ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ವಾದಗಳನ್ನು ಹತ್ತಿಕ್ಕಲು ಹಿಂಸೆಯ ಬೆದರಿಕೆ ಖಂಡನೀಯ

Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಎಬಿವಿಪಿ ಕಾರ್ಯಕರ್ತರು ಎನ್ನಲಾದವರಿಂದ ತಮಗೆ ಅತ್ಯಾಚಾರದ ಬೆದರಿಕೆಗಳು ಬಂದಿವೆ’ ಎಂದು ದೆಹಲಿ ವಿಶ್ವವಿದ್ಯಾಲಯದ ಲೇಡಿ  ಶ್ರೀರಾಮ್‌ ಕಾಲೇಜಿನ ವಿದ್ಯಾರ್ಥಿನಿ ಗುರ್‌ಮೆಹರ್‌ ಕೌರ್‌ ಅವರು ದೆಹಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಾಲೇಜು ಕ್ಯಾಂಪಸ್‌ಗಳಲ್ಲಿನ ವಾಗ್ವಾದಗಳು ಈ ಮಟ್ಟದ ತಿರುವು ತೆಗೆದುಕೊಂಡಿರುವುದು  ಆತಂಕಕಾರಿ ಬೆಳವಣಿಗೆ.
 
ಫೆ. 22ರಂದು ರಮ್‌ಜಾಸ್‌ ಕಾಲೇಜಿನಲ್ಲಿ ನಡೆದ  ಹಿಂಸಾಚಾರದ ಘಟನೆಗಳ ನಂತರ ‘ಎಬಿವಿಪಿ  ಬಗ್ಗೆ ಹೆದರಿಕೆ ಇಲ್ಲ’ ಎಂಬಂತಹ ಫಲಕ ಹಿಡಿದ ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಾಂದೋಲನವನ್ನು ಈ ವಿದ್ಯಾರ್ಥಿನಿ  ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಬೆದರಿಕೆ ಒಡ್ಡುವ ಸಂದೇಶಗಳು ಬಂದಿರುವುದು,  ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕುವ ಕ್ರಮ ಎನ್ನದೇ ವಿಧಿ ಇಲ್ಲ. ಅದರಲ್ಲೂ ‘2013ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ನಿರ್ಭಯಾಗಿಂತ ಕ್ರೂರವಾದ ವಿಧಿ ನಿನ್ನದಾಗುತ್ತದೆ’  ಎಂಬಂಥ ಸಂದೇಶ, ವಿಕಾರ ಮನಸ್ಥಿತಿಯ ಕ್ರೌರ್ಯವನ್ನು ಬಿಂಬಿಸುತ್ತದೆ.
 
ರಾಷ್ಟ್ರದ ವಿವಿಧ ಭಾಗಗಳಲ್ಲಿ ರಾಷ್ಟ್ರಭಕ್ತಿಯ ಹೆಸರಿನಲ್ಲಿ ನಡೆಸುತ್ತಿರುವಂತಹ ಅತಿರೇಕಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಲೇ ಇವೆ. ಆದರೆ ಅತ್ಯಾಚಾರದ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲಾಗದು. ವಿಚಾರಗಳನ್ನು  ಸೈದ್ಧಾಂತಿಕವಾಗಿ ವಿರೋಧಿಸಲಿ. ಆದರೆ ಇಂತಹ ಕೆಟ್ಟ ಹೇಳಿಕೆಗಳು, ವಿದ್ಯಾರ್ಥಿ ರಾಜಕೀಯವನ್ನು ಅಪರಾಧ ವಲಯಕ್ಕೆ ತಂದು ನಿಲ್ಲಿಸುತ್ತದೆ. ಜನರ ರಾಷ್ಟ್ರಭಕ್ತಿ  ಹಾಗೂ ರಾಷ್ಟ್ರೀಯತಾ ಭಾವನೆಯ ಬಗ್ಗೆ ತೀರ್ಮಾನಿಸುವ ಹಕ್ಕನ್ನು ತಮಗೆ ತಾವೇ ಕೈಗೆತ್ತಿಕೊಂಡಿರುವ ಹುಸಿ ರಾಷ್ಟ್ರೀಯತಾವಾದಿಗಳ ಕೆಂಗಣ್ಣಿಗೆ ಈ ವಿದ್ಯಾರ್ಥಿನಿ ಗುರಿಯಾಗಿರುವುದು ವಿಷಾದನೀಯ.  
 
ಇಂತಹ ಬೆದರಿಕೆಗಳಿಂದಾಗಿ ಎಬಿವಿಪಿ ವಿರುದ್ಧ ಆರಂಭಿಸಿದ್ದ ಅಭಿಯಾನವನ್ನು ಈ ವಿದ್ಯಾರ್ಥಿನಿ ಈಗ ಹಿಂತೆಗೆದುಕೊಂಡಿರಬಹುದು.   ಆದರೆ ಇಂತಹ ಹಿಂಸಾತ್ಮಕ ಒತ್ತಡ ತಂತ್ರಗಳ ವಿರುದ್ಧ  ದೆಹಲಿ ವಿದ್ಯಾರ್ಥಿಗಳು ಮಂಗಳವಾರ ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾದ ಅಭಿಯಾನವನ್ನು ಮುಂದುವರಿಸಿದ್ದಾರೆ. 
 
ಈ ವಿದ್ಯಾರ್ಥಿನಿ ಮಾತುಗಳಿಗೆ ರಾಷ್ಟ್ರದಲ್ಲಿ ಅತ್ಯಂತ ಸಶಕ್ತರಾದ ಪ್ರಭಾವಿ ಪುರುಷರೂ ಅಸಮ್ಮತಿ ಸೂಚಿಸಿ ವಿವಾದವನ್ನು ಬೆಳೆಸಿದ್ದು ಮತ್ತೊಂದು ಆತಂಕಕಾರಿ ಬೆಳವಣಿಗೆ. ವಿರೋಧ ತೋರಿದವರಲ್ಲಿ ಕೇಂದ್ರ ಸಚಿವರು, ಸಂಸದ ಹಾಗೂ ಕ್ರಿಕೆಟ್ ಆಟಗಾರರೂ  ಸೇರಿದ್ದಾರೆ. ಈ ವಿದ್ಯಾರ್ಥಿನಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿರುವ  ಬಿಜೆಪಿ ಸಂಸತ್ ಸದಸ್ಯ ಪ್ರತಾಪ್ ಸಿಂಹ ಅವರು, ರಾಷ್ಟ್ರವಿರೋಧಿ ನಿಲುವು ಸಮರ್ಥಿಸಿಕೊಳ್ಳಲು ತನ್ನ ತಂದೆಯ ಹೆಸರನ್ನು ದಾವೂದ್ ಕೂಡ ಬಳಸಿಕೊಳ್ಳಲಿಲ್ಲ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದರು.
 
‘ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದು ಗುರ್‌ಮೆಹರ್‌ ಕೌರ್‌ ಈ ಹಿಂದೆ ಹೇಳಿಕೊಂಡಿದ್ದ ಮಾತುಗಳನ್ನು ಪ್ರಸ್ತಾಪಿಸಿ ಪ್ರತಾಪ್ ಸಿಂಹ   ನೀಡಿದ್ದ ಪ್ರತಿಕ್ರಿಯೆ ವಿವಾದವನ್ನು ದೊಡ್ಡದು ಮಾಡಿತ್ತು. ಸಾಲದೆಂಬಂತೆ ‘ಈ ಯುವತಿಯ ಮನಸ್ಸನ್ನು  ಕೆಡಿಸುತ್ತಿರುವವರು ಯಾರು’ ಎಂದು  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರೂ ಟ್ವೀಟ್ ಮಾಡಿದ್ದರು. ಕಾನೂನು, ಸುವ್ಯವಸ್ಥೆ ಕಾಪಾಡುವುದು ಹಾಗೂ ನಾಗರಿಕರ ಹಕ್ಕು ರಕ್ಷಿಸುವುದು ಗೃಹ ಸಚಿವರ ಆದ್ಯತೆಯಾಗಬೇಕು. ಬದಲಾಗಿ ವಿವಾದ ಬೆಳೆಸಲು ಕೊಡುಗೆ ನೀಡಿದ್ದು ಅನಪೇಕ್ಷಣೀಯ.
 
ವಿದ್ಯಾರ್ಥಿನಿಯ ದೃಷ್ಟಿಕೋನದ ಬಗ್ಗೆ ಭಿನ್ನಾಭಿಪ್ರಾಯವನ್ನು  ಇಟ್ಟುಕೊಂಡಿದ್ದರೂ ಅವರ ಉದ್ದೇಶ  ಪ್ರಶ್ನಿಸುವ ಬದಲು ಅವರ ಅಭಿವ್ಯಕ್ತಿ  ಸ್ವಾತಂತ್ರ್ಯವನ್ನು ರಕ್ಷಿಸುವ ಆಶ್ವಾಸನೆಯನ್ನು ಸರ್ಕಾರ ನೀಡಬೇಕಾಗಿದ್ದುದು ಇಲ್ಲಿ ಮುಖ್ಯವಾಗಿತ್ತು. ಜೊತೆಗೆ ಹಲ್ಲೆ ಹಾಗೂ ಹತ್ಯೆಯ ಬೆದರಿಕೆ ಒಡ್ಡಿರುವವರ ವಿರುದ್ಧದ ಖಂಡನೆಯೂ ಸರ್ಕಾರದಿಂದ ವ್ಯಕ್ತವಾಗಿರಬೇಕಿತ್ತು. ಆದರೆ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಯುವ ಮನಸ್ಸುಗಳ ಕೆಡಿಸುವ ಸಂಚನ್ನು ಈ ವಿದ್ಯಮಾನದಲ್ಲಿ ಕಂಡಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪ್ರತಿಕ್ರಿಯೆಯಂತೂ ಮತ್ತಷ್ಟು ಸೂಕ್ಷ್ಮವಾದದ್ದು.
 
‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌’ನಲ್ಲಿ ಮಾತನಾಡುತ್ತಾ, ಮುಕ್ತ ಅಭಿವ್ಯಕ್ತಿಯ ಮಿತಿಯ ಕುರಿತಾದ ಚರ್ಚೆಗೆ ಸಚಿವರು ಕರೆ ನೀಡಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಿರೋಧವನ್ನು ಹತ್ತಿಕ್ಕುತ್ತಿದ್ದ ಸರ್ಕಾರಕ್ಕೆ ಪ್ರತಿರೋಧದ ಸಂಕೇತವಾಗಿದ್ದವರು ಜೇಟ್ಲಿ. ವಿದ್ಯಾರ್ಥಿ ನಾಯಕರಾಗಿ ತತ್ವನಿಷ್ಠರಾಗಿ ಜೈಲಿಗೂ ಹೋಗಿ ಬಂದವರು ಅವರು. ಆ ಪರಂಪರೆಯನ್ನು ಸ್ಮರಿಸಿಕೊಂಡು ಗುರ್‌ಮೆಹರ್  ಮತ್ತು ಆಕೆಯಂತಹ ಇತರರ ಜೀವಕ್ಕೆ ಬೆದರಿಕೆ  ಆಗಿರುವ ವಾಗ್ವಾದಕ್ಕೆ ತಡೆ ಹಾಕಬೇಕು. ಎಲ್ಲಾ ಬಗೆಯ ವಾಗ್ವಾದಗಳನ್ನು ಹತ್ತಿಕ್ಕಲು ರಾಷ್ಟ್ರೀಯತಾವಾದವನ್ನು ನಿರಂತರವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಈಗಲಾದರೂ ತಡೆ ಬೀಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT