ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳಲ್ಲಿ ಹೆಚ್ಚಿದ ಗುಂಪುಗಾರಿಕೆ; ವಿಷಾದ

ಮದ್ದೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ * ಅಧ್ಯಕ್ಷ ಡಾ.ಅರ್ಜುನಪುರಿ ಅಪ್ಪಾಜೀಗೌಡ ಬೇಸರ
Last Updated 1 ಮಾರ್ಚ್ 2017, 7:38 IST
ಅಕ್ಷರ ಗಾತ್ರ

ಭಾರತೀನಗರ (ಭಾರತೀ ವೇದಿಕೆ): ವಿಶಾಲ, ನಿರ್ಮತ್ಸರ, ನಿಸ್ವಾರ್ಥ ಮನೋಭಾವ ಇಂದಿನ ಸಾಹಿತಿಗಳಲ್ಲಿ ಕಾಣುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ ಡಾ.ಅರ್ಜುನಪುರಿ ಅಪ್ಪಾಜೀಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಭಾರತೀ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಮದ್ದೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಹಿತ್ಯ ಓದಿದರೆ ಮನಸು ಅರಳು ತ್ತದೆ ಎಂಬ ಭಾವನೆ ಹುಸಿಯಾಗಿದೆ. ಇಂದು ಸಾಹಿತಿಗಳಲ್ಲಿ ಬಲ, ಎಡ, ಮಧ್ಯಮ ಪಂಥೀಯ ಗುಂಪುಗಾರಿಕೆ ಹೆಚ್ಚಿದ್ದು, ಸಾಹಿತ್ಯ ಅರಳುವ ಬದಲು ಕೊನರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಬಳಿಕ ಸಿರಿವಂತರ ಬಡವರ ನಡುವಿನ ಅಂತರ ಹೆಚ್ಚಿದೆ. ದೇಶದ ಜನಸಂಖ್ಯೆಯಲ್ಲಿ ಶೇ 1ರಷ್ಟರ ಶ್ರೀಮಂತರ ಬಳಿ ಶೆ 58.4 ಸಂಪತ್ತು ಸೇರಿದೆ. ಶೇ 51.6ರಷ್ಟು ಸಂಪತ್ತು ಶೇ 99ರಷ್ಟು ಜನರ ಬಳಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾತೀಯತೆ ವಿಷ ವೃಕ್ಷ ಮೇರೆ ಮೀರಿ ಬೆಳೆದಿದೆ. ಜನರಲ್ಲಿ ಹಣ ಮಾಡುವ ಹಪಾಹಪಿತನ ಹೆಚ್ಚಿದ್ದು, ಪ್ರತಿಯೊಬ್ಬ ಪೋಷಕರಲ್ಲೂ ಮಕ್ಕಳು ವೈದ್ಯರು, ಎಂಜಿನಿಯರ್ ಆಗಬೇಕು, ಐಟಿ– ಬಿಟಿ ಓದಿ ಲಕ್ಷ ಲಕ್ಷ ಸಂಪಾದಿಸಬೇಕೆಂಬ ಹಂಬಲಿಕೆ ಹೆಚ್ಚಿದೆ ಎಂದರು.

ಇಂದಿನ ಯುವ ಬರಹಗಾರರು ಪ್ರಸ್ತುತ ಸಮಕಾಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕಿದೆ. ಅನ್ಯಭಾಷಿಗರ ಬೀಡಾದ ರಾಜ್ಯದ ರಾಜಧಾನಿಯನ್ನು ಕನ್ನಡದ ರಾಜಧಾನಿ ಮಾಡುವ ಅಗತ್ಯವಿದೆ. ಗಡಿ ನಾಡುಗಳಲ್ಲಿ ಕನ್ನಡ ಭಾಷೆಯ ಕಂಪು ಉಳಿಸಿಕೊಂಡು ಕನ್ನಡಿಗರು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು ದಾರಿಯಲ್ಲಿ ಜ್ಯಾತ್ಯತೀತರಾಗಿ ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.

ದೇಶದಲ್ಲಿರು ಸ್ವಯಂ ಸೇವಾ ಸಂಸ್ಥೆಗಳು ಬಹುತೇಕ ರಾಜಕಾರಣಿಗಳು ಹಾಗೂ ನಿವೃತ್ತ ಐಎಎಸ್‌ ಅಧಿಕಾರಿಗಳ ಕೈಲಿವೆ. ವಿದೇಶಿ ಹಣ ಸೇರಿದಂತೆ ತಮ್ಮ ಬಳಿ ಇರುವ ಕಪ್ಪು ಹಣವನ್ನು ಬಿಳಿ ಮಾಡಿರುವುದರಲ್ಲೇ ಮುಳುಗಿವೆ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಗುಡಿಸಲುರಹಿತ ರಾಜ್ಯ ಸೃಷ್ಟಿಯಾಗಿಲ್ಲ. ಜನರು ಬಿಪಿಎಲ್ ಪಡಿತರಚೀಟಿಗೆ  ಹತೋರೆಯುವುದರಲ್ಲೇ ತೃಪ್ತಿ ಹೊಂದು ತ್ತಿದ್ದಾರೆ ಎಂದು ಹೇಳಿದರು.

ಮದ್ದೂರು ತಾಲ್ಲೂಕು ಸಾಹಿತ್ಯ ಕ್ಷೇತ್ರ, ಸ್ವಾತಂತ್ರ್ಯ ಚಳವಳಿ ಸೇರಿದಂತೆ ರೈತ ಚಳವಳಿಗೂ ಹೆಸರಾಗಿರುವ ತಾಲ್ಲೂಕು ಸಾಹಿತ್ಯ ಸಂಸ್ಕೃತಿ ನೆಲೆಬೀಡಾ ಗಿದೆ. ಯುವ ಜನರು ಸಾಹಿತ್ಯ, ಸಂಸ್ಕೃತಿ ಗೌರವಿಸಿ ಆಧರಿಸುವ ಗುಣ ಬೆಳೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯಾಸಕ್ತರ ದಂಡು, ಜಾನಪದ ಕಲಾ ತಂಡಗಳ ಮೆರುಗು
ಭಾರತೀನಗರ:
ಎಲ್ಲೆಲ್ಲೂ ಸಾಹಿತ್ಯಸಕ್ತರ ದಂಡು. ಮೇರೆ ಮೀರಿದ ಸಂಭ್ರಮ. ಜಾನಪದ ಕಲಾಮೇಳದ ಮೆರಗಿನೊಂದಿಗೆ ಬೆಳ್ಳಿರಥದಲ್ಲಿ ಸಾಹಿತ್ಯಸಮ್ಮೇಳನಾ ಧ್ಯಕ್ಷರ ಭವ್ಯ ಮೆರವಣಿಗೆ. ಜನರ ಗಮನ ಸೆಳೆದ 150 ಅಡಿ ಉದ್ದದ ಕನ್ನಡ ಬಾವುಟ...

ಇದು ಭಾರತೀನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡು ಬಂದ ವರ್ಣರಂಜಿತ ದೃಶ್ಯಗಳು.
ಅಂಬೇಡ್ಕರ್‌ ಭವನದಿಂದ 101 ಶಾಲಾ ಮಕ್ಕಳ ಆಕರ್ಷಕ ಪೂರ್ಣ ಕುಂಭಮೇಳದ ಸಂಭ್ರಮದೊಂದಿಗೆ ಸಮ್ಮೇಳನಾಧ್ಯಕ್ಷ  ಮೆರವಣಿಗೆ ಭಾರತೀ ವೇದಿಕೆವರೆಗೆ ನಡೆಯಿತು. ಬೆಳ್ಳಿರಥದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಅರ್ಜುನಪುರಿ ಅಪ್ಪಾಜಿಗೌಡ ದಂಪತಿ, ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಕುಳಿತು ಸಾಗಿದರು.

ದಾರಿಯುದ್ದಕೂ ತಮಟೆ, ನಗಾರಿಗಳ ಸದ್ದಿನ ನಡುವೆ ಚಿಕ್ಕರಸಿನಕೆರೆ ಕುಮಾರ್‌ ಹಾಗೂ ತಂಡದವರಿಂದ ಗಾರುಡಿ ಗೊಂಬೆ, ಕೆ.ಶೆಟ್ಟಹಳ್ಳಿ ಸಿದ್ದೇಗೌಡ ತಂಡದವ ರಿಂದ ಪಟ ಕುಣಿತ, ಅರೆಚಾಕನಹಳ್ಳಿ ಸುಂದರೇಶ್‌ ತಂಡದವರಿಂದ ಡೊಳ್ಳು ಕುಣಿತ, ಹೊನ್ನಾಯಕನ ಹಳ್ಳಿ ನಿಂಗರಾಜು ತಂಡದವರಿಂದ ಚರ್ಮವಾದ್ಯ ಮೇಳ, ದೊಡ್ಡರಸಿನ ಕೆರೆ ಚಿಕ್ಕೋನು ಹಾಗು ನಾರಾಯಣ ಅವರಿಂದ ಹುಲಿ ವೇಷ, ಕಾಡು ಮಕ್ಕಳ ವೇಷ, ಬನ್ನಹಳ್ಳಿ ಶಿವನಂಜು, ಕ್ಯಾತಘಟ್ಟ ರಾಜು, ಮಧು, ಕೆ. ಬೆಳ್ಳೂರು ವೆಂಕಟೇಶ್‌ ತಂಡದವರಿಂದ ಪೂಜಾ ಕುಣಿತ ತಂಡಗಳು ಭಾಗವಹಿಸಿ ಮೆರವಣಿಗೆಗೆ ಕಳೆ ತಂದವು.

ಪುಸ್ತಕ ಮಳಿಗೆಗಳಲ್ಲಿ ಸಾಹಿತ್ಯಾಸಕ್ತರ ದಂಡು ಸೇರಿತ್ತು. ವಿದ್ಯಾರ್ಥಿಗಳು, ಯುವಜನರು ಸಂಭ್ರಮದಿಂದ ಮುಗಿಬಿದ್ದು ಪುಸ್ತಕ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT