ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರರಸಿ ಬಂದ ಜಾನುವಾರುಗಳು

ಕೊಪ್ಪಳ ಭಾಗದಿಂದ ಕುರುಗೋಡು ಪಟ್ಟಣದತ್ತ ದನ ಕರುಗಳನ್ನು ಕರೆತಂದ ದನಗಾಹಿಗಳು
Last Updated 28 ಫೆಬ್ರುವರಿ 2017, 10:42 IST
ಅಕ್ಷರ ಗಾತ್ರ

ಕುರುಗೋಡು: ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ ಸಂಗತಿ. ಇಲ್ಲಿನ ತುಂಗಭದ್ರಾ ಕೆಳಮಟ್ಟದ ಕಾಲುವೆ ಕೂಡ ನೀರಿಲ್ಲದೇ ಒಣಗಿ ನಿಂತಿದೆ. ಆದರೆ ಈ ಬಾರಿಯೂ ಕೂಡ ಕೊಪ್ಪಳ ಭಾಗದ ಕೆಲ ದನಗಾಹಿಗಳು ತಮ್ಮ ದನ ಕರುಗಳನ್ನು ಹೊಡೆದು ಕೊಂಡು ಈ ಭಾಗಕ್ಕೆ ಬಂದಿರುವುದು ಪಟ್ಟಣದ ಹೊರವಲಯದಲ್ಲಿ ಕಾಣಸಿಗುತ್ತದೆ.

ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲದ ಕಾರಣ ಮೊದಲನೇ ಬೆಳೆಗೆ ಸಮರ್ಪಕ ನೀರು ದೊರೆತಿಲ್ಲ. ಜಲಾಶಯದಲ್ಲಿ ನೀರು ಸಂಗ್ರಹವಾಗದ ಕಾರಣ ಎರಡನೇ ಬೆಳೆ ಬೆಳೆಯಲು ಅವಕಾಶ ವಂಚಿತರಾದ ರೈತರು ಚಿಂತೆಗೀಡಾದರೆ ಬೇಸಿಗೆಯಲ್ಲಿ ಹಸಿರಿಗಾಗಿ ನೀರಾವರಿ ಪ್ರದೇಶವನ್ನು ನೆಚ್ಚಿಕೊಂಡಿದ್ದ ವಲಸೆ ಜಾನುಗಾರುಗಳು ಮೇಯಲು ಹುಲ್ಲು, ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತರು ತಾವು ಬೆಳೆದ ಮುಂಗಾರು ಬೆಳೆಯ ನಂತರ ಜಾನುವಾರುಗಳ ಸಂರಕ್ಷಣೆಗಾಗಿ ಬೇಸಿಗೆಯಲ್ಲಿ ಹಸಿರು ಹುಲ್ಲು ದೊರಕುವ ಕುರುಗೋಡು ಭಾಗಕ್ಕೆ ಪ್ರತಿವರ್ಷ ವಲಸೆ ಬರುತ್ತಾರೆ.

ಆದರೆ ಹಸಿರು ಹುಲ್ಲು ಮತ್ತು ನೀರಿನ ಕೊರತೆಯಿಂದ ಕಂಗಾಲಾಗಿದ್ದಾರೆ.

ಮುಂಗಾರು ಬೆಳೆ ಬಳಿಕ ನಮ್ಮಲ್ಲಿ ಯಾವುದೇ ಕೃಷಿ ಚಟುವಟಿಕೆ ಇರುವು ದಿಲ್ಲ. ಬೇಸಿಗೆಯಲ್ಲಿ ದನಕರುಗಳಿಗೆ ಮೇವು ಸಿಗುವುದೂ ಕಷ್ಟ. ನಾಲ್ಕು ತಿಂಗಳ ಕಾಲ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ನೀರಾವರಿ ಪ್ರದೇಶಗಳಿಗೆ ವಲಸೆ ಬರುತ್ತೇವೆ. ಆದರೆ ಈ ವರ್ಷ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿ ಎರಡನೇ ಬೆಳೆಗೆ ನೀರು ಪೂರೈಸದ ಪರಿಣಾಮ ಸಾವಿರಾರು ಎಕರೆ ಭೂಪ್ರದೇಶ ಬೀಳು ಬಿದ್ದಿದೆ. ಇದರಿಂದ ಜಾನುವಾರುಗಳಿಗೆ ಮೇವು, ನೀರು ಇಲ್ಲದಾಗಿದೆ. ಇವುಗಳನ್ನು ಆ ದೇವರೇ ಕಾಪಾಡಬೇಕು ಎಂದು ಕನಕಗಿರಿಯಿಂದ 300ಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಬಂದಿದ್ದ ಬಸವಣ್ಯಪ್ಪ ಅಳಲು ತೋಡಿಕೊಂಡರು.

ಈ ಭಾಗದ ರೈತರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ. ಮೇವಿನ ಕೊರತೆಯಿಂದ ನಿರ್ವಹಣೆ ಸಮಸ್ಯೆ ಎದುರಿಸುತ್ತಿರುವ ಕೆಲವರು ಜಾನುವಾರು ಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಜಾನುವಾರುಗಳ ರಕ್ಷಣೆಗೆ ಸರ್ಕಾರ ಆಯ್ದ ಭಾಗಗಳಲ್ಲಿ ಗೋಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ.

* ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ. ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪನೆಗೆ ಮುಂದಾಗಬೇಕು

-ಗಾಳಿ ಬಸವರಾಜ, ಪ್ರಾಂತ ರೈತ ಸಂಘದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT