ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನ ಅಭಿವೃದ್ಧಿಯೇ ಮಂತ್ರವಾಗಲಿ: 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ವೆಂಕಟೇಶ್‌ ಇಂದ್ವಾಡಿ ಆಶಯ

ಸಾಹಿತ್ಯ ಸಮ್ಮೇಳನ ಸಡಗರ, ಸಂಭ್ರಮಕ್ಕೆ ಸಿಮೀತವಾಗದಿರಲಿ– ತಾಲ್ಲೂಕು ಸಮ್ಮೇಳನದ ಅಧ್ಯಕ್ಷ ಡಾ. ವೆಂಕಟೇಶ್‌ ಇಂದ್ವಾಡಿ
Last Updated 28 ಫೆಬ್ರುವರಿ 2017, 10:54 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಸಾಹಿತ್ಯ ಸಮ್ಮೇಳನ ಸಡಗರ, ಸಂಭ್ರಮಕ್ಕೆ ಸಿಮೀತವಾಗದೆ. ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯುವ ಕಾರ್ಯವಾಗಲಿ ಎಂದು ತಾಲ್ಲೂಕು ಸಮ್ಮೇಳನದ ಅಧ್ಯಕ್ಷ ಡಾ. ವೆಂಕಟೇಶ್‌ ಇಂದ್ವಾಡಿ ಪ್ರತಿಪಾದಿಸಿದರು.

ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ದಿಂದ ಏರ್ಪಡಿಸಿದ್ದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾಗೃತಿ ಭೂಮಿಯಲ್ಲಿ ನಡೆಯುತ್ತಿರುವ ಕನ್ನಡ ಸಮ್ಮೇಳನ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ಕುಸಿದ ಬೇಸಾಯ, ಇದರಿಂದ ಮೂಲನೆಲೆಯಿಂದ ಜನತೆ ವಲಸೆ ಹೋಗಿದ್ದು, ಇನ್ನೂ ಹೋಗುತ್ತಿರುವುದರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು  ತಾಲ್ಲೂಕಿನ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಲಿ  ಎಂದು ಹೇಳಿದರು.

ಅತಿಹೆಚ್ಚು ಅನಕ್ಷರಸ್ಥರೇ ಇರುವ ಈ ತಾಲ್ಲೂಕಿನಲ್ಲಿ ರಾಜ್ಯ ದಲ್ಲಿ ಎಲ್ಲೂ ಕಾಣದ ದೊಡ್ಡ ಸಾಹಿತ್ಯ ಪರಂಪರೆ ಸೃಷ್ಟಿ ಯಾಗಿದೆ. ಎರಡು ಮಹಾಕಾವ್ಯಗಳಾದ ಮಂಟೇಸ್ವಾಮಿ ಕಾವ್ಯ, ಮಲೆಮಹದೇಶ್ವರರ ಕಾವ್ಯ, ಬಿಳಿಗಿರಿರಂಗನ ಕಾವ್ಯ ಮೌಖಿಕ ಸಾಹಿತ್ಯದಿಂದ ಬಂದಿದೆ. ಈ ಅಭಿವ್ಯಕ್ತಿ ಶ್ರೇಷ್ಠ ವಾದುದು ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಮಲೆಯೂರು ಗುರುಸ್ವಾಮಿ, ‘ಎಲ್ಲರ ಬದುಕು ಹಸನಾಗಬೇಕಾದರೆ ತಮ್ಮಲ್ಲಿ  ರುವ ಆತ್ಮಸಾಕ್ಷಿ ಪ್ರಜ್ವಲಗೊಳಿಸುವುದು ಅಗತ್ಯ’ ಎಂದು  ಪ್ರತಿಪಾದಿಸಿದರು.

ಕೊಳ್ಳೇಗಾಲ ತಾಲ್ಲೂಕು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಹೆಬ್ಬಾಗಿಲು ಹಾಗೂ ಶಕ್ತಿ ಸ್ಥಳ. 500 ವರ್ಷಗಳಿಂದ ಲಕ್ಷ ಲಕ್ಷ ಪಾದಗಳು ಈ ಭೂಮಿಯನ್ನು ಸ್ಪರ್ಶಿಸಿ ಪವಿತ್ರ ಗೊಳಿಸಿವೆ. ಪಟ್ಟಣ ವ್ಯಾಪ್ತಿಯ ಮುಡಿಗುಂಡದಲ್ಲಿ ಜನಿಸಿದ ‘ಪೂಜ್ಯಪಾದ ಜೈನ ಋಷಿ’ ಸಂಸ್ಕೃತ ಭಾಷೆಯಲ್ಲಿ ಪದ್ಯ ಬರೆಯದೆ ಕನ್ನಡದಲ್ಲಿ ಒಂದು ಪದ್ಯ ಬರೆದಿದ್ದರೆ ಕನ್ನಡದ ಮೊಟ್ಟ ಮೊದಲ ಕವಿ ಪಟ್ಟ ಕೊಳ್ಳೇಗಾಲಕ್ಕೆ ದೊರೆಯುತ್ತಿತ್ತು. ಜೈನ ಋಷಿ ಪೂಜ್ಯಪಾದರ ಕಾಲ ಕ್ರಿ.ಶ. 500ನೇ ಶತಮಾನ, ಪಂಪನ ಕಾಲ 10ನೇ ಶತಮಾನ ಎಂದು ಹೇಳಿದರು.

ದೇಶದಲ್ಲಿ ಅಕ್ರಮ ಅನಾಚಾರಗಳು ಹೆಚ್ಚಾಗಲು ಒಳಮನಸ್ಸು ಭ್ರಷ್ಟವಾಗಿರುವುದೇ ಕಾರಣ. ಇದರ ತಡೆಗೆ ನಮ್ಮ ಆತ್ಮಸಾಕ್ಷಿಯೇ ಸಿಸಿಟಿವಿ ಕ್ಯಾಮೆರಾವಾದಾಗ  ಮಾತ್ರ ಮನೆ, ದೇಶ ಉದ್ದಾರ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌. ಜಯಣ್ಣ ಮಾತನಾಡಿ, ಯುವ ಪೀಳಿಗೆ ನಮ್ಮ ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಹೊಂದಿ ಅದನ್ನು ಉಳಿಸಿ ಬೆಳೆಸಲು ಮುಂದಾಗಬೇಕು. ಇಲ್ಲಿನ ಜನಪದ ಮಹಾಕಾವ್ಯಗಳಾದ ಮಂಟೇಸ್ವಾಮಿ, ಮಲೆ ಮಹದೇಶ್ವರ ಕಾವ್ಯ ಮತ್ತಷ್ಟು ಬೆಳೆಯುವಂತಾಗಬೇಕು. ಸಮ್ಮೇಳನ ತಾಲ್ಲೂಕಿನಲ್ಲಿ ಸಾಹಿತ್ಯ ಕೃಷಿ ವಿಫುವಾಗಿದೆ ಎಂಬುದನ್ನು ಸಾಬೀತು ಪಡಿಸುವಂತಾಗಬೇಕು ಎಂದರು.

ಬೊಪ್ಪೇಗೌಡನಪುರ ಮಠಾಧ್ಯಕ್ಷರಾದ ಪ್ರಭುದೇವ ರಾಜೇ ಅರಸ್‌ ಸ್ವಾಮೀಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ವಿನಯ್‌, ತಾಲ್ಲೂಕು ಘಟಕದ ಅಧ್ಯಕ್ಷ ನಂಜುಂಡ ಸ್ವಾಮಿ (ನಂದೀಶ್‌), ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ, ರಾಜ್ಯ ಬಹುಜನ ಸಮಾಜ ಪಾರ್ಟಿ ಅಧ್ಯಕ್ಷ ಎನ್‌. ಮಹೇಶ್‌, ಮಾಜಿ ಶಾಸಕ ಎಸ್‌. ಬಾಲರಾಜ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲೇಖಾ, ಶಿವಮ್ಮ ಕೃಷ್ಣ, ನಾಗರಾಜು, ರಾಜರಾಜೇಶ್ವರಿ ಕಲ್ಯಾಣ ಮಂಟಪ ಅಧ್ಯಕ್ಷ ಸಿ. ಶಿವಕುಮಾರ್‌, ಮಹೇಶ್‌,  ನಗರಸಭಾ ಸದಸ್ಯರಾದ ಸುಮ ಸುಬ್ಬಣ್ಣ, ಶಾಂತರಾಜು, ತೋಟೇಶ್‌, ಪ್ರೊ.ಡಿ.ದೊಡ್ಡಲಿಂಗೇ ಗೌಡ, ಚಿಕ್ಕಬಸವಯ್ಯ ಪ್ರಕಾಶ್‌ಮೂರ್ತಿ ಇತರರು ಉಪಸ್ಥಿತರಿದ್ದರು.

ಸಮ್ಮೇಳನಕ್ಕೆ ಮೆರುಗು ತಂದ ಮೆರವಣಿಗೆ
ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಸೋಮವಾರ ನಗರದ ಮುಖ್ಯ ಬೀದಿಗಳಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಜರುಗಿತು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ನಡೆದ  ಈ ಸಮ್ಮೇಳನದ ಮೆರವಣಿಗೆಗೆ ಸರ್ಕಾರಿ ನ್ಯಾಷನಲ್‌ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು ಚಾಲನೆ ನೀಡಿದರು.

ಹಸಿರು ತಳಿರುತೋರಣ ಮತ್ತು ಕನ್ನಡ ಬಾವುಟಗಳಿಂದ ಸಿಂಗರಿಸಿದ್ದ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷ ಡಾ.ವೆಂಕಟೇಶ್‌ ಇಂದ್ವಾಡಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಂಜುಂಡಸ್ವಾಮಿ, ಸಾಹಿತಿ ಮಹದೇವ ಶಂಕನಪುರ ವಾಹನದಲ್ಲಿ ಇದ್ದರು.

ಮಹದೇಶ್ವರ ಬೆಟ್ಟದ ರಸ್ತೆ, ಡಾ. ಅಂಬೇಡ್ಕರ್‌ ರಸ್ತೆ, ಡಾ.ರಾಜ್‌ಕುಮಾರ್‌ ರಸ್ತೆ, ಜಯವಾಣಿಜ್ಯ ಸಂಸ್ಥೆ ರಸ್ತೆ,   ಮೂಲಕ ಸಾಗಿದ ಮೆರವಣಿಗೆ ದೇವಲ ಮಹರ್ಷಿ ವೃತ್ತದ ಮಾರ್ಗವಾಗಿ ರಾಜರಾಜೇಶ್ವರಿ ಕಲ್ಯಾಣಮಂಟಪ ತಲುಪಿತು.

ನಂದಿ ಕಂಬ, ವೀರಗಾಸೆ ತಂಡ, ಮಂಗಳವಾದ್ಯ, ತಮಟೆ ವಾದನ ಕಲಾತಂಡ ಸೇರಿದಂತೆ, ನಗರದ ಸರ್ಕಾರಿ ಮಹದೇಶ್ವರ ಪ್ರಥಮದರ್ಜೆ ಕಾಲೇಜು ಎನ್‌.ಸಿ.ಸಿ. ತಂಡ ಮತ್ತು ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ತಂಡ, ಭವನ್ಸ್‌ ಗೀತಾ ಬ್ಯಾಂಡ್‌ ವಾದನ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ತಹಶೀಲ್ದಾರ್‌ ಕಾಮಾಕ್ಷಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಂತಿ, ಸಿಪಿಐ ಅಮರ ನಾರಾಯಣ್‌, ತಾ.ಪಂ. ಉಪಾಧ್ಯಕ್ಷೆ ಲತಾ ರಾಜಣ್ಣ, ಚಾಮರಾಜು, ತೋಟೇಶ್‌, ನರೇಂದ್ರನಾಥ್‌, ಪಳನಿಸ್ವಾಮಿ ಜಾಗೇರಿ, ಅರುಣ್‌ ಕುಮಾರ್‌ ಇತರೆ ಮುಖಂಡರು ಅಧಿಕಾರಿಗಳು ಇದ್ದರು.

ಮುಖ್ಯಾಂಶಗಳು
* ರಾಜ್ಯದಲ್ಲಿ ದೊಡ್ಡ ಸಾಹಿತ್ಯ ಪರಂಪರೆ ಸೃಷ್ಟಿ ಯಾಗಿರುವ ತಾಲ್ಲೂಕು; ಬಣ್ಣನೆ

* ದೇಶದಲ್ಲಿ ಅಕ್ರಮ ಅನಾಚಾರಗಳು ಹೆಚ್ಚಾಗಲು ಒಳಮನಸ್ಸು ಭ್ರಷ್ಟವಾಗಿರುವುದೇ ಕಾರಣ
* ಜನಪದ ಮಹಾಕಾವ್ಯಗಳಾದ ಮಂಟೇಸ್ವಾಮಿ, ಮಲೆ ಮಹದೇಶ್ವರ ಕಾವ್ಯಗಳ ಅಭಿವೃದ್ಧಿಗೆ ಶ್ರಮಿಸಲು ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT