ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪರಮೇಶ್ವರ್ ಸಮಸ್ಯೆ ಏನು?

ಜಿದ್ದಿಗೆ ಬಿದ್ದಂತೆ ತಾವು ಬಯಸಿದ್ದನ್ನು ಈಡೇರಿಸಿಕೊಳ್ಳುವ ಛಲ ಇಲ್ಲ. ಆರಾಮಕುರ್ಚಿಯ ರಾಜಕಾರಣಿ
Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬರುವ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತಾಲೀಮು ನಡೆಸಿವೆ. ಹೇಗಾದರೂ ಗೆಲ್ಲಲೇಬೇಕೆಂದು ಪ್ರಮುಖ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.  ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಜಿ.ಪರಮೇಶ್ವರ್ ಮಾತ್ರ ತಮ್ಮ ವೈಯಕ್ತಿಕ ರಾಜಕೀಯ ಬದುಕಿಗೆ ಸಂಬಂಧಿಸಿದಂತೆ ಮುಂದೇನು ಎಂಬ ನಿರ್ಧಾರ ಕೈಗೊಳ್ಳಲಾಗದೆ ಗೊಂದಲದಲ್ಲಿದ್ದಾರೆ.
 
ಅವರ ಆಪ್ತರ ಪ್ರಕಾರ ಪರಮೇಶ್ವರ್ ಎದುರು ಮೂರು ಆಯ್ಕೆಗಳಿವೆ. ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ ಕೊರಟಗೆರೆ ಮೀಸಲು ಕ್ಷೇತ್ರದ ಬದಲು ಹೊಸ ಕ್ಷೇತ್ರವೊಂದರ ಹುಡುಕಾಟ ನಡೆಸುವುದು, ವಿಧಾನ ಪರಿಷತ್ ಸದಸ್ಯತ್ವದ ಅವಧಿ 2020ರವರೆಗೂ ಇರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ಅಥವಾ ಏನಾದರೂ ಆಗಲಿ ಎಂದು ಕೊರಟಗೆರೆಯಿಂದಲೇ ಸ್ಪರ್ಧಿಸುವುದು.
 
ಕಳೆದ ವಿಧಾನಸಭಾ ಚುನಾವಣೆಯಲ್ಲೇ ಅವರಿಗೆ ಕೊರಟಗೆರೆಯಿಂದ ಸ್ಪರ್ಧಿಸುವ ಮನಸ್ಸು, ಧೈರ್ಯ ಇರಲಿಲ್ಲ. ಹೀಗಾಗಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ನಿಲ್ಲುವ ಪ್ರಯತ್ನ ನಡೆಸಿ ಅದೇಕೋ ಸುಮ್ಮನಾಗಿದ್ದರು. ಮುಖ್ಯಮಂತ್ರಿಯಾಗಬೇಕೆಂದು ಕನಸು ಕಂಡಿದ್ದ ವ್ಯಕ್ತಿ ಈಗ  ಯಾವುದೇ ನಿರ್ಧಾರ ಕೈಗೊಳ್ಳಲಾಗದ ಸ್ಥಿತಿ ತಲುಪಿದ್ದಾರೆಂದರೆ ಏನರ್ಥ? ಕೊರಟಗೆರೆಯಿಂದ ಮತ್ತೆ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎನ್ನುವ ಬಲವಾದ ಅನುಮಾನ ಅವರನ್ನು ಕಾಡುತ್ತಿರಬೇಕು.
 
ಬಹುಪಾಲು ಇದೇ ಕೊನೇ ಚುನಾವಣೆ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಬೇಕೆಂದು ನಡೆಸಿರುವ ಸಿದ್ಧತೆಗಳನ್ನು ನೋಡಿ ಆತಂಕಗೊಂಡಿರಬೇಕು, ದಲಿತ ಮುಖ್ಯಮಂತ್ರಿ ಮಂತ್ರ ಮತ್ತೆ ಪಠಣಗೊಂಡರೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸರತಿ ಸಾಲಿನಲ್ಲಿ ಮೊದಲಿಗರಾಗಿ ನಿಂತಿರುವ ಬಗ್ಗೆ ಈಗಷ್ಟೇ ಜ್ಞಾನೋದಯವಾಗಿರಬೇಕು ಅಥವಾ ಕಾಂಗ್ರೆಸ್ ಪಕ್ಷ ಮತ್ತೆ ಬಹುಮತ ಗಳಿಸುವ ಬಗೆಗಿನ ಅವರ ನಂಬಿಕೆಯೇ ದುರ್ಬಲಗೊಂಡಿರಬೇಕು. 
 
ಹಾಗೆ ನೋಡಿದರೆ ಅವರು ಆರಾಮಕುರ್ಚಿಯ ರಾಜಕಾರಣಿ. ಜಿದ್ದಿಗೆ ಬಿದ್ದಂತೆ ತಾವು ಬಯಸಿದ್ದನ್ನು ಈಡೇರಿಸಿಕೊಳ್ಳುವ ಛಲ ಅವರಿಗಿಲ್ಲ. ಮಧುಗಿರಿಯಿಂದ 2ನೇ ಬಾರಿ 1994ರಲ್ಲಿ ಸ್ಪರ್ಧಿಸಿ ಸೋಲನುಭವಿಸಿದಾಗಲೇ ಯಾವುದೇ ಗಂಡಾಂತರ ಎದುರಿಸಲು ಅವರು ಸಿದ್ಧರಿಲ್ಲ ಎನ್ನುವುದು ಗೊತ್ತಾಯಿತು. ಆಗಲೇ ಅವರು ರಾಜ್ಯಸಭಾ ಸದಸ್ಯರಾಗುವ ನಿಟ್ಟಿನಲ್ಲಿ ತೀವ್ರ ಪ್ರಯತ್ನ ನಡೆಸಿ ವಿಫಲರಾಗಿದ್ದರು. ನೇರ ಚುನಾವಣೆಗೆ ಖರ್ಚು ಮಾಡುವ ಹಣವನ್ನೇ ಪಕ್ಷದ ನಿಧಿಗೆ ಕೊಟ್ಟು ಸುಲಭವಾಗಿ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗುವುದು ಉತ್ತಮ ಎನ್ನುವುದೇ ಅವರ ಪ್ರಾಮಾಣಿಕ ನಂಬಿಕೆ ಎಂದು ಅವರನ್ನು ಹತ್ತಿರದಿಂದ ಬಲ್ಲವರೊಬ್ಬರು ಹೇಳುತ್ತಾರೆ.
 
ಪರಮೇಶ್ವರ ಎಂಬ ಹೆಸರಿನಲ್ಲೇ ಚಕ್ರವರ್ತಿ, ಸಾಮ್ರಾಟ ಎಂಬ ಅರ್ಥಗಳಿದ್ದರೂ ಕರುನಾಡ ಸಿಂಹಾಸನಾಧೀಶನಾಗಬೇಕೆಂಬ ಅವರ ಕನಸು, ಆಸೆ ಈಡೇರಿಲ್ಲ. ಜ್ಯೋತಿಷಿಯೊಬ್ಬರ ಸಲಹೆಯಂತೆ ತಮ್ಮ ಪೂರ್ವಜರ ಊರಾದ ಮಾಗಡಿ ಸಮೀಪದ ಹೆಬ್ಬಳಲುವಿನಲ್ಲಿ ಮನೆ ದೇವರಾದ ಮುಳಕಟ್ಟಮ್ಮ ದೇವಾಲಯವನ್ನು ನಿರ್ಮಿಸಿದರೂ ಅವರ ಅಭೀಷ್ಟಫಲ ಕೈಗೆಟುಕಲೇ ಇಲ್ಲ. ಯಾಕೆಂದರೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಕಳೆದ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸ್ವತಃ ಸೋಲನುಭವಿಸಿದ್ದರು.
 
ಸೋತ ವ್ಯಕ್ತಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ಹೇಗೆಂಬ ಸಮಸ್ಯೆ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರಲಿಲ್ಲ. ವಾಸ್ತವವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆಂಬ ನಂಬಿಕೆಯ ಅಲೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತಂದುಕೊಟ್ಟಿತ್ತು. ಪರಮೇಶ್ವರ್ ಅವರದು ವಿಚಿತ್ರ ಸ್ಥಿತಿ. ದುಷ್ಟರಲ್ಲ, ಭ್ರಷ್ಟರಲ್ಲ. ದಲಿತರಾಗಿದ್ದೂ ದಲಿತರಲ್ಲ, ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವರಾಗಿದ್ದರೂ ನಿಜವಾದ ನಾಯಕನಾಗಿ ಅವರು ರೂಪುಗೊಳ್ಳಲಿಲ್ಲ. 
 
ಈ ನಾಡು ಕಂಡ ಅಪರೂಪದ ನಾಯಕ ಬಿ.ಬಸವಲಿಂಗಪ್ಪ ಅವರಿಗಿದ್ದ ದಿಟ್ಟತನವೂ ಇಲ್ಲ, ಖರ್ಗೆ ಬಲ್ಲ ರಾಜಕೀಯ ತಂತ್ರಗಾರಿಕೆಯ ಅರಿವೂ ಇಲ್ಲ, ಕೆ.ಎಚ್.ರಂಗನಾಥ್ ಅವರಂತೆ ನೇರ ಸ್ವಭಾವವೂ ಇಲ್ಲ. ಈ ಎಲ್ಲ ಕೊರತೆಗಳ ಮೊತ್ತ ಪರಮೇಶ್ವರ್. ಒಂದರ್ಥದಲ್ಲಿ ಅವರು ಎಸ್.ಎಂ.ಕೃಷ್ಣರ ದಲಿತ ಮುಖ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಬೇಕು. ಅವರ ತಂದೆ ಚಿತ್ರಕಲಾ ಶಿಕ್ಷಕರಾಗಿದ್ದ ಗಂಗಾಧರಯ್ಯ ಅವರ ಮೇಲೆ ಮಹಾತ್ಮ ಗಾಂಧಿ ಮತ್ತು ವಿನೋಬಾ ಭಾವೆ ಬೀರಿದ ಪ್ರಭಾವ ಅಪಾರ. ಇದರಿಂದಾಗಿಯೇ ಅವರು ಸಿದ್ಧಾರ್ಥ ಹೆಸರಿನಲ್ಲಿ ಶಾಲೆಯೊಂದನ್ನು ಆರಂಭಿಸಿ ದಲಿತ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದರು. ಅದು ಈಗ ಉದ್ದೇಶ ಬದಲಾದ ಬೃಹತ್ ಶಿಕ್ಷಣ ಸಂಸ್ಥೆಗಳ ಸಮೂಹವಾಗಿ ಬೆಳೆದಿದೆ. 
 
ಈ ಬೆಳವಣಿಗೆಯ ಫಲವನ್ನು ಅನುಭವಿಸುತ್ತಿರುವ ಪರಮೇಶ್ವರ್ ಅವರಿಗೆ ಜನಸಾಮಾನ್ಯರ ಜತೆ ಬೆರೆಯುವುದಕ್ಕಿಂತ ಎಲೀಟ್ ಕ್ಲಾಸ್ ಒಡನಾಟ ಅಚ್ಚುಮೆಚ್ಚು. ಕೊರಟಗೆರೆ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಎಡಗೈನವರ ಸಂಖ್ಯೆ ಬಲಗೈನವರಿಗಿಂತ ಹೆಚ್ಚು. ತಮ್ಮ ಸಂಖ್ಯೆ ಹೆಚ್ಚಿದ್ದರೂ ಬಲಗೈಗೆ ಸೇರಿದ ಪರಮೇಶ್ವರ್‌ಗೆ ಅವಕಾಶ ನೀಡಿರುವುದರಿಂದ ಎಡಗೈನವರಿಗೆ ಸಹಜವಾಗಿಯೇ ಅಸಮಾಧಾನವಿದೆ.
 
ಕೊರಟಗೆರೆ ಕ್ಷೇತ್ರದಲ್ಲಿ ಕಡು ಬಡತನದಲ್ಲಿ ಬೇಯುತ್ತಿರುವ ದಲಿತ ಸಮುದಾಯದ ನೋವು ಶಮನಗೊಳಿಸುವುದು ಹೋಗಲಿ ಅವರ ಮಾತುಗಳನ್ನು ಆಲಿಸುವ ಸಹನೆಯನ್ನೂ ಅವರು ಈವರೆಗೆ ತೋರಿಲ್ಲ ಎಂಬ ದೂರು ಕ್ಷೇತ್ರದುದ್ದಕ್ಕೂ ಕೇಳಿಬರುತ್ತಿದೆ. ಈ ಕಾರಣದಿಂದಾಗಿಯೇ ಎಡಗೈನವರೇ ಇರಲಿ, ಬಲಗೈನವರೇ ಇರಲಿ ಅವರ ಮನೆ ಬಳಿ ಸುಳಿಯುವುದಿಲ್ಲ. ಕ್ಷೇತ್ರದಲ್ಲಾದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರಾ ಎಂದರೆ ಅದೂ ಇಲ್ಲ. ಸ್ವಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿರುವುದೇ ಅವರ ಮಹತ್ಸಾಧನೆ! 
 
ಅವರ ತಂದೆಯ ಮೇಲೆ ಗಾಂಧಿ ಬೀರಿದ್ದ ಪ್ರಭಾವದ ನೆರಳು ಪರಮೇಶ್ವರ್ ಅವರಲ್ಲಿ ಎಳ್ಳಷ್ಟೂ ಕಾಣುತ್ತಿಲ್ಲ. ಅಚ್ಚರಿ ಎಂದರೆ ಅವರು ಅಂಬೇಡ್ಕರ್ ವಾದದ ಬಗ್ಗೆ ಮಾತನಾಡುತ್ತಾರೆ, ಮನೆಗೆ ಬಂದ ಅಪರಿಚಿತರ ಕೈಯಿಂದ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುತ್ತಾರೆ, ತಮ್ಮ ಹುಟ್ಟುಹಬ್ಬಕ್ಕೆ ಮಠಾಧೀಶರನ್ನು ಕರೆಸಿಕೊಂಡು ಪಾದಪೂಜೆಯನ್ನೂ ಮಾಡುತ್ತಾರೆ. ತಮ್ಮೆಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬೌದ್ಧ ಪರಿಸರ ಪ್ರದರ್ಶನದ ಸಲುವಾಗಿ ಬುದ್ಧನ ವಿಗ್ರಹ, ಚಿತ್ರಗಳನ್ನೂ ಇರಿಸಿದ್ದಾರಲ್ಲದೆ ಪಾಲಿ ಭಾಷೆಯ ಶಾಲೆಯನ್ನೂ ನಡೆಸುತ್ತಿದ್ದಾರೆ. ಆದರೆ ಬೌದ್ಧ ದಮ್ಮ ಸಾರದಲ್ಲಿ ಒಂದಿನಿತನ್ನೂ ಅನುಸರಿಸುತ್ತಿಲ್ಲ ಎನ್ನುವುದನ್ನು ನಡವಳಿಕೆಗಳ ಮೂಲಕವೇ ಪ್ರದರ್ಶಿಸುತ್ತಾರೆ.
 
ತೋರಿಕೆಯ Ritualಗೆ ಅವರು ತೋರುವ ಶ್ರದ್ಧೆ, ವಿಚಾರಗಳನ್ನು ಅನುಸರಿಸುವಲ್ಲಿ ವ್ಯಕ್ತವಾಗುವುದಿಲ್ಲ. ಅವರ ಒಟ್ಟು ವ್ಯಕ್ತಿತ್ವವೇ ಅಸ್ಪಷ್ಟತೆಯ ಗೂಡು. ಹೀಗಾಗಿಯೋ ಏನೋ ಅವರ ‘ಸುಸಂಸ್ಕೃತ’ ನಡವಳಿಕೆಯನ್ನು ಪ್ರಬಲ ಜಾತಿಗಳಿಗೆ ಸೇರಿದ ಮತದಾರರು ಮಾತ್ರ ಇಷ್ಟಪಡುತ್ತಾರೆ. ಆದರೆ ಸ್ವಜಾತಿ ಬಾಂಧವರ ಪ್ರೀತಿ ಗಳಿಸುವಲ್ಲಿ ಅವರು ವಿಫಲರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡು ವರ್ಷ ಪೂರೈಸುತ್ತಿದ್ದಂತೆ ದಲಿತ ಮುಖ್ಯಮಂತ್ರಿಯ ಕೂಗು ನಾಲ್ದೆಸೆಗಳಲ್ಲೂ ಪ್ರತಿಧ್ವನಿಸುವಂತೆ ವ್ಯವಸ್ಥಿತವಾಗಿಯೇ ಪ್ರಯತ್ನ ನಡೆಸಿದ ಪರಮೇಶ್ವರ್ ಅವರಲ್ಲಿ ಅದೇ ಮೊದಲ ಬಾರಿಗೆ ದಲಿತ ಪ್ರಜ್ಞೆ ಆವಾಹನೆಯಾಗಿ ‘ದಲಿತರು ಮುಖ್ಯಮಂತ್ರಿಯಾಗುವುದು ಅಪರಾಧವೇ?’ ಎಂದು ಪ್ರಶ್ನಿಸಿದ್ದರು.
 
ಆದರೆ ಕಳೆದ ತಿಂಗಳು ಅಭಿಷೇಕ್ ಎಂಬ ಎಡಗೈ ಪಂಗಡಕ್ಕೆ ಸೇರಿದ ಯುವಕನ ಮೇಲೆ, ಸಲ್ಲದ ಕಾರಣ ನೀಡಿ ಇನ್ಯಾವುದೋ ಜಾತಿಗೆ ಸೇರಿದವರು ಬೆತ್ತಲೆ ಮಾಡಿ ದಾಳಿ ನಡೆಸಿದ ನಂತರ ಆಸ್ಪತ್ರೆಗೆ ದಾಖಲಾದರೂ ಆತನನ್ನು ವಿಚಾರಿಸುವ ಸೌಜನ್ಯವನ್ನೂ ಪರಮೇಶ್ವರ್ ತೋರಲಿಲ್ಲ ಎಂಬ ಸಿಟ್ಟು ದಲಿತ ಸಮುದಾಯದಲ್ಲಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ನಂತರ ಅಡಿಲೇಡ್ ವಿಶ್ವವಿದ್ಯಾಲಯದಿಂದ Plant Physiologyಯಲ್ಲಿ ಡಾಕ್ಟರೇಟ್ ಪಡೆದ ಪರಮೇಶ್ವರ್ ಮತದಾರರನ್ನು ಅರಿಯುವಲ್ಲಿ ವಿಫಲರಾಗಿರುವುದರಲ್ಲಿ ಅಚ್ಚರಿಯೇನಲ್ಲ.
 
ಹಾಗಾದರೆ ಕಳೆದ ಚುನಾವಣೆಯಲ್ಲಿ ಇತರ ಕಾಂಗ್ರೆಸ್ ನಾಯಕರ ಸಂಚಿನಿಂದ ಪರಮೇಶ್ವರ್ ಸೋಲನುಭವಿಸಲಿಲ್ಲವೇ? ‘ಕಾಲದ ಒತ್ತಡ ಪರಮೇಶ್ವರ್ ಅವರನ್ನು ಸೋಲಿಸಿತೇ ಹೊರತು ಸಂಚು ಕೇವಲ ನೆಪವಷ್ಟೇ’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ‘ನಿಮ್ಮೊಂದಿಗಿರಲು ನನ್ನೊಂದಿಗಿರಿ’ ಎಂಬ ಸಂದೇಶ ದಲಿತ ಸಮುದಾಯಕ್ಕೆ ಕಾರ್ಯತಃ ಮನವರಿಕೆ ಮಾಡಿಕೊಡುವಲ್ಲಿ ಅವರು ಸೋತಿದ್ದಾರೆ; ಕೊರಟಗೆರೆಯ ಸೋಲು ಕೇವಲ ಸಾಂಕೇತಿಕ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಪರಮೇಶ್ವರ್ ಬದಲಾವಣೆಗೆ ಪಕ್ಷದಲ್ಲೇ ಬಲವಾದ ಕೂಗು ಕೇಳಿ ಬಂದಿದ್ದು ಇನ್ನೊಂದು ಕಗ್ಗಂಟು ಬಿಡಿಸುವುದಕ್ಕೆ ಮತದಾರರ ಪಾದಪೂಜೆಯೂ ನೆರವಾಗದು ಎನ್ನುವ ಸ್ಥಿತಿ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT