ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದ ಸೊಗಸಿಗೆ ಲಯಗಾರಿಕೆಯ ನರ್ತನ

ಸ್ವಸ್ಥ ಬದುಕು
Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಇತ್ತೀಚೆಗೆ ತರಗತಿಯಲ್ಲಿ ಗಮನಕ್ಕೆ ಬಂದ ಸಂಗತಿಯೊಂದು ಗಮನಾರ್ಹವಾಗಿದೆ. ಆ ನನ್ನ ವಿದ್ಯಾರ್ಥಿನಿಯ ಹೆಸರು ಅನಿತಾ. ಅವಳು ವ್ಯಾಯಾಮದ ಸೈಕಲ್‌ (stationary cycle) ತುಳಿಯುತ್ತಿದ್ದಳು. ಅದರಿಂದ ಉಂಟಾಗುತ್ತಿದ್ದ ಸದ್ದು ಒಂದು ನಿರ್ದಿಷ್ಟ ಲಯದಲ್ಲಿತ್ತು – ರೈಲು ಹಳಿಗಳ ಮೇಲೆ ಓಡುತ್ತಿರುವಾಗ ಉಂಟಾಗುವ ಶಬ್ದದಂತೆ. ಆ ಸದ್ದು ಎಷ್ಟು ಹಿತವಾಗಿತ್ತೆಂದರೆ ‘ನಾನು ಇದನ್ನು ಕೇಳುತ್ತ ಜೋಂಪಿಗೆ ಜಾರಿಬಿಡುತ್ತೇನೆ’ ಎಂದು ತಮಾಷೆ ಮಾಡಿದೆ. ರೈಲಿನಲ್ಲಿ ಪ್ರಯಾಣಿಸಿರುವವರಿಗೆ ಅದರ ನಿರಂತರ ಲಯಬದ್ದ ಸದ್ದು ನಿದ್ರೆಗೆ ಜಾರಿಸಿರುವುದು ಅನುಭವಕ್ಕೆ ಬಂದಿರುತ್ತದೆ. ನಿದ್ರೆ ಎನ್ನುವುದು ವಿಶ್ರಾಂತಿಯೂ ಹೌದು, ಉಲ್ಲಾಸದಾಯಕವೂ ಹೌದು; ಆ ಲಯಬದ್ಧ ಸದ್ದು ಅದನ್ನು ಕಾಪಾಡುವಂಥದ್ದು.  
 
ನಮ್ಮಲ್ಲಿ ಅದ್ಭುತವಾದ ಸಂವೇದನೆಗಳು ಉಂಟಾಗಲು ಕಾರಣ ನಾವು ಲಯದ ಮಕ್ಕಳು. ನಮ್ಮನ್ನು ಸಾವಿನ ಜಡತೆಯಿಂದ ಬದುಕಿನ ಸಂಚಲನಕ್ಕೆ ತೊಡಗಿಸುವುದೇ ಈ ಲಯಗಾರಿಕೆ. ನಮ್ಮ ಉಸಿರಾಟದಲ್ಲೇ ಈ ಲಯಗಾರಿಕೆ ಇದೆ; ನಮ್ಮ ಉಚ್ಚ್ವಾಸ–ನಿಃಶ್ವಾಸಗಳಲ್ಲೇ ಲಯಬದ್ಧತೆ ಉಂಟು. ನಮ್ಮ ಎದೆಯ ಬಡಿತ, ನಡಿಗೆ; ಹಗಲು–ರಾತ್ರಿ, ಋತುಗಳು – ಹೀಗೆ ಎಲ್ಲೆಲ್ಲೂ ಲಯಬದ್ಧತೆ ಇದೆ. ಲಯಬದ್ಧತೆ ಎನ್ನುವುದು ನಮ್ಮ ವಿಶ್ವದ ಅಂತರಂಗದಲ್ಲೇ ಮೌನವಾಗಿ ಕ್ರಿಯಾಶೀಲವಾಗಿರುತ್ತದೆ. ಹೀಗಾಗಿಯೇ ‘ನಿಮ್ಮ ಜೀವನವನ್ನು ಲಯಬದ್ಧಗೊಳಿಸಿಕೊಳ್ಳಿ; ಇದು ಯಾವುದೇ ಅಪಾಯಗಳಿಗೆ ಪಕ್ಕಾಗದು’ ಎಂಬ ಗುರುವಾಣಿ ಅಚ್ಚರಿಯೆನಿಸದು. 
 
ಲಯಗಾರಿಕೆ ನಮ್ಮೊಳಗಿನ ಕಂಪನವನ್ನು ಸ್ಥಿರಗೊಳಿಸುವ ಮತ್ತು ನಮ್ಮ ಬದುಕಿಗೆ ಸಮತೋಲನವನ್ನು ತಂದುಕೊಡುತ್ತದೆ. ಅದು ಆರೋಗ್ಯ ಮತ್ತು ಬುದ್ಧಿಸ್ವಾಸ್ಥ್ಯವನ್ನೂ ತಂದುಕೊಡುತ್ತದೆ. ಆದರೆ, ಲಯಗಾರಿಕೆ ಎಂದರೆ ಯಾವುದು? ಪರಸ್ಪರ ಎರಡು ಸಂಗತಿಗಳ ನಡುವಣ ನೃತ್ಯದ ಕಂಪನವೇ? ಆ ನೃತ್ಯದಲ್ಲಿಯೇ ಜೀವಿಸಿ, ಅದು ಹೇಗೆ ಘಟಿಸುವುದೋ ಹಾಗೆಯೇ ಆ ನೃತ್ಯವನ್ನು ಪ್ರೀತಿಸಿ. ಒಂದು ದಿನ ನಿಮ್ಮ ಸಂಗಾತಿಯನ್ನು ನೀವು ಪ್ರೀತಿಸುತ್ತೀರಿ. ಮರುದಿನ ಆಕೆ ಅಪ್ರಿಯಳಾಗುತ್ತಾಳೆ. ಅದನ್ನು ಹಾಗೆಯೇ ಬಿಡಿ. ನೆನಪಿಡಿ, ನಿಮ್ಮಲ್ಲಿನ ದ್ವೇಷ ಕಡಿಮೆಯಾದಂತೆ ಎಚ್ಚರವಾಗಲು ಪ್ರೀತಿ ಸಿದ್ಧವಾಗಿರುತ್ತದೆ. ಪ್ರೀತಿಯ ವಿಚಾರದಲ್ಲಿ ಹರಿವಿನೊಂದಿಗೆ ಸಾಗಲು ನಿಮ್ಮನ್ನು ಬಿಟ್ಟುಬಿಡಿ.
 
ದ್ವೇಷದಲ್ಲಿ ನಿಮ್ಮನ್ನು ನಿರ್ಬಂಧಿಸಿಕೊಳ್ಳಿ. ಮುಖ್ಯವಾಗಿ, ಪ್ರತಿ ವ್ಯಕ್ತಿಯೂ ಅವನು ಅಥವಾ ಅವಳದೇ ಸ್ವಯಂ ಲಯಗಾರಿಕೆಯ ಮೂಲಕ ಜೀವಿಸಬೇಕು ಎಂಬುದನ್ನು ನೆನಪಿಡಿ. ಅದು ಯಾವಾಗಲೂ ನಿಮ್ಮೊಂದಿಗೆ ಮಿಳಿತವಾಗದೆ ಇರಬಹುದು. ತೊಂದರೆಯಿಲ್ಲ. ನಿಮಗೆ ಸ್ಥಳಾವಕಾಶ ಮಾಡಿಕೊಳ್ಳಿ. ಆ ವ್ಯಕ್ತಿಗೆ ಸ್ಥಳಾವಕಾಶ ನೀಡಿ. ಕೆಲವೊಮ್ಮೆ ನೀವು ಜೊತೆಯಾಗಿ ಶ್ರುತಿಯಾಗುತ್ತೀರಿ. ಆ ಸಂಯೋಗವನ್ನು ಸಂಪೂರ್ಣವಾಗಿ ಸಂಭ್ರಮಿಸಿ. ಕೆಲವೊಮ್ಮೆ ನೀವು ಒಂಟಿಯಾಗಿರಬೇಕಾಗುತ್ತದೆ. ನಿಮ್ಮ ಏಕಾಂತವನ್ನು ಸಂಪೂರ್ಣವಾಗಿ ಆನಂದಿಸಿ. ಲಯಗಾರಿಕೆಯ ಸೊಗಸಾದ ಅರ್ಥೈಸಿಕೊಳ್ಳುವಿಕೆಯು ನಿಮ್ಮ ಸಂಬಂಧವನ್ನು ಸಿರಿವಂತಗೊಳಿಸುತ್ತದೆ; ಸ್ವೀಕರಣಬುದ್ಧಿಯನ್ನು ವಿಸ್ತರಿಸುತ್ತದೆ, ನಿಮ್ಮ ನಮನಶೀಲತೆಯನ್ನೂ ವೃದ್ಧಿಸುತ್ತದೆ.
 
ಇದೇ ರೀತಿ ನಿಮ್ಮ ಸಂಕಷ್ಟದ ಗಳಿಗೆಗಳಲ್ಲಿ, ಬೆಳಕನ್ನು ನೋಡುವುದರತ್ತ ಗಮನಹರಿಸಿ. ಶ್ಲಾಘನೆ ಮತ್ತು ಮನ್ನಣೆಯ ಉನ್ನತಿಯಲ್ಲಿರುವಾಗ ನಿಷ್ಠೆ ಮತ್ತು ಪ್ರಾಮಾಣಿಕ ವಿನಮ್ರತೆ ಇರಲಿ. ಕೆಟ್ಟ ರೀತಿಯಲ್ಲಿ ವ್ಯಕ್ತಿಯೊಬ್ಬ ಮಾತನಾಡಿದಾಗ, ಗೌರವಯುತದಿಂದಲೂ ಸಮಚಿತ್ತದಿಂದಲೂ ವರ್ತಿಸಿ. ಒಬ್ಬರು ನಕಾರಾತ್ಮಕವಾಗಿ ಇದ್ದಾಗ, ನೀವು ತಟಸ್ಥರಾಗಿ ಉಳಿದುಬಿಡಿ.
 
ಲಯಗಾರಿಕೆ ಎಂಬುವುದು ಸಮತೋಲನ ಮಾತ್ರ ಕುರಿತಾಗಿರುವುದಲ್ಲ. ಅದು ಕಾಲಯೋಜನೆಗೂ ಸಂಬಂಧಿಸಿದ್ದು. ಉದಾಹರಣೆಗೆ, ನೀವು ಆಯಾಸಗೊಂಡಿದ್ದಾಗ ಅಂಗಿಯ ಗುಂಡಿಯನ್ನು ಹೊಲಿಯಲು ಸಾಧ್ಯವಿಲ್ಲ. ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಳ್ಳಲು ಆಗುವುದಿಲ್ಲ. ತಿನ್ನುವುದು, ಮಲಗುವುದು, ಕೆಲಸ ಮತ್ತು ವ್ಯಾಯಾಮಗಳನ್ನೂ ಸೂಕ್ತ ಕಾಲಕ್ಕೆ ಮಾಡುವುದು ನಮ್ಮ ಜೀವನದಲ್ಲಿ ಲಯಗಾರಿಕೆಯನ್ನು ತರುತ್ತದೆ. ಇದಕ್ಕಾಗಿ ನೀವು ಅನುಸರಿಸಬೇಕಾದ ದಾರಿ – ನಿಮ್ಮ ಲಯಗಾರಿಕೆಯನ್ನು ಕಂಡುಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಬದುಕುವುದು.
 
ನಮ್ಮ ದೇಹ ಒಂದು ದಿನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣುತ್ತದೆ ಎಂದು ವಿವಿಧ ವೈದ್ಯಕೀಯ ಸಿದ್ಧಾಂತಗಳು ಹೇಳುತ್ತವೆ. ನಮ್ಮ ರಕ್ತದೊತ್ತಡ, ಸಕ್ಕರೆಯ ಮಟ್ಟ, ಹಾರ್ಮೋನಿನ ಉಬ್ಬರವಿಳಿತ, ಹೃದಯದ ಬಡಿತ, ದೇಹದ ಉಷ್ಣಾಂಶ, ಮನೋಲಹರಿ, ನೋವಿನೆಡೆಗಿನ ಸಂವೇದನೆ – ಎಲ್ಲವೂ ಆಂತರಿಕ ಲಯಗಾರಿಕೆಯನ್ನು ಹೊಂದಿವೆ. ಹೀಗಾಗಿಯೇ ನಮ್ಮ ಪಾಲಿಗೆ ಕೆಲವು ದಿನಗಳು  ನಿರಾತಂಕವಾಗಿಯೂ ಉತ್ಸಾಹಭರಿತವಾಗಿಯೂ ಇರುತ್ತವೆ; ಅಂತೆಯೇ ಎಲ್ಲವೂ ಮಂಕುಕವಿದಂತೆ ಮತ್ತು ಜಡವಾದಂತಹ ದಿನಗಗಳೂ ಇರುತ್ತವೆ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ (ಆ ಸಮಯಕ್ಕೆ ಸರಿಯಾಗಿ), ಸಮರ್ಪಕವಾಗಿ ಆಹಾರಸೇವನೆ ಮಾಡುವುದರಿಂದ (ಹಸಿವಿನ ಪ್ರಮಾಣಕ್ಕೆ ಸರಿಯಾಗಿ), ಒಳಿತನ್ನು ಯೋಚಿಸುವುದರಿಂದ (ಪ್ರೀತಿ ಮತ್ತು ಅನುಭೂತಿಯೊಂದಿಗೆ), ಸಾಕಷ್ಟು ನಿದ್ರಿಸುವುದರಿಂದ (ಆರರಿಂದ ಎಂಟು ಗಂಟೆ) ಮತ್ತು ಸಾಕಷ್ಟು ಸೂರ್ಯನ ಬೆಳಕಿಗೆ ಒಡ್ಡಿಕೊಂಡರೆ (ದಿನಕ್ಕೆ ಅರ್ಧ ಗಂಟೆ)  ತಪ್ಪುತ್ತಿರುವ ಲಯದ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದು.
 
ದೇಹ ಏನನ್ನು ಮಾಡುತ್ತಿದೆಯೋ ಅದನ್ನು ಮನಸ್ಸಿಗೂ ಅಳವಡಿಸಿ; ಈ ಚಟುವಟಿಕೆಗಳನ್ನು ಒಂದೇ ಲಯಗಾರಿಕೆಯೊಂದಿಗೆ ನಿಮ್ಮ ಮನಸ್ಸು ಮತ್ತು ದೇಹಗಳನ್ನು ತೊಡಗಿಸಿ. ಉದಾಹರಣೆಗೆ: ಉದರದ ವ್ಯಾಯಾಮ ಮಾಡುವಾಗ, ‘ನನ್ನ ಹೊಟ್ಟೆಯ ಸ್ನಾಯುಗಳು ಬಲವಾಗುತ್ತಿವೆ. ಹೊಟ್ಟೆ ಸಾಪಾಟಾಗುತ್ತಿದೆ. ನನ್ನು ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುತ್ತಿದೆ’ ಎಂದು ಹೇಳಿಕೊಳ್ಳಿ. ಊಟದ ಸಮಯದಲ್ಲಿ, ನಿಮ್ಮ ಬಾಯೊಳಗೆ ತುತ್ತು ಇರಿಸಿದಾಗ ‘ಈ ಆಹಾರ ನನ್ನ ದೇಹಕ್ಕೆ ಪೌಷ್ಟಿಕತೆಯನ್ನು ನೀಡುತ್ತದೆ’ ಎಂದುಕೊಳ್ಳಿ.
 
ಯಾರಾದರೂ ನಿಮ್ಮೊಂದಿಗೆ ಒರಟಾಗಿ ವರ್ತಿಸಿದಾಗ ಅದರಿಂದ ನೀವು ವಿಚಲಿತರಾಗಬೇಡಿ; ನಿಮ್ಮ ಶುದ್ಧ ಮತ್ತು ಸ್ಪಷ್ಟ ಆಲೋಚನೆಗಳನ್ನು ಬಿಡಬೇಡಿ., ‘ಆತನಿಗೆ ಇಂದು ಕೆಟ್ಟದಿನವಾಗಿದೆ’ ಎಂದು ತಿಳಿದುಕೊಳ್ಳಿ. ಆತನಿಗೆ ಒಳಿತಾಗಲೆಂದು ಹರಸಿ. ನಿದ್ರಿಸುವ ಮುನ್ನ, ‘ನಾನು ಗಾಢ ಮತ್ತು ಪ್ರಶಾಂತ ನಿದ್ರೆಗೆ ಜಾರುತ್ತಿದ್ದೇನೆ’ ಎಂದು ನಿಮ್ಮೊಂದಿಗೇ ಹೇಳಿಕೊಳ್ಳಿ. ಸೂರ್ಯನ ಬೆಳಕಿಗೆ ಬಂದಾಗ, ‘ನನ್ನ ದೇಹವು ಜೀವನಕ್ಕೆ ಅಗತ್ಯವಾದುದ್ದೆಲ್ಲವನ್ನೂ ಪಡೆದುಕೊಳ್ಳುತ್ತದೆ. ಸೂರ್ಯನಿಂದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತಿದೆ’ ಎಂದು ಹೇಳಿಕೊಳ್ಳಿ.
 
ಮನಸ್ಸು ಮತ್ತು ದೇಹ ಯಾವಾಗ ಒಂದೇ ಲಯದೊಂದಿಗೆ ಒಟ್ಟಿಗೆ ಸಾಗುತ್ತವೆಯೋ, ಯಾವಾಗ ಮಾತು ಮತ್ತು ಕೃತಿಗಳು ತಾಳೆಯಾಗುತ್ತವೆಯೋ ನೀವೊಂದು ಸುಂದರ ಆರ್ಕೆಸ್ಟ್ರಾ  ಆಗಿಬಿಡುತ್ತೀರಿ. ಮಾನಸಿಕ ಚಟುವಟಿಕೆಯು ದೈಹಿಕ ಅನುಭವವಾದರೆ, ದೈಹಿಕ ಚಟುವಟಿಕೆ ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗುತ್ತದೆ. ಇದು ಲಯಗಾರಿಕೆಯ ಶಕ್ತಿ.
 
ಲಯಗಾರಿಕೆ ಎನ್ನುವುದು ಎಲ್ಲವನ್ನೂ ಸಾಧ್ಯವಾಗಿಸಬಲ್ಲ ಸುಂದರ ಸಾಧ್ಯತೆ. ಲಯಗಾರಿಕೆಯಲ್ಲಿರುವುದರಿಂದ ನಾವು ಸಂತೋಷ, ಪ್ರೇರಣೆ ಮತ್ತು ಶಕ್ತಿಯ ಜಗತ್ತನ್ನು ಪ್ರವೇಶಿಸುತ್ತೇವೆ. ನಮ್ಮ ಆಲೋಚನೆ ಮತ್ತು ಕಾರ್ಯಗಳಲ್ಲಿ ಒಂದು ಪ್ರಭೆ ಕಾಣಿಸುತ್ತದೆ. ನಾವು ಬಯಸಿದ್ದೆಲ್ಲವೂ ನಮ್ಮೆದುರು ಹಾಜರಾಗುತ್ತದೆ. ನಾವು ಮಾಡಿದ್ದೆಲ್ಲವೂ ಎಲ್ಲರಿಗೂ ಒಳಿತನ್ನೇ ಉಂಟುಮಾಡುತ್ತವೆ.
 
ಆತ್ಮೀಯ ಓದುಗರೇ, ನೀವು ಪ್ರತಿ ದಿನವನ್ನೂ ಮಿರುಗುವ ಉತ್ಸಾಹದೊಂದಿಗೆ ಜೀವಿಸಬಹುದು. ಪ್ರತಿ ಕೆಲಸವನ್ನೂ ಉಲ್ಲಾಸದಾಯಕವಾಗಿ ಮಾಡಬಹುದು ಮತ್ತು ನಿಮ್ಮ ಹೃದಯ ಸಂತೃಪ್ತಿಯಿಂದ ಕುಣಿಯಬಹುದು. ನಿಮ್ಮ ದನಿ ನಿಮ್ಮ ಆತ್ಮದೊಳಗೇ ಹಾಡಬಹುದು. ನಿಮ್ಮ ಇರುವಿಕೆಯೊಳಗೆ ಪ್ರೀತಿ ಉಕ್ಕಬಹುದು. ನೀವು ಸದಾ... ಸದಾ... ಸದಾ ಲಯಗಾರಿಕೆಯ ಮಹಾ ತೇಜಸ್ಸಿನೊಂದಿಗೆ ನರ್ತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT