಮೀಟರ್ಸ್‌ನ ಎರಡು ತೆರೆದ ಫ್ಲಾಟ್‌ಫಾರಂ (ಕಾಂಕ್ರೀಟ್‌ ವೇದಿಕೆ)ನಲ್ಲಿ windrow technology (ಗಾಳಿಗೊಡ್ಡಿದ ಕೊಯ್ಲು ಕುಪ್ಪೆ ತಂತ್ರಜ್ಞಾನ) ಮೂಲಕ ಸಂಸ್ಕರಿಸಲಾಗುತ್ತದೆ. ಇಲ್ಲಿ ತ್ಯಾಜ್ಯವನ್ನು ಸಾಲಾಗಿ ಹಾಕಿ ಗಾಳಿಗೆ ಒಡ್ಡಲಾಗುತ್ತದೆ. ಆಮ್ಲಜನಕ ಸಿಗುವ ಕಾರಣ  ಎನ್‌ಜೈಮ್‌ಗಳು ಹಸಿ ತ್ಯಾಜ್ಯವನ್ನು ಸುಮಾರು 50 ದಿನಗಳಲ್ಲಿ ಸಣ್ಣ ಗಾತ್ರದ ಗೊಬ್ಬರವಾಗಿ ಮಾಡುತ್ತದೆ.
ಆ ಬಳಿಕವೂ ಬ್ಯಾಕ್ಟೀರಿಯಾಗಳು ಸಂಸ್ಕರಿಸದೇ ಉಳಿದ ಪ್ಲಾಸ್ಟಿಕ್‌ ಮತ್ತಿತರ ಒಣ ತ್ಯಾಜ್ಯವನ್ನು 16 ಮಿ.ಮೀ ಹಾಗೂ 4 ಮಿ.ಮೀ ಅಳತೆ ಗಾತ್ರದ ಬಲೆಯ ಯಂತ್ರದ ಮೂಲಕ ‘ಸೋಸಿ’ (screening technology) ಪ್ರತ್ಯೇಕಿಸಲಾಗುತ್ತದೆ. ಅದಕ್ಕೂ ಪೂರ್ವದಲ್ಲಿ ದೊಡ್ಡ ಗಾತ್ರದ ಕಸವನ್ನು ವಿಭಜಿಸಿ (shredding) ಸಣ್ಣದಾಗಿ ಮಾಡಲಾಗುತ್ತದೆ. ಅಂತಿಮವಾಗಿ ಮಣ್ಣಿನೊಂದಿಗೆ ಸೇರಬಲ್ಲ ಸಣ್ಣ ಗಾತ್ರದ ಗೊಬ್ಬರ ಉಳಿಯುತ್ತದೆ. ಇದನ್ನು ಕೃಷಿ ಮತ್ತಿತರ ಬಳಕೆ ಮಾಡಬಹುದು.

ಅಲ್ಲದೇ, ಉಳಿದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಕುಗ್ಗಿಸುವ ಮೂಲಕ ಪಿಂಡಿಗಳನ್ನಾಗಿ (baling technology) ಮಾಡಲಾಗುತ್ತದೆ.
ಅಂತಿಮವಾಗಿ ಉಳಿದ ಶೇ 25ರಷ್ಟು ನವೀಕರಿಸಲಾರದ ತ್ಯಾಜ್ಯವನ್ನು ಘಟಕದಲ್ಲಿರುವ ‘ನೈರ್ಮಲ್ಯದ ನೆಲ ಭರ್ತಿ’ (sanitary land fill) ಘಟಕಕ್ಕೆ ಹಾಕಲಾಗುತ್ತದೆ. ಸುಮಾರು 3 ಮೀಟರ್ ಆಳದ ಕಾಂಕ್ರಿಟೀಕರಣಗೊಂಡ ಈ ಘಟಕದ ತಳದಲ್ಲಿ ಸಂಗ್ರಹಗೊಳ್ಳುವ ಕೊಳಚೆ ನೀರನ್ನು ಹೊರ ತೆಗೆಯಲಾಗುತ್ತದೆ. ಒಣ ಕಸ ಮಾತ್ರ ಭೂ ಭರ್ತಿ ಸ್ಥಳದಲ್ಲಿ ಶೇಖರಣೆಗೊಳ್ಳುತ್ತದೆ.  

‘ಇದರಿಂದ ತ್ಯಾಜ್ಯವು ಯಾವುದೇ ಕಾರಣಕ್ಕೂ ಮಣ್ಣಿಗೆ ಸೇರುವ ಅಪಾಯವಿಲ್ಲ. ಅಲ್ಲದೇ, ತ್ಯಾಜ್ಯದ ಕೊಳಚೆ ನೀರು ಕೂಡಾ ಬೇರ್ಪಡುತ್ತದೆ. ಒಟ್ಟಾರೆಯಾಗಿ, ಕೇವಲ 10 ವರ್ಷದಲ್ಲೇ ತ್ಯಾಜ್ಯ ಭರ್ತಿಯಾಗಿ ಉದ್ಭವಿಸಬಹುದಾದ ಸಮಸ್ಯೆ ತಪ್ಪುತ್ತದೆ. ಸುಮಾರು 40ರಿಂದ 50 ವರ್ಷದ ತನಕ ಈ ಸ್ಥಳದ ಬಳಕೆ ಸಾಧ್ಯವಾಗುತ್ತದೆ’ ಎನ್ನುತ್ತಾರೆ ನಗರಸಭೆಯ ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನೆವರ.

‘ಅಲ್ಲದೇ, ಎರೆಹುಳುಗೊಬ್ಬರ ಘಟಕದಲ್ಲಿ ತ್ಯಾಜ್ಯ ಪರಿಪೂರ್ಣ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತದೆ. ಈ ಗೊಬ್ಬರದಲ್ಲಿ ನೈಟ್ರೋಜನ್, ಆಕ್ಸಿಜನ್ ಮತ್ತಿತರ ಅಂಶಗಳು ಹೆಚ್ಚಿರುವ ಕಾರಣ ಕೃಷಿಗೆ ಬಳಸಲು ಪೂರಕವಾಗಿದೆ’ ಎನ್ನುತ್ತಾರೆ ಅವರು.

‘ಇಲ್ಲಿ ಉತ್ಪಾದನೆಗೊಂಡ ಗೊಬ್ಬರ ಹಾಗೂ ವ್ಯರ್ಥ ಪ್ಲಾಸ್ಟಿಕ್ ಅನ್ನು ಎನ್‌ಜಿಓ ಮೂಲಕ ಮಾರಾಟ  ಹಾಗೂ ಗೌರಾಪುರದಲ್ಲಿ ಸೌರಶಕ್ತಿ ವಿದ್ಯುತ್ ಘಟಕದ ಸ್ಥಾಪನೆ ಮೂಲಕ ಘಟಕವನ್ನು ಲಾಭದಾಯಕ ಮಾಡುವ ಯೋಜನೆಯೂ ಚಿಂತನೆಯಲ್ಲಿದೆ. ಬೆಂಗಳೂರಿನಂತೆ ಭವಿಷ್ಯದಲ್ಲಿ ಇಲ್ಲಿಯೂ ಸಮಸ್ಯೆ ಉದ್ಭವಿಸದ ಹಾಗೆ ಕ್ರಮಕೈಗೊಳ್ಳಬೇಕಾಗಿದೆ’ ಎನ್ನುತ್ತಾರೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ.

ಜನರು ಕಸ ವಿಂಗಡಿಸುತ್ತಿಲ್ಲ...
‘ನಗರದ ಕಸ ಸಂಗ್ರಹ ವಿಧಾನದಲ್ಲಿ ಈಗ ಹಸಿ ಮತ್ತು ಒಣ ಕಸ ವಿಂಗಡಿಸುವ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಚಾಲ್ತಿಯಲ್ಲಿ ಇಲ್ಲ. ಆದರೆ, ಜನತೆ ತಮ್ಮ ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಿದರೆ, ಒಟ್ಟು ಪ್ರಕ್ರಿಯೆ ಕಡಿಮೆಗೊಳ್ಳುತ್ತದೆ. ವೆಚ್ಚವೂ ಕಡಿಮೆಯಾಗುತ್ತದೆ. ಹಾವೇರಿ ನಗರದ ಪರಿಸರ ಸಂಕ್ಷಣೆ ಸಾಧ್ಯ. ಇದಕ್ಕೆ ಜನರ ಸಹಕಾರ ಬಹುಮುಖ್ಯ’ ಎನ್ನುತ್ತಾರೆ ಪೌರಾಯುಕ್ತ ಶಂಕರ ಬಾರ್ಕಿ.
‘ಪ್ಲಾಸ್ಟಿಕ್, ಪೇಪರ್‌ಗಳನ್ನು  ಎಸೆಯುವುದು, ತ್ಯಾಜ್ಯಕ್ಕೆ ಹಾಕುವ ಬದಲಾಗಿ ಮನೆಯಲ್ಲಿಯೇ ಪ್ರತ್ಯೇಕವಾಗಿ ಇಟ್ಟು ಗುಜರಿಗೆ ನೀಡಿದರೆ ಪರಿಸರ ಸಂರಕ್ಷಣೆಗೆ ನಾಗರಿಕರು ಕೊಡುಗೆ ನೀಡಿದಂತಾಗುತ್ತದೆ’ ಎನ್ನುತ್ತಾರೆ ಅವರು.

*
ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಿಸುವ ಪ್ರಕ್ರಿಯೆಯು ಅನುಷ್ಠಾನ ಹಂತದಲ್ಲಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಆರಂಭದ ನಿರೀಕ್ಷೆ ಇದೆ

-ಪಾರ್ವತೆವ್ವ ಹಲಗಣ್ಣನವರ, ಅಧ್ಯಕ್ಷೆ, ಹಾವೇರಿ ನಗರಸಭೆ

ನಗರದ ತ್ಯಾಜ್ಯ ವಿವರ

ನಗರದ ಜನಸಂಖ್ಯೆ (ಜನಗಣತಿ 2011) 67,102

ಉತ್ಪಾದನೆ ಆಗುವ ತ್ಯಾಜ್ಯ 41.5ಟನ್

ವಿಲೇವಾರಿಗೆ ಹಾಲಿ ವಾರ್ಷಿಕ ವೆಚ್ಚ ₹1.7ಕೋಟಿ

ಸಂಸ್ಕರಣಾ ಘಟಕದಲ್ಲಿಯ ಉದ್ಯೋಗಿಗಳು 15ಜನ

ನಗರ ತ್ಯಾಜ್ಯ ವಿಲೇವಾರಿ ಪೌರಕಾರ್ಮಿಕರು 119ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT