ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಸರ್ಕಾರಕ್ಕೆ ಪ್ರತಿಷ್ಠೆಯಲ್ಲ

Last Updated 28 ಫೆಬ್ರುವರಿ 2017, 10:51 IST
ಅಕ್ಷರ ಗಾತ್ರ

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸರ್ಕಾರಕ್ಕೆ ಸವಾಲು ಅಥವಾ ಪ್ರತಿಷ್ಠೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಚಾಮರಾಜನಗರ ಬೈಪಾಸ್ ರಸ್ತೆಯ ಸಮೀಪ ಸೋಮವಾರ ಆರ್ಯ ಈಡಿಗ ಹಾಗೂ ಸವಿತಾ ಸಮಾಜ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಹಳ ಮಂದಿಗೆ ಉಪಚುನಾವಣೆ ಮೇಲೆ ಕಣ್ಣು. ಆದರೆ, ತಾಲ್ಲೂಕಿನವನಾದ ನನಗೆ ಕ್ಷೇತ್ರದ ಅಭಿವೃದ್ಧಿ  ಮುಖ್ಯ. ನಗರದ ರಾಷ್ಟ್ರಪತಿ ರಸ್ತೆ, ಮಹಾತ್ಮಗಾಂಧಿ ರಸ್ತೆಯನ್ನು ₹ 14.60 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ₹ 600 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಕೆಲವರಿಗೆ ಇದು ಚುನಾವಣಾ ಗಿಮಿಕ್ ಎನಿಸಬಹುದು, ಈ ಭಾಗದಲ್ಲಿ 40–50 ವರ್ಷ ರಾಜಕೀಯ ಮಾಡಿದ ನಾಯಕರು ಮೌಲ್ಯಯುತವಾಗಿ ಮಾತನಾಡಬೇಕು ಎಂದರು.

ತಾಲ್ಲೂಕಿನ ಆರ್ಯ ಈಡಿಗ ಹಾಗೂ ಸವಿತಾ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕೆ  ಕ್ರಮವಾಗಿ ತಲಾ ₹ 20 ಹಾಗೂ ₹ 15 ಲಕ್ಷ ಅನುದಾನ ನೀಡಲಾಗಿದೆ ಎಂದರು.

ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಬಿ.ಎಸ್,ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜನ್, ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪೋತರಾಜು, ತಾಲ್ಲೂಕು ಅಧ್ಯಕ್ಷ ತಿಮ್ಮೇಗೌಡ,ರಾಜ ಶೇಖರ ಕದಂಬ, ಟಿ.ದೇವರಾಜು, ಎನ್.ಪಿ. ಗಿರೀಶ್,ಕೃಷ್ಣಪ್ಪಗೌಡ, ಶ್ರೀಧರ್, ಅಕ್ಬರ್ ಅಲೀಂ, ನಗರಸಭಾ ಸದಸ್ಯರಾದ ಎನ್.ವಿ. ಮಂಜುನಾಥ್, ದೊಡ್ಡಮಾದಯ್ಯ, ಖಾಲೀದ್ ಇತರರು ಉಪಸ್ಥಿತರಿದ್ದರು.

ಬಸವ ಭವನ ನಿರ್ಮಾಣ; ಭೂಮಿ ಪೂಜೆ
ನಗರದ ಹಂಡುವಿನ ಹಳ್ಳಿ ಬಡಾವಣೆಯ ನಗರಾಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾದ 24 ಗುಂಟೆ ವಿಸ್ತೀರ್ಣದ ನಿವೇಶನದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ₹ 2 ಕೋಟಿ ವೆಚ್ಚದ ಬಸವಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ ತಾಲ್ಲೂಕಿನ ವೀರಶೈವ ಸಮಾಜದವರು 30 ವರ್ಷಗಳಿಂದ ನಗರದಲ್ಲಿ ಬಸವ ಭವನ ನಿರ್ಮಿಸಬೇಕೆಂಬ ಪ್ರಯತ್ನ ಈ ಮೂಲಕ ಕೈಗೂಡಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸಹಕಾರದಿಂದ ಕ್ಷೇತ್ರದಲ್ಲಿ ಹಿಂದೆಂದು ಕಾಣದಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಸುತ್ತೂರಿನ ಸುತ್ತಮುತ್ತಲ 24 ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ದೊರೆತಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ ತಾಲ್ಲೂಕಿನ ವೀರ ಶೈವ ಸಮಾಜದ ಬಹು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನದಲ್ಲಿ ಕೂಡಲ ಸಂಗಮದ ಅನುಭವ ಮಂಟಪದ ಮಾದರಿಯಲ್ಲಿ ಬಸವ ಭವನ ನಿರ್ಮಾಣವಾಗಲಿದೆ ಎಂದರು.

ಆಶೀರ್ವಚನ ನೀಡಿ ಮಾತನಾಡಿದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ  ಸಚಿವ ಎಚ್.ಸಿ.ಮಹದೇವಪ್ಪ ಅವರ ಆಶಯದಂತೆ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಕೈಬಿಚ್ಚಿ ಹಣ ನೀಡುತ್ತಿದ್ದಾರೆ. ಇವರ ಕಾಲದಲ್ಲಿ  ನಗರದಲ್ಲಿ ಬಸವ ಭವನ ನಿರ್ಮಾಣವಾಗುತ್ತಿರುವುದು ಸಂತೋಷ ಎಂದು ಹೇಳಿದರು.

ಸಮಾರಂಭದಲ್ಲಿ ಮಲ್ಲನ ಮೂಲೆ ಮಠದ ಚೆನ್ನ ಬಸವ ಸ್ವಾಮೀಜಿ, ದೇವನೂರಿನ ಮಹಂತ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂದ ಶಿವಚಾರ್ಯ ಸ್ವಾಮೀಜಿ, ತಾ.ಪಂ.ಅಧ್ಯಕ್ಷ ಬೆ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜನ್, ಜಿ.ಪಂ.ಸದಸ್ಯೆಯರಾದ ಲತಾ ಸಿದ್ದಶೆಟ್ಟಿ, ಪುಷ್ಪಾ ನಾಗೇಶ್ ರಾಜ್, ನಗರಸಭಾಧ್ಯಕ್ಷೆ ಪುಷ್ಪಾ,ವೀರಶೈವ ಮಹಾಸಭಾದ ಅಧ್ಯಕ್ಷ ಚೆನ್ನಪ್ಪ, ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಕುರಹಟ್ಟಿ ಮಹೇಶ್, ಎ.ಪಿ.ಎಂ.ಸಿ. ಅಧ್ಯಕ್ಷ ಮಾದಪ್ಪ,ಮುಖಂಡರಾದ ಕರಹಟ್ಟಿ ಮಹೇಶ್,ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT