ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬಹುತೇಕ ಎಟಿಎಂಗಳಲ್ಲಿರುವುದು ಅಪ್‍ಡೇಟ್ ಆಗದ ತಂತ್ರಜ್ಞಾನ!

Last Updated 28 ಫೆಬ್ರುವರಿ 2017, 10:39 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿರುವ ಬಹುತೇಕ ಎಟಿಎಂಗಳಲ್ಲಿ ಅಪ್‍ಡೇಟ್ ಆಗದ ತಂತ್ರಜ್ಞಾನ ಮತ್ತು ಸುರಕ್ಷಾ ವಿಧಾನಗಳ ಕೊರತೆ ಇರುವುದರಿಂದಲೇ ಎಟಿಎಂಗಳಲ್ಲಿ ನಕಲಿ ನೋಟುಗಳು ಪತ್ತೆಯಾಗುತ್ತಿವೆ ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಎಟಿಎಂಗೆ ಹಣ ತುಂಬುವ ವ್ಯಕ್ತಿಗಳು ಒಂದು ಸಲದ ಕೋಡ್‌ (one-time combination -OTC) ವಿಧಾನವನ್ನು ಬಳಸದೇ ಇರುವುದು ಈ ರೀತಿಯ ಸಮಸ್ಯೆಗಳಿಗೆ ಕಾರಣ. ಅಷ್ಟೇ ಅಲ್ಲದೆ ದೇಶದಲ್ಲಿರುವ 220,000 ಎಟಿಎಂಗಳಲ್ಲಿ ಸಿಸಿಟಿವಿ ಇಲ್ಲ.

ಎಟಿಎಂಗಳಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಗಳು ಇಲ್ಲದೇ ಇರುವ ಕಾರಣ ಹಣ ತುಂಬುವ ವ್ಯಕ್ತಿಗಳು ತಮಗೆ ಇಷ್ಟ ಬಂದ ಸಮಯಗಳಲ್ಲಿ ಹಣ ತುಂಬಿಸಿ ಹೋಗುತ್ತಾರೆ. ಇವರ ಮೇಲೆ ನಿಗಾ ಇರಿಸಲೂ ಸಾಧ್ಯವಾಗುವುದಿಲ್ಲ. ಇಂಥಾ ಬೇಜವಾಬ್ದಾರಿಯಿಂದಲೇ  ದೆಹಲಿಯ ಎಟಿಎಂ ಘಟಕ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ₹ 2000 ಮುಖಬೆಲೆಯ ಆಟಿಕೆ ನೋಟು ಸಿಕ್ಕಿರುವುದು ಎಂದು ತಜ್ಞರು ಹೇಳಿದ್ದಾರೆ.

ಎಟಿಎಂಗಳಲ್ಲಿ OTC ಲಾಕಿಂಗ್ ಸಿಸ್ಟಂ ಬಳಸಿ ಎಂದು ನಾವು ಹಲವಾರು ಬಾರಿ ಬ್ಯಾಂಕ್‍ನವರಿಗೆ ಒತ್ತಾಯಿಸಿದ್ದೇವೆ. ಈ ವ್ಯವಸ್ಥೆಯಿಂದ ಎಟಿಎಂ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ಬ್ಯಾಂಕ್‍ಗಳು ನಮ್ಮ ಮಾತಿಗೆ ಕಿವಿಗೊಡಲೇ ಇಲ್ಲ ಎಂದು ಕ್ಯಾಶ್ ಲಾಜಿಸ್ಟಿಕ್ಸ್ ಅಸೋಸಿಯೇಷನ್‍ನ  ಕಾರ್ಯದರ್ಶಿ ಎನ್‍ಎಸ್‍ಜಿ ರಾವ್ ಹೇಳಿದ್ದಾರೆ.

ಏತನ್ಮಧ್ಯೆ, ಎಟಿಎಂಗಳಲ್ಲಿರುವ ಸಿಸಿಟಿವಿ ಕಾರ್ಯವೆಸಗುತ್ತದೆಯೇ? ಇಲ್ಲವೇ ಎಂಬುದರ ಬಗ್ಗೆ  ಬ್ಯಾಂಕ್‍ಗಳಿಗೆ ಮಾಹಿತಿಯೂ ಇರುವುದಿಲ್ಲ.

ಕೇಂದ್ರ ಸರ್ಕಾರ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದ ನಂತರ ಎಟಿಎಂಗಳಲ್ಲಿ ನಕಲಿ ನೋಟುಗಳ ಪತ್ತೆ ಪ್ರಕರಣಗಳೂ ಜಾಸ್ತಿಯಾಗುತ್ತಿವೆ.

[related]

ಈ ರೀತಿಯ ಮೋಸದಾಟ ನಡೆಯಲು ಪ್ರಮುಖ ಕಾರಣ ಹಣ ತುಂಬಿಸುವ ವ್ಯಾನ್‍ನಲ್ಲಿರುವ ವ್ಯಕ್ತಿಗಳೇ ಆಗಿರುತ್ತಾರೆ. ಈ ವ್ಯಾನ್‍ನಲ್ಲಿ ಚಾಲಕ,  ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಹಣ ತುಂಬಿಸುವ ಇಬ್ಬರು ವ್ಯಕ್ತಿಗಳು ಇರುತ್ತಾರೆ. ಭದ್ರತಾ ಸಿಬ್ಬಂದಿಗಳು ಎಟಿಎಂ ಹೊರಗೆ ನಿಂತರೆ, ಹಣ ತುಂಬುವ ಇಬ್ಬರು ವ್ಯಕ್ತಿಗಳಿಗೆ ಎಟಿಎಂನ್ನು ತೆರೆಯಲು ಎರಡು ಭಿನ್ನ ಪಾಸ್‍ವರ್ಡ್ ಗಳನ್ನು ನೀಡಲಾಗುತ್ತದೆ. ಆದರೆ ಈ ಇಬ್ಬರು ವ್ಯಕ್ತಿಗಳು ತಮ್ಮ ಪಾಸ್‍ವರ್ಡ್ ಗಳನ್ನು ಗೌಪ್ಯವಾಗಿ ಇಡುವುದೇ ಇಲ್ಲ. ಇಬ್ಬರೂ ಪರಸ್ಪರ ಪಾಸ್‍ವರ್ಡ್  ಗಳನ್ನು ಹಂಚಿಕೊಂಡಿರುವ ಕಾರಣ ಇವರಿಬ್ಬರಲ್ಲಿ ಯಾರಾದರೊಬ್ಬರು ಯಾವುದೋ ಹೊತ್ತಿಗೆ ಬಂದು ಯಾರಿಗೂ ತಿಳಿಯದಂತೆ ಎಟಿಎಂ ತೆರೆದು ಮೋಸದಾಟವಾಡಬಹುದು ಅಂತಾರೆ ರಾವ್.

ನೋಟು ರದ್ದತಿಯ ನಂತರ ಎಟಿಎಂಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದರೂ ಈಗಲೇ  ಇರುವ ಭದ್ರತಾ ಲೋಪಗಳು ಹಾಗೆಯೇ ಮುಂದುವರಿದಿದೆ ಎಂದು ಹೆಸರು ಹೇಳಲಿಚ್ಛಿಸದ ಬ್ಯಾಂಕ್‍ ಉದ್ಯೋಗಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್  ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT