ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ: 30 ಹೊಸ ನಿಲ್ದಾಣ ಶೀಘ್ರ

ಆನೇಕಲ್ ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ
Last Updated 1 ಮಾರ್ಚ್ 2017, 7:20 IST
ಅಕ್ಷರ ಗಾತ್ರ

ಆನೇಕಲ್‌: ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವತಿಯಿಂದ 30 ಬಸ್‌ ನಿಲ್ದಾಣಗಳು ಹಾಗೂ 15 ಹೊಸ ಡಿಪೊಗಳನ್ನು ಶೀಘ್ರದಲ್ಲಿ ತೆರೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು. ಸಂಸ್ಥೆಗೆ 5500 ಹೊಸ ಬಸ್‌ಗಳನ್ನು ಕೊಳ್ಳಲಾಗುವುದು. ಪ್ರಯಾಣಿಕರಿಗೆ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

ಬಸ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ವಿಶೇಷ ಗಮನ ಹರಿಸಲಾಗುವುದು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳಾಗಲು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಶಿಬಿರಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಆನೇಕಲ್ ತಾಲ್ಲೂಕಿನಲ್ಲಿ ಅಭಿವೃದ್ಧಿ  ಕಾರ್ಯಗಳು ಶಾಸಕ ಬಿ.ಶಿವಣ್ಣ ಅವರ ನೇತೃತ್ವದಲ್ಲಿ ತ್ವರಿತವಾಗಿ ನಡೆಯುತ್ತಿದ್ದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ತಾಲ್ಲೂಕಿನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ ಎಲ್ಲಾ ಗ್ರಾಮಗಳಿಗೂ ಮೂಲಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಸೌಲಭ್ಯಗಳು ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸ್ತ್ರೀಶಕ್ತಿ ಗುಂಪುಗಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುತ್ತು ನಿಧಿಯ ಆದೇಶ ಪತ್ರಗಳನ್ನು ನೀಡಲಾಗುತ್ತಿದೆ ಎಂದರು.

ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಆಯಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಮಂಜೂರಾತಿ ಪತ್ರಗಳನ್ನು ನೀಡಲಾಗುತ್ತಿದೆ. ಪಾರದರ್ಶಕವಾಗಿ ಆಡಳಿತ ಯಂತ್ರವನ್ನು ನಡೆಸುವ ದಿಸೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದ್ದು ರೈತರ, ಜನಸಾಮಾನ್ಯರ ಕೆಲಸಗಳು ಸುಗಮವಾಗಿ ನಡೆಯುವಂತಾಗಲು ಕ್ರಮ ಕೈಗೊಳ್ಳಲಾಗಿದೆ ಎಂದರು.

‘ಬಮೂಲ್’ ಅಧ್ಯಕ್ಷ ಆರ್.ಕೆ.ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪಾರಿಜಾತ ದೊರೆಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಹುಸ್ಕೂರು ಮದ್ದೂರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಮುಖಂಡರಾದ ಗೋಪಾಲರೆಡ್ಡಿ, ಶಿವಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನೋಮೇಶ್‌ ಕುಮಾರ್, ಸಿಡಿಪಿಒ ಜಯದೇವಿ ಹಾಜರಿದ್ದರು.

*
ಬೆಂಗಳೂರಿನ ಕಲಾಸಿಪಾಳ್ಯ, ಬಿಟಿಎಂ ಲೇಔಟ್ ಹಾಗೂ ಕೆಂಗೇರಿಯಲ್ಲಿ ಸುಸಜ್ಜಿತವಾದ ಬಸ್‌ ಟರ್ಮಿನಲ್‌ಗಳನ್ನು ನಿರ್ಮಿಸಲಾಗುತ್ತಿದೆ ಹಾಗೂ ಪ್ರಯಾಣಿಕರಿಗೆ ಒಳ್ಳೆಯ ವ್ಯವಸ್ಥೆ ಮಾಡಲಾಗುತ್ತಿದೆ.
-ರಾಮಲಿಂಗಾ ರೆಡ್ಡಿ,
ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT